ಮೂರು ವರ್ಷಗಳ ಹಿಂದೆ ನೋಟ್‌ಬ್ಯಾನ್ ಮಾಡಲಾಯಿತು. ಕಪ್ಪು ಹಣವನ್ನು ನಿಯಂತ್ರಿಸುವುದಕ್ಕೆಂದು ಈ ಕ್ರಮ ಅನುಸರಿಸಿರುವುದಾಗಿ ಕೇಂದ್ರ ಸರ್ಕಾರ ಸಮಜಾಯಿಷಿ ನೀಡಿತ್ತು. ಈ ಸಂದರ್ಭದಲ್ಲಿ ಎದೆತಟ್ಟಿಕೊಂಡು ಕೇಳಿದ್ದು, ಭಾರತವನ್ನು ಡಿಜಿಟಲ್ ಎಕನಾಮಿಯನ್ನಾಗಿ ಮಾಡುತ್ತೇವೆ. ನಗದು ರಹಿತ ವಹಿವಾಟು ಜಾರಿಗೆ ತರುತ್ತೇವೆ ಎಂದು. ಸರ್ಕಾರ ಈ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವಂತೆ ಯುಪಿಐಗಳು, ಇಂಟರ್ನೆಟ್ ಆಧರಿತ ಸೇವೆಗಳು ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡವು.
ಇದಾದ ಬಳಿಕ ಸ್ವತಃ ಪ್ರಧಾನ ಮಂತ್ರಿಯವರು ಪೇಟಿಯಂ ಎಂಬ ಖಾಸಗಿ ಡಿಜಿಟಲ್ ವ್ಯಾಲೆಟ್ ಪ್ರಚಾರದ ಜಾಹೀರಾತಿನಲ್ಲಿ ಕಾಣಿಸಿಕೊಂಡರು. ನಂತರದ ದಿನಗಳಲ್ಲಿ ಫೋನ್ ಪೆ, ಗೂಗಲ್ ಪೇ ಸೇರಿದಂತೆ ಹಲವು ಡಿಜಿಟಲ್ ಹಣಕಾಸಿನ ವಹಿವಾಟು ಮಾಡುವ ಮೊಬೈಲ್ ಅಪ್ಲಿಕೇಷನ್‌ಗಳು ಹೆಚ್ಚು ಬಳಕೆಗೆ ಬಂದವು.
ಸರ್ಕಾರ ಸ್ವತಃ ಡಿಜಿಟಲ್ ಲಾಕರ್, ಉಮಂಗ್ ಇತ್ಯಾದಿ ಸರ್ಕಾರಿ ಸೇವೆಗಳನ್ನು ಕಡ್ಡಾಯ ಡಿಜಿಟಲ್ ಸ್ವರೂಪಕ್ಕೆ ರೂಪಾಂತರಿಸಿದೆ. ಈ ಹೊತ್ತಿಗೆ ಈ ಕಾಮರ್ಸ್ ವ್ಯಾಪಕವಾಗಿ ಬೆಳೆದು ನಿಂತಿತ್ತು. ಟ್ಯಾಕ್ಸಿ, ಫುಡ್ ಡೆಲಿವರಿ, ದಿನಸಿ, ಬ್ಯಾಂಕಿಂಗ್ ವ್ಯವಹಾರಗಳ ಇಂಟರ್ನೆಟ್ ಅವಲಂಬನೆ ಅನಿವಾರ್ಯವಾಗಿ ಬಿಟ್ಟಿತು. ಪ್ರಧಾನಿ ಅವರ ಆಶಯದಂತೆ ಭಾರತವನ್ನು ಡಿಜಿಟಲ್ ಆಗಿಸುವ ನಿಟ್ಟಿನಲ್ಲಿ ಈ ಎಲ್ಲ ಬೆಳವಣಿಗೆಗಳು ಆದಂತೆ ಕಂಡರೂ, ಮೂಲಸೌಕರ್ಯ ಕೊರತೆಯಿಂದಾಗಿ ಈ ಎಲ್ಲ ಸಮಸ್ಯೆಗಳು ಸಮಸ್ಯೆಗಳನ್ನು ಎದುರಿಸುತ್ತಲೇ ಇದ್ದವು. ಅದರ ಮುಂದುವರಿದ ಭಾಗವಾಗಿ ಇಂಟರ್ನೆಟ್ ಶಟ್‌ಡೌನ್ ಬಿಸಿ ಎದುರಿಸುತ್ತಿವೆ.
ಮಂಗಳೂರಿನಲ್ಲಿ ಗುರುವಾರ ರಾತ್ರಿ 10 ಗಂಟೆಯಿಂದ ಇಂಟರ್ನೆಟ್ ಸೇವೆ ಸ್ಥಗಿತಗೊಂಡಿದೆ. ಸುಮಾರು 4.85 ಲಕ್ಷ ಜನಸಂಖ್ಯೆ ಹೊಂದಿರುವ ಮಂಗಳೂರು ಕರ್ನಾಟಕದ ಪ್ರಮುಖ ಮಹಾನಗರ ಮತ್ತು ವಾಣಿಜ್ಯ ಕೇಂದ್ರ. ಸಾಫ್ಟ್ ವೇರ್ ಕಂಪನಿಗಳು, ವಾಣಿಜ್ಯ ಉದ್ಯಮಗಳು ಸಕ್ರಿಯವಾಗಿರುವ ಈ ನಗರದಲ್ಲಿ ಈಗ ಇಂಟರ್ನೆಟ್ ಸೇವೆ ಸ್ಥಗಿತಗೊಂಡಿರುವುದು ತೀವ್ರವಾದ ನಷ್ಟವನ್ನು ಎದುರಿಸುವಂತೆ ಮಾಡಿದೆ.
ಸಾಮಾನ್ಯ ಕರ್ಫ್ಯೂ ದಿನಗಳಲ್ಲಿ ಅಂಗಡಿ ಮುಗ್ಗಟ್ಟು ಮುಚ್ಚಿದ್ದರೂ ವ್ಯಕ್ತಿಗತವಾದ ಸೇವೆಗಳು ನಿರಾಂತಕವಾಗಿ ನಡೆಯುತ್ತವೆ. ಆದರೆ ಇಂಟರ್ನೆಟ್ ಸೇವೆ ಇಲ್ಲದಿರುವದರಿಂದ ಸಂಸ್ಥೆಗಳ ಜೊತೆಗೆ ವ್ಯಕ್ತಿಗತ ಚಟುವಟಿಕೆಗಳಿಗೂ ಹೊಡೆತ ಬಿದ್ದಿದೆ.
ಹವ್ಯಾಸಿ ಬರಹಗಾರ, ಅನುವಾದಕ ಮೆಲ್ವಿನ್ ಪಿಂಟೋ, ಇಂಟರ್ನೆಟ್ ಲಭ್ಯವಿಲ್ಲದ ಇಂದಿನ ನಿಗದಿತ ಕೆಲಸವೊಂದನ್ನು ಪೂರೈಸಲಾಗುತ್ತಿಲ್ಲ ಎಂದು ಟೆಕ್ ಕನ್ನಡದ ಜೊತೆ ಮಾತನಾಡುತ್ತಾ ತಮ್ಮ ಸಮಸ್ಯೆಯನ್ನು ಹಂಚಿಕೊಂಡರು. ”ಇಂದು ಸುಮಾರು ಐದು ಸಾವಿರ ರೂಪಾಯಿಗಳ ಕೆಲಸವೊಂದನ್ನು ಇಂರ್ಟನೆಟ್ ಇಲ್ಲದೆ ಕೈ ತಪ್ಪಿ ಹೋಗುವಂತಾಗಿದೆ” ಎಂದರು.
ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಸೇವೆ ನೀಡುವ ಖಾದರ್ ದಿನದ ವಹಿವಾಟು ಸಾಮಾನ್ಯ ದಿನಗಳಲ್ಲಿ ಒಂದು ಲಕ್ಷ ರೂ. ಕೆಲವೊಮ್ಮೆ ಒಂದೂವರೆ ಲಕ್ಷ ರೂ.ಗಳವರೆಗೆ ವಹಿವಾಟು ಆಗುತ್ತದೆ. ಕ್ರಿಸ್‌ಮಸ್ ರಜೆ ಸಮೀಪಿಸುತ್ತಿರುವ ಈ ಹೊತ್ತಿನಲ್ಲಿ ವಿಮಾನ, ಬಸ್ ಟಿಕೆಟ್ ಬುಕ್ಕಿಂಗ್ ಹೆಚ್ಚಿನ ಸಂಖ್ಯೆಯಲ್ಲಿರುತ್ತದೆ. ಇಂತಹ ದಿನಗಳಲ್ಲಿ ಇಂಟರ್ನೆಟ್ ಇಲ್ಲದೇ ಹೋಗಿದ್ದು ಭಾರಿ ನಷ್ಟ ಉಂಟು ಮಾಡಿದೆ ಎನ್ನುತ್ತಾರೆ.
ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯವಿರುವ ಈ ನಗರಕ್ಕೆ ವಿದೇಶಗಳಿಂದಲೂ ನೂರಾರು ವಿದ್ಯಾರ್ಥಿಗಳು ವ್ಯಾಸಂಗಕ್ಕೆ ಆಗಮಿಸುತ್ತಾರೆ. ಇಂಟರ್ನೆಟ್ ಕಡಿತದಿಂದ ವಿದ್ಯಾರ್ಥಿಗಳ ದೈನಂದಿನ ಚಟುವಟಿಕೆಗಳಿಗೆ ಅನಾನುಕೂಲವಾಗಿದೆ ಎಂದು ಸ್ಥಳೀಯ ವಿದ್ಯಾರ್ಥಿಗಳು ಟೆಕ್ ಕನ್ನಡಕ್ಕೆ ತಿಳಿಸಿದ್ದಾರೆ.
ಇಂಟರ್ನೆಟ್ ಸ್ಥಗಿತದಿಂದ ಶಾಂತಿ ಕಾಪಾಡುವ ಪ್ರಯತ್ನವನ್ನು ಸೂಕ್ತವೆನಿಸಿದರೂ, ದೈನಂದಿನ ಹಾಗೂ ವಾಣಿಜ್ಯ ವ್ಯವಹಾರಗಳು ತೀವ್ರವಾದ ಹಿನ್ನೆಡೆ ಕಾಣುವುದರಿಂದ ಭಾರಿ ನಷ್ಟ ಎದುರಿಸುವಂತಾಗುತ್ತದೆ ಎಂಬುದು ವ್ಯಾಪಾರಿಗಳ ಅಭಿಪ್ರಾಯ.
ಬ್ಯಾಂಕ್, ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ಕಡಿಮೆ ಪ್ರಮಾಣದಲ್ಲಿ ತೊಂದರೆ ಎದುರಿಸಿದರೆ, ಪ್ರವಾಸ, ಐಟಿ ಉದ್ಯಮ, ಮಾಧ್ಯಮಗಳು, ಈ ಕಾಮರ್ಸ್, ಅರೆಕಾಲಿಕ/ಫ್ರೀಲಾನ್ಸರ್‌ಗಳು ಭಾರಿ ನಷ್ಟ ಅನುಭವಿಸುವಂತಾಗುತ್ತದೆ.
ಮಂಗಳೂರಿನಲ್ಲಿ ಝೊಮ್ಯಾಟೊ ಅತ್ಯಂತ ಜನಪ್ರಿಯ ಫುಡ್ ಡೆಲಿವರಿ ಸೇವೆಯಾಗಿದ್ದು, 500 ಹೆಚ್ಚು ಹೊಟೇಲ್‌ಗಳೊಂದಿಗೆ ವಹಿವಾಟಿದೆ. ಕರ್ಫ್ಯೂ ಮತ್ತು ಇಂಟರ್ನೆಟ್ ಸ್ಥಗಿತವಾಗಿದ್ದರಿಂದ ಲಕ್ಷಾಂತರ ರೂ.ಗಳ ವಹಿವಾಟು ನಿಂತಿದೆ ಎಂದು ತಿಳಿದು ಬಂದಿದೆ. ಅಧಿಕೃತ ಹೇಳಿಕೆಗಾಗಿ ಝೊಮ್ಯಾಟೊ ಸಂಸ್ಥೆಯನ್ನು ಸಂಪರ್ಕಿಸಿದ್ದು, ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.
ಮಂಗಳೂರು ನಗರವಷ್ಟೇ ಅಲ್ಲದೆ, ಪುತ್ತೂರು ಸುಳ್ಯ, ಚಿಕ್ಕಮಗಳೂರಿನ ಕೊಪ್ಪದವರೆಗೆ ಇಂಟರ್ನೆಟ್ ಸೇವೆ ಇಲ್ಲವಾಗಿರುವುದು ಸಂಪರ್ಕಕ್ಕೂ ದೊಡ್ಡ ತೊಡಕಾಗಿದೆ. ಕೇರಳ ಬಿಎಸ್‌ಎನ್‌ಎಲ್ ವೃತ್ತದ ಸೇವೆಯನ್ನು ಬಳಸುತ್ತಿರುವವರು, ಬ್ರಾಂಡ್ ಸೇವೆಯನ್ನು ಹೊಂದಿರುವವರಿಗೆ ಇಂಟರ್ನೆಟ್ ಸೇವೆ ಲಭ್ಯವಿದ್ದರು, ಸಾಮಾಜಿಕ ಜಾಲತಾಣಗಳನ್ನು ಬಳಸುವುದಕ್ಕೆ ಸಾಧ್ಯವಾಗುತ್ತಿಲ್ಲ.
ಅತ್ಯಂತ ಮಹಾತ್ವಾಕಾಂಕ್ಷೆಯೊಂದಿಗೆ ಡಿಜಿಟಲ್ ಸೇವೆಗಳನ್ನು ಅನಿವಾರ್ಯವಾಗಿಸಿದ ಕೇಂದ್ರ ಸರ್ಕಾರ, ಇಂಟರ್ನೆಟ್ ಸೇವೆ ನಿರ್ಬಂಧಿಸುವ ಕ್ರಮ ಅನುಸರಿಸಿದ್ದು, ಇಂಟರ್ನೆಟ್ ಆಧರಿಸಿದ ಎಲ್ಲ ಸೇವೆಗಳ ನಷ್ಟಕ್ಕೆ ಕಾರಣವಾಗುತ್ತಿದೆ.
ಮಂಗಳೂರಿಗೂ ಮೊದಲು ದೇಶದ ಪ್ರಮುಖ ರಾಜ್ಯಗಳಲ್ಲಿ ಇಂಟರ್ನೆಟ್ ನಿರ್ಬಂಧಿಸಲಾಗಿದೆ. ಕಾಶ್ಮೀರದಲ್ಲಿ ಸುಮಾರು ನಾಲ್ಕು ತಿಂಗಳುಗಳಿಂದ ಇಂಟರ್ನೆಟ್ ಸೇವೆ ಇಲ್ಲ. ಇಂಡಿಯನ್ ಕೌನ್ಸಿಲ್ ಫಾರ್ ರೀಸರ್ಚ್ ಆನ್ ಇಂಟರ್‌ನ್ಯಾಷನಲ್ ಎಕಾನಿಮಿಕ್ ರಿಲೇಷನ್ಸ್ ವರದಿಯ ಪ್ರಕಾರ 2012 ರಿಂದ 2017ರ ಅವಧಿಯಲ್ಲಿ ಇಂಟರ್ನೆಟ್ ಸೇವೆ ಸ್ಥಗಿತ ಪ್ರಕರಣಗಳಿಂದ ನಮ್ಮ ಜಿಡಿಪಿಯ 0.4 ರಿಂದ 2%ರಷ್ಟು ಅಂದರೆ ಸುಮಾರು 3 ಬಿಲಿಯನ್ ಡಾಲರ್‌ಗಳಷ್ಟು ನಷ್ಟವಾಗಿದೆ.
ದೆಹಲಿ, ಅಸ್ಸಾಮ್, ತ್ರಿಪುರ, ಉತ್ತರ ಪ್ರದೇಶಗಳಲ್ಲಿ ಕನಿಷ್ಠ ಒಂದು ದಿನದಿಂದ ಹಿಡಿದು ಎರಡು ದಿನಗಳ ಕಾಲ ಇಂರ್ಟನೆಟ್ ನಿರ್ಬಂಧಿಸಲಾಗಿದೆ. ಇದು ಅಲ್ಲಿನ ಸಂಪರ್ಕ ಸೇವೆಯಲ್ಲಿ ವ್ಯತ್ಯಯ ಉಂಟು ಮಾಡುವ ಜೊತೆಗೆ ವಾಣಿಜ್ಯ ವಹಿವಾಟುಗಳ ಭಾರಿ ನಷ್ಟಕ್ಕೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕೃಪೆ: ಟೆಕ್ ಕನ್ನಡ- https://www.techkannada.in/