ಒಂದು ಶಾಲೆ ಇಂದಿನ ಮಕ್ಕಳನ್ನು ಮುಂದಿನ ಭವಿಷ್ಯದ ರೂವಾರಿಗಳನ್ನಾಗಿ ಮಾಡಬೇಕು. ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ಅವರ ಜೀವನೋಪಾಯ ಮತ್ತು ದೇಶಕ್ಕೆ ಅವರು ಕೊಡುಗೆ ನೀಡುವಂತಹ ಮಹತ್ಕಾರ್ಯ ಮಾಡುವ ರೀತಿಯಲ್ಲಿ ಪಾಠ ಪ್ರವಚನಗಳನ್ನು ಹೇಳಿಕೊಡಬೇಕು. ಮಕ್ಕಳಿರುವಾಗಲೇ ಸುಸಂಸ್ಕೃತಿಯನ್ನು ಹೇಳಿಕೊಟ್ಟರೆ ಅವರು ದೊಡ್ಡವರಾಗಿ ಬೆಳೆದ ಮೇಲೆ ದೇಶದ ಆಸ್ತಿಯಾಗುತ್ತಾರೆ.
ಆದರೆ, ದಕ್ಷಿಣ ಜಿಲ್ಲೆಯ ಕಲ್ಲಡ್ಕದಲ್ಲೊಂದು ಶಾಲೆ ಮಾತ್ರ ಮಕ್ಕಳಲ್ಲಿ ಕೋಮು ದ್ವೇಷವನ್ನು ಬಿತ್ತುವ ಕೆಲಸವನ್ನು ಮಾಡಿದೆ. ಕಲ್ಲಡ್ಕದಲ್ಲಿರುವ ಶ್ರೀರಾಮ ವಿದ್ಯಾಕೇಂದ್ರ ಈಗ ವಿವಾದದ ಕೇಂದ್ರವಾಗಿದೆ. ಆರ್ ಎಸ್ ಎಸ್ ನ ಪ್ರಮುಖರಲ್ಲಿ ಒಬ್ಬರಾಗಿರುವ ಕಲ್ಲಡ್ಕ ಪ್ರಭಾಕರ ಭಟ್ ಅವರು ಈ ಶಾಲೆಯನ್ನು ಮುನ್ನಡೆಸುತ್ತಿದ್ದಾರೆ. ಇವರು ಸದಾ ಒಂದಿಲ್ಲೊಂದು ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಲೇ ಇರುತ್ತಾರೆ. ಕೋಮು ವಿಚಾರಕ್ಕೆ ಬಂದರಂತೂ ಪ್ರಭಾಕರ ಭಟ್ ಒಂದು ಹೆಜ್ಜೆ ಮುಂದಿರುತ್ತಾರೆ. ಈ ಕಾರಣದಿಂದಲೇ ಅವರು ಹಾರ್ಡ್ ಕೋರ್ ಹಿಂದೂವಾದಿ ಮತ್ತು ಅಲ್ಪಸಂಖ್ಯಾತರ ವಿರೋಧಿ ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದಾರೆ.
ಈ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಕಳೆದ ಭಾನುವಾರ ಶಾಲಾ ಕ್ರೀಡೋತ್ಸವವನ್ನು ಏರ್ಪಡಿಸಲಾಗಿತ್ತು. ಈ ಸಮಾರಂಭಕ್ಕೆ ಕಿರಣ್ ಬೇಡಿ ಮೊದಲಾದವರು ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ಕೇವಲ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಿದ್ದಿದ್ದರೆ ಯಾವುದೇ ವಿವಾದಗಳು ಎದುರಾಗುತ್ತಿರಲಿಲ್ಲ. ಆದರೆ, ಇಲ್ಲಿ ಕೋಮು ಭಾವನೆಯನ್ನು ಕೆರಳಿಸುವಂತಹ ಚಟುವಟಿಕೆಯನ್ನು ಮಕ್ಕಳಿಂದ ಮಾಡಿಸಲಾಯಿತು.
ಅಂದರೆ, 1992 ರ ಡಿಸೆಂಬರ್ 6 ರಂದು ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿದ ಪ್ರಸಂಗವನ್ನು ಒಂದು ರೀತಿಯಲ್ಲಿ ವಿಜಯೋತ್ಸವ ಎಂಬಂತೆ ಬಿಂಬಿಸಿ ಅದರ ಅಣಕು ಪ್ರದರ್ಶನವನ್ನು ಏನೂ ಅರಿಯದ ಮಕ್ಕಳಿಂದ ನೀಡಲಾಯಿತು. ಹಿನ್ನೆಲೆಯಲ್ಲಿದ್ದ ದೊಡ್ಡ ಪರದೆಯಲ್ಲಿ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ದೃಶ್ಯಗಳು ಮೂಡಿ ಬರುತ್ತಿದ್ದರೆ, ಅದರ ಕೆಳಗಿನ ಸ್ಟೇಜ್ ನಲ್ಲಿ ನೂರಾರು ವಿದ್ಯಾರ್ಥಿಗಳು ಜೈಶ್ರೀರಾಂ ಎಂದು ಕೂಗುತ್ತಾ ಕೃತಕವಾಗಿ ನಿರ್ಮಿಸಲಾಗಿದ್ದ ಮಸೀದಿ ರೂಪದ ಮೇಲೆ ದಾಳಿ ನಡೆಸುತ್ತಾರೆ.
ಈ ಮಕ್ಕಳಿಗೆ ರಾಮನಾದರೇನು? ರಹೀಮನಾದರೇನು? ಎಲ್ಲರೂ ಒಂದೇ. ಆದರೆ, ಶಾಲಾ ಆಡಳಿತ ಮಂಡಳಿ ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿದ ಪ್ರಕರಣವನ್ನು ಮತ್ತೆ ಮತ್ತೆ ಕೆದಕಿರುವ ಮೂಲಕ ಮಕ್ಕಳಲ್ಲಿ ಕೋಮುಭಾವನೆ ಬರುವಂತೆ ಮಾಡಿದೆ. ಮಕ್ಕಳು ಓಡುತ್ತಾ ‘ರಾಮ ಮಂದಿರ್ ವಹೀ ಬನೇಂಗಿ’, ‘ಜೈ ಶ್ರೀರಾಂ’ ಎನ್ನುತ್ತಾ ಕೂಗಿದರೆ ನೆರೆದಿದ್ದ ಸಭಿಕರು ಅದಕ್ಕೆ ಗೋಣು ಹಾಕಿದ್ದು ವಿಪರ್ಯಾಸವೇ ಸರಿ.
ಕ್ರೀಡೋತ್ಸವದ ನೆಪದಲ್ಲಿ ಬಾಬ್ರಿ ಮಸೀದಿ ಧ್ವಂಸದ ಅಣಕು ಪ್ರದರ್ಶನ ನೀಡಿದ ಮಕ್ಕಳ ವಿಡೀಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಸಂಖ್ಯೆಯ ಜನರು ಇದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಶಾಲೆಯ ಆಡಳಿತ ಮಂಡಳಿ ಹಿಂದುತ್ವದ ಹೆಸರಿನಲ್ಲಿ ಮುಗ್ಧ ಮಕ್ಕಳ ತಲೆಯಲ್ಲಿ ಕೋಮುದ್ವೇಷವನ್ನು ಮೂಡಿಸುವ ಕೆಲಸ ಮಾಡುತ್ತಿದೆ ಎಂದು ನಾಗರಿಕರು ವಾಗ್ದಾಳಿ ನಡೆಸುತ್ತಿದ್ದಾರೆ.
ಬಾಬ್ರಿ ಮಸೀದಿ ಧ್ವಂಸದ ಅಣಕು ಪ್ರದರ್ಶನದಲ್ಲಿ ಮಕ್ಕಳು ಬೃಹತ್ ಗಾತ್ರದ ಕಮಲ, ನಕ್ಷತ್ರ ಮತ್ತು ಓಂ ಮತ್ತು ರಾಮ ಮಂದಿರದ ಆಕಾರವನ್ನು ರಚಿಸುವ ಮೂಲಕ ಮಸೀದಿ ಧ್ವಂಸ ಪ್ರಕರಣವನ್ನು ಸಮರ್ಥಿಸಿಕೊಳ್ಳುವ ಪ್ರಯತ್ನವನ್ನು ಮಕ್ಕಳಿಂದ ಮಾಡಿಸಲಾಯಿತು.
ಪ್ರಭಾಕರ ಭಟ್ಟರ ಸಮರ್ಥನೆ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಭಾಕರ ಭಟ್ ನಾವು ಯಾವುದೇ ರೀತಿಯ ಕೋಮುಭಾವನೆ ಕೆರಳಿಸುವ ಕೆಲಸವನ್ನು ಮಾಡಿಲ್ಲ. ಪ್ರತಿ ವರ್ಷ ನಡೆಯುವ ಕಾರ್ಯಕ್ರಮದಲ್ಲಿ ಆಯಾಯ ವರ್ಷ ಯಾವುದು ಪ್ರಮುಖ ಘಟನಾವಳಿಯಾಗಿರುತ್ತದೋ ಅದನ್ನು ಪ್ರಮುಖವಾಗಿಟ್ಟುಕೊಂಡು ಹೇಳುವ ಪ್ರಯತ್ನ ಮಾಡುತ್ತಿದ್ದೇವೆ. ಈ ಹಿಂದಿನ ವರ್ಷಗಳಲ್ಲಿ ಸರ್ಜಿಕಲ್ ಸ್ಟ್ರೈಕ್, ಮಂಗಳಯಾನ, ಉಗ್ರ ಅಫ್ಜಲ್ ಗುರು ನೇಣಿಗೆ ಹಾಕಿದ್ದು ಹೀಗೆ ಆಯಾ ವರ್ಷದ ಪ್ರಮುಖ ಘಟನೆಯನ್ನು ತೋರಿಸಿದ್ದೇವೆ.
ಈ ಬಾರಿ ರಾಮಜನ್ಮಭೂಮಿ ವಿಷಯ ಪ್ರಮುಖವಾಗಿರುವುದರಿಂದ ಮಕ್ಕಳು ಅದನ್ನು ತೋರಿಸುವ ಪ್ರಯತ್ನ ಮಾಡಿದ್ದಾರೆ. ಇಲ್ಲಿ ಕೇವಲ ಬಾಬ್ರಿ ಮಸೀದಿ ಧ್ವಂಸ ಮಾಡಿದ್ದಷ್ಟೇ ಅಲ್ಲ, ಧ್ವಂಸಕ್ಕೂ ಮುನ್ನ ಹಿರಿಯ ಮುಖಂಡರು ಧ್ವಂಸ ಮಾಡುವುದು ಬೇಡ ಎಂದು ಹೇಳುವ ದೃಶ್ಯವೂ ಇದೆ. ಆದರೆ, ಧ್ವಂಸ ಮಾಡುವ ದೃಶ್ಯವನ್ನು ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಬಿತ್ತರಿಸಲಾಗುತ್ತಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಶಾಲೆ ವಿರುದ್ಧ ದೂರು ದಾಖಲು
ಈ ಮಧ್ಯೆ, ಕೋಮುಭಾವನೆ ಕೆರಳಿಸುವ ರೀತಿಯಲ್ಲಿ ಮಕ್ಕಳಿಂದ ಕಾರ್ಯಕ್ರಮ ಆಯೋಜಿಸಿರುವ ಆರೋಪದಲ್ಲಿ ಶ್ರೀರಾಮ ವಿದ್ಯಾಕೇಂದ್ರದ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.