ಶಿವಮೊಗ್ಗ ನಗರದ ಬೊಮ್ಮನಕಟ್ಟೆಯಲ್ಲಿರುವ ಇನ್ನೂರಕ್ಕೂ ಅಧಿಕ ಆಶ್ರಯ ಮನೆಗಳಲ್ಲಿ ಮೂಲಭೂತ ಸೌಕರ್ಯ ಸಮಸ್ಯೆಯಿಂದ ಎಂಭತ್ತಕ್ಕೂ ಅಧಿಕ ಮನೆಗಳಲ್ಲಿ ಜನರು ವಾಸವಿಲ್ಲ. ಇವರೆಲ್ಲರಿಗೂ ಮಹಾನಗರ ಪಾಲಿಕೆಯ ಆಶ್ರಯ ಸಮಿತಿಯಿಂದ ನೋಟಿಸ್ ನೀಡಲಾಗಿದೆ. ಆದರೆ, ಅವರ್ಯಾರೂ ಮನೆ ಕಳೆದುಕೊಳ್ಳುವುದಿಲ್ಲ. ಶಿವಮೊಗ್ಗದಲ್ಲಿ ಇದುವರೆಗೆ ಆಶ್ರಯ ಮನೆಯ ಮಾಲೀಕತ್ವ ರದ್ಧಾಗಿರುವುದು ಒಂದೇ ಪ್ರಕರಣದಲ್ಲಿ. ಅದೂ ಕೂಡ ಮೂಲ ಆಶ್ರಿತರ ಇಚ್ಛಾಪೂರ್ವಕ ಒಡಂಬಡಿಕೆಯಿಂದ. ಹೀಗಿರುವಾಗ, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಆದೇಶ ತ್ವರಿತಗತಿಯಲ್ಲಿ ಪಾಲನೆ ಮಾಡಲು ಹೋದ ಅಧಿಕಾರಿಗಳು ನೆರೆ ಸಂತ್ರಸ್ತ ವೃದ್ಧೆಯೋರ್ವರಿಗೆ ಮನೆ ನೀಡಿರುವುದು ಆಶ್ರಯ ಯೋಜನೆಯೆ ಅನುಷ್ಟಾನದ ಬಗ್ಗೆಯೇ ಪ್ರಶ್ನೆ ಮೂಡುವಂತೆ ಮಾಡಿದೆ.
ಎಲ್ಲಿದೆ ಆಶ್ರಯ ಯೋಜನೆಯ ಮನೆಗಳು?
ಕೆಲವು ವರ್ಷಗಳ ಹಿಂದೆ ಶಿವಮೊಗ್ಗದ ಬೊಮ್ಮನಕಟ್ಟೆ ಹಿಂದುಳಿದ ಹಳ್ಳಿ. ಈಗಲೂ ಆ ಪ್ರದೇಶದಲ್ಲಿ ನಿಂತು ಸುತ್ತಲೂ ಕಣ್ಣಾಡಿಸಿದರೆ ಭೂತಕಾಲದ ಕೆರೆ ಪೊದೆಗಳಿಂದ ಕೂಡಿದ ಉಬ್ಬುತಗ್ಗುಗಳ ಹಳ್ಳಿಯ ಚಿತ್ರಣವೇ ಕಾಣುತ್ತದೆ. ಮೊದಲಿಂದಲೂ ಈ ಭಾಗದಲ್ಲಿ ಅಪರಾಧ ಪ್ರಕರಣಗಳು ಹೆಚ್ಚು, ಈಗಲೂ ಅದರ ಪ್ರಮಾಣ ಕಡಿಮೆಯಾಗಿಲ್ಲ. ಕಳ್ಳರು, ದರೋಡೆಕೋರರು, ಕೊಲೆ ಆರೋಪಿಗಳೆಲ್ಲಾ ತಕ್ಷಣ ಕಣ್ಮರೆಯಾಗಿ ಸೇರುವುದು ಬೊಮ್ಮನಕಟ್ಟೆಯಲ್ಲೇ..!
ಮಾಜಿ ಸಿಎಂ ದಿವಗಂತ ಬಂಗಾರಪ್ಪನವರ ಕಾಲದಲ್ಲಿ ಇಲ್ಲಿ 120 ಎಕರೆ ಜಮೀನು ಸ್ವಾಧೀನಪಡಿಸಿಕೊಂಡು ವಸತಿ ಮನೆಗಳನ್ನು ನಿರ್ಮಿಸಲಾಯಿತು. ಹಂತಹಂತವಾಗಿ ಒಟ್ಟು ಎಂಟು ಬ್ಲಾಕ್‌ಗಳನ್ನ ಮಾಡಿ ಸಾವಿರಾರು ಮನೆಗಳನ್ನು ಫಲಾನುವಿಗಳಿಗೆ ಹಂಚಲಾಗಿದೆ. ಹೆಚ್ (H) ಬ್ಲಾಕ್‌ನಲ್ಲಿ 221 ಮನೆಗಳನ್ನು 2003 ರಲ್ಲಿ ನಿರ್ಮಾಣ ಮಾಡಿದ್ದು, ಅಲ್ಲಿಂದ ಇಲ್ಲಿಯವರೆಗೂ ಈ ಪ್ರದೇಶ ನಗರಕ್ಕೆ ಹೊಂದಿಕೊಂಡರೂ ಕುಗ್ರಾಮದಂತಿದೆ. ಇಲ್ಲಿನ ಆಶ್ರಯ ಮನೆಗಳಿಗೆ ವಿದ್ಯುತ್ ಸಂಪರ್ಕವಿಲ್ಲ, ಕುಡಿಯಲು ನೀರಿಲ್ಲ, ಕೆಲವರು ಹಣ ಕೂಡಿಸಿ ಸೈಟ್‌ನಲ್ಲೇ ಬೋರ್‌ವೆಲ್ ತೆಗೆಸಿಕೊಂಡು ಮನೆ ಸೇರಿದ್ದಾರೆ. ಈ ಕುರಿತು ಹೆಸರು ಹೇಳಲಿಚ್ಛಿಸದ ಅನೇಕ ಫಲಾನುಭವಿಗಳು ಸರ್ಕಾರವನ್ನು ಈಗಲೂ ಶಪಿಸುತ್ತಾರೆ.
ಶಿವಮೊಗ್ಗದ ಬೊಮ್ಮನಕಟ್ಟೆ ಹೆಚ್ ಬ್ಲಾಕ್‌ನ 221 ಮನೆಗಳ ಪೈಕಿ ಎಂಭತ್ತು ಜನರಿಗೆ ಎರಡು ಮೂರು ಬಾರಿ ನೋಟಿಸ್ ನೀಡಿ ಮನೆಯಲ್ಲಿ ವಾಸ ಆರಂಭಿಸಲು ತಾಕೀತು ಮಾಡಲಾಗಿದೆ. ಫಲಾನುಭವಿಗಳು ಆಶ್ರಯ ಸಮಿತಿಗೆ ಉತ್ತರ ನೀಡಬೇಕು. ಇದು ಹೀಗೆ ಏಳೆಂಟು ನೋಟಿಸ್ ಜಾರಿಯಾಗಿ ಉತ್ತರವಿಲ್ಲದೇ ಹೋದಾಗ ಮಾತ್ರ ಆಶ್ರಯ ಸಮಿತಿ ಮುಂದೆ ಈ ವಿಷಯ ಮಂಡನೆಯಾಗುತ್ತದೆ. ನಗರ ಶಾಸಕ, ಅಧಿಕಾರಿಗಳನ್ನೊಳಗೊಂಡ ಸಮಿತಿಗೆ ಮುಖ್ಯಸ್ಥರು ಪಾಲಿಕೆ ಕಮಿಷನರ್ ಆಗಿರ್ತಾರೆ. ಇದೆಲ್ಲಾ ಆದ ಮೇಲೆ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ಎದುರು ಮಂಡನೆಯಾಗಿಯೂ ಅನುಮೋದನೆ ಪಡೆಯಬೇಕು.
ರಂಗೂನ್ ಅಜ್ಜಿಯ ಕತೆ
ಶಿವಮೊಗ್ಗದಲ್ಲಿ ಸುಮಾರು ಏಳೂವರೆ ಸಾವಿರ ಆಶ್ರಯ ಮನೆಗಳಲ್ಲಿ ಬೆರಳೆಣಿಕೆಯ ಮನೆಗಳ ಮಾಲಿಕತ್ವ ಬದಲಾಗಿದೆ. ಆದರೆ ಶಿವಮೊಗ್ಗ ತುಂಗಾ ನದಿ ಪ್ರವಾಹದ ಸಂತ್ತಸ್ತೆ ಗಂಗಮ್ಮ ಎಂಬ ವೃದ್ಧೆ (93 ವರ್ಷ)ಗೆ ಸಿಎಂ ಆಶ್ರಯ ಮನೆಯ ಹಕ್ಕುಪತ್ರ ನೀಡಿದ್ದು ದೊಡ್ಡ ಸುದ್ದಿಯಾಗಿತ್ತು. ಈ ಮೂಲಕ ಕನ್ನಡ ಖಾಸಗಿ ಚಾನೆಲ್‌ವೊಂದಕ್ಕೆ ಇದು ಇಂಪ್ಯಾಕ್ಟ್ ವರದಿಯೂ ಆಯ್ತು. ಶಿವಮೊಗ್ಗದ ಕೆಲವು ಅಧಿಕಾರಿಗಳು ಟಿವಿ ಫ್ರೇಮ್‌ಗಳಲ್ಲಿ ಮಿಂಚಿದರು.
ಆಶ್ಲೇಷ ಮಳೆಗೆ ಬಸಿದು ಹೋದ ಶಿವಮೊಗ್ಗ ನಗರದಲ್ಲಿ ಅಂಗವಿಕಲ ಮಗನನ್ನು ಇಟ್ಟುಕೊಂಡು ಮರುಗುತ್ತಿದ್ದ ಗಂಗಮ್ಮ ಮೂಲತಃ ಬರ್ಮಾ ದೇಶ (ಈಗಿನ ಮಯನ್ಮಾರ್)ದವರು. ಪೆನ್ಷನ್ ಹಣದಿಂದ ಹತ್ತಡಿ ಜಾಗದಲ್ಲಿ ವಾಸವಿದ್ದ ಅಜ್ಜಿ ತನ್ನ ಕಷ್ಟ ಯಾರ ಬಳಿ ಹೇಳಬೇಕು ಎಂದು ಚಿಂತೆಯಲ್ಲಿದ್ದಾಗ ಶಿವಮೊಗ್ಗದ ಸಂಘಟನೆಯೊಂದರ ಮೂಲಕ ಖಾಸಗಿ ಚಾನೆಲ್‌ಗೆ ವಿಷಯ ಮುಟ್ಟಿಸಲಾಯ್ತು. ಕರುಣಾಜನಕ ಸ್ಟೋರಿಯೂ ಪ್ರಸಾರವಾಯ್ತು. ಶಿವಮೊಗ್ಗ ಉಸ್ತುವಾರಿ ಕಾರ್ಯದರ್ಶಿ ಮಣಿವಣ್ಣನ್ ಸೇರಿ ಅಧಿಕಾರಿಗಳೆಲ್ಲಾ ಬಂದು ನೋಡಿ, ಅಜ್ಜಿಗೆ ಆಶ್ರಯ ನೀಡುವ ಭರವಸೆ ನೀಡಿದರು.
ಈ ಗಂಗಮ್ಮ ದೂರದ ಮಯನ್ಮಾರ್‌ನ ರಂಗೂನ್‌ನಿಂದ ವಲಸೆ ಬಂದವರು. ಆಕೆಯ ಪತಿ ಬ್ರಿಟಿಷ್ ಸೈನಿಕ. ಸುಭಾಷ್ ಚಂದ್ರ ಬೋಸ್ ಬರ್ಮಾದಲ್ಲಿದ್ದಾರೆಂಬ ಮಾಹಿತಿ ಜಾಡಿನಲ್ಲಿ ಪತ್ತೆ ಹಚ್ಚಲು ಕಳುಹಿಸಿದ ತಂಡದಲ್ಲಿದ್ದ ಗಂಗಜ್ಜಿಯ ಪತಿ ಎಎಸ್ ನಾಯ್ಡು, ಹತ್ತು ವರ್ಷದ ಗಂಗಮ್ಮಗೆ ಮನಸೋತಿದ್ದರು. ಭಾರತಕ್ಕೆ ಮರಳಿದ ಮೇಲೆ ಪುನಃ ರಂಗೂನ್‌ಗೆ ಹೋಗಿ ಆಕೆಯೊಂದಿಗೆ ಮದುವೆಯಾಗಿ ಮೊದಲ ಮಗು ಆಗುವವರೆಗೂ ಅಲ್ಲಿಯೇ ನೆಲೆಸಿದ್ದರು. ಆದರೆ ಗಂಗಮ್ಮನಿಗೆ ಗಡಿಯಾಚೆ ಭಾರತದ ಅಂಚಿನ ಸೀರೆ, ಕುಂಕುಮ, ಬಳೆಯ ಮೋಹ.
ಭಾರತಕ್ಕೇ ಹೋಗೋಣ ಎಂದು ದುಂಬಾಲು ಬಿದ್ದ ಮೇಲೆ ನಾಯ್ಡು ಗಂಗಮ್ಮನ ಸಮೇತ ಭಾರತಕ್ಕೆ ಬಂದು, ಖಾದಿ ಗಿರಣಿ ಮಾಲೀಕನ ಸಂಪರ್ಕದಿಂದ ಶಿವಮೊಗ್ಗವರೆಗೆ ಪ್ರಯಾಣ ಬೆಳೆಸಿ ಇಲ್ಲಿಯೇ ನೆಲೆನಿಂತರು. ಮೂರು ಹೆಣ್ಣು ಮಕ್ಕಳೊಂದಿಗೆ ಒಬ್ಬ ಅಂಗವಿಕಲ ಮಗ. 80ರ ದಶಕದಲ್ಲಿ ಪತಿ ವಿಯೋಗ ಗಂಗಮ್ಮನನ್ನು ಕತ್ತಲಲ್ಲಿ ತಳ್ಳಿತ್ತು. ಹೆಣ್ಣುಮಕ್ಕಳು ಮದುವೆಯಾಗಿ ಬೇರೆಡೆ ಹೋದ ಮೇಲೆ ಅಂಗವಿಕಲ ಮಗನೊಂದಿಗೆ ಗಂಗಮ್ಮ ಶಿವಮೊಗ್ಗದಲ್ಲಿ ನೆಲೆಸಿದ್ದರು. ಈ ವರ್ಷದ ಆಗಸ್ಟ್ ಮಳೆಗೆ ಅಜ್ಜಿಯ ಅತಂತ್ರ ಪರಿಸ್ಥಿತಿ ಜಗಜ್ಜಾಹಿರಾಯ್ತು.
ಅಜ್ಜಿಗೆ ಆಶ್ರಯ ಬಡಾವಣೆಯಲ್ಲಿ ಕ್ರಮಸಂಖ್ಯೆ 3ರಲ್ಲಿ ವಾಸಿಸಲು ಅನುವುಮಾಡಿ ಸಿಎಂ ಯಡಿಯೂರಪ್ಪ ಬಹಿರಂಗ ಸಭೆಯಲ್ಲಿ ಹಕ್ಕುಪತ್ರ ನೀಡಲಾಗಿದೆ ಎಂದು ಪತ್ರವನ್ನೂ ನೀಡಿಬಿಟ್ಟರು. ಜಿಲ್ಲಾಧಿಕಾರಿ ಅಥವಾ ಕಮಿಷನರ್ ಮುಂದೆ ನಿಂತು ಅಭಯ ನೀಡಬೇಕಾಗಿದ್ದ ಜಾಗದಲ್ಲಿ ಶಿವಮೊಗ್ಗ ತಹಸೀಲ್ದಾರ್ ಬಂದು ಅಜ್ಜಿಯ ಮನೆ ಗೃಹ ಪ್ರವೇಶ ಮಾಡಿಸಿದರು. ಅಷ್ಟರಲ್ಲಿ ಈ ಮನೆಯ ಮೂಲ ಹಂಚಿಕೆದಾರ/ವಾರಸುದಾರ ಮಲವಗೊಪ್ಪದ ಗಿರಿಜಾ ಎಂಬವರು ಬಂದು ಬೀಗ ಒಡೆದು ತಮ್ಮ ಹಕ್ಕು ಪ್ರತಿಪಾದಿಸಿದರು. ಅಧಿಕಾರಿಗಳ ಮಧ್ಯಸ್ಥಿಕೆಯಿಂದ ಸದ್ಯ ಗಿರಿಜಾ ವಾಪಸ್ಸಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಆಶ್ರಯ ಸಮಿತಿ ಸದಸ್ಯರನ್ನು ಸಂಪರ್ಕಿಸಿದಾಗ ಸಿಕ್ಕ ಮಾಹಿತಿ; ಅಜ್ಜಿಗೆ ತಾತ್ಕಾಲಿಕ ಮನೆ ನೀಡಲಾಗಿದೆ. ಆಶ್ರಯ ಸಮಿತಿಯ ಸಿಬ್ಬಂದಿಯೇ ಹೇಳುವ ಪ್ರಕಾರ ಮೂಲ ವಾರಸುದಾರರ ಮಾಲಿಕತ್ವವನ್ನು ಅಷ್ಟು ಸುಲಭವಾಗಿ ಬೇರೊಬ್ಬರಿಗೆ ವರ್ಗಾವಣೆ ಮಾಡಲಾಗುವುದಿಲ್ಲ. ಅವರೂ ಕೂಡ ಇಪ್ಪತ್ತು ವರ್ಷಗಳವರೆಗೆ ಬೇರೆಯವರ ಹೆಸರಿಗೆ ವರ್ಗಾವಣೆ ಮಾಡುವ ಹಾಗಿಲ್ಲ.
ಪ್ರಚಾರದ ಗೀಳಿಗೆ ಯಾರೂ ಅಧಿಕಾರ ವ್ಯಾಪ್ತಿ ಮೀರಿ ಅಜ್ಜಿಯನ್ನು ಕೈಬಿಡಬಾರದು ಎಂದು ಪಾಲಿಕೆ ವಿರೋಧ ಪಕ್ಷ ನಾಯಕ ರಮೇಶ್ ಹೆಗ್ಡೆ ಹೇಳುತ್ತಾರೆ. ಮನೆಯ ನಿಜ ವಾರಸುದಾರರಾದ ಗಿರಿಜಾ ಕೂಡ ಆರು ತಿಂಗಳ ಅವಧಿಗೆ ಯಾವುದೇ ತಕರಾರು ತೆಗೆಯೋದಿಲ್ಲ ಎಂದು ಬರೆದುಕೊಟ್ಟಿದ್ದಾರೆ. ಆದರೆ, ಇವೆಲ್ಲದರ ನಡುವೆ, ಆಶ್ರಯ ಯೋಜನೆಯ ಮನೆಗಳ ನಿರ್ವಹಣೆ, ಸಮರ್ಪಕ ಹಂಚಿಕೆಯ ಬಗ್ಗೆ ಜಿಲ್ಲಾ ಅಧಿಕಾರಿಗಳು ತಕ್ಷಣ ಗಮನಹರಿಸುವ ಅಗತ್ಯವಿದೆ.