ಹಣಕಾಸು ಮತ್ತು ಷೇರುಪೇಟೆಯ ನಿರೀಕ್ಷೆಗೆ ವ್ಯತಿರಿಕ್ತವಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಬಡ್ಡಿದರವನ್ನು ಯಥಾಸ್ಥಿತಿ ಕಾಯ್ದುಕೊಂಡಿದ್ದು, ಪ್ರಸಕ್ತ ವಿತ್ತೀಯ ವರ್ಷದ ಒಟ್ಟಾರೆ ಜಿಡಿಪಿ ಮುನ್ನಂದಾಜನ್ನು ಶೇ.5ಕ್ಕೆ ತಗ್ಗಿಸಿದೆ. ಪ್ರಸಕ್ತ ಬಡ್ಡಿದರ (ರೆಪೊದರ- ಆರ್ಬಿಐ ಬ್ಯಾಂಕುಗಳಿಗೆ ನೀಡುವ ಸಾಲದಮೇಲಿನ ಬಡ್ಡಿ) ಶೇ.5.15ರಷ್ಟು ಮತ್ತು ರಿವರ್ಸ್ ರೆಪೊದರ (ಬ್ಯಾಂಕುಗಳು ಆರ್ಬಿಐನಲ್ಲಿ ಇಟ್ಟಿರುವ ಹಣಕ್ಕೆ ನೀಡುವ ಬಡ್ಡಿ)4.9ರಷ್ಟು ಕಾಯ್ದುಕೊಂಡು ಅಚ್ಚರಿ ಮೂಡಿಸಿದೆ.
ಪ್ರಸಕ್ತ ವಿತ್ತೀಯ ವರ್ಷದ ಉತ್ತರಾರ್ಧದ ಆರ್ಥಿಕ ಬೆಳವಣಿಗೆ ಈ ಹಿಂದಿನ ಮುನ್ನಂದಾಜು ಶೇ.6.6- 7.2ರಷ್ಟನ್ನು ಪರಿಷ್ಕರಿಸಿ ಶೇ.4.9- 5.5ಕ್ಕೆ ತಗ್ಗಿಸಿದೆ. 2020-21ರ ವಿತ್ತೀಯ ವರ್ಷದ ಪೂರ್ವಾರ್ಧದ ಆರ್ಥಿಕ ಬೆಳವಣಿಗೆ ಶೇ.5.9-6.3ರಷ್ಟಾಗಬಹುದು ಎಂದು ಮುನ್ನಂದಾಜು ಮಾಡಿದೆ.
ಮೂರು ದಿನಗಳ ಕಾಲ ನಡೆದ ಡಿಸೆಂಬರ್ ತಿಂಗಳ ದ್ವೈಮಾಸಿಕ ಹಣಕಾಸು ನೀತಿ ಸಭೆಯಲ್ಲಿ ಪಾಲ್ಗೊಂಡಿದ್ದ ಆರೂ ಸದಸ್ಯರೂ ಸರ್ವಾನುಮತದಿಂದ ಆರ್ಥಿಕ ಬೆಳವಣಿಗೆ ಮುನ್ನಂದಾಜು ತಗ್ಗಿಸುವ ಮತ್ತು ಬಡ್ಡಿದರ ಯಥಾಸ್ಥಿತಿ ಕಾಯ್ದುಕೊಳ್ಳುವ ನಿರ್ಧಾರ ಕೈಗೊಂಡಿದ್ದಾರೆ. ಸಭೆಯ ನಂತರ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಹಣಕಾಸು ನೀತಿ ಸಮಿತಿ ನಿರ್ಧಾರಗಳನ್ನು ಪ್ರಕಟಿಸಿದರು.
ಆದರೆ, ಒಟ್ಟಾರೆ ಪ್ರಸಕ್ತ ವಿತ್ತೀಯ ವರ್ಷದ ಆರ್ಥಿಕ ಅಭಿವೃದ್ಧಿ ದರವನ್ನು ಶೇ.5ಕ್ಕೆ ತಗ್ಗಿಸಿರುವುದು ನರೇಂದ್ರ ಮೋದಿ ಸರ್ಕಾರದ ಪಾಲಿಗೆ ನುಂಗಲಾರದ ತುತ್ತಾಗಿದೆ. ವಿತ್ತ ಸಚಿವರೂ ಸೇರಿದಂತೆ ಮೋದಿ ಸಂಪುಟದ ಸದಸ್ಯರು ಆಗಿಂದಾಗ್ಗೆ ದೇಶ ಆರ್ಥಿಕ ಪರಿಸ್ಥಿತಿ ಚನ್ನಾಗಿಯೇ ಇದೆ ಎಂದು ಬಿಂಬಿಸುವ ಹತಾಶಯತ್ನದಲ್ಲಿದ್ದರು. ಆದರೆ, ಪ್ರಸಕ್ತ ಸಂಸತ್ ಅಧಿವೇಶನದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆರ್ಥಿಕತೆ ನಿಧಾನಗತಿಗೆ ಸಾಗಿರುವುದನ್ನು ಒಪ್ಪಿಕೊಂಡಿದ್ದರು.
ಶೇ.5ಕ್ಕೆ ತಗ್ಗಿದ ಆರ್ಥಿಕ ಬೆಳವಣಿಗೆ ಮುನ್ನಂದಾಜು
ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದಲ್ಲಿ ಮೂರು ದಿನಗಳ ಕಾಲ ಆರ್ಥಿಕಪರಿಸ್ಥಿತಿಯನ್ನು ಪರಾಮರ್ಶಿಸಿದ ಹಣಕಾಸು ನೀತಿ ಸಮಿತಿಯು ಪ್ರಸಕ್ತ ವಿತ್ತೀಯ ವರ್ಷದ ಒಟ್ಟು ಆರ್ಥಿಕ ಬೆಳವಣಿಗೆಯ ಮುನ್ನಂದಾಜನ್ನು ಶೇ.5ಕ್ಕೆ ತಗ್ಗಿಸಿತು. ಈ ಹಿಂದಿನ ಹಣಕಾಸು ನೀತಿ ಪರಾಮರ್ಶೆ ವೇಳೆ ಶೇ.6.1ಷ್ಟು ಎಂದು ಅಂದಾಜಿಸಿತ್ತು. ಶೇ.6.1ರಿಂದ ಶೇ.5ಕ್ಕೆ ತಗ್ಗಿಸಿರುವುದು ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವುದರ ಪ್ರತಿಬಿಂಬವಾಗಿದೆ. ಸಾಮಾನ್ಯವಾಗಿ 110 ಅಂಶಗಳಷ್ಟು (ಅಂದರೆ ಶೇ.1.1) ಆರ್ಥಿಕ ಬೆಳವಣಿಗೆ ದರ ತಗ್ಗಿಸುವುದು ತೀರಾ ಅಪರೂಪ. ತೀವ್ರ ಬಿಕ್ಕಟ್ಟಿನ ಸಂದರ್ಭದಲ್ಲಿ ಮಾತ್ರ ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಳವಣಿಗೆ ದರ ತಗ್ಗಿಸಲಾಗುತ್ತದೆ. ಪರೋಕ್ಷವಾಗಿ ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ತಲೆದೋರಿರುವುದನ್ನು ಆರ್ಬಿಐ ಒಪ್ಪಿಕೊಂಡಂತಾಗಿದೆ.
ಫೆಬ್ರವರಿಯಿಂದ ಆರ್‌ಬಿಐ ಆರ್ಥಿಕ ಬೆಳವಣಿಗೆ ದರಗಳನ್ನು ಒಟ್ಟು 160 ಅಂಶಗಳಷ್ಟು (ಶೇ.1.6) ತಗ್ಗಿಸಿದೆ. ಇದೇ ವೇಳೆ, ಫೆಬ್ರವರಿಯಲ್ಲಿ ವಿತ್ತೀಯ ನೀತಿ ಪರಾಮರ್ಶೆ ಮಾಡಿದಾಗ ಆರ್ಥಿಕ ಬೆಳವಣಿಗೆ ಕುರಿತಂತೆ ಮಾಡಿದ್ದ ಮುನ್ನಂದಾಜು ಶೇ.7.4ಕ್ಕೆ ಹೋಲಿಸಿದರೆ ಈ ಹತ್ತು ತಿಂಗಳಲ್ಲಿ 240 ಅಂಶಗಳಷ್ಟು (ಶೇ.2.4) ಬೆಳವಣಿಗೆ ದರ ಋಣಾತ್ಮಕವಾಗಿ ಪರಿಷ್ಕರಿಸಿದೆ.
ದೇಶದಲ್ಲಿನ ಪ್ರಸಕ್ತ ಆರ್ಥಿಕ ಪರಿಸ್ಥಿತಿ ಉತ್ತೇಜನಕಾರಿಯಾಗಿ ಇಲ್ಲದಿರುವ ಕಾರಣ ಫೆಬ್ರವರಿ ತಿಂಗಳಲ್ಲಿ ಪ್ರಸಕ್ತ ವಿತ್ತೀಯ ವರ್ಷದ ಮುನ್ನಂದಾಜನ್ನು ಮತ್ತಷ್ಟು ತಗ್ಗಿಸುವ ಸಾಧ್ಯತೆ ಇದೆ. ಇದುವರೆಗೆ ಎರಡು ತ್ರೈಮಾಸಿಕಗಳನ್ನು ಒಳಗೊಂಡ ವರ್ಷದ ಪೂರ್ವಾರ್ಧದ ಪ್ರಕಟಿತ ಜಿಡಿಪಿ ದರವು ಶೇ.4.75ರಷ್ಟಿದೆ. ಈಗಿನ ಮುನ್ನಂದಾಜು ಮಟ್ಟ ಹಾಗೂ ತೃತೀಯ ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ ಶೇ.5 – ಶೇ.5.5ರಷ್ಟಾದರೂ ಅಭಿವೃದ್ಧಿ ದಾಖಲಿಸಬೇಕಿದೆ. ಮೇಲ್ನೋಟಕ್ಕೆ ಅದು ಕಾರ್ಯಸಾಧ್ಯವಲ್ಲದ ಗುರಿ ಆಗಿದೆ. ಹೀಗಾಗಿ ಪ್ರಸಕ್ತ ವಿತ್ತೀಯ ವರ್ಷದ ಕೊನೆ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ಫೆಬ್ರವರಿ ತಿಂಗಳಲ್ಲಿ ನಡೆಯಲಿದ್ದು ಆಗ ಆರ್ಥಿಕ ಬೆಳವಣಿಗೆ ದರವನ್ನು ಋಣಾತ್ಮಕ ಪರಿಷ್ಕರಣೆ ಮಾಡುವುದು ಅನಿವಾರ್ಯವಾಗಲಿದೆ.
ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಸತತ ಆರನೇ ತ್ರೈಮಾಸಿಕದಲ್ಲಿ ಬೆಳವಣಿಗೆ ಕುಂಠಿತಗೊಳ್ಳುವುದರೊಂದಿಗೆ ಬಳಕೆ ಮತ್ತು ಹೂಡಿಕೆಯ ಕುಸಿತವು ಆರ್ಥಿಕತೆಯ ಬೆಳವಣಿಗೆಯ ಕುಸಿತಕ್ಕೆ ಕಾರಣವಾಗಿದೆ. ಕೇಂದ್ರ ಸಾಂಖಿಕ ಕಚೇರಿ ಬಿಡುಗಡೆ ಮಾಡಿದ ಅಂಕಿಅಂಶಗಳು ಉತ್ಪಾದನಾ ವಲಯದ ಬೆಳವಣಿಗೆಯು ತ್ರೈಮಾಸಿಕದಲ್ಲಿ ಶೇಕಡಾ 1 ರಷ್ಟು ಕುಗ್ಗಿದೆ ಎಂದು ತೋರಿಸಿವೆ. ಆರ್ಥಿಕತೆಯಲ್ಲಿ ಹೂಡಿಕೆಯ ಬೇಡಿಕೆಯ ಸೂಚಕವಾದ ಒಟ್ಟು ಸ್ಥಿರ ಬಂಡವಾಳ ರಚನೆಯು ತ್ರೈಮಾಸಿಕದಲ್ಲಿ ಕೇವಲ ಶೇ.1ರಷ್ಟು ಹೆಚ್ಚಾಗಿದೆ.
ಬಡ್ಡಿದರ ಇಳಿಕೆಗೆ ಮುಕ್ತ ಅವಕಾಶ
ನಿಯಂತ್ರಣದಲ್ಲಿರುವ ಹಣದುಬ್ಬರ ಮತ್ತು ಸತತ ಕುಸಿಯುತ್ತಿರುವ ಆರ್ಥಿಕ ಚಟುವಟಿಕೆಗಳ ಹಿನ್ನೆಲೆಯಲ್ಲಿ ಬಡ್ಡಿದರ ಕಡಿತ ಮಾಡಬಹುದೆಂದು ವ್ಯಾಪಕವಾಗಿ ನಿರೀಕ್ಷಿಸಲಾಗಿತ್ತು. ಕೆಲವರು ಶೇ.0.15ರಷ್ಟು ಬಡ್ಡಿದರ ಕಡಿತ ನಿರೀಕ್ಷಿಸಿದ್ದರೆ, ಕೆಲವು ಆರ್ಥಿಕ ವಿಶ್ಲೇಷಕರು ಶೇ.0.50ರಷ್ಟು ಬಡ್ಡಿದರ ಕಡಿತ ನಿರೀಕ್ಷಿಸಿದ್ದರು.
“ಭವಿಷ್ಯದಲ್ಲಿ ಬಡ್ಡಿದರ ಏರಿಸುವ ಅಥವಾ ಇಳಿಸುವ ಮುಕ್ತ ಅವಕಾಶವನ್ನು ಆರ್ಬಿಐನ ವಿತ್ತೀಯ ನೀತಿ ಹೊಂದಿದೆ. ಆದರೂ ವಿಕಾಸಗೊಳ್ಳುತ್ತಿರುವ ಬೆಳವಣಿಗೆ, ಹಣದುಬ್ಬರದ ಚಲನಶೀಲತೆ ಗಮನಿಸಿದರೆ, ಈ ಹಂತದಲ್ಲಿ ಬಡ್ಡಿದರ ಏರಿಕೆಯಿಂದ ವಿರಾಮ ತೆಗೆದುಕೊಳ್ಳುವುದು ಸೂಕ್ತವೆಂದು ಹಣಕಾಸು ನೀತಿ ಸಮಿತಿಯು ಭಾವಿಸಿದೆ, ಆರ್ಥಿಕ ಬೆಳವಣಿಗೆಯನ್ನು ಪುನರುಜ್ಜೀವನಗೊಳಿಸುವ ಅಗತ್ಯವಿರುವವರೆಗೂ ಅವಶ್ಯಕತೆ ಬಿದ್ದಾಗಲೆಲ್ಲ, ಹಣದುಬ್ಬರ ಮಿತಿ ಕಾಯ್ದುಕೊಳ್ಳುವ ಖಾತರಿಯೊಂದಿಗೆ ಬಡ್ಡಿದರ ಇಳಿಸುವ ಮುಕ್ತ ಅವಕಾಶ ಇರುವ ನಿಲುವು ಮುಂದುವರಿಯುತ್ತದೆ ”ಎಂದು ಆರ್ಬಿಐ ತಿಳಿಸಿದೆ.
ಆರ್ಥಿಕ ಬೆಳವಣಿಗೆಯು ಆರೂವರೆ ವರ್ಷಗಳ ಕನಿಷ್ಠ ಮಟ್ಟವಾದ ಶೇ.4.5ಕ್ಕೆ ಇಳಿದಿದೆ. ಆದರೆ, ಹಣದುಬ್ಬರವು ಶೇ.4 ರ ಗುರಿಗಿಂತ ಹೆಚ್ಚಾಗಿದೆ. ಅಕ್ಟೋಬರ್‌ನಲ್ಲಿ, ಚಿಲ್ಲರೆ ಹಣದುಬ್ಬರವು ಶೇಕಡಾ 4.62 ಕ್ಕೆ ಬಂದಿದ್ದು, ಮುಖ್ಯವಾಗಿ ಆಹಾರ ಹಣದುಬ್ಬರದಿಂದ ಇದು ಹಿಗ್ಗಿದೆ ಮತ್ತು ನವೆಂಬರ್‌ನಲ್ಲಿ ಇದು ಶೇಕಡಾ 5 ರಷ್ಟಾಗುತ್ತದೆ ಎಂದು ಅಂದಾಜಿಸಿದೆ.
‘ದೇಶದಲ್ಲಿನ ಆರ್ಥಿಕ ಚಟುವಟಿಕೆಗಳು ಮತ್ತಷ್ಟು ದುರ್ಬಲಗೊಂಡಿರುವುದನ್ನು ಹಾಗೂ ಉತ್ಪಾದನೆ ಮತ್ತು ಉತ್ಪಾದಕತೆಯು ಋಣಾತ್ಮಕ ಬೆಳವಣಿಗೆ ಕಂಡಿರುವುದನ್ನು ಹಣಕಾಸು ಸಮಿತಿಯು ಗಮನಿಸಿದೆ. ಕೇಂದ್ರ ಸರ್ಕಾರವು ಈಗಾಗಲೇ ಪ್ರಾರಂಭಿಸಿರುವ ಹಲವಾರು ಉತ್ತೇಜನ ಕ್ರಮಗಳು ಮತ್ತು 2019 ರ ಫೆಬ್ರವರಿಯಿಂದ ಭಾರತೀಯ ರಿಸರ್ವ್ ಬ್ಯಾಂಕ್ ಕೈಗೊಂಡಿರುವ ಬಡ್ಡಿದರ ಕಡಿತದಿಂದಾಗಿ ಮತ್ತು ಹೂಡಿಕೆ ಚಟುವಟಿಕೆಯಲ್ಲಿ ಚೇತರಿಕೆಯ ಲಕ್ಷಣಗಳಿವೆ. ಕ್ರಮೇಣವಾಗಿ ನೈಜ ಆರ್ಥಿಕತೆಗೆ ಮರಳಲು ಮತ್ತಷ್ಟು ಪೂರಕವಾಗಲಿದೆ ಎಂದು ನಿರೀಕ್ಷಿಸಲಾಗಿದೆ’ ಎಂದು ಆರ್ಬಿಐ ತಿಳಿಸಿದೆ.
‘ಹೂಡಿಕೆಗಳನ್ನು ತಡೆಹಿಡಿಯುವ ಅಡೆತಡೆಗಳನ್ನು ನಿವಾರಿಸುವುದು ಈ ಹೊತ್ತಿನ ಅಗತ್ಯವಾಗಿದೆ. ಬಾಹ್ಯ ಮಾನದಂಡಗಳ ಪರಿಚಯವು ನಗದು ಹರಿವಿನ ಪ್ರಮಾಣವನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಈ ಸನ್ನಿವೇಶದಲ್ಲಿ, ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳ ಹೊಂದಾಣಿಕೆಯಲ್ಲಿ ಹೆಚ್ಚಿನ ಸಮನ್ವಯತೆಯ ಅವಶ್ಯಕತೆಯಿದೆ’ ಎಂದು ಅದು ಹೇಳಿದೆ.
ಈ ಹಿಂದೆ ಪ್ರಸ್ತಾಪಿಸಿದಂತೆ, ಬಡ್ಡಿದರವನ್ನು ಮತ್ತಷ್ಟು ಇಳಿಸಿದರೆ, ಉಳಿತಾಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿತ್ತು. ಜತೆಗೆ ಠೇವಣಿಯಿಂದ ಬರುವ ಬಡ್ಡಿಯಿಂದಲೇ ಜೀವನ ಸಾಗಿಸುವ ಹಿರಿಯ ನಾಗರಿಕರ ಸಂಖ್ಯೆ ಬಹುದೊಡ್ಡದಿದೆ. ಅವರಿಗೆ ತೊಂದರೆಯಾಗುತ್ತಿತ್ತು. ಈಗಾಗಲೇ ಠೇವಣಿಗಳ ಮೇಲಿನ ಬಡ್ಡಿದರವನ್ನು ಗಣನೀಯವಾಗಿ ಕಡಿತ ಮಾಡಲಾಗಿದೆ. ಜತೆಗೆ ಬಡ್ಡಿದರ ಕಡಿತವಾದಂತೆ ಜನರ ಉಳಿತಾಯ ಪ್ರಮಾಣವೂ ತಗ್ಗುತ್ತಾ ಬಂದಿದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಬಡ್ಡಿದರ ಯಥಾಸ್ಥಿತಿ ಕಾಯ್ದುಕೊಳ್ಳುವ ನಿರ್ಧಾರ ಕೈಗೊಳ್ಳಲಾಗಿದೆ.