ರಣಹದ್ದು ಎಂದ ಕೂಡಲೇ ರಾಮನಗರ ಬೆಟ್ಟ ನೆನಪಾಗುತ್ತದೆ. ಇಲ್ಲಿ ಗದಗ್ ಜಿಲ್ಲೆಯ ಗಜೇಂದ್ರಗಡದ ಬೆಟ್ಟದ ಸಾಲಿನಲ್ಲೂ ಹಲವು ರಣಹದ್ದುಗಳಿವೆ ಎಂಬುದು ಗಮನಾರ್ಹ. ಹದ್ದುಗಳು ಸಾಮಾನ್ಯ, ಆದರೆ ರಣಹದ್ದುಗಳು ಉತ್ತರ ಕರ್ನಾಟಕದ ಭಾಗದಲ್ಲಂತೂ ತೀರ ವಿರಳ. ಮೊದಲು ಗಜೇಂದ್ರಗಡದ ಬೆಟ್ಟದಲ್ಲಿರುತ್ತಿದ್ದವು. ನಂತರ ಕಾಣೆಯಾದವು. ಈಗ ಮತ್ತೆ 20 ವರ್ಷಗಳ ನಂತರ ಕಾಣಿಸತೊಡಗಿವೆ.
ಇಲ್ಲಿ ಕಂಡ ರಣಹದ್ದುಗಳನ್ನು ವೀಕ್ಷಿಸಲು ಹಾಗೂ ಅಭ್ಯಸಿಸಲು ವಿದ್ಯಾರ್ಥಿಗಳು ಹಾಗೂ ಸಂಶೋಧಕರು ಆಗಮಿಸುತ್ತಿದ್ದಾರೆ. ಇವರೆಲ್ಲರಿಗೂ ಮಾರ್ಗದರ್ಶನ ಮಾಡುತ್ತಿರುವವರು ಜೀವ ವೈವಿಧ್ಯ ಸಂಶೋಧನಾ ವಲಯದಲ್ಲಿ ತಮ್ಮದೇ ಛಾಪು ಮೂಡಿಸಿ ದೇಶ ವಿದೇಶದಲ್ಲೆಲ್ಲ ಯಂಗ್ ರಿಸರ್ಚರ್ ಎಂದು ಮನ್ನಣೆಗಳಿಸಿದ ರೋಣದ ಮಂಜುನಾಥ ನಾಯಕ.
ಪ್ರತಿಧ್ವನಿ ತಂಡಕ್ಕೆ ರಣಹದ್ದಿನ ಬಗ್ಗೆ ಮಂಜುನಾಥ ವಿವಿಧ ವಿಷಯಗಳನ್ನು ತಿಳಿಸಿದರು. ಅಕ್ಷಿಪಿಟ್ರಿಡೆ ಕುಟುಂಬಕ್ಕೆ ಸೇರಿದ ಅಳಿವಿನಂಚಿನಲ್ಲಿರು ವಿರಳಜಾತಿಯ ರಣಹದ್ದು. ಇದರ ವೈಜ್ಞಾನಿಕ ಹೆಸರು: ಜಿಪ್ಸ ಇಂಡಿಕಸ್, ಸಾಮಾನ್ಯ ಹೆಸರು: ಇಂಡಿಯನ್ ವಲ್ಚರ್ ಅಥವಾ ಇಂಡಿಯನ್ ಲಾಂಗ್ ಬಿಲ್ಡ್ ವಲ್ಚರ್. ಇದು ಈಗ ಗಜೇಂದ್ರಗಡ ಬೆಟ್ಟವಲಯದಲ್ಲಿ ಪತ್ತೆಯಾಗಿದ್ದು ಪಕ್ಷಿಪ್ರೇಮಿಗಳಲ್ಲಿ ಸಂತಸತಂದಿದೆ. ಇದು ಭಾರತ, ನೇಪಾಳ ಪಾಕಿಸ್ತಾನ ಮೂಲದ ರಣಹದ್ದಾಗಿದೆ.
ರಣಹದ್ದು! ಈ ಹೆಸರು ಕೇಳಿದರೇ ಸಾಮಾನ್ಯವಾಗಿ ಭಯಪಡುತ್ತಾರೆ. 6.5 ಯಿಂದ 7.8 ಅಡಿ ಗಾತ್ರಹೊಂದಿದ್ದು ಆಯಾಸವಿಲ್ಲದೆ ಹಾರಾಟ ನಡೆಸುತ್ತವೆ. ರೆಕ್ಕೆಬಡಿಯದೇ ಆಕಾಶದಲ್ಲಿ ತಾಸುಗಟ್ಟಲೆ ಸುತ್ತುಹೊಡೆಯಬಲ್ಲದು. ಇದರ ದೃಷ್ಟಿ ಮಾನವನಿಗಿಂದ 8 ಪಟ್ಟು ಸೂಕ್ಷ್ಮ ಅಂದರೆ ಇವು 3 ಅಡಿ ಎತ್ತರದ ಪ್ರಾಣಿಗಳನ್ನು ನಾಲ್ಕು ಮೈಲಿಯಷ್ಟು ಎತ್ತರದಿಂದಲೇ ಸ್ಪಷ್ಟವಾಗಿ ಗುರಿತಿಸಬಲ್ಲವು. ಸತ್ತ ಸಾಕು ಮತ್ತು ವನ್ಯ ಪ್ರಾಣಿಗಳು ಇವುಗಳ ಆಹಾರ. ಸತ್ತ ಕೊಳೆತ ಪ್ರಾಣಿಗಳ ಸುತ್ತ ಗುಂಪುಗುಂಪಾಗಿ ತಿನ್ನುವುದು ಸಾಮಾನ್ಯ. ಇಂತಹ ಸತ್ತ-ಕೊಳೆತ ಪ್ರಾಣಿಗಳನ್ನು ಭಕ್ಷಿಸುವ ಮೂಲಕ ರಣಹದ್ದುಗಳು ಊರನ್ನು ದುರ್ವಾಸನೆಯಿಂದಷ್ಟೆ ಅಲ್ಲದೆ ಸತ್ತ ಪ್ರಾಣಿಗಳಿಂದ ಸಾಂಕ್ರಾಮೀಕ ರೋಗಗಳ ಹರಡದಂತೆ ನೈಸರ್ಗಿಕ scavengerಗಳಾಗಿ ಪರಿಸರವನ್ನು ಸ್ವಚ್ಚವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ರಣಹದ್ದುಗಳು 12 ಕಿ.ಮೀ ಗಿಂತಲೂ ಎತ್ತರಕ್ಕೆ ಹಾರುತ್ತವೆ ಅಲ್ಲದೇ ತಾಸಿಗೆ 80 ಕಿ.ಮೀ ವೇಗದಲ್ಲಿ ಸಾವಿರಾರು ಕಿ.ಮಿ ಸುತ್ತಳತೆಯಲ್ಲಿ ಗಸ್ತು ಹೊಡೆಯತ್ತವೆ. ಆಹಾರ ಕಂಡೊಡನೆ ಗಂಟೆಗೆ 120 ಕಿ.ಮೀ ವೇಗದಲ್ಲಿ ನೆಲಕ್ಕೆ ಇಳಿದು ಶವಗಳ ಸುತ್ತ ಪ್ರತ್ಯಕ್ಷವಾಗುತ್ತವೆ. ಇವು ಬೆಟ್ಟಗುಡ್ಡಗಳ ಎತ್ತರ ಸುರಕ್ಷಿತ ಬಂಡೆಗಳ ಮೇಲೆ ಗೂಡು ನಿರ್ಮಿಸುತ್ತವೆ. ಎತ್ತರ ಮರದ ಮೇಲು ಕೂಡ ಗೂಡು ನಿರ್ಮಿಸಬಲ್ಲವು.
ಡೈಕ್ಲೋಫೀನಾಕ್ ನಿಂದ ಅವಸಾನದ ಹಾದಿ
ಸುಮಾರು 2 ದಶಕಗಳ ಹಿಂದೆ ಅಪಾರ ಸಂಖ್ಯೆಯಲ್ಲಿದ್ದ ರಣಹದ್ದುಗಳ ಜಾನುವಾರುಗಳಿಗೆ ಬಳಸುತ್ತಿದ್ದ ಡೈಕ್ಲೋಫೀನಾಕ್ ಔಷಧಿಯಿಂದ ಹದ್ದುಗಳ ಆರೋಗ್ಯದ ಮೇಲಾಗುವ ದುಷ್ಪರಿಣಾಮದಿಂದಾಗಿ ಗಣನೀಯವಾಗಿ ಕುಸಿದು ಅಳಿವಿಂಚು ಸೇರುತ್ತಿದೆ. 1990ರ ದಶಕದವರೆಗೂ ಸಾವಿರಾರು ಸಂಖ್ಯೆಯಲ್ಲಿದ್ದ ಉದ್ದ ಕೊಕ್ಕಿನ ರಣಹದ್ದುಗಳು ಹೀಗೆ ಏಕಾಏಕಿ ಮಾಯಾವಾಗಲು ಹಲವು ಕಾರಣಗಳಿವೆ. ಅವುಗಳಲ್ಲಿ ಡೈಕ್ಲಫಫಿನಾಕ್ ರಸಾಯನಿಕ ಪ್ರಮುಖವಾದುದು. ರಣಹದ್ದುಗಳ ಸಂರಕ್ಷಣೆಗಾಗಿ ಸರಕಾರ 4 ವರ್ಷದಿಂದ ಡೈಕ್ಲೋಫಿನಾಕ್ ಬಳಕೆಗೆ ನಿಷೇಧ ಹೆರಿದ್ದು ಗಮನಾರ್ಹ ವಿಷಯ.
ಸತ್ತ ಪ್ರಾಣಿಗಳ ಮಾಂಸ ತಿನ್ನುವುದು ರಣಹದ್ದುಗಳ ಆಹಾರಕ್ರಮ. ಜಾನುವಾರುಗಳಿಗೆ ನೋವು ನಿವಾರಕ ಇಂಜೆಕ್ಷನ್ ಆಗಿ ಡೈಕ್ಲೋಫಿನಾಕ್ ಔಷಧವನ್ನು ನೀಡಲಾಗುತ್ತಿತ್ತು. ಈ ಇಂಜೆಕ್ಷನ್ ಪಡೆದ ಜಾನುವಾರುಗಳು ಮೃತಪಟ್ಟ ಸಂದರ್ಭ ಅವುಗಳನ್ನು ರಣಹದ್ದುಗಳು ತಿನ್ನುತಿದ್ದವು. ಆದರೆ ಡೈಕ್ಲೋಫಿನಾಕ್‌ನಿಂದಾಗಿ ಹದ್ದುಗಳ ಕಿಡ್ನಿ ಸೇರಿದಂತೆ ಹಲವು ಅಂಗಗಳು ಹಾನಿಗೊಂಡು, ಬಹು ಅಂಗಾಂಗ ವೈಫಲ್ಯದಿಂದ ಅವು ಮೃತಪಡುತ್ತಿದ್ದವು, ಈ ಸತ್ಯ ಅರಿಯುವ ಹೊತ್ತಿಗೆ ದೇಶದಲ್ಲಿ ಹದ್ದುಗಳ ಸಂಖ್ಯೆ ಕೆಲವೇ ಸಾವಿರಕ್ಕೆ ಇಳಿದಿತ್ತು. ನಂತರ ಎಚ್ಚೆತ್ತ ಸರ್ಕಾರ ಈ ಔಷಧ ಬಳಕೆಗೆ ನಿರ್ಬಂಧ ಹೇರಿತು.
ಸಂತಾನೋತ್ವತ್ತಿ ಯಾವಾಗ?
ಉದ್ದ ಕೊಕ್ಕಿನ ರಣಹದ್ದುಗಳು ನವೆಂಬರ್ ನಿಂದ ಮಾರ್ಚವರೆಗೆ ಸಂತಾನೋತ್ಪತ್ತಿಯಲ್ಲಿ ತೊಡಗುತ್ತವೆ. ಒಂದು ಹದ್ದು ವರ್ಷಕ್ಕೆ ಒಂದು ಮೊಟ್ಟೆಯನ್ನು ಮಾತ್ರ ಇಡುತ್ತದೆ.
ನಾನು ಕಳೆದ ವರ್ಷ 2019ರಲ್ಲಿ ಮಾರ್ಚತಿಂಗಳಲ್ಲಿ ರಣಹದ್ದು ಇರುವಿಕೆಯನ್ನು ಪತ್ತೆ ಹಚ್ಚಿದ ಆಧಾರದ ಮೇಲೆ ಕುವೆಂಪು ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳಾದ ಕೇಶವ ಮೂರ್ತಿ, ಕಾರ್ತಿಕ ಎನ್ ಜೆ ಮತ್ತು ಶಿರಸಿ ಅರಣ್ಯಕಾಲೇಜಿನ ವಿದ್ಯಾರ್ಥಿಗಳು ಇತ್ತಿಚೇಗೆ ನನ್ನ ಜೊತೆಗೂಡಿ ಗಜೇಂದ್ರಗಡ ಬೆಟ್ಟವಲಯಗಳ ವಿವಿಧ ಭಾಗಗಳಲ್ಲಿ ಸರ್ವೆಮಾಡಿದಾಗ ಬೆಟ್ಟಗಳಲ್ಲಿ ರಣಹದ್ದುಗಳ 4- ಗೂಡುಗಳು ಪತ್ತೆ ಆಗಿದ್ದು ಸಂತಸದ ಸಂಗತಿ. ರಾಮದೇವರ ಬೆಟ್ಟದಲ್ಲಿರುಂತೆ ಈ ಭಾಗದಲ್ಲಿಯೂ ಕೂಡಾ ರಣಹದ್ದುಗಳ ವಾಸಕ್ಕೆ ಮತ್ತು ಸಂತಾನಭಿವೃಧಿಗೆ ಪೂರಕವಾಗಿದ್ದು ರಣಹದ್ದುಗಳ ಸಂತತಿ ಉಳಿಸಿ ಸಂರಕ್ಷಿಸುವುದು ಅಗತ್ಯ.
ಈ ಬೆಟ್ಟಗಳ ಮೇಲೆ ಮೂರು ಋತುಗಳಲ್ಲಿ ಬೆಳಿಯುವ ಬೇರೆ ಬೇರೆ ಅಪರೂಪದ ಔಷಧೀಯ ಸಸ್ಯ ಸಂಪತ್ತು ಕೂಡಾ ಇದೆ. ರೋಣದ ಜೀವವೈವಿಧ್ಯ ಸಂಶೋಧಕರಾದ ಮಂಜುನಾಥ ನಾಯಕ, ಜಯಪ್ರಕಾಶ ಬಳಗಾನೂರ, ಪರಿಸರ ಸಂರಕ್ಷಕರು ಇವರೊಂದಿಗೆ ಕುವೆಂಪು ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳಾದ ಕೇಶವ ಮೂರ್ತಿ, ಕಾರ್ತಿಕ್ ಎನ್.ಜೆ ಮತ್ರು ಶಿರಸಿ ಅರಣ್ಯ ಕಾಲೇಜಿನ ವಿದ್ಯಾರ್ಥಿಗಳಾದ ನಾಗರಾಜ ಗೋಣಿ, ಮಂಜುನಾಥ ರಾಹೂತರ ಈ ಬೆಟ್ಟಗಳವಲಯದಲ್ಲಿ 3ದಿನಗಳ ಕಾಲ ಇದ್ದು ಅಧ್ಯಯನ ನಡೇಸಿ ಸರ್ವೆಮಾಡಿದಾಗ 5-6 ರಣಹದ್ದಿನ ಗೂಡುಗಳನ್ನು ದಾಖಲಿಸಿದ್ದಾರೆ. ಇವಷ್ಟೆ ಅಲ್ಲದೆ ಬೇರೆ ಬೇರೆ ರ‍್ಯಾಪ್ಟರ್ಸಗಳಾದ ಶಿಖ್ರಾ, ಫಾಲ್ಕನ್, ಕೆಸ್ಟ್ರಲ್, ಬೊನೆಲಿಸ್ ಇಗಲ್ ಪಕ್ಷಿಗಳನ್ನು ದಾಖಲಿಸಿದ್ದಾರೆ.
“ಈಗಾಗಲೆ ಅಳಿವಿನ ಭೀತಿಯೆದುರುಸುತ್ತಿರುವ ರಣಹದ್ದುಗಳು ಪರಿಸರ ಸಮತೋಲನ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ಅವುಗಳ ಸಂರಕ್ಷಣೆ ಮುಖ್ಯವಾಗಿದ್ದು ಅರಣ್ಯ ಇಲಾಖೆಯ ಜತೆ ಸ್ಥಳೀಯ ಸಾರ್ವಜನಿಕರ ಸಹಕಾರ ಕೂಡಾ ಅವಶ್ಯ. ಗಜೇಂದ್ರಗಡ, ನೆಲ್ಲೂರ, ಪ್ಯಾಟಿ, ಮುಶಿಗೇರಿ, ನಾಗೆಂದ್ರಗಡ, ಕಾಲಕಾಲೇಶ್ವರ ಬೆಟ್ಟ, ಶಾಂತೇಶ್ವರ ಬೆಟ್ಟಗಳು ರಣಹದ್ದು ಸೇರಿದಂತೆ ಇತರ ಹದ್ದುಗಳಿಗೆ ಸೂಕ್ತ ನೈಸರ್ಗಿಕ ಆವಾಸ ಸ್ಥಾನ. ಇಲ್ಲಿ ಈಗಾಗಲೆ ಅಳಿವಿಂಚಿನಲ್ಲಿರುವ ತೋಳ ಹಾಗೂ ಕತ್ತೆಕಿರುಬಗಳೂ ಇದ್ದು ಸಂರಕ್ಷಣೆಯ ಕ್ರಮಗಳು ಅವಶ್ಯವಾಗಿದೆ”, ಎನ್ನುತ್ತಾರೆ ರೋಣದ ಸಂಶೋಧಕ ಜಯಪ್ರಕಾಶ ಬಳಗಾನೂರ.