ಹಂಪಿ ಅಂದರೆ ಹಾಳು ಹಂಪಿ ಎಂಬ ಮಾತು ಸರ್ವೇ ಸಾಮಾನ್ಯ. ಆದರೆ ಇನ್ನು ಮುಂದೆ ಹಾಗಾಗಲು ಆಸ್ಪದವಿಲ್ಲ. ಹಂಪಿಯ ಕೆಲ ಸ್ಮಾರಕಗಳಿಗೆ ಖಾಸಗಿ ಸಹಭಾಗಿತ್ವ ಬರಲಿದೆ. ಅಂದರೆ ಕೆಲವು ಖಾಸಗಿ ಸಂಸ್ಥೆಗಳು ಈ ಸ್ಮಾರಕಗಳನ್ನು ಕಾಪಾಡುವ ಹೊಣೆ ಹೊರಲಿವೆ.
ಕೇಂದ್ರ ಪ್ರವಾಸೋದ್ಯಮ ಇಲಾಖೆಯು ಸ್ಮಾರಕಗಳ ರಕ್ಷಣೆಯ ಸಲುವಾಗಿ ಒಟ್ಟು ಮೂರು ಸಂಸ್ಥೆಗಳಿಗೆ ನಿರ್ವಹಣೆ/ರಕ್ಷಣೆಯ ಜವಾಬ್ದಾರಿಯನ್ನು ನೀಡಲಿದೆ. ಆರೇಂಜ್ ಕಂಟ್ರಿ ಅಂಡ್ ರೆಸಾರ್ಟ್ಸ್, ಹೋಟೆಲ್ ಮಲ್ಲಿಗೆ ಮತ್ತು ಹೆರಿಟೇಜ್ ಹೋಟೆಲ್ ಆ ಮೂರು ಸಂಸ್ಥೆಗಳು. ಈ ಸಂಸ್ಥೆಗಳು ಸ್ಮಾರಕಗಳನ್ನು ದತ್ತು ತೆಗೆದುಕೊಂಡು ಅದರ ರಕ್ಷಣೆ ಜೊತೆಗೆ ಅಲ್ಲಿಗೆ ಬರುವ ಪ್ರವಾಸಿಗರಿಗೆ ಮಾರ್ಗದರ್ಶಿ ಬೋರ್ಡ್, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ವೈ ಫೈ ವ್ಯವಸ್ಥೆ ಒದಗಿಸಲಿವೆ. ಸ್ಮಾರಕಗಳ ದತ್ತು ಪಡೆಯುವಿಕೆ ಈ ಸಂಸ್ಥೆಗಳ ಹೊಣೆಯಾಗಿದ್ದು, ಇದರ ಮಾತುಕತೆ ಈಗ ಕೊನೆಯ ಹಂತದಲ್ಲಿದೆ.
ಏನಿದು ಖಾಸಗಿ ಸಂಸ್ತೆಗಳು ದತ್ತು?
ಪಾರಂಪರಿಕ ತಾಣಗಳನ್ನು ದತ್ತು ಸ್ವೀಕರಿಸಿ ಅದರ ನಿರ್ವಹಣೆ, ಸ್ವಚ್ಛತೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಪ್ರವಾಸಿಗರಿಗೆ ಸರಳ ಸಾರಿಗೆ ಸಂಪರ್ಕ, ಪ್ರಕಾಶಕ ಅಂದರೆ ಆಕರ್ಷಕ ಲೈಂಟಿಗ್ ವ್ಯವಸ್ಥೆ, ಸಂಕೇತ ಫಲಕಗಳನ್ನು ಅಳವಡಿಸಿ, ಪ್ರವಾಸಿಗರಿಗೆ ಅನುಕೂಲ ಕಲ್ಪಿಸಿ, ಇನ್ನೂ ಹೆಚ್ಚಿನ ಪ್ರವಾಸಿಗರನ್ನು ಸೆಳೆಯುವುದು ಇದರ ಮುಖ್ಯ ಉದ್ದೇಶ.

ಈ ಯೋಜನೆಯನ್ನು ಪ್ರವಾಸೋದ್ಯಮ ಸಚಿವಾಲಯ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆ, ರಾಜ್ಯ ಸರ್ಕಾರ/ಕೇಂದ್ರಾಡಳಿತ ಪ್ರದೇಶಗಳು ಜಂಟಿಯಾಗಿ 27 ಸೆಪ್ಟೆಂಬರ್, 2017 ರಂದು ಜಾರಿಗೆ ತಂದವು. ಖಾಸಗಿ ಸಂಸ್ಥೆಗಳು ತಮ್ಮ ಸಿ ಎಸ್ ಆರ್ ಅಂದರೆ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಅನ್ವಯ ಅಥವಾ ವ್ಯಕ್ತಿಗತ, ಸಾಂಸ್ಥಿಕವಾಗಿ ಹಣ ಹೂಡಬಹುದು ಎಂದು ಜಾರಿಗೆ ತಂದ ಯೋಜನೆ ಇದಾಗಿದೆ. ಈ ಯೋಜನೆಯ ಪ್ರಕಾರ ಭಾರತದಲ್ಲಿ ಒಟ್ಟು 10 ತಾಣಗಳನ್ನು ಖಾಸಗಿ ಸಹಭಾಗಿತ್ವದಡಿ ಆರಿಸಿದೆ. ಅದರಲ್ಲಿ ಹಂಪಿಯೂ ಒಂದು. ಹೆಚ್ಚು ಸ್ಮಾರಕಗಳನ್ನು ದತ್ತಕ್ಕೆ ತೆಗೆದುಕೊಳ್ಳಲ್ಪಟ್ಟ ತಾಣಗಳಲ್ಲಿ, ಕರ್ನಾಟಕದಲ್ಲಿ ಹಂಪಿಯು ಮೊದಲ ಖಾಸಗಿ ದತ್ತು ಪಡೆಯುವಿಕೆಗೆ ಒಳಪಟ್ಟ ತಾಣ ಎಂಬುದು ವಿಶೇಷ.
ಈ ವರ್ಷ ಅಂದರೆ 2018-19 ರ ಸಾಲಿನಲ್ಲಿ ವಿದೇಶಿ ಪ್ರವಾಸಿಗರ ಸಂಖ್ಯೆ 30,000 ಕೂಡ ದಾಟಿಲ್ಲ. ಇದಕ್ಕೂ ಮೊದಲು ಸುಮಾರು 50,000 ವಿದೇಶಿಯರು ಪ್ರತಿವರ್ಷ ಹಂಪಿಗೆ ಭೇಟಿ ನೀಡುತ್ತಿದ್ದರು. ಈಗ ಹಂಪಿಗೆ ಎಲ್ಲ ತರಹದ ಸವಲತ್ತು ಸಿಗುತ್ತಿದ್ದು, ವಿದೇಶಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರಬಹುದು ಎಂಬ ನಿರೀಕ್ಷೆ ಅಧಿಕಾರಿಗಳಲ್ಲಿದೆ.

ಹಂಪಿಯ ಗೈಡ್ ಹಾಗೂ ಸಮಾಜ ಸೇವಕರಾದ ಕಮಲಾಪುರದ ಎನ್. ರಾಜು ಅವರ ಪ್ರಕಾರ, “ಹಂಪಿ ಸ್ಮಾರಕಗಳನ್ನು ಕಾಪಾಡುವುದು ಎಲ್ಲರ ಕರ್ತವ್ಯವಾಗಿದ್ದು, ಈಗ ಇಲ್ಲಿರುವ ಸೆಕ್ಯೂರಿಟಿ ಸಾಕಾಗಲ್ಲ. ಇದಕ್ಕೆ ಇತ್ತಿಚಿನ ಕೆಲ ಘಟನೆಗಳೇ ಸಾಕ್ಷಿ. ಪ್ರತಿ ಮೂಲೆ ಮೂಲೆಯಲ್ಲೂ ಹದ್ದಿನ ಕಣ್ಣು ಇಡುವಂತೆ ಆಗಬೇಕು. ಇದು ಖಾಸಗೀಕರಣದಿಂದ ಮಾತ್ರ ಸಾಧ್ಯ. ಆದರೆ ನಮಗೆ ಖಾಸಗಿ ಸಂಸ್ಥೆಗಳ ಬಗ್ಗೆ ಇನ್ನೂ ಮಾಹಿತಿ ದೊರೆತಿಲ್ಲ”.
ಹಂಪಿಯ ಗೂಡಂಗಡಿ ಮಾಲೀಕರಾದ ಸುಕನ್ಯಾ ಎಂಬುವವರ ಪ್ರಕಾರ, “ಇಲ್ಲಿ ಎಲ್ಲ ತರಹದ ಜನರು ಬರುತ್ತಾರೆ. ಐತಿಹಾಸಿಕ ಸ್ಥಳವನ್ನು ನೋಡಲು ಬರುವ ಮನೋಭಾವದವರಾದರೆ ಸುಮ್ಮನೆ ಬಂದು ಹೋಗುತ್ತಾರೆ. ಆದರೆ ಕೆಲವು ಯುವಕರು ಸೆಲ್ಫೀ ತೆಗೆದುಕೊಳ್ಳಲು ಹೋಗಿ ಸ್ಮಾರಕಗಳಿಗೆ ಜೋತು ಬೀಳುವುದು, ಅವುಗಳ ಮೇಲೆ ಕುಳಿತು ಫೋಟೊಗಳಿಗೆ ಪೋಸ್ ನೀಡುವುದು ಸರಿಯಲ್ಲ. ಸ್ಮಾರಕಗಳ ಹತ್ತಿರ ನಿಂತು ಸೆಲ್ಫೀ ತೆಗೆಸಿಕೊಳ್ಳಲಿ. ಕೆಲ ಯುವಕರಂತೂ ಸ್ಥಳೀಯರೂ ಬೇಡ ಎಂದರೂ ಎಲ್ಲೆಂದರಲ್ಲಿ ಸಿಗರೇಟ್ ಸೇದುವುದು, ಗುಟ್ಕಾ ಪಾಕೇಟ್ ಗಳನ್ನು ಒಗೆಯುವುದು ಮಾಡುತ್ತಾರೆ. ಈಗಾಗಲೇ ನಾವು ಕೆಲವು ಕಡೆಗೆ ವೀಕ್ಷಿಸುತ್ತ ಹಲವರಿಗೆ ಇದರ ಬಗ್ಗೆ ತಿಳುವಳಿಕೆ ಹೇಳಿದ್ದೇವೆ. ಆದರೆ ಹಂಪಿ ದೊಡ್ಡದು ನೋಡಿ, ಯಾರು ಎಲ್ಲಿ ಏನೂ ಮಾಡುತ್ತಾರೋ ಎಂದು ನೋಡುವುದು ಕಷ್ಟ”.
ಹೊಸಪೇಟೆಯ ಪುರಾತತ್ವ ಇಲಾಖೆಯ ಅಧಿಕಾರಿಗಳಿಗೆ ಕೇಳಿದಾಗ ಅವರು ಹೇಳಿದ್ದು, “ಹಂಪಿಗೆ ಖಾಸಗಿ ಸಂಸ್ಥೆಗಳು ಹೊಣೆ ಹೊರಲು ಬಂದರೆ ನಮಗೆ ಬಲ ಬಂದಂತಾಗುವುದು. ಅಕ್ಟೋಬರ್ ರಜೆಗೆ ಮತ್ತು ಮುಂದೆ ಹಂಪಿಗೆ ಭೇಟಿ ನೀಡುವವರ ಸಂಖ್ಯೆ ಅಧಿಕವಾಗುವ ನಿರೀಕ್ಷೆ ಇದೆ. ಇತ್ತೀಚಿಗೆ ಹಂಪಿ ಅಪ್ರತಿಮ ತಾಣವೆಂದು ಘೋಷಿಸಲಾಗಿದೆ. ಇದರ ಜೊತೆಗೆ ಖಾಸಗೀ ಸಹಭಾಗಿತ್ವದ ಗರಿ ಪ್ರವಾಸಿಗರ ಸಂಖ್ಯೆ ಏರಿಸಲಿ ಎಂಬುದು ನಮ್ಮ ಸದಾಶಯ”.

ಯಾವ್ಯಾವ ಸ್ಮಾರಕಗಳು:
1) ಕಮಲ ಮಹಲ್ (ಲೋಟಸ್ ಮಹಲ್) : ದೂರದಿಂದ ನೋಡಿದಾಗ ಕಮಲದ ಹೂವಿನಂತೆ ಭಾಸವಾಗುವ ಈ ಮಹಲ್ ಗೆ ಕಮಲ ಮಹಲ್ ಎನ್ನುತ್ತಾರೆ. ಇದು ಇಂಡೊ-ಇಸ್ಲಾಮಿಕ್ ಮಾದರಿಯ ವಾಸ್ತು ಶಿಲ್ಪ ಹೊಂದಿದ್ದು ಹಜಾರ ರಾಮನ ಗುಡಿಯ ಹತ್ತಿರವಿದೆ.
2) ಉಗ್ರ ನರಸಿಂಹ ಮೂರ್ತಿ: 6.7 ಮೀಟರ್ ನಷ್ಟು ದೊಡ್ಡದಾದ ಒಂದೇ ಕಲ್ಲಿನಲ್ಲಿ ಕೆತತಲಾದ ಭವ್ಯ ಉಗ್ರ ನರಸಿಂಹ ಮೂರ್ತಿ ಇದು. ಈ ಮೂರ್ತಿಯನ್ನು ಕ್ರಿ.ಶ.೧೫೨೮ರಲ್ಲಿ ದೊರೆಯಾದ ಕೃಷ್ಣದೇವರಾಯನ ಆಳ್ವಿಕೆಯಲ್ಲಿ ಪೂರ್ಣಗೊಳಿಸಲಾಯಿತೆಂದು ಹೇಳಲಾಗುತ್ತದೆ.
3) ಪಟ್ಟಾಭಿರಾಮ ದೇವಾಲಯ: ಈ ದೇವಾಲಯವು ವಿಶಾಲವಾಗಿದ್ದು ಪ್ರಶಾಂತ ಸ್ಥಳವಾಗಿದೆ. ಇಲ್ಲಿನ ಕಂಬಗಳಲ್ಲಿ ಪೌರಾಣಿಕ ಕಾಲದ ಕಾಲ್ಪನಿಕ ಮೃಗಗಳನ್ನು ಅದ್ಭುತವಾಗಿ ಕೆತ್ತಲಾಗಿದೆ.
4) ಬಡವಿಲಿಂಗ ದೇವಾಲಯ: ಇದು ಬೃಹತ್ ಏಕಶಿಲಾ ಶಿವಲಿಂಗವಾಗಿದ್ದು ಯಾವಾಗಲೂ ಜಲಾವೃತವಾಗಿರುತ್ತದೆ. ಉಗ್ರ ನರಸಿಂಹ ಮೂರ್ತಿಯ ಪಕ್ಕದಲ್ಲಿಯೇ ಇದೆ. ಇದು 9 ಅಡಿಯ ಶಿವಲಿಂಗ.
5) ಕೃಷ್ಣ ದೇವಾಲಯ : ಕೃಷ್ಣ ದೇವಾಲಯ ಕಂಬಗಳಲ್ಲಿ ಅಮೋಘ ಕೆತ್ತನೆ ಇದ್ದು, ನೋಡಲು ಮನಮೋಹಕವಾಗಿದೆ.
6) ಆನೆ ಲಾಯ ಅಥವಾ ಗಜ ಶಾಲೆ: ಆನೆಗಳಿಗೆ ಕಟ್ಟಲಾದ ಬೃಹತ್ ಲಾಯಗಳನ್ನು ಇಲ್ಲಿ ಕಾಣಬಹುದು. ಸಾಲು ಸಾಲಾಗಿ ಕಟ್ಟಿರುವ ಈ ಲಾಯಗಳು ಗುಮ್ಮಟದ ಛಾವಣಿಗಳನ್ನು ಹೊಂದಿವೆ.