ಕಳೆದ ಕೆಲವು ದಿನಗಳಿಂದ ಈರುಳ್ಳಿ ಬೆಳೆದ ರೈತರು ಸರಿಯಾದ ಬೆಲೆ ಸಿಗದೆ ಚಿಂತಿತರಾಗಿದ್ದರು. ಆದರೆ ಎರಡು ಮೂರು ದಿನದಿಂದ ಈರುಳ್ಳಿಗೆ ಬಂಪರ್ ಬೆಲೆ ಬಂದಿದ್ದು ರೈತರ ಮುಗದಲ್ಲಿ ಮಂದಹಾಸ ಮೂಡಿಸಿದೆ. ದಿನದಿಂದ ದಿನಕ್ಕೆ ಅವಕ ಉತ್ತಮವಾಗಿ ಬರುತ್ತಿದ್ದು ಕರ್ನಾಟಕದ ಕೆಲವು ಊರುಗಳಲ್ಲಿ ಸೆಂಚುರಿ ಬಾರಿಸಿದೆ. ಈ ವರ್ಷ ಈರುಳ್ಳಿ ಇಳುವರಿ ಚೆನ್ನಾಗಿಯೇ ಬಂದಿತ್ತು ಆದರೆ ಉತ್ತರ ಕರ್ನಾಟಕದಲ್ಲಿ ಮೂರು ಬಾರಿ ನೆರೆ ಹಾವಳಿ ಮತ್ತು ನಿರಂತರ ಮಳೆಯಿಂದ ಈರುಳ್ಳಿ ಬೆಲೆ ಕುಸಿಯಿತು. ಅದರ ಜೊತೆಗೆ ಮಹಾರಾಷ್ಟ್ರದಿಂದ ಬರುವ ಈರುಳ್ಳಿ ಈ ಬಾರಿ ಕಡಿಮೆ ಪ್ರಮಾಣದಲ್ಲಿ ಬಂದಿದ್ದರಿಂದ ಹಸಿ ಈರುಳ್ಳಿಯೇ ಮಾರಬೇಕಾದ ಪರಿಸ್ಥಿತಿ ರೈತರಿಗೆ ಬಂದಿತು. ತಂದ ಈರುಳ್ಳಿಗೆ ತಕ್ಕ ಬೆಲೆ ಸಿಗದೆ ಪರದಾಡಿದ್ದೂ ಇದೆ. ಈಗ ಬೆಲೆ ಜಾಸ್ತಿ ಯಾಗಿದ್ದು ರೈತ ಸಮೂಹಕ್ಕೆ ಕೊಂಚ ನೆಮ್ಮದಿ ತಂದಿದೆ.
ಕಳೆದ ವಾರ ಕ್ವಿಂಟಾಲ್ ಗೆ 2,000 ದಿಂದ 2,500 ರ ವರೆಗೆ ಇದ್ದಿದ್ದು ಮೊನ್ನೆ ಸೋಮವಾರದಿಂದ ಹೆಚ್ಚಾಗುತ್ತ ಬಂದಿದ್ದು ಗುರುವಾರ ಹಾಗೂ ಶುಕ್ರವಾರ 6 ರಿಂದ 8,000 ದ ವರೆಗೆ ಬಂದಿದೆ. ಉತ್ತಮ ಗಡ್ಡೆಯ ಈರುಳ್ಳಿಯು ಈಗ ಹಾಪ್ ಕಾಮ್ಸ್ ಹಾಗೂ ಕೆಲವು ಊರುಗಳಲ್ಲಿ ರೂ. 100 ರ ಗಡಿ ದಾಟಿದೆ.
ಕರ್ನಾಟಕದಲ್ಲಿ ಇಂದಿನ ಬೆಲೆಗಳು ಇಂತಿವೆ. ಬೆಂಗಳೂರಿನಲ್ಲಿ ರೂ. 100 ರಿಂದ ರೂ. 120, ತುಮಕೂರಿನಲ್ಲಿ ರೂ. ರೂ. 80 ರಿಂದ ರೂ. 100, ಶಿವಮೊಗ್ಗ ದಲ್ಲಿ ರೂ. 100 ರಿಂದ ರೂ.120, ಮಂಗಳೂರಿನಲ್ಲಿ ರೂ. 60 ರಿಂದ ರೂ. ರೂ.100, ಬಳ್ಳಾರಿ ಹಾಗೂ ಗದಗ್ ನಲ್ಲಿ ರೂ. 80 ರಿಂದ ರೂ. 100 ಹೀಗೆ ಇದೆ. (ಇವುಗಳ ಈರುಳ್ಳಿಯ ಗುಣಮಟ್ಟದ ರೀತಿಯ ಮೇಲೆ ಹೆಚ್ಚು ಕಡಿಮೆ ಯಾಗುತ್ತವೆ).
ಈರುಳ್ಳಿಗೇಕೆ ಅಷ್ಟು ಪ್ರಾಶಸ್ತ್ಯ?
ಈರುಳ್ಳಿ ಪ್ರತಿ ಮನೆಯ ದೈನಂದಿಕ ಅಗತ್ಯಗಳಲ್ಲಿ ಒಂದು. ಪ್ರತಿ ಹೋಟೆಲ್ ನಲ್ಲಿಯೂ ಈರುಳ್ಳಿ ಬೇಕೆ ಬೇಕು. ಈರುಳ್ಳಿ ಬೆಲೆ ಹೆಚ್ಚಿಗೆಯಾದರೆ ಹೋಟೆಲ್ ಖಾದ್ಯ ಪದಾರ್ಥಗಳ ಬೆಲೆಯೂ ಹೆಚ್ಚಾಗುತ್ತದೆ. ಹೀಗಾಗಿ ಈರುಳ್ಳಿ ಬೆಲೆ ಏರಿಕೆ ಬಿಸಿ ಎಲ್ಲರಿಗೂ ತಟ್ಟುತ್ತದೆ. ನಮ್ಮ ಪ್ರಾಚೀನ ಕಾಲದ ತರಕಾರಿಗಳಲ್ಲಿ ಈರುಳ್ಳಿಗೆ ಅಗ್ರ ಸ್ಥಾನವಿದೆ.
ಉತ್ತರ ಕರ್ನಾಟಕದಲ್ಲಂತೂ ರೊಟ್ಟಿಗೆ ಹಸಿ ಈರುಳ್ಳಿ ಅಂದರೆ ಉಳ್ಳಾಗಡ್ಡಿ ಇರಲೇಬೇಕು. ರೊಟ್ಟಿಯ ಜೊತೆಗೆ ಎಷ್ಟೇ ಪಲ್ಯಗಳು ಇದ್ದರೂ ಈರುಳ್ಳಿ ಮಾತ್ರ ಬೇಕು. ಅದರ ಜೊತೆಗೆ ಗಿರಮಿಟ್ಟು, ಚುರುಮರಿ ವಗ್ಗರಣೆ ಹಾಗೂ ಚೂಡಾದ ಜೊತೆಗೆ ಹಸಿ ಈರುಳ್ಳಿ ಮತ್ತು ಸಾಯಂಕಾಲದ ಹೊತ್ತಿಗೆ ಈರುಳ್ಳಿ ಭಜಿ ಉತ್ತರ ಕರ್ನಾಟಕದ ಬಹುತೇಕ ಭಾಗಗಳಲ್ಲಿ ದಿನದ ರೂಢಿ.
ಈರುಳ್ಳಿ ಅಂದರೆ ಹಾಗೇ ಅಲ್ಲ ಸರ್ಕಾರಗಳನ್ನೂ ಬೀಳಿಸಿವೆ:
ಈರುಳ್ಳಿಯ ಶಕ್ತಿಯನ್ನು ಕಡೆಗಣಿಸುವಂತಿಲ್ಲ. ಒಂದು ಬಾರಿ ಕೇಂದ್ರ ಸರ್ಕಾರ ಹಾಗೂ ಎರಡು ಬಾರಿ ರಾಜ್ಯ ಸರ್ಕಾರವನ್ನು ಬೀಳಿಸಿದೆ. ಅಂದು 80 ರ ದಶಕದಲ್ಲಿ ಅಂದರೆ 1980 ರಲ್ಲಿ ದೇಶದಲ್ಲಿ ಬರಗಾಲ ಆವರಿಸಿತ್ತು. ಚರಣ್ ಸಿಂಗ್ ಪ್ರಧಾನಿಯಾಗಿದ್ದರು. ಈರುಳ್ಳಿಯ ಬೆಲೆ ಏರಿಕೆ ಬಿಸಿ ತಡೆಯಲಾಗದೇ ಕೇಂದ್ರ ಸರ್ಕಾರ ಪರಿಸ್ಥಿತಿ ಹತೋಟಿ ತರಲು ಹರಸಾಹಸ ಮಾಡಿತು. ಆದರೂ ಚರಣ್ ಸಿಂಗ್ ತಮ್ಮ ಅಧಿಕಾರವನ್ನೇ ಕಳೆದುಕೊಳ್ಳಬೇಕಾಯಿತು.
1998 ರಲ್ಲಿ ಮೊದಲ ಬಾರಿಗೆ ದೆಹಲಿ ಸಿಎಂ ಆಗಿದ್ದ ದಿವಂಗತ ಸುಷ್ಮಾ ಸ್ವರಾಜ್ ತಮ್ಮ ಅಧಿಕಾರವನ್ನು ಕಳೆದುಕೊಳ್ಳಲು ಈರುಳ್ಳಿ ಬೆಲೆಯಲ್ಲಿನ ಏರಿಕೆಯೇ ಕಾರಣ. ಸುಷ್ಮಾ ಸ್ವರಾಜ್ ಕಾಲದಲ್ಲೇ ದೆಹಲಿಯಲ್ಲಿ ಈರುಳ್ಳಿ ಬೆಲೆ ಮೊದಲ ಬಾರಿಗೆ ದಾಖಲೆಯ 100 ರೂ. ಗಡಿದಾಟಿತ್ತು. ಪರಿಣಾಮ ಸರ್ಕಾರದ ವಿರುದ್ಧ ಮಧ್ಯಮ ವರ್ಗದ ಜನ ರೊಚ್ಚಿಗೆದ್ದಿದ್ದರು.
ಸರ್ಕಾರ ನಡೆಸಿದ 52 ದಿನದಲ್ಲೇ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳಬೇಕಾಯಿತು.
2010 ರಲ್ಲಿ ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕ ನೆರೆ ಹಾವಳಿ ಹಾಗೂ ಭೀಕರ ಮಳೆಗೆ ಸಿಲುಕಿ ಒದ್ದಾಡಿತ್ತು. ಇನ್ನೇನು ಈರುಳ್ಳಿ ಕಟಾವು ಮಾಡಬೇಕೆನ್ನುವಷ್ಟರಲ್ಲಿ ಬಂದ ಮಳೆರಾಯ ಇಳೆಯನ್ನು ತೋಯ್ದು ತೊಪ್ಪೆಯಾಗಿಸಿ ಕೈಗೆ ಬಂದ ಈರುಳ್ಳಿಯೂ ಕಳೆಯುವ ಹಾಗೆ ಮಾಡಿದೆ. ಆಗ ಈರುಳ್ಳಿ ಬೆಲೆ 90 ರೂ ದಾಟಿತ್ತು.
ಬಾಗಲಕೋಟೆ ಜಿಲ್ಲೆಯ ಹಳ್ಳಿಯ ರೈತರೂಬ್ಬರು ಹೇಳುವ ಪ್ರಕಾರ, “ಈ ವರ್ಷ ಬರವಿದ್ದರೂ ಈರುಳ್ಳಿ ಮಾತ್ರ ಅಲ್ಪ ಸ್ವಲ್ಪ ಲಾಭ ತಂದು ಕೊಡುತ್ತಿತ್ತು. ಈ ಬಾರಿ ಉತ್ತಮ ಲಾಭ ಬರಬಹುದು ಎಂಬ ನಿರೀಕ್ಷೆಯಿಂದ ಮಾರುಕಟ್ಟೆ ಹೋದರೆ ಕೆಲವೇ ಮೂಟೆಗಳಷ್ಟು ಈರುಳ್ಳಿಗೆ ಉತ್ತಮ ಬೆಲೆ ಕೊಟ್ಟರು. ಉಳಿದದ್ದು ಕೊಳೆತಂತಾಗಿದ್ದು ರೂ. 1500 ಮಾತ್ರ ಸಿಕ್ಕಿತು. ಇರಲಿ ಅಲ್ಪ ಸ್ವಲ್ಪವಾದರೂ ಬಂತು ಎಂಬ ನೆಮ್ಮದಿ ಇದೆ. ಆದೆ ನಮ್ಮದೇ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಹಾಗೂ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿರುವ ರೈತರು ನೆರೆಯಿಂದ ಈರುಳ್ಳಿ ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ. ವಿಮೆ ಕಟ್ಟಿದವರೆಲ್ಲರೂ ಅಲ್ಪ ಹಣ ಪಡೆದಿದ್ದಾರೆಂಬುದೇ ಸಮಾಧಾನ ಸಂಗತಿ”.
ಶರಣಬಸಪ್ಪ ಹಿರೇಮಠ, ಬಾಗಲಕೋಟೆ ಎಪಿಎಂಸಿಯಲ್ಲಿ ಕೆಲಸ ಮಾಡುತ್ತಿರುವ ಲೆಕ್ಕಿಗರು ಹೇಳುವ ಪ್ರಕಾರ, “ಈ ಬಾರಿ ಅವಕ ಕಡಿಮೆ ಬಂದರೂ ಕೆಲ ರೈತರು ಉತ್ತಮ ಬೆಲೆ ಪಡೆದುಕೊಂಡಿದ್ದಾರೆ. ಗದಗ್ ಜಿಲ್ಲೆಯ ಮಾರುಕಟ್ಟೆ ಹೋದವರೂ ಕೈತುಂಬಾ ಹಣ ಎಣಿಸಿದ್ದಾರೆ. ಕೊಳೆತ ಗಡ್ಡೆಗಳು ಅಂದರೆ ಕಲ್ಲುಗಳಿದ್ದಂತೆ, ಅವುಗಳಿಗೆ ಬೆಲೆ ಇಲ್ಲ. ಅಂತಹ ಈರುಳ್ಳಿಗೂ ರೂ. 2000 ರ ವರೆಗೆ ಸಿಕ್ಕಿದ್ದು ನೆಮ್ಮದಿ ತಂದಿದೆ.