ಕೇಂದ್ರ ಚುನಾವಣಾ ಆಯುಕ್ತ ಅಶೋಕ್ ಲವಾಸಾ ಅವರ ಮೇಲೆ ಕೇಂದ್ರ ಸರ್ಕಾರ ಹಗೆ ತೀರಿಸಿಕೊಳ್ಳಲು ಹೊರಟಿದೆಯೇ? ಲವಾಸಾ ಮತ್ತು ಅವರ ಕುಟುಂಬದ ಸದಸ್ಯರ ಮೇಲೆ ನಡೆದಿರುವ ವಿಚಾರಣೆಗಳ ಸ್ವರೂಪ ಮತ್ತು ಸಮಯಗಳೆರಡೂ ಈ ದಿಕ್ಕಿನಲ್ಲಿ ಗುಮಾನಿಗೆ ದಾರಿ ಮಾಡಿವೆ.
ಲವಾಸಾ ಅವರು ಊರ್ಜಾ ಮಂತ್ರಾಲಯದ ಕಾರ್ಯದರ್ಶಿಯಾಗಿದ್ದ 2009-2013ರ ಅವಧಿಯಲ್ಲಿ ತಮ್ಮ ಅಧಿಕಾರ ಮತ್ತು ಪ್ರಭಾವದ ದುರುಪಯೋಗ ಮಾಡಿದ್ದಾರೆಯೇ ಎಂದು ದಾಖಲೆ ದಸ್ತಾವೇಜು ಪರಿಶೀಲಿಸಿ ಹೇಳುವಂತೆ ಆ ಮಂತ್ರಾಲಯಕ್ಕೆ ಸೇರಿದ ಹನ್ನೊಂದು ಸಾರ್ವಜನಿಕ ಉದ್ದಿಮೆಗಳಿಗೆ ಕೇಂದ್ರ ಸರ್ಕಾರ ಪತ್ರ ಬರೆದಿರುವುದು ಇತ್ತೀಚೆಗೆ ಬೆಳಕಿಗೆ ಬಂದಿದೆ. ತಮ್ಮ ಪತ್ನಿ ನಾವೆಲ್ ಲವಾಸಾ ಅವರು ನಿರ್ದೇಶಕ ಮಂಡಳಿಗಳ ಸದಸ್ಯರಾಗಿರುವ ಕಂಪನಿಗಳಿಗೆ ಲಾಭವಾಗುವಂತೆ ಗುತ್ತಿಗೆಗಳು, ಸಾಮಗ್ರಿ ಪೂರೈಕೆ ಮುಂತಾದ ಆರ್ಡರುಗಳನ್ನು ನೀಡುವಂತೆ ಊರ್ಜಾ ಮಂತ್ರಾಲಯದ ಸಾರ್ವಜನಿಕ ಉದ್ದಿಮೆಗಳ ಮೇಲೆ ಪ್ರಭಾವ ಬೀರಲು ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡಿರುವ ನಿದರ್ಶನಗಳಿದ್ದರೆ ತಿಳಿಸುವಂತೆ ಆದೇಶದಲ್ಲಿ ವಿವರಿಸಲಾಗಿದೆ.
ಕಳೆದ ಮೇ ತಿಂಗಳಲ್ಲಿ ಜರುಗಿದ ಲೋಕಸಭಾ ಚುನಾವಣೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ವಿರುದ್ಧ ಮಾದರಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ದೂರುಗಳಿದ್ದವು. ಇವುಗಳ ಪೈಕಿ ಐದು ದೂರುಗಳಲ್ಲಿ ಇವರಿಬ್ಬರದೂ ತಪ್ಪಿಲ್ಲವೆಂದು ಚುನಾವಣಾ ಆಯೋಗ ಬಹುಮತದಿಂದ ಸಾರಿತ್ತು. ಆರು ದೂರುಗಳಲ್ಲಿ ಮೋದಿಯವರನ್ನು ದೋಷಮುಕ್ತರೆಂದು ತೀರ್ಮಾನಿಸಲಾಗಿತ್ತು. ಆಯೋಗದ ಮೂವರು ಸದಸ್ಯರಲ್ಲೊಬ್ಬರಾದ ಅಶೋಕ್ ಲವಾಸಾ, ಈ ಆದೇಶಗಳನ್ನು ವಿರೋಧಿಸಿದ್ದರು. ಆದೇಶಗಳಲ್ಲಿ ಲವಾಸಾ ಅವರ ಭಿನ್ನಮತವನ್ನು ದಾಖಲಿಸಿರಲಿಲ್ಲ.
ಅಲ್ಪಮತದ ತೀರ್ಮಾನಗಳನ್ನು ದಾಖಲಿಸುತ್ತಿಲ್ಲವಾದ ಕಾರಣ ತಾವು ಆಯೋಗದ ಸಭೆಗಳಿಂದ ದೂರ ಉಳಿಯುವುದಾಗಿ ಲವಾಸಾ ಬರೆದಿದ್ದ ಪತ್ರ ಬಹಿರಂಗವಾಗಿತ್ತು. ಚುನಾವಣಾ ಆಯೋಗದಲ್ಲಿನ ‘ಬಿರುಕು’ ದೊಡ್ಡ ಸುದ್ದಿಯಾಗಿತ್ತು. ಚುನಾವಣೆಗಳ ನಂತರ ಹೊಸ ಸರ್ಕಾರ ರಚನೆಯಾಯಿತು. ತಮ್ಮ ಭಿನ್ನಮತದ ‘ಬೆಲೆ’ಯನ್ನು ಲವಾಸಾ ಮತ್ತು ಅವರ ಕುಟುಂಬದ ಸದಸ್ಯರು ಚುಕ್ತಾ ಮಾಡಬೇಕಾಗಿ ಬಂದಿದೆ.
ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಪ್ರಚೋದನಕಾರಿ ಹೇಳಿಕೆಗಳ ಬಿಜೆಪಿ ಮುಂದಾಳು ಗುಲಾಬ್ ಚಂದ್ ಕಟಾರಿಯಾ, ಸಾಧ್ವಿ ಪ್ರಗ್ಯಾಸಿಂಗ್ ಠಾಕೂರ್ ವಿರುದ್ಧ ಅನುಕ್ರಮವಾಗಿ ಎಫ್. ಐ. ಆರ್. ದಾಖಲಿಸಬೇಕು ಮತ್ತು 72 ತಾಸಿನ ನಿಷೇಧ ಹೇರಬೇಕೆಂಬ ಲವಾಸಾ ಮಾತಿಗೆ ಉಳಿದಿಬ್ಬರು ಸದಸ್ಯರು ಒಪ್ಪಲಿಲ್ಲ. ದೂರುಗಳ ಕುರಿತು ದೈನಂದಿನ ನೆಲೆಯಲ್ಲಿ ವ್ಯವಹರಿಸಲು ಆಯೋಗದಲ್ಲಿ ವಿಶೇಷ ಏರ್ಪಾಡು ಆಗಬೇಕೆಂಬ ಅವರ ಮಾತಿಗೂ ಉಳಿದಿಬ್ಬರು ಸೊಪ್ಪು ಹಾಕಿರಲಿಲ್ಲ. ಧರ್ಮ, ರಕ್ಷಣಾ ವ್ಯವಹಾರಗಳ ವಿಷಯಗಳು, ಕೋಮು ಭಾವನೆಗಳನ್ನು ಕೆರಳಿಸಿ ಮತಯಾಚನೆ ಮಾಡುವುದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆ. ಪ್ರಧಾನಿಯವರು ಲಾತೂರು, ಪಾಟನ್, ವಾರ್ಧಾದಲ್ಲಿ ಮಾಡಿದ ಇಂತಹ ಭಾಷಣಗಳಿಗೆ ಆಯೋಗ ‘ಕ್ಲೀನ್ ಚಿಟ್’ ನೀಡಿತ್ತು. ಈ ಕುರಿತು ಲವಾಸಾ ಭಿನ್ನಮತ ತಳೆದಿದ್ದರು. ಭಿನ್ನಮತವನ್ನು ಆದೇಶಗಳಲ್ಲಿ ದಾಖಲು ಮಾಡದಿರುವುದನ್ನು ವಿರೋಧಿಸಿ ಆಯೋಗದ ಸಭೆಗಳಿಗೆ ಗೈರು ಹಾಜರಾದರು. ಅವರ ಈ ನಡೆಯನ್ನು ಮುಖ್ಯ ಚುನಾವಣಾ ಆಯೋಕ್ತ ಸುನೀಲ್ ಅರೋಡ ಖಂಡಿಸಿದರು.
ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋಡ 2021ರಲ್ಲಿ ನಿವೃತ್ತರಾಗಲಿದ್ದಾರೆ. ಸಂಪ್ರದಾಯದ ಪ್ರಕಾರ ಆಯೋಗದ ಅತ್ಯಂತ ಹಿರಿಯ ಸದಸ್ಯ ಮುಂದಿನ ಮುಖ್ಯ ಚುನಾವಣಾ ಆಯುಕ್ತರು. ಲವಾಸಾ ಮುಖ್ಯ ಚುನಾವಣಾ ಆಯುಕ್ತರಾಗುವುದನ್ನು ತಪ್ಪಿಸಲೆಂದೇ ಅವರು ಮತ್ತು ಅವರ ಕುಟುಂಬದ ವಿರುದ್ಧ ಕೇಸುಗಳನ್ನು ಹೂಡಲಾಗಿದೆ ಎಂದು ಹೇಳಲಾಗುತ್ತಿದೆ. ಮುಖ್ಯ ಚುನಾವಣಾ ಆಯುಕ್ತರನ್ನು ಅವರ ಹುದ್ದೆಯಿಂದ ತೆಗೆದು ಹಾಕುವುದು ಸುಲಭವಲ್ಲ. ಅವರನ್ನು ತೆಗೆಯಬೇಕೆಂಬ ಮಹಾಭಿಯೋಗ ಪ್ರಸ್ತಾವವನ್ನು ಲೋಕಸಭೆ ಮತ್ತು ರಾಜ್ಯಸಭೆ ಮೂರನೆಯ ಎರಡರಷ್ಟು ಬಹುಮತದಿಂದ ಒಪ್ಪಬೇಕು. ಆದರೆ, ಚುನಾವಣಾ ಆಯುಕ್ತರನ್ನು ತೆಗೆಯುವುದು ಸುಲಭ. ರಾಷ್ಟ್ರಪತಿಯವರ ಆದೇಶವೇ ಸಾಕು. ಮುಖ್ಯ ಆಯುಕ್ತರು ಶಿಫಾರಸು ಮಾಡಿ ರಾಷ್ಟ್ರಪತಿಯವರಿಗೆ ಕಳಿಸಬೇಕು.
ಚುನಾವಣಾ ಆಯುಕ್ತರಾಗಿದ್ದ ನವೀನ್ ಚಾವ್ಲಾ ಕಾಂಗ್ರೆಸ್ ಪಕ್ಷಪಾತಿಯೆಂದೂ ಅವರನ್ನು ತೆಗೆದು ಹಾಕಬೇಕೆಂದು ಅಂದಿನ ಮುಖ್ಯಚುನಾವಣಾ ಆಯುಕ್ತ ಎನ್. ಗೋಪಾಲಸ್ವಾಮಿ 2009ರಲ್ಲಿ ರಾಷ್ಟ್ರಪತಿಯವರಿಗೆ ಶಿಫಾರಸು ಮಾಡಿದ್ದುಂಟು. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿತ್ತು. ಕಾಂಗ್ರೆಸ್ ಪಕ್ಷದವರೇ ಆಗಿದ್ದ ಪ್ರತಿಭಾ ಪಾಟೀಲ್ ರಾಷ್ಟ್ರಪತಿಯಾಗಿದ್ದರು. ಶಿಫಾರಸನ್ನು ಅವರು ತಿರಸ್ಕರಿಸಿದ್ದರು. ಅತ್ಯಂತ ಹಿರಿಯ ಚುನಾವಣಾ ಆಯುಕ್ತರಾಗಿದ್ದ ಕಾರಣ ಗೋಪಾಲಸ್ವಾಮಿ ನಿವೃತ್ತಿಯ ನಂತರ ನವೀನ್ ಚಾವ್ಲಾ ಮುಖ್ಯ ಆಯುಕ್ತರಾದರು.
ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಮೂರೇ ತಿಂಗಳಿನಲ್ಲಿ ಅಂದರೆ ಕಳೆದ ಆಗಸ್ಟ್ ನಲ್ಲಿ ಕೇಂದ್ರ ಸರ್ಕಾರ ಅಶೋಕ್ ಲವಾಸಾ ಕುರಿತು ಈ ತನಿಖೆಗೆ ಮುಂದಾಯಿತು. ಸೆಪ್ಟಂಬರ್ ತಿಂಗಳಿನಲ್ಲಿ ಲವಾಸಾ ಅವರ ಪತ್ನಿ ನಾವೆಲ್ ಅವರಿಗೆ ಆದಾಯ ತೆರಿಗೆ ಇಲಾಖೆ ನೋಟೀಸುಗಳನ್ನು ನೀಡಿದ್ದು ಸುದ್ದಿಯಾಯಿತು. ತಾವು ನಿರ್ದೇಶಕರಾಗಿದ್ದ ಹಲವು ಕಂಪನಿಗಳಿಂದ ಪಡೆದ ಸಂಭಾವನೆ ಕುರಿತು ನಾವೆಲ್ ಸಲ್ಲಿಸಿದ್ದ ಆದಾಯ ತೆರಿಗೆ ಪಾವತಿಯಲ್ಲಿ ವ್ಯತ್ಯಾಸಗಳಿವೆ ಎಂದು ನೋಟೀಸಿನಲ್ಲಿ ಆಪಾದಿಸಲಾಗಿತ್ತು. ಸೆಪ್ಟಂಬರ್ ಒಂಬತ್ತರಂದು ಬೆಳಿಗ್ಗೆ ಹನ್ನೊಂದರಿಂದ ರಾತ್ರಿ ಒಂಬತ್ತರ ತನಕ ನಾವೆಲ್ ಅವರನ್ನು ಆದಾಯ ತೆರಿಗೆ ಇಲಾಖೆ ಪ್ರಶ್ನಿಸಿತ್ತು. ಈ ಅವಧಿಯಲ್ಲಿ ಮಹಿಳಾ ಅಧಿಕಾರಿಗಳನ್ನೂ ಇರಿಸುವ ಸೌಜನ್ಯ ತೋರಲಿಲ್ಲ.
ಆ ನಂತರ ಅಶೋಕ್ ಲವಾಸಾ ಅವರ ಸೋದರಿ ಮಕ್ಕಳ ವೈದ್ಯೆ ಡಾ. ಶಕುಂತಲಾ ಲವಾಸಾ ಹರಿಯಾಣದಲ್ಲಿ 1.86 ಕೋಟಿ ರುಪಾಯಿಗಳಿಗೆ ಮನೆಯೊಂದನ್ನು ಖರೀದಿಸಿದ ವ್ಯವಹಾರಕ್ಕೆ ಸಂಬಂಧಿಸಿದಂತೆ ನೋಟೀಸು ಪಡೆದಿದ್ದಾರೆ. ಮಗ ಅಬೀರ್ ಲವಾಸಾ ಅವರ ಮೇಲೂ ಆದಾಯ ತೆರಿಗೆ ತಕರಾರುಗಳು ಎದ್ದಿವು. ಈ ಪೈಕಿ ಕೆಲವು ವ್ಯವಹಾರಗಳು 2008-09ರ ಹಣಕಾಸು ವರ್ಷಕ್ಕೆ ಸಂಬಂಧಿಸಿವೆ.
ಮತ್ತೆ ಎದ್ದಿದೆ ಆಯೋಗದ ಸ್ವಾಯತ್ತೆಯ ಪ್ರಶ್ನೆ:
ಚುನಾವಣೆ ಆಯೋಗದ ಸ್ವಾಯತ್ತತೆ ಕುರಿತು ವಿಶೇಷವಾಗಿ 2019ರ ಲೋಕಸಭಾ ಚುನಾವಣೆಗಳ ಹೊತ್ತಿನಿಂದ ತೀವ್ರ ಆತಂಕಗಳು ಪ್ರಕಟವಾಗಿವೆ. ಆಯೋಗದ ತೀರ್ಮಾನಗಳು, ಕೆಲಸ ಕಾರ್ಯಗಳ ಮೇಲೆ ಬಿಜೆಪಿಯ ಪ್ರಭಾವ ಇದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಅಶೋಕ್ ಲವಾಸಾ ಕೇಂದ್ರ ಸರ್ಕಾರದಲ್ಲಿ ಕಾರ್ಯದರ್ಶಿಯಾದ ನಂತರ ಅವರ ಪತ್ನಿ ಹಲವಾರು ಕಂಪನಿಗಳ ಆಡಳಿತ ಮಂಡಳಿಯಲ್ಲಿ ಸ್ವತಂತ್ರ ನಿರ್ದೇಶಕಿಯಾದರು ಎಂದು ಆಪಾದಿಸಲಾಗಿದೆ. ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಒಂದನೆಯ ದರ್ಜೆಯ ಅಧಿಕಾರಿಯಾಗಿ 28 ವರ್ಷಗಳ ಸೇವೆಯ ನಂತರ ಆಕೆ 2005ರಲ್ಲಿ ನಿವೃತ್ತಿ ಹೊಂದಿದ್ದರು.
ಆಶೋಕ್ ಅವರ ಮಗಳು ಆವ್ನಿ ಲವಾಸ ಜಮ್ಮು ಕಾಶ್ಮೀರ ಕೇಡರ್ ನ ಐ.ಎ.ಎಸ್. ಅಧಿಕಾರಿ. ಲದ್ದಾಖ್ ನ ಲೇಹ್ ಜಿಲ್ಲಾ ಚುನಾವಣಾಧಿಕಾರಿಯಾಗಿ ಮಾದರಿ ಚುನಾವಣಾ ನೀತಿ ಸಂಹಿತೆಯನ್ನು ಬಿಜೆಪಿ ಉಲ್ಲಂಘಿಸಿದ್ದನ್ನು ಆಕೆ ಎತ್ತಿ ತೋರಿದ್ದರು. ಲೋಕಸಭಾ ಚುನಾವಣೆಗಳ ಸಂದರ್ಭದಲ್ಲಿ ಬಿಜೆಪಿಗೆ ಅನುಕೂಲಕರ ವರದಿಗಳನ್ನು ಬರೆಯುವಂತೆ ಜಮ್ಮು-ಕಾಶ್ಮೀರ ಬಿಜೆಪಿ ಅಧ್ಯಕ್ಷ ರವೀಂದರ್ ರೈನಾ ಮತ್ತು ಶಾಸಕ ವಿಕ್ರಮ್ ರಂಧಾವ ಅವರು ಸುದ್ದಿಗಾರರಿಗೆ ಲಂಚ ನೀಡಿದ್ದ ದೂರಿನ ಕುರಿತು ಆಕೆ ವಿಚಾರಣೆಗೆ ಆದೇಶ ನೀಡಿದ್ದರು. ಲಂಚದ ಆರೋಪದಲ್ಲಿ ಮೇಲ್ನೋಟಕ್ಕೆ ಸತ್ಯಾಂಶ ಇದೆಯೆಂದು ಕಂಡು ಬಂದಿತ್ತು. ಆವ್ನಿ ಈ ಸಂಬಂಧ ಎಫ್. ಐ. ಆರ್. ದಾಖಲಿಸಿದ್ದರು. ಲೇಹ್ ಜಿಲ್ಲಾಧಿಕಾರಿ ಹುದ್ದೆಯಿಂದ ಆಕೆಯ ಎತ್ತಂಗಡಿ ಆಯಿತು.
ಹರಿಯಾಣಾ ಕಾಡರ್ ನ ಐ.ಎ.ಎಸ್. ಅಧಿಕಾರಿ ಅಶೋಕ್ ಲವಾಸಾ, ಕೇಂದ್ರದ ಸೇವೆಯಲ್ಲಿ ಹಲವು ಮಂತ್ರಾಲಯಗಳ ಜಂಟಿ, ಹೆಚ್ಚುವರಿ, ವಿಶೇಷ ಕಾರ್ಯದರ್ಶಿಯೂ ಆಗಿದ್ದರು. 2016ರಲ್ಲಿ ಹಣಕಾಸು ಇಲಾಖೆಯ ಕಾರ್ಯದರ್ಶಿಯಾದರು. ನಿವೃತ್ತಿಯ ನಂತರ 2018ರಲ್ಲಿ ಅವರನ್ನು ಚುನಾವಣಾ ಆಯೋಗದ ಸದಸ್ಯರನ್ನಾಗಿ ನೇಮಕ ಮಾಡಲಾಯಿತು. ಮುಖ್ಯ ಆಯುಕ್ತ ಸುನಿಲ್ ಅರೋಡ ಮತ್ತು ಆಯುಕ್ತ ಸುಶೀಲ್ ಚಂದ್ರ ಅವರು ಆಯೋಗದ ಇನ್ನಿಬ್ಬರು ಸದಸ್ಯರು.
ಆಯೋಗವು ವಿಶ್ವಾಸಾರ್ಹತೆಯ ಬಿಕ್ಕಟ್ಟು ಎದುರಿಸುತ್ತಿದ್ದು, ಚುನಾವಣಾ ಪ್ರಕ್ರಿಯೆಯ ಪ್ರಾಮಾಣಿಕತೆಯನ್ನು ಅಪಾಯಕ್ಕೆ ಒಡ್ಡಿದೆ. ಬಿಜೆಪಿಯಿಂದ ಚುನಾವಣೆ ಸಂಹಿತೆಯು ತೀವ್ರ ಅನಾದರ ಮತ್ತು ನೇರ ಉಲ್ಲಂಘನೆಗೆ ಕುರುಡಾಗಿದೆ ಎಂದು ಕಳವಳ ವ್ಯಕ್ತಪಡಿಸಿ 66 ಮಂದಿ ಹಿರಿಯ ನಿವೃತ್ತ ಅಧಿಕಾರಿಗಳು ಲೋಕಸಭಾ ಚುನಾವಣೆಗೆ ಮುನ್ನ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಚುನಾವಣೆಗಳ ಹೊಸ್ತಿಲಿನಲ್ಲಿ ಕ್ಷಿಪಣಿ ನಿರೋಧಕ ಪರೀಕ್ಷೆ, ಮೋದೀಜೀ ಕೀ ಸೇನಾ ಎಂಬ ಯೋಗಿ ಆದಿತ್ಯನಾಥರ ಹೇಳಿಕೆ, ಹಾಗೂ ನಮೋ ಟೀವಿಯ ಪ್ರಚಾರ ಕುರಿತು ಆಯೋಗ ಉಸಿರೆತ್ತಲಿಲ್ಲ. ಪಶ್ಚಿಮ ಬಂಗಾಳದಲ್ಲಿ ಪ್ರಚಾರವನ್ನು ಒಂದು ದಿನ ಮೊದಲೇ ಮುಕ್ತಾಯಗೊಳಿಸಲಾಯಿತು. ಸುಪ್ರೀಂ ಕೋರ್ಟಿನಲ್ಲಿ ಎಲೆಕ್ಟರಲ್ ಬಾಂಡ್ಸ್ ಕುರಿತು ಆಯೋಗ ತಿಪ್ಪರಲಾಗ ಹಾಕಿತ್ತು. ಲವಾಸಾ ಅವರ ಭಿನ್ನಮತದ ದಾಖಲೆಗಳನ್ನು ಮಾಹಿತಿ ಹಕ್ಕು ಅರ್ಜಿಗಳಡಿ ಬಯಲು ಮಾಡಲು ಆಯೋಗ ನಿರಾಕರಿಸಿತ್ತು.
ಲವಾಸಾ ತಪ್ಪಿತಸ್ಥರೇ ಎಂದು ಒಂದು ಕ್ಷಣ ಭಾವಿಸಿದರೂ, ಅವರು ಮತ್ತು ಅವರ ಕುಟುಂಬದ ಸದಸ್ಯರ ವಿಚಾರಣೆಗೆ ಗುರಿ ಮಾಡಿರುವ ಸ್ವರೂಪ ಮತ್ತು ಕಾಲ ಎರಡಕ್ಕೂ ಪ್ರತೀಕಾರದ ವಾಸನೆ ಅಡರಿದೆ. ಜನತಂತ್ರ ವ್ಯವಸ್ಥೆಯ ಆಧಾರ ಸ್ತಂಭಗಳಲ್ಲಿ ಒಂದಾದ ಚುನಾವಣಾ ಆಯೋಗದ ತಳಪಾಯವನ್ನು ಅಲುಗಿಸಲಾಗುತ್ತಿದೆ.