ಲಕ್ಷ ಕೋಟಿ ರುಪಾಯಿಗಳ ಸಾಲದ ಹೊರೆಯಿಂದ ತತ್ತರಿಸಿರುವ ಮೊಬೈಲ್ ಕಂಪನಿಗಳು ಮೂರು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಮೊಬೈಲ್ ಸೇವೆಗಳ ದರವನ್ನು ಹೆಚ್ಚಿಸಲು ನಿರ್ಧರಿಸಿವೆ. ಡಿಸೆಂಬರ್ 1ರಿಂದ ದರ ಏರಿಕೆ ಆಗಲಿದೆ. ಸದ್ಯಕ್ಕೆ ಅಗ್ರಸ್ಥಾನದಲ್ಲಿರುವ ಏರ್ಟೆಲ್ ಮತ್ತು ಇತ್ತೀಚೆಗಷ್ಟೇ ರಿಲಯನ್ಸ್ ಜಿಯೋ ಕಂಪನಿಗೆ ಎರಡನೇ ಸ್ಥಾನ ಬಿಟ್ಟುಕೊಂಡು ಮೂರನೇ ಸ್ಥಾನಕ್ಕೆ ಇಳಿದಿರುವ ವೊಡಾಫೋನ್ ಐಡಿಯಾ ದರ ಏರಿಕೆ ಮಾಡುವುದಾಗಿ ಪ್ರಕಟಿಸಿವೆ. ಈ ಎರಡೂ ಕಂಪನಿಗಳಿಗೆ ಸ್ಪರ್ಧೆ ನೀಡುತ್ತಿರುವ ರಿಲಯನ್ಸ್ ಜಿಯೋ ಮಾತ್ರ ಕೆಲವು ವಾರಗಳಲ್ಲಿ ದರ ಏರಿಕೆ ಮಾಡುವುದಾಗಿ ಹೇಳಿದೆ. ದಿನಾಂಕವನ್ನು ಪ್ರಕಟಿಸಿಲ್ಲ.
ದರ ಏರಿಕೆ ಮಾಡಲು ಇದ್ದ ಪ್ರಮುಖ ಕಾರಣ ದೂರಸಂಪರ್ಕ ಇಲಾಖೆ ಹೊಂದಾಣಿಕೆ ಮಾಡಲಾದ ಒಟ್ಟು ಆದಾಯ (ಎಜಿಆರ್) ಕುರಿತಂತೆ ಸುಪ್ರೀಂಕೋರ್ಟ್ ನಲ್ಲಿ ವ್ಯಾಜ್ಯವನ್ನು ಗೆದ್ದಿದ್ದು, ಬೃಹತ್ ಬಾಕಿ ಮೊತ್ತವನ್ನು ಈ ಕಂಪನಿಗಳು ಪಾವತಿಸಬೇಕಿದೆ.
ಹೊಂದಾಣಿಕೆ ಮಾಡಲಾದ ಒಟ್ಟು ಆದಾಯ (ಎಜಿಆರ್) ಬಾಕಿ ಪಾವತಿಸುವ ಸಲುವಾಗಿ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ತಮ್ಮ ಎಡರನೇ ತ್ರೈಮಾಸಿಕದಲ್ಲಿ ಭಾರಿ ನಷ್ಟವನ್ನು ಘೋಷಣೆ ಮಾಡಿವೆ. ವೊಡಾಫೋನ್ ಐಡಿಯಾ 50,921 ಕೋಟಿ ರುಪಾಯಿಗಳ ನಷ್ಟ ಘೋಷಣೆ ಮಾಡಿದ್ದರೆ, ಏರ್ಟೆಲ್ 23,045 ಕೋಟಿ ರುಪಾಯಿ ನಷ್ಟ ಘೋಷಣೆ ಮಾಡಿದೆ. ಘೋಷಣೆ ಮಾಡಲಾದ ನಷ್ಟದ ಅಷ್ಟೂ ಮೊತ್ತವನ್ನು ಈ ಕಂಪನಿಗಳು ಹೊಂದಾಣಿಕೆ ಮಾಡಲಾದ ಒಟ್ಟು ಆದಾಯದ ಮೇಲಿನ ತೆರಿಗೆ ಮತ್ತು ಶುಲ್ಕವನ್ನು ಸರ್ಕಾರಕ್ಕೆ ಪಾವತಿಸಬೇಕಿದೆ.
ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ಬಿಟ್ಟರೆ, ಸ್ಪರ್ಧೆಯಲ್ಲಿ ಉಳಿದಿರುವ ಮೂರು ಪ್ರಮುಖ ಕಂಪನಿಗಳಾದ ಏರ್ಟೆಲ್, ಐಡಿಯಾ ಮತ್ತು ರಿಲಯನ್ಸ್ ಜಿಯೋ ಕಂಪನಿಗಳ ಮೇಲೆ ಬೃಹತ್ ಸಾಲದ ಹೊರೆಯೇ ಇದೆ. ಏರ್ಟೆಲ್ 1.17 ಲಕ್ಷ ಕೋಟಿ ಇದ್ದರೆ, ವೊಡಾಫೋನ್ 1.18 ಲಕ್ಷ ಕೋಟಿ ಮತ್ತು ರಿಲಯನ್ಸ್ ಜಿಯೋ 1.08 ಲಕ್ಷ ಕೋಟಿ ಸಾಲ ಹೊಂದಿವೆ. ಈ ಮೂರು ಕಂಪನಿಗಳ ಒಟ್ಟು 3.43 ಲಕ್ಷ ಕೋಟಿ ಸಾಲ ಹೊರೆ ಇದೆ. ಈ ಬೃಹತ್ ಸಾಲದ ಹೊರೆಯ ಜತೆಗೆ ಹೊಂದಾಣಿಕೆ ಮಾಡಲಾದ ಒಟ್ಟು ಆದಾಯದ ಮೇಲಿನ ಬಾಕಿ ತೆರಿಗೆ ಮತ್ತು ಶುಲ್ಕ ಪಾವತಿಸಬೇಕಿರುವುದರಿಂದ ಕಂಪನಿಗಳಿಗೆ ದರ ಏರಿಕೆ ಮಾಡದೇ ಅನ್ಯ ಮಾರ್ಗವೇ ಇರಲಿಲ್ಲ.
ಇತ್ತೀಚೆಗಷ್ಟೇ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಜಿಯೋಯೇತರ ಮೊಬೈಲ್ ಗಳಿಗೆ ಮಾಡುವ ಕರೆಗಳಿಗೆ ಐಯುಸಿ (ಇಂಟರ್ಕನೆಕ್ಟಿವಿಟಿ ಯೂಸೆಜ್ ಚಾರ್ಚ್) ಶುಲ್ಕ ಪ್ರತಿ ನಿಮಿಷಕ್ಕೆ 6 ಪೈಸೆ ವಿಧಿಸಲಾರಂಭಿಸಿದೆ. ಅಂದರೆ, ಜಿಯೋ ತಾನು ಉಚಿತ ಕರೆಗಳ ಸೇವೆ ಒದಗಿಸುವುದಾಗಿ ಹೇಳಿಕೊಂಡಿದ್ದರೂ ಈಗ ಪ್ರತಿ ಜಿಯೋಯೇತರ ಮೊಬೈಲ್ ಕರೆಗಳಿಗೆ ಪ್ರತಿ ನಿಮಿಷಕ್ಕೆ 6 ಪೈಸೆ ವಿಧಿಸುತ್ತಿದೆ. ಇದು ದರ ಏರಿಕೆಗೆ ಬರೆದ ಮುನ್ನುಡಿಯಾಗಿದೆ. ಆರಂಭದಲ್ಲಿ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ತಾವು ನಿಜವಾಗಿಯೂ ಉಚಿತ ಕರೆಗಳ ಸೇವೆ ಒದಗಿಸುತ್ತಿರುವುದಾಗಿ ಪ್ರಚಾರ ಮಾಡಿಕೊಂಡವು. ಆದರೀಗ ದರ ಏರಿಕೆಗೆ ಮುಂದಾಗಿವೆ.
ಹೊಸ ಗ್ರಾಹಕರನ್ನು ಸೆಳೆಯುವ ಮತ್ತು ಹಾಲಿ ಗ್ರಾಹಕರನ್ನು ಉಳಿಸಿಕೊಳ್ಳುವ ಸಲುವಾಗಿ ಸ್ಪರ್ಧಾತ್ಮಕ ದರಸಮರಕ್ಕೆ ಇಳಿದಿದ್ದ ಮೂರು ಕಂಪನಿಗಳು ಭಾಗಷಃ ನಷ್ಟ ಅನುಭವಿಸುತ್ತಿದ್ದವು. ಜಿಯೋ ಮಾರುಕಟ್ಟೆಗೆ ಬಂದ ನಂತರ ಮೊಬೈಲ್ ದರ ಸಂರಚನೆಯೇ ಬದಲಾಯಿತು. ಕರೆಗೆ ಶುಲ್ಕ ನೀಡಬೇಕಿಲ್ಲ. ಡೇಟಾಗೆ ಮಾತ್ರ ಶುಲ್ಕ ಪಡೆದು ಉಚಿತ ಕರೆ ಮತ್ತು ಮೆಸೆಜ್ ಸೌಲಭ್ಯ ಒದಗಿಸಿ ಗ್ರಾಹಕರನ್ನು ಸೆಳೆಯಿತು. ಮಾರುಕಟ್ಟೆಯಲ್ಲಿ ತಮ್ಮ ಪಾಲನ್ನು ರಕ್ಷಿಸಿಕೊಳ್ಳುವ ಸಲುವಾಗಿ ಏರ್ಟೆಲ್ ಮತ್ತು ಐಡಿಯಾ ಸಹ ಉಚಿತ ಕರೆ ಮತ್ತು ಮೆಸೆಜ್ ಸೌಲಭ್ಯವನ್ನು ಗ್ರಾಹಕರಿಗೆ ನೀಡಿದವು. ಡೇಟಾಗೆ ಭಾರಿ ಶುಲ್ಕ ವಿಧಿಸುತ್ತಿದ್ದ ಈ ಕಂಪನಿಗಳು ಅತ್ಯಲ್ಪ ದರಕ್ಕೆ ಭಾರಿ ಡೇಟಾ ನೀಡಲಾರಂಭಿಸಿದವು. ಈಗಲೂ ವಿಶ್ವದ ಎಲ್ಲಾ ದೇಶಗಳಿಗೆ ಹೋಲಿಸಿದರೆ, ಭಾರತದಲ್ಲಿನ ಮೊಬೈಲ್ ಸೇವಾ ಶುಲ್ಕಗಳೇ ಅತ್ಯಂತ ಕಡಮೆ ಇವೆ.
ಅಷ್ಟಕ್ಕೂ ದರ ಏರಿಕೆ ಎಷ್ಟಾಗಬಹುದು?
ದರ ಏರಿಕೆ ಎಷ್ಟು ಎಂಬುದನ್ನು ಏರ್ಟೆಲ್ ಆಗಲೀ ಐಡಿಯಾ ಆಗಲೀ ಹೇಳಿಲ್ಲ. ಆದರೆ, ದರ ಪರಿಷ್ಕರಣೆ ಮಾಡುವುದಾಗಿ ಘೋಷಿಸಿವೆ. ಮಾರುಕಟ್ಟೆ ವಿಶ್ಲೇಷಕರ ಪ್ರಕಾರ ಶೇ.30ರಿಂದ 40ರಷ್ಟುದರ ಏರಿಕೆ ಆಗಬಹುದು. ಆದರೆ, ಏಕಾಏಕಿ ಶೇ.30-40ರಷ್ಟು ದರ ಏರಿಕೆ ಮಾಡಿದರೆ, ಅದರ ಲಾಭವನ್ನು ಇನ್ನೂ ದರ ಏರಿಕೆ ಪ್ರಸ್ತಾಪ ಮಾಡದ ರಿಲಯನ್ಸ್ ಜಿಯೋ ಪಡೆಯುವ ಸಾಧ್ಯತೆ ಇದೆ. ಹೀಗಾಗಿ ಆರಂಭದಲ್ಲಿ ಶೇ.5ರಿಂದ 10ರಷ್ಟು ದರ ಏರಿಕೆ ಮಾಡುವ ನಿರೀಕ್ಷೆ ಇದೆ.
ಅಂದರೆ, ಈಗ ಅತ್ಯಂತ ಜನಪ್ರಿಯವಾಗಿರುವ 399 ರುಪಾಯಿ ಮತ್ತು 499 ರುಪಾಯಿಗಳ ಪ್ರತಿನಿತ್ಯ ತಲಾ 2 ಮತ್ತು 3 ಜಿಬಿ ಡೇಟಾ ಪ್ಲಾನ್ ಗಳ ದರಗಳು ಕ್ರಮವಾಗಿ 440 ರುಪಾಯಿ ಮತ್ತು 550 ರುಪಾಯಿಗಳಿಗೆ ಏರಬಹುದು. ನಿತ್ಯವೂ 2- 3 ಜಿಬಿ ಡೇಟಾ ಪಡೆಯುವ ಗ್ರಾಹಕರಿಗೆ ಈ ಏರಿಕೆ ಹೆಚ್ಚಿನ ಹೊರೆ ಆಗಲಾರದು. ಆದರೆ, ಡೇಟಾ ಪಡೆಯದೇ ಬರೀ ಕರೆಗಳ ಸೇವೆ ಪಡೆಯುತ್ತಿರುವ ಗ್ರಾಹಕರು ಸಹ ಕರೆಗಳ ಮೇಲಿನ ದರದ ಮೇಲೆ ಶೇ.10ರಷ್ಟು ಹೆಚ್ಚಿನ ದರ ಪಾವತಿಸಬೇಕಾಗುತ್ತದೆ.
ಈಗ ಪ್ರಸ್ತುತ ಮಾಸಿಕ ಸಂಪರ್ಕ ಶುಲ್ಕವು ಡೇಟಾ ಇಲ್ಲದೇ 24 ರುಪಾಯಿಗಳು ಮತ್ತು ಡೇಟಾ ಸಹಿತಾ 33 ರುಪಾಯಿಗಳಿದೆ. ಬಹುತೇಕ ಎಲ್ಲಾ ಕಂಪನಿಗಳ ಮಾಸಿಕ ಶುಲ್ಕ ಇಷ್ಟೇ ಇದೆ. ನಂತರದ ಕರೆ ಮತ್ತು ಡೇಟಾ ಪ್ಲಾನ್ ಗಳಲ್ಲಿ ಏರಿಳಿತ ಇರಬಹುದು. ಕಂಪನಿಗಳು ಮಾಸಿಕ ಸಂಪರ್ಕ ಶುಲ್ಕವನ್ನು ಶೇ.10ರಷ್ಟು ಏರಿಕೆ ಮಾಡಬಹುದು.
ಏರಿಕೆ ಶೇ.10ಕ್ಕೆ ಸೀಮಿತವಾಗುತ್ತದೆಯೇ? ಖಂಡಿತಾ ಇಲ್ಲಾ. ಗ್ರಾಹಕರು ದರ ಏರಿಕೆಗೆ ಹೊಂದಿಕೊಂಡಂತೆ ಒಂದೆರಡು ತಿಂಗಳ ನಂತರ ಶೇ.5ರಿಂದ 10ರಷ್ಟು ಮತ್ತೆ ದರ ಏರಿಕೆ ಮಾಡಬಹುದು. ಏರ್ಟೆಲ್ ಮತ್ತು ಐಡಿಯಾ ದರ ಏರಿಕೆ ಮಾಡಿದ ನಂತರ ಜಿಯೋ ಸಹ ಈಗ ಪ್ರಕಟಿಸಿರುವಂತೆ ಕೆಲವು ವಾರಗಳಲ್ಲಿ ದರ ಏರಿಕೆಗೆ ಮುಂದಾದರೆ, ಮಾರುಕಟ್ಟೆಯಲ್ಲಿ ದರ ಏರಿಕೆ ಅಬಾಧಿತವಾಗಿರುತ್ತದೆ. ಒಂದು ವೇಳೆ ಜಿಯೋ ದರ ಏರಿಕೆ ಮಾಡದೇ ಬೇರೆ ಕಂಪನಿಗಳ ದರ ಏರಿಕೆಯನ್ನು ತನ್ನ ಗ್ರಾಹಕರ ಸಂಖ್ಯೆ ಹೆಚ್ಚಿಸಲು ಬಳಸಿಕೊಳ್ಳಲಾರಂಭಿಸಿದರೆ, ಆರಂಭಿಕ ದರ ಏರಿಕೆಯು ಅಲ್ಪಪ್ರಮಾಣದಲ್ಲಿರುತ್ತದೆ. ಮತ್ತು ಅದು ಅಲ್ಪಾವಧಿಯಿಂದ ಮಧ್ಯಮಾವಧಿವರೆಗೂ ಮುಂದುವರೆಯಬಹುದು. ಎಲ್ಲಿಯವರೆಗೆ ಜಿಯೋ ತನ್ನ ದರ ಏರಿಕೆ ಮಾಡುವುದಿಲ್ಲವೋ ಅಲ್ಲಿಯವರೆಗೆ ಏರ್ಟೆಲ್ ಮತ್ತು ಐಡಿಯಾ ಅಳೆದುತೂಗಿ ದರ ಏರಿಕೆ ಮಾಡಿ, ತಮ್ಮ ಗ್ರಾಹಕರನ್ನು ರಕ್ಷಿಸಿಕೊಳ್ಳಲು ಯತ್ನಿಸುತ್ತವೆ. ಅದು ಆ ಕಂಪನಿಗಳಿಗೆ ಅನಿವಾರ್ಯ ಕೂಡಾ.