ರಾಜ್ಯದ ಆಶಾ ಕಾರ್ಯಕರ್ತೆಯರು ತಮಗೆ ಸಿಗುತ್ತಿದ್ದ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಕಳೆದ ವಾರ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು. ಬಹಳ ವರ್ಷಗಳಿಂದ ಬಾಕಿ ಇರುವ ಹಲವು ಬೇಡಿಕೆಗಳ ಈಡೇರಿಸಲೇ ಬೇಕು ಎಂದು ಆಗ್ರಹಿಸಿದ್ದರು. ಜನವರಿ 3ರಂದು ಫ್ರೀಡಂ ಪಾರ್ಕ್‌ನಲ್ಲಿ 10 ಸಾವಿರಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಕೂಡಲೇ 15 ತಿಂಗಳಿನಿಂದ ಬರಬೇಕಿದ್ದ ಪ್ರೋತ್ಸಾಹಧನ ನೀಡಬೇಕೆಂದು ಆಗ್ರಹಿಸಿದ್ದರು. ಪ್ರತಿಭಟನೆ ಜೋರಾಗುತ್ತಿದ್ದಂತೆ ಆರೋಗ್ಯ ಸಚಿವ ಶ್ರೀರಾಮುಲು ಪ್ರತಿಭಟನೆಯನ್ನು ಉದ್ದೇಶಿಸಿ “ ಸರ್ಕಾರ, ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸಲು ಸಿದ್ಧ. ಈ ನಿಟ್ಟಿನಲ್ಲಿ ಸರಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತದೆ. ಸರ್ಕಾರ ನಿಮ್ಮೊಂದಿಗೆ ಯಾವಾಗಲೂ ಇರುತ್ತದೆ. ಆತಂಕಪಡಬೇಡಿ, ನಿಮ್ಮ ಬೇಡಿಕೆಯನ್ನು ಸರ್ಕಾರ ಈಡೇರಿಸುತ್ತದೆ. ನೀವೆಲ್ಲರೂ ನಮ್ಮ ಅಕ್ಕ, ತಂಗಿಯರಿದ್ದಂತೆ, ತುಂಬಾ ಕಷ್ಟಪಟ್ಟುಕೊಂಡು ಬಂದಿದ್ದೀರಿ. ನಿಮ್ಮ ಅಧ್ಯಕ್ಷರು ನನ್ನನ್ನು ಭೇಟಿ ಆಗಿದ್ದರು. ಈ ವಿಚಾರ ಕುರಿತು ಚರ್ಚೆಯಾಗಿದೆ. ಸರ್ಕಾರದ ಕಾರ್ಯದರ್ಶಿಗಳ ಜೊತೆಗೆ ಮಾತನಾಡಿದ್ದೇನೆ. ಆದಷ್ಟು ನಿಮ್ಮ ಬೇಡಿಕೆ ಈಡೇರಿಸುತ್ತೇವೆ. ಈ ಕಾರಣದಿಂದಾಗಿ ಪ್ರತಿಭಟನೆಯನ್ನು ವಾಪಸ್ ಪಡೆಯಬೇಕು” ಎಂದು ಭರವಸೆ ನೀಡಿದ್ದರು.
ಅಲ್ಲದೆ, ಸಚಿವರು ಮುಂದುವರಿದು ಮಾತನಾಡಿ “ಪ್ರತಿ ತಿಂಗಳ 15ನೇ ತಾರೀಖಿನೊಳಗೆ ಎರಡು ತಿಂಗಳ ಸಂಬಳ ಜೊತೆಗೆ ಹಾಕಲು ಅನುಮತಿ ಕೊಟ್ಟಿದ್ದೇನೆ. ನೆರೆಯ ಆಂಧ್ರ ಪ್ರದೇಶ ಸರ್ಕಾರ ಆಶಾ ಕಾರ್ಯಕರ್ತೆಯರಿಗೆ ತಿಂಗಳಿಗೆ 10 ಸಾವಿರ ರೂಪಾಯಿ ಪ್ರೋತ್ಸಾಹಧನ ನೀಡುತ್ತಿದೆ. ಇಲ್ಲಿ ಈ ಹಿಂದೆ 5,500 ರೂಪಾಯಿಗಳಿದ್ದು ಈಗ ನಮ್ಮ ಸರ್ಕಾರ ಬಂದ ಮೇಲೆ ಅದನ್ನು 6 ಸಾವಿರ ರೂಪಾಯಿಗೆ ಹೆಚ್ಚಿಸಲಾಗಿದೆ. ನನ್ನ ಅಧಿಕಾರದಲ್ಲಿ ಕಾರ್ಯಕರ್ತೆಯರ ವೇತನವನ್ನು 10 ಸಾವಿರಕ್ಕೆ ಹೆಚ್ಚಿಸುವ ಪ್ರಯತ್ನ ಮಾಡುತ್ತೇನೆ” ಎಂದು ಭರವಸೆ ಕೊಟ್ಟರು.
ಸುಮಾರು 15 ತಿಂಗಳಿನಿಂದ ಯಾವುದೇ ಪ್ರೋತ್ಸಾಹಧನ ಪಡೆಯದಿದ್ದರಿಂದ ಆಶಾ ಕಾರ್ಯಕರ್ತೆಯರು ಭಾರೀ ಸಂಖ್ಯೆಯಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಲೇಬೇಕಾಯಿತು. ಆದರೆ ಸಚಿವರ ವಿನಂತಿಗೆ ಸುಮ್ಮನಾಗುವುದು ಬೇಡವೆಂದು, ಸರ್ಕಾರ ಪ್ರೋತ್ಸಾಹಧನ ಬಿಡುಗಡೆ ಮಾಡುವವರೆಗೂ ಕೆಲಸಕ್ಕೆ ಹಾಜರಾಗದೇ, ಮನೆಯಲ್ಲೇ ಧರಣಿ ನಡೆಸಲು ಆಶಾ ಕಾರ್ಯಕರ್ತೆಯರು ತೀರ್ಮಾನಿಸಿದ್ದರು. ಆದರೆ ಧೀಡಿರ್ ಅಂತ ಆರೋಗ್ಯ ಇಲಾಖೆ ಆಶಾ ಕಾರ್ಯಕರ್ತೆಯರಿಗೆ ಬಿಗ್ ಶಾಕ್ ನೀಡಿತು. ಇವರ ತೀರ್ಮಾನದಿಂದಾಗಿ ಕೋಪಗೊಂಡ ಆರೋಗ್ಯ ಇಲಾಖೆಯ ಅಧಿಕಾರಿಗಳು, ಕೆಲಸಕ್ಕೆ ಹಾಜರಾಗದಿರುವವರ ಪ್ರೋತ್ಸಾಹಧನ ಬಿಡುಗಡೆ ಮಾಡುವುದಿಲ್ಲ ಎಂದು ಸೋಮವಾರ ಸುತ್ತೋಲೆ ಹೊರಡಿಸಿ, ಕೆಲಸಕ್ಕೆ ಹಾಜರಾಗದೇ ಮನೆಯಲ್ಲಿದ್ದರೆ ಪ್ರೋತ್ಸಾಹಧನ ಬಿಡುಗಡೆ ಮಾಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಪ್ರತಿಭಟನೆಯ ವೇಳೆ ಸಚಿವ ಶ್ರೀರಾಮುಲು ಆಶಾ ಕಾರ್ಯಕರ್ತರ ಬೇಡಿಕೆಗಳನ್ನು ಈಡೇರುಸುತ್ತೇವೆ ಎಂದು ಭರವಸೆ ನೀಡಿದ್ದರು. ಅಲ್ಲದೆ, ಇಲಾಖೆಯ ಅಧಿಕಾರಗಳಂತೆ, ಶ್ರೀರಾಮುಲು ಕೂಡ “ಕೆಲಸಕ್ಕೆ ಹಾಜರಾಗದೇ ಮನೆಯಲ್ಲೇ ಕುಳಿತು ಧರಣಿ ನಡೆಸುವುದು ಸರಿಯಲ್ಲ. ಕೆಲಸಕ್ಕೆ ಹಾಜರಾಗದ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಇಲ್ಲಿ ಆಶಾ ಕಾರ್ಯಕರ್ತೆಯರ ಮುಖ್ಯವಾದ ಬೇಡಿಕೆಗಳೇನೆಂದರೆ, ಕೇಂದ್ರ ಮತ್ತು ರಾಜ್ಯದಿಂದ ಮಾಸಿಕ 12,000/- ಪ್ರೋತ್ಸಾಹ ನೀಡಬೇಕು, 15 ತಿಂಗಳ ಬಾಕಿ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು, ಆಶಾ ಕ್ಷೇಮಾವೃದ್ಧಿ ನಿಧಿ ಸ್ಥಾಪಿಸಬೇಕು, ಮಾರಣಾಂತಿಕ ಕಾಯಿಲೆ ಹಾಗೂ ಮರಣ ಹೊಂದಿದರೆ ನೆರವು ನೀಡಬೇಕು, ವಿವಿಧ ಸರ್ವೆಗಳ ಬಾಕಿ ಪ್ರೋತ್ಸಾಹಧನ ಕೂಡಲೇ ಪಾವತಿಸಬೇಕು, ಜಿಲ್ಲಾ ಮತ್ತು ತಾಲೂಕು ಕೇಂದ್ರದ ಸಭೆಗಳಿಗೆ ದಿನಭತ್ಯೆ ಹೆಚ್ಚಿಸಬೇಕು, ದಿನಕ್ಕೆ 300 ರೂ. ನಿಗದಿಪಡಿಸಿ, ಅಂದೇ ಪಾವತಿಸಬೇಕು, ಆಶಾ ಸುಗಮಗಾರರನ್ನು ನೇಮಿಸಿ, ಮಾಸಿಕ 12,000 ರೂ. ಜೊತೆಗೆ ಟಿಎ ನೀಡಬೇಕು ಎಂದು ಬೇಡಿಕೆಗಳನ್ನು ಇಟ್ಟಿದ್ದಾರೆ.
ರಾಜ್ಯದಲ್ಲಿ ಸರಿ ಸುಮಾರು 40 ಸಾವಿರ ಆಶಾ ಕಾರ್ಯಕರ್ತೆಯರಿದ್ದು, ಸರ್ಕಾರದ ಹಲವಾರು ಯೋಜನೆಗಳನ್ನು ಜನರಿಗೆ ತಲುಪಿಸಲು ಆಶಾ ಕಾರ್ಯಕರ್ತೆಯರ ಸೇವೆ ಅತಿಮುಖ್ಯ. ಮಕ್ಕಳಿಗೆ ಪಲ್ಸ್
ಪೋಲಿಯೋ ಹಾಕುವುದರಿಂದ ಹಿಡಿದು, ಗರ್ಭಿಣಿ, ಬಾಣಂತಿಗೆ ಪೋಷಣೆ ಜೊತೆಗೆ ಸರ್ವೇ ಕೆಲಸಗಳನ್ನೂ ಸಹ ಮಾಡುತ್ತಾರೆ. ಅಲ್ಲದೆ, ಇದೇ ತಿಂಗಳು ಸರ್ಕಾರ ರಾಜ್ಯಾದ್ಯಂತ ಪಲ್ಸ್ ಪೋಲಿಯೋ ಕಾರ್ಯಕ್ರಮ ನಡೆಸಲಿದೆ. ಇದಕ್ಕೆ ಆಶಾ ಕಾರ್ಯಕರ್ತೆಯರ ಸೇವೆ ಬೇಕೆ ಬೇಕು.
ಇಲ್ಲಿ ಆಶಾ ಕಾರ್ಯಕರ್ತೆಯರು ಬಹಳ ವರ್ಷಗಳಿಂದ ಇಂತಹ ಬೇಡಿಕೆ ಈಡೇರಿಕೆಗೆ ಪ್ರತಿಭಟನೆ ನಡೆಸುತ್ತಿದ್ದರೂ, ಸರ್ಕಾರ ಯಾವುದೇ ರೀತಿಯ ಕ್ರಮಗಳನ್ನು ಕೈಗೊಳ್ಳದೆ ಇರುವುದು ವಿಷಾದನೀಯ. ಸಚಿವ ಶ್ರೀರಾಮುಲು ಕೂಡ ಒಮ್ಮೆ ಭರವಸೆ ನೀಡಿ, ಎಚ್ಚರಿಕೆಯನ್ನೂ ಸಹ ಕೊಟ್ಟಿದ್ದಾರೆ. ರಾಜ್ಯದ 40 ಸಾವಿರ ಆಶಾ ಕಾರ್ಯಕರ್ತೆಯರು ಪ್ರೋತ್ಸಾಹಧನವನ್ನು ನಂಬಿಕೊಂಡು ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಆದರೆ 15 ತಿಂಗಳಿನಿಂದ ಪ್ರೋತ್ಸಾಹಧನ ನೀಡದೆ ಇರುವುದು ವಿಪರ್ಯಾಸ. ದೇಶದ ಆರೋಗ್ಯ ಕ್ಷೇತ್ರ ಉನ್ನತಿ ಕಾಣಬೇಕೆಂದರೆ ಹಾಗೂ ಆರೋಗ್ಯ ಪೂರ್ಣ ಸಮಾಜ ರೂಪಿಸುವುದಕ್ಕೆ ಆಶಾ ಕಾರ್ಯಕರ್ತೆಯ ಸೇವೆ ಅತ್ಯಗತ್ಯ.