ದೆಹಲಿ ವಿಧಾನಸಭಾ ಚುನಾವಣೆಯ ದಿನ ಸಮೀಪಿಸುತ್ತಿದ್ದಂತೆ ಪ್ರಚಾರ ಕಣದಲ್ಲಿ ಆಕ್ಷೇಪಾರ್ಹ, ವಿವಾದಾತ್ಮಕ ಹೇಳಿಕೆಗಳು ವಿಜೃಂಭಿಸುತ್ತಿವೆ. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ರನ್ನು ಭಯೋತ್ಪಾದಕ ಎಂದು ಕರೆದ ಬಿಜೆಪಿ ಸಂಸದರೊಬ್ಬರಿಗೆ ಚುನಾವಣಾ ಆಯೋಗ ನೋಟಿಸ್ ನೀಡಿದೆ. ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, “ಅರವಿಂದ ಕೇಜ್ರಿವಾಲ್‌ರಿಂದ ದಿಲ್ಲಿಯ ಮತದಾರರು ದೂರ ಹೋಗಿದ್ದಕ್ಕೆ ಕಾರಣವಿದೆ. ಕೇಜ್ರಿವಾಲ್ ಮುಗ್ಧನ ಮುಖ ಮಾಡಿ – ‘ನಾನು ಭಯೋತ್ಪಾದಕನಾ?’ ಎಂದು ಕೇಳುತ್ತಾರೆ. ನೀವು ಭಯೋತ್ಪಾದಕ, ಇದಕ್ಕೆ ಸಾಕಷ್ಟು ಪುರಾವೆಗಳಿವೆ. ನೀವೇ ನಾನೊಬ್ಬ ಅರಾಜಕವಾದಿ ಎಂದಿದ್ದೀರಿ. ಅರಾಜಕವಾದಿ ಹಾಗೂ ಉಗ್ರವಾದಿಗಳಲ್ಲಿ ಹೆಚ್ಚಿನ ಅಂತರ ಇರುವುದಿಲ್ಲ,” ಎಂದು ಹೇಳಿದ್ದಾರೆ.
ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದ ಕೇಜ್ರಿವಾಲ್ “ನನ್ನನ್ನು ದೆಹಲಿಯ ಜನರು ಸಹೋದರನಂತೆ ಭಾವಿಸುತ್ತಾರೆಯೇ ಅಥವಾ ಮಗನೆಂದು ಭಾವಿಸುತ್ತಾರೆಯೇ ಅಥವಾ ಉಗ್ರವಾದಿ ಎಂದು ಭಾವಿಸುತ್ತಾರೆ ಎಂಬುದನ್ನು ನಾನು ಜನರ ನಿರ್ಧಾರಕ್ಕೆ ಬಿಡುವೆ” ಎಂದಿದ್ದರು. ಪ್ರಕಾಶ್ ಜಾವಡೇಕರ್ ಮಾತಿಗೆ ಪ್ರತಿಕ್ರಿಯಿಸಿದ ಕೇಜ್ರಿವಾಲ್, “ನಿನ್ನೆ ಬಿಜೆಪಿಯ ಕೆಲ ಮುಖಂಡರು ಕೇಜ್ರಿವಾಲ್ ಓರ್ವ ಭಯೋತ್ಪಾದಕನಾಗಿದ್ದಾನೆ ಎಂದು ಹೇಳಿದ್ದರು. ನಾನು ಇಲ್ಲಿಯವರೆಗೆ ದೇಶಕ್ಕಾಗಿ ತನು, ಮನ, ಧನ ಅರ್ಪಿಸಿ ಸೇವೆ ಸಲ್ಲಿಸಿದ್ದೇನೆ. ಕಳೆದ ಐದು ವರ್ಷಗಳಿಂದ ದೆಹಲಿಯ ಪ್ರತಿಯೊಂದು ಮಗುವನ್ನು ನಾನು ನನ್ನ ಮಗ ಎಂದು ಭಾವಿಸಿ ಅವರಿಗಾಗಿ ಒಳ್ಳೆಯ ಶಿಕ್ಷಣದ ವ್ಯವಸ್ಥೆ ಮಾಡಿದ್ದೇನೆ. ಇದರಿಂದ ನಾನು ಭಯೋತ್ಪಾದಕನಾದೇನೆ? ದೆಹಲಿಯ ಯಾವುದೇ ಒಂದು ಮನೆಯಲ್ಲಿ ಓರ್ವ ವ್ಯಕ್ತಿ ಅನಾರೋಗ್ಯಕ್ಕೀಡಾದರೆ ಅವರಿಗಾಗಿ ಔಷಧಿ, ವೈದ್ಯಕೀಯ ಪರೀಕ್ಷೆ ಹಾಗೂ ಆಪರೇಷನ್ ವ್ಯವಸ್ಥೆ ಮಾಡಿದ್ದೇನೆ. ಯಾವೊಬ್ಬ ಉಗ್ರವಾದಿ ಇದನ್ನು ಮಾಡಿದ್ದಾನೆಯೇ?” ಎಂದು ಪ್ರಶ್ನಿಸಿದ್ದರು.
ಜತೆಗೆ ಜಾವಡೇಕರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಎಎಪಿ ಸಂಸದ ಸಂಜಯ್ ಸಿಂಗ್ “ಕೇಂದ್ರ ಸರಕಾರ ಇರುವ, ಚುನಾವಣಾ ಆಯೋಗ ಉಪಸ್ಥಿತಿ ಇರುವ ದೇಶದ ರಾಜಧಾನಿಯಲ್ಲೇ ಈ ಬೆಳವಣಿಗೆಗಳು ನಡೆಯುತ್ತಿವೆ. ಇಂಥಹ ಭಾಷೆ ಬಳಕೆ ಮಾಡಲು ಕೇಂದ್ರ ಸಚಿವರಿಗೆ ಹೇಗೆ ಅನುಮತಿ ನೀಡುತ್ತಾರೆ? ಅರವಿಂದ ಕೇಜ್ರಿವಾಲ್ ಭಯೋತ್ಪಾದಕರಾದರೆ, ಅವರನ್ನು ಬಂಧಿಸುವಂತೆ ನಾನು ಬಿಜೆಪಿಗೆ ಸವಾಲು ಹಾಕುತ್ತೇನೆ,” ಎಂದು ಕಿಡಿಕಾರಿದ್ದಾರೆ. ಈ ಹಿಂದೆ ಬಿಜೆಪಿ ಸಂಸದ ಪರ್ವೇಶ್ ವರ್ಮಾ ಚುನಾವಣಾ ಪ್ರಚಾರದ ವೇಳೆ ಕೇಜ್ರಿವಾಲ್ ವಿರುದ್ಧ ಜನವರಿ 25 ರಂದು ಭಯೋತ್ಪಾದಕ ಪದ ಬಳಸಿದ್ದರು. ಈ ಸಂಬಂಧ ಅವರಿಗೆ ಚುನಾವಣಾ ಆಯೋಗ ನೋಟಿಸ್ ನೀಡಿ ನಾಲ್ಕು ದಿನಗಳ ಪ್ರಚಾರಕ್ಕೂ ನಿರ್ಬಂಧ ವಿಧಿಸಿದೆ. ಈ ಎಲ್ಲಾ ನಿರ್ಭಂಧಗಳ ನಡುವೆ ದೆಹಲಿ ರಾಜಕಾರಣ ಕೆಸರೆರಚಾಟವನ್ನು ಮುಂದುವರಿಸಿದೆ.
ಕೇಂದ್ರ ಸರ್ಕಾರವನ್ನು ವಿರೋಧಿಸುವ ಪ್ರತಿಯೊಬ್ಬರು ಕೂಡ ಉಗ್ರರ ಪರವಾಗಿದ್ದಾರೆ ಎನ್ನುವ ರೀತಿಯಲ್ಲಿ ಬಿಜೆಪಿಯ ಸಂಸದರು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅಷ್ಟು ಮಾತ್ರವಲ್ಲದೇ, ಸಮಾಜದಲ್ಲಿ ಅಶಾಂತಿ ಉಂಟು ಮಾಡುವಂತಹ ಪ್ರಚೋದನಕಾರಿ ಭಾಷಣಗಳನ್ನು ಮಾಡಿ, ಅದರ ಲಾಭವನ್ನು ಮತಗಳ ಮೂಲಕ ಪಡೆಯಲು ಬಯಸುವುದು ಬಿಜೆಪಿಯ ಗುರಿ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಇನ್ನು ದೆಹಲಿ ಚುನಾವಣೆಯಲ್ಲಿ ಯಾವುದೇ ಸುದ್ದಿಯನ್ನು ನಿರ್ಮಿಸಲು ಸಾಧ್ಯವಾಗದ ಕಾಂಗ್ರೆಸ್ ಪಕ್ಷವು ಆಮ್ ಆದ್ಮಿ ಮತ್ತು ಬಿಜೆಪಿಯ ಒತ್ತಡದಿಂದ ಸಾಕಷ್ಟು ಮೆತ್ತಗಾಗಿ ಹೋಗಿದೆ. ಮೇಲ್ನೋಟಕ್ಕೆ ನೋಡುವಾಗ ಇದು ಆಪ್ ಮತ್ತು ಬಿಜೆಪಿ ನಡುವಿನ ನೇರ ಹಣಾಹಣಿಯಿದ್ದಂತೆ ಕಾಣುತ್ತದೆ. ಹಾಗಾಗಿ, ಆಮ್ ಆದ್ಮಿ ಪಕ್ಷಕ್ಕೆ ಏಕಾಂಗಿಯಾಗಿ ರಾಷ್ಟ್ರೀಯ ಪಕ್ಷವಾದ ಬಿಜೆಪಿಯನ್ನು ಎದುರಿಸುವ ಅನಿವಾರ್ಯತೆ ಈ ಚುನಾವಣೆಯಲ್ಲಿ ಎದುರಾಗಿದೆ.