ಪ್ರಧಾನಿ ನರೇಂದ್ರ ಮೋದಿ ಚೀನಾ ಅಧ್ಯಕ್ಷ ಜಿನ್ ಪಿಂಗ್ ಜತೆ ತಮಿಳುನಾಡಿನಲ್ಲಿ ದೇಸಿ ಸ್ಟೈಲಿನಲ್ಲಿ ಪಂಚೆ ತೊಟ್ಟು ಹೆಗಲಿನ ಮೇಲೆ ಟವಲ್ ಹಾಕಿಕೊಂಡು ಮಿಂಚುತ್ತಿರುವಂತೆಯೇ, ಇತ್ತ ಭಾರತ ಆರ್ಥಿಕತೆಯು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿರುವ ಅಂಕಿ ಅಂಶಗಳು ಹೊರಬಿದ್ದಿದ್ದವು. ಈಗಾಗಲೇ ಮೋದಿ ಅಧಿಕಾರಕ್ಕೆ ಬಂದ ನಂತರ ಅತಿ ಕನಿಷ್ಠ ಮಟ್ಟದ ಜಿಡಿಪಿ ಅಭಿವೃದ್ಧಿ ದಾಖಲಾಗಿದ್ದು, ಅದು ಮತ್ತಷ್ಟು ಕುಸಿಯುವ ಮುನ್ಸೂಚನೆಯನ್ನು ಪ್ರಕಟಿತ ಅಂಕಿ ಅಂಶಗಳು ನೀಡಿವೆ.
ಮೊದಲನೆಯದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ) ಮತ್ತು ಸಿಎಂಐಇ ಪ್ರಕಟಿಸಿರುವ ಬ್ಯಾಂಕ್ ಸಾಲದ ಬೆಳವಣಿಗೆ ದರ. ಪ್ರಸಕ್ತ ವಿತ್ತೀಯ ವರ್ಷದಲ್ಲಿ ಮೊದಲ ಬಾರಿಗೆ ಅದು ಒಂದಂಕಿಗೆ ಇಳಿದಿದೆ. ಬ್ಯಾಂಕ್ ಸಾಲದ ಅಭಿವೃದ್ಧಿ ದರವು ದೇಶದಲ್ಲಿನ ಆರ್ಥಿಕ ಚಟುವಟಿಕೆಗಳನ್ನು ಅಳೆಯುವ ಪರೋಕ್ಷ ಮಾನದಂಡ ಮತ್ತು ಇದು ಪ್ರತ್ಯಕ್ಷವಾಗಿ ಜಿಡಿಪಿ ಏರಿಳಿತದ ಮುನ್ಸೂಚನೆ ನೀಡುವ ಸಾಧನವೂ ಹೌದು. ಬ್ಯಾಂಕ್ ಸಾಲದ ಅಭಿವೃದ್ಧಿ ದರವು ಗ್ರಾಹಕರ ಬೇಡಿಕೆಯನ್ನು ಮತ್ತು ಒಟ್ಟಾರೆ ಆರ್ಥಿಕತೆ ವಿಸ್ತೃತಗೊಳ್ಳುವುದನ್ನು ಪ್ರತಿಬಿಂಬಿಸುತ್ತದೆ.
ಸೆಪ್ಟೆಂಬರ್ 27ಕ್ಕೆ ಕೊನೆಗೊಂಡ ಪಾಕ್ಷಿಕದಲ್ಲಿ ಬ್ಯಾಂಕ್ ಸಾಲದ ಬೆಳವಣಿಗೆ ದರ ಶೇ. 8.8ಕ್ಕೆ ತಗ್ಗಿದೆ. ಅಂದರೆ, ಈ ಅವಧಿಯಲ್ಲಿ ಬ್ಯಾಂಕ್ ಸಾಲವು 97.91 ಲಕ್ಷ ಕೋಟಿಗೆ ಇಳಿದಿದೆ. ಈಗಾಗಲೇ ರಚನಾತ್ಮಕ ಮತ್ತು ಆವರ್ತಕ ಉಭಯ ಸಮಸ್ಯೆಗಳಲ್ಲಿ ಸಿಲುಕಿರುವ ದೇಶದ ಆರ್ಥಿಕತೆ ಮಟ್ಟಿಗೆ ಇದು ಕೆಟ್ಟ ಸುದ್ದಿಯೇ ಸರಿ. ಆರ್ ಬಿ ಐ ಅಂಕಿ ಅಂಶಗಳ ಪ್ರಕಾರ, ಏಪ್ರಿಲ್ 12ಕ್ಕೆ ಕೊನೆಗೊಂಡ ಪಾಕ್ಷಿಕದಲ್ಲಿ ಸಾಲದ ಬೇಡಿಕೆಯು ಶೇ. 14.19ರಷ್ಟಿತ್ತು. ಇದು ಕಳೆದ ವರ್ಷದ ಇದೇ ಅವಧಿಯಲ್ಲಿದ್ದು ಶೇ. 13.24 ಕ್ಕಿಂತ ಹೆಚ್ಚಳ ಸಾಧಿಸಿತ್ತು. ಆದರೆ, ಪ್ರಸಕ್ತ ವಿತ್ತೀಯ ವರ್ಷದಲ್ಲಿ ಇದುವರೆಗೆ ಬ್ಯಾಂಕ್ ಸಾಲದ ಬೇಡಿಕೆ ದರವು ಕೆಳಮಟ್ಟದಲ್ಲಿ ಎರಡಂಕಿಯಲ್ಲಿತ್ತು. ಆದರೆ, ಸೆಪ್ಟೆಂಬರ್ 27ಕ್ಕೆ ಕೊನೆಗೊಂಡ ಪಾಕ್ಷಿಕದಲ್ಲಿ ಒಂದಂಕಿಗೆ ಕುಸಿದಿದೆ. ಅಂದರೆ, ಸತತ ಕುಸಿತ ದಾಖಲಾಗಿದೆ.
ವೈಯಕ್ತಿಕ ಸಾಲಗಳು ಮತ್ತು ಸೇವಾ ವಲಯದಿಂದ ಬೇಡಿಕೆ ಕುಸಿದಿರುವುದರಿಂದ ಬ್ಯಾಂಕುಗಳಲ್ಲಿನ ಸಾಲದ ಬೇಡಿಕೆ ತನ್ನ ವೇಗೋತ್ಕರ್ಷವನ್ನು ಕಳೆದುಕೊಂಡಿದೆ. ಈ ಕಾರಣಕ್ಕಾಗಿಯೇ ಸಾಲದ ಬೇಡಿಕೆಯು ಒಂದಂಕಿಗೆ ಕುಸಿದಿದೆ. ಸೇವಾವಲಯದ ಅಭಿವೃದ್ಧಿ ದರವು ಆಗಸ್ಟ್ ತಿಂಗಳಲ್ಲಿ ಶೇ. 13.3ಕ್ಕೆ ಕುಸಿದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ. 26.7ರಷ್ಟಿತ್ತು ಎಂಬುದು ಗಮನಾರ್ಹ. ವೈಯಕ್ತಿಕ ಸಾಲವು ಶೇ.15.6ಕ್ಕೆ ತಗ್ಗಿದೆ. ಇದು ಹಿಂದಿನ ವರ್ಷದಲ್ಲಿ ಶೇ. 18.2ರಷ್ಟು ಮಾತ್ರ ಇತ್ತು. ಉದ್ಯಮ ವಲಯವೊಂದರಿಂದ ಮಾತ್ರ ಸಾಲದ ಬೇಡಿಕೆ ಕೊಂಚ ಹೆಚ್ಚಿದ್ದು ಆಶಾಕಿರಣ ಮೂಡಿಸಿದೆ. ಪ್ರಸಕ್ತ ಉದ್ಯಮ ವಲಯದ ಸಾಲದ ಬೇಡಿಕೆ ಶೇ. 3.9ರಷ್ಟು ಇದೆ. ಕಳೆದ ಸಾಲಿನಲ್ಲಿ ಇದು ಶೇ. 1.6ರಷ್ಟಿತ್ತು.
ಆತಂಕದ ಸಂಗತಿ ಎಂದರೆ ಬ್ಯಾಂಕ್ ಸಾಲದ ಬೇಡಿಕೆ ಕುಸಿತದ ಜತೆಗೆ ಠೇವಣಿ ಬೆಳವಣಿಗೆಯೂ ಕುಸಿದಿದೆ. ಸೆಪ್ಟೆಂಬರ್ 27ಕ್ಕೆ ಕೊನೆಗೊಂಡ ಪಾಕ್ಷಿಕದಲ್ಲಿ ಶೇ. 9.38ಕ್ಕೆ ಕುಸಿದಿದೆ. ಆಹಾರೇತರ ಸಾಲದ ಬೇಡಿಕೆಯೂ ಸಹ ಇದೇ ಅವಧಿಯಲ್ಲಿ ಶೇ. 9.8ಕ್ಕೆ ಕುಸಿದಿದೆ. ಕಳೆದ ಸಾಲಿನಲ್ಲಿ ಇದು ಶೇ. 12.4ರಷ್ಟಿತ್ತು.
ಬ್ಯಾಂಕ್ ಸಾಲದ ಬೇಡಿಕೆ ಕುಸಿತದ ಅಂಕಿ ಅಂಶಗಳು ಮುಂಬರುವ ತ್ರೈಮಾಸಿಕಗಳಲ್ಲಿನ ಜಿಡಿಪಿ ಮುನ್ನಂದಾಜು ಮಾಡುವ ಸಂದರ್ಭದಲ್ಲಿ ಮತ್ತಷ್ಟು ಅಭಿವೃದ್ಧಿ ದರವನ್ನು ಕಡಿತ ಮಾಡುವ ಸಾಧ್ಯತೆ ನಿಚ್ಛಳವಾಗಿದೆ. ಈಗಾಗಲೇ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಅಕ್ಟೋಬರ್ ಮಾಸಿಕ ಹಣಕಾಸು ನೀತಿ ಪರಾಮರ್ಶೆ ವೇಳೆ ಜಿಪಿಡಿ ಮುನ್ನಂದಾಜನ್ನು ಶೇ. 6.1ಕ್ಕೆ ತಗ್ಗಿಸಿದೆ. ಇದು ಎರಡೇ ತಿಂಗಳ ಅವಧಿಯಲ್ಲಿ 80 ಮೂಲ ಅಂಶದಷ್ಟು ಕಡಿತ ಮಾಡಿರುವುದು ಗಮನಾರ್ಹ ಅಂಶ.
ಐಎಂಎಫ್ ಹೇಳಿಕೆ:
ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ನೂತನ ಮುಖ್ಯಸ್ಥೆ ಕ್ರಿಸ್ಟಲಿನಾ ಜಾರ್ಜೀವ ಅವರು, ಪ್ರಸಕ್ತ ವಿತ್ತೀಯ ವರ್ಷದಲ್ಲಿ ಜಾಗತಿಕ ಆರ್ಥಿಕ ಕುಸಿಯುವ ಮುನ್ಸೂಚನೆ ಇದೆ, ಆದರೆ, ಭಾರತದ ಆರ್ಥಿಕ ಕುಸಿತವು ಮತ್ತಷ್ಟು ತ್ವರಿತವಾಗಿರಲಿದೆ ಎಂದು ಹೇಳಿದ್ದಾರೆ. ಇದುವರೆಗೂ ಐಎಂಎಫ್ ಭಾರತದ ಆರ್ಥಿಕತೆಯ ಬಗ್ಗೆ ಸಕಾರಾತ್ಮಕ ವಿವರಣೆ ನೀಡುತ್ತಲೇ ಬಂದಿತ್ತು. ಇದೀಗ ಐಎಂಎಫ್ ಸಹ ತ್ವರಿತ ಆರ್ಥಿಕ ಕುಸಿತದ ಬಗ್ಗೆ ಪ್ರಸ್ತಾಪಿಸಿದೆ. ಜಾಗತಿಕ ರೇಟಿಂಗ್ ಏಜೆನ್ಸಿ ಮೂಡಿ ಸಹ ಭಾರತದ ಜಿಡಿಪಿ ಬೆಳವಣಿಗೆ ಮುನ್ನಂದಾಜನ್ನು ಶೇ.6.2ರಿಂದ ಶೇ.5.8ಕ್ಕೆ ತಗ್ಗಿಸಿದೆ.
ಉರಿಯುವ ಗಾಯಕ್ಕೆ ಉಪ್ಪು ಸುರಿದಂತೆ, ಈಗಾಗಲೇ ಸಂಕಷ್ಟ ಎದುರಿಸುತ್ತಿರುವ ಆರ್ಥಿಕತೆಗೆ ಆಟೋಮೊಬೈಲ್, ಸೀಮೆಂಟ್ ಮತ್ತು ಉಕ್ಕು ಮತ್ತು ಕಬ್ಬಿಣ ವಲಯದಿಂದ ಮತ್ತಷ್ಟು ಆಘಾತ ನೀಡುವ ಅಂಕಿಅಂಶಗಳು ಹೊರಬಿದ್ದಿವೆ. ಜಿಡಿಪಿಗೆ ಈ ಮೂರು ವಲಯಲಗಳ ಕೊಡುಗೆ ಶೇ. 40ಕ್ಕಿಂತ ಹೆಚ್ಚಿದೆ. ಈ ವಲಯಗಳು ಭಾರಿ ಹಿಂಜರಿತ ಅನುಭವಿಸುತ್ತಿವೆ. ಇದರ ನೇರ ಪರಿಣಾಮ ಸರಕು ಮತ್ತು ಸೇವಾ ತೆರಿಗೆಗಳ ಸಂಗ್ರಹದ ಮೇಲಾಗುತ್ತಿದೆ. ಸೆಪ್ಟೆಂಬರ್ ತಿಂಗಳಲ್ಲಿ ಜಿ ಎಸ್ ಟಿ ಸಂಗ್ರಹವು ಶೇ. 2.7ರಷ್ಟು ಕಡಿಮೆ ಆಗಿದೆ. 92,000 ಕೋಟಿ ರುಪಾಯಿ ಆಜುಬಾಜಿನಲ್ಲಿದೆ. ಆದರೆ, ತಿಂಗಳಿಗೆ ಒಂದು ಲಕ್ಷ ಮೀರಿದ ಜಿ ಎಸ್ ಟಿ ಸಂಗ್ರಹ ಮಾಡುವ ಗುರಿಯನ್ನು ಹಾಕಿಕೊಂಡು ವರ್ಷವೇ ಕಳೆದಿದೆ. ಆದರೆ, ಗುರಿ ಮುಟ್ಟುವುದಿರಲಿ, 2018 ಮಾರ್ಚ್ ತಿಂಗಳ ನಂತರದಲ್ಲಿ ಅತಿ ಕನಿಷ್ಟ ಮಟ್ಟದ ತೆರಿಗೆ ಸಂಗ್ರಹವಾಗಿದೆ.
ತೆರಿಗೆ ಸಂಗ್ರಹ ತಗ್ಗಲು, ಆಟೋಮೊಬೈಲ್, ಸೀಮೆಂಟ್ ಹಾಗೂ ಉಕ್ಕು ಮತ್ತು ಕಬ್ಬಿಣ ವಲಯದಲ್ಲಿನ ಹಿಂಜರಿತ ಕಾರಣ. ಈ ವಲಯದ ಹಿಂಜರಿತದಿಂದಾಗಿ 6,000 ಕೋಟಿ ರುಪಾಯಿ ತೆರಿಗೆ ಸಂಗ್ರಹ ತಗ್ಗಿದೆ. ಇದೇ ಪ್ರಮಾಣದಲ್ಲಿ ತೆರಿಗೆ ಸಂಗ್ರಹ ತಗ್ಗುತ್ತಾ ಹೋದರೆ, ಈ ಮೂರು ವಲಯಗಳಿಂದ ವಾರ್ಷಿಕ ಬೊಕ್ಕಸಕ್ಕೆ ತೆರಿಗೆ ಆದಾಯದಲ್ಲಾಗುವ ನಷ್ಟ ಪ್ರಮಾಣವು 72,000 ಕೋಟಿ ರುಪಾಯಿ ದಾಟುತ್ತದೆ. ಈಗಾಗಲೇ ಕಾರ್ಪೊರೆಟ್ ತೆರಿಗೆ ಕಡಿತ ಮಾಡಿ ವಾರ್ಷಿಕ 1.45 ಕೋಟಿ ರುಪಾಯಿ ಭಾರವನ್ನು ಮೈಮೇಲೆ ಹೇರಿಕೊಂಡಿರುವ ಕೇಂದ್ರ ಸರ್ಕಾರಕ್ಕೆ ಅದನ್ನು ಸರಿದೂಗಿಸುವ ದಾರಿಗಳೇ ಕಾಣದಾಗಿವೆ.
ಜನಸಾಮಾನ್ಯರಿಗೆ ಸಂಕಷ್ಟ!
ಆರ್ಥಿಕತೆ ಕುಸಿಯಲಿ ನಮಗೇನು ಎಂದು ಜನಸಾಮಾನ್ಯರು ನೆಮ್ಮದಿಯಿಂದ ಇರುವಂತಿಲ್ಲ. ಸರ್ಕಾರ ಮಾಡಿದ ಸಾಲದ ಹೊರೆಗೆ ಜನಸಾಮಾನ್ಯರು ಹೆಗಲು ಕೊಡಬೇಕಾಗುತ್ತದೆ. ಅಥವಾ ಸರ್ಕಾರವೇ ಒತ್ತಾಯಪೂರ್ವಕವಾಗಿ ಜನರ ಹೇಗಲಿಗೇರಿಸುತ್ತದೆ. ಪ್ರಸಕ್ತ ವಿತ್ತೀಯ ವರ್ಷದ ಉಳಿದ ಆರು ತಿಂಗಳಲ್ಲಿ ತೆರಿಗೆ ಸಂಗ್ರಹ ಸುಧಾರಿಸುವ ಯಾವ ಮುನ್ಸೂಚನೆಗಳೂ ಇಲ್ಲ. ಏಕೆಂದರೆ ಆರ್ಥಿಕತೆ ಸುಧಾರಿಸುವ ಸಾಧ್ಯತೆಗಳೇ ಇಲ್ಲ. ಹೀಗಾಗಿ ಬರುವ ತಿಂಗಳುಗಳಲ್ಲಿ ತೆರಿಗೆ ಸಂಗ್ರಹ ತಗ್ಗಬಹುದು. ಆಗ ಸರ್ಕಾರಕ್ಕೆ ಉಳಿದಿರುವ ಏಕೈಕ ಮಾರ್ಗ ಎಂದರೆ ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ಮತ್ತಷ್ಟು ತೆರಿಗೆ ಹೇರುವುದು. ಇದು ನೇರವಾಗಿ ನಗದು ರೂಪದಲ್ಲಿ ತಕ್ಷಣವೇ ದಕ್ಕುವ ತೆರಿಗೆ ಆದಾಯ. ಮುಂಬರುವ ದಿನಗಳಲ್ಲಿ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ದರ ಎಷ್ಟೇ ಇಳಿದರೂ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದರ ಇಳಿಯುವ ಸಾಧ್ಯತೆ ಕಡಿಮೆ. ಬದಲಿಗೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ನಿಚ್ಛಳವಾಗಿದೆ.