ಸ್ಪರ್ಧೆಗೆ ಬಿದ್ದವರಂತೆ ವಿಮಾನ ಯಾನ ಸಂಸ್ಥೆಗಳು ಸ್ಟ್ಯಾಂಡಪ್ ಕಮೇಡಿಯನ್ ಕುನಾಲ್ ಕಮ್ರಾಗೆ ನಿಷೇಧ ಹೇರಿವೆ. ಇದೇ ಅರ್ನಾಬ್ ಗೋಸ್ವಾಮಿ ಈ ಹಿಂದೆ ವಿಮಾನ ಹಾರಾಟ ಸಂದರ್ಭದಲ್ಲಿಯೇ ತಮ್ಮ ವರದಿಗಾರರನ್ನು ಕಳುಹಿಸಿ ತೇಜಸ್ವಿ ಯಾದವ್ ಮತ್ತು ಶಶಿ ತರೂರ್ ಅವರ ಸಂದರ್ಶನ ಮಾಡಿಸಿದ್ದಾಗ ಈ ವಿಮಾನಯಾನ ಸಂಸ್ಥೆಗಳು ನಿದ್ದೆ ಮಾಡುತ್ತಿದ್ದವಾ?
ಆ ಸಂದರ್ಭದಲ್ಲಿ ಸಹ ಪ್ರಯಾಣಿಕರಿಗೆ ತೊಂದರೆಯಾಗಿರಲಿಲ್ಲವಾ? ವಿಮಾನದ ಸದ್ದಿಗಿಂತಲೂ ಹೆಚ್ಚು ಸದ್ದು ಮಾಡಿ ಕಿರುಚಾಡುತ್ತಾ ಇಂಟರ್ ವ್ಯೂ ಮಾಡಿದ್ದ ಅರ್ನಾಬ್ ಗೋಸ್ವಾಮಿಯವರ ಚಾನೆಲ್ ನ ಸಿಬ್ಬಂದಿಯ ಶಬ್ಧ ಈ ವಿಮಾನ ಯಾನ ಸಂಸ್ಥೆಗಳಿಗೆ ಕೇಳಿರಲಿಲ್ಲವೇ? ಆಗ ಇವುಗಳ ಸಿಬ್ಬಂದಿ ಕಿವುಡರಾಗಿದ್ದರಾ? ಆ ಸಂದರ್ಭದಲ್ಲಿ ನಿಷೇಧ ಹೇರುವಂತಹ ಕಾನೂನುಗಳು ಇರಲಿಲ್ಲವೇ? ಹೀಗೆ ಹತ್ತು ಹಲವಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ.
ಅಷ್ಟಕ್ಕೂ ಕುನಾಲ್ ಕಮ್ರಾ ಇಂಡಿಗೋ ವಿಮಾನದಲ್ಲಿ ಅರ್ನಾಬ್ ಗೋಸ್ವಾಮಿಗೆ ಮಾನಹಾನಿಯಾಗುವಂತಹ ಪ್ರಶ್ನೆಗಳನ್ನೇನೂ ಕೇಳಿಲ್ಲ. ಅರ್ನಾಬ್ ಮುಂಬೈನಿಂದ ಲಕ್ನೋಗೆ ಪ್ರಯಾಣ ಮಾಡುತ್ತಿದ್ದ ಇಂಡಿಗೋ ವಿಮಾನದಲ್ಲಿಯೇ ಕಮ್ರಾ ಪ್ರಯಾಣಿಸುತ್ತಿದ್ದರು. ಆಗ ಅರ್ನಾಬ್ ರಿಗೆ ಕಮ್ರಾ ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದಾರೆ. ಆದರೆ, ಅರ್ನಾಬ್ ಅದಕ್ಕೆ ಉತ್ತರ ನೀಡದೇ ಮೌನಕ್ಕೆ ಶರಣಾಗಿದ್ದಾರೆ. ಆಗಲೂ ಬಿಡದ ಕಮ್ರಾ ಏನಾದರೂ ಮಾಡಿ ಅರ್ನಾಬ್ ಅವರ ಬಾಯಿ ಬಿಡಿಸಬೇಕೆಂದು ನೀವು ಪತ್ರಕರ್ತರೇ? ಈಗೇಕೆ ಮೌನವಾಗಿದ್ದೀರಿ? ನನ್ನ ಪ್ರಶ್ನೆಗಳಿಗೆ ಉತ್ತರಿಸಿ ಎಂದು ಕೇಳಿಕೊಂಡಿದ್ದಾರೆ.
ಆದರೆ, ನಿಮಗೆ ತಲೆ ಸರಿ ಇಲ್ಲ ಎಂದು ಹೇಳಿದ ಅರ್ನಾಬ್ ತಮ್ಮ ಪಾಡಿಗೆ ತಾವು ಮೌನಕ್ಕೆ ಶರಣಾಗಿದ್ದರು. ಟಿವಿಯಲ್ಲಿ ಕುಳಿತು ಟಾಕ್ ಶೋನಲ್ಲಿ ಬಿಜೆಪಿಯವರನ್ನು ಹೊರತುಪಡಿಸಿ ತಾವೇ ಬಿಜೆಪಿ ಸರ್ಕಾರ ಎಂದು ಭಾವಿಸಿ ಪ್ರತಿಪಕ್ಷದ ಎಲ್ಲರನ್ನೂ ತರಾಟೆಗೆ ತೆಗೆದುಕೊಳ್ಳುವ ಅರ್ನಾಬ್ ಗೆ ಕಮ್ರಾ ಕೇಳಿದ ಒಂದೆರಡು ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗದಿರುವುದು ಏಕೆ? ಇಡೀ ಭಾರತ ದೇಶವೇ ತಮ್ಮ ಮೇಲೆ ಬಿದ್ದಿದೆ ಎಂಬಂತೆ ಟಿವಿ ಪರದೆಯಲ್ಲಿ ಅರಚಾಡುತ್ತಿದ್ದ ಅರ್ನಾಬ್ ವಿಮಾನದಲ್ಲಿ ಇಲಿಯಂತಾದದ್ದು ಏಕೆ? ಘಟಾನುಘಟಿ ರಾಜಕಾರಣಿಗಳು, ಅಧಿಕಾರಿಗಳನ್ನು ತಮ್ಮ ಮನಸಿಗೆ ಬಂದ ರೀತಿಯಲ್ಲಿ ಬಾಯಿ ಮುಚ್ಚಿಸುವ ಕಲೆಯನ್ನು ಕರಗತ ಮಾಡಿಕೊಂಡಿರುವ ಅರ್ನಾಬ್ ಗೆ ಕಮ್ರಾ ಬಾಯಿ ಮುಚ್ಚಿಸಲು ಸಾಧ್ಯವಾಗಲಿಲ್ಲವೇ?
ಅರ್ನಾಬ್ ವಿಮಾನದಲ್ಲಿ ಮೌನಕ್ಕೆ ಶರಣಾದದ್ದನ್ನು ನೋಡಿದರೆ ಜಾರಿಕೊಳ್ಳುವ ತಂತ್ರ ಎಂಬಂತೆ ಗೋಚರಿಸುತ್ತದೆ. ಅರ್ನಾಬ್ ಬಾಯಿ ಬಿಡಿಸಲು ಹರಸಾಹಸ ಪಟ್ಟು ಸಫಲರಾಗದ ಕಮ್ರಾ ಸಹ ಪ್ರಯಾಣಿಕರ ಕ್ಷಮೆಯನ್ನೂ ಯಾಚಿಸಿದ್ದಾರೆ. ಆದರೆ, ವಿಮಾನ ಪ್ರಯಾಣದ ನಂತರ ಅರ್ನಾಬ್ ತಮ್ಮ ಅಸಲಿಯತ್ತನ್ನು ಪ್ರದರ್ಶಿಸಿದ್ದಾರೆ. ಅದೆಂದರೆ ತಮ್ಮ ಪ್ರಭಾವವನ್ನು ಬೀರಿ ಕಮ್ರಾಗೆ ವಿಮಾನ ಪ್ರಯಾಣದ ಮೇಲೆ ನಿಷೇಧ ಹೇರುವಂತೆ ಮಾಡಿದ್ದಾರೆ. ಇದು ಒಂದು ರೀತಿಯ ಹೇಡಿತನವಲ್ಲದೇ ಮತ್ತಿನ್ನೇನು? ಸಣ್ಣ ಪ್ರಶ್ನೆಗೆ ಉತ್ತರಿಸಲಾಗದೇ, ಹಿಂಬಾಗಿಲ ಮೂಲಕ ಪ್ರಭಾವ ಬೀರಿ ಪ್ರಶ್ನಿಸಿದವನಿಗೇ ಶಿಕ್ಷೆ ಕೊಡಿಸುವ ಮಟ್ಟಕ್ಕೆ ಒಬ್ಬ ಪತ್ರಕರ್ತ ಇಳಿಯಬಾರದಿತ್ತು.
ಅರ್ನಾಬ್ ಗೋಸ್ವಾಮಿ ತಮಗೆ ಕಮ್ರಾ ಕಿರುಕುಳ ನೀಡಿದ್ದಾರೆ ಎಂದು ಭಾವಿಸಿದ್ದರೆ, ಕಮ್ರಾಗೆ ಅವರು ಮಾನಸಿಕ ಸ್ಥಿಮಿತ ಇಲ್ಲ ಎಂದು ಹೀಗಳೆದಿದ್ದು ಮಾನಹಾನಿ ಆಗಿಲ್ಲವೇ? ಇದೊಂದೇ ವಿಷಯವನ್ನು ಇಟ್ಟುಕೊಂಡು ಕಮ್ರಾ ಅರ್ನಾಬ್ ವಿರುದ್ಧ ಕಾನೂನು ಸಮರ ಸಾರಬಹುದಲ್ಲವೇ? ಕಮ್ರಾಗೆ ಮಾನಸಿಕ ಸ್ಥಿಮಿತ ಇಲ್ಲ ಎನ್ನುವುದಕ್ಕೆ ಅರ್ನಾಬ್ ಬಳಿ ಸಾಕ್ಷ್ಯ ಸಿಗುತ್ತದೆಯೇ?
ಇಂಡಿಗೋ, ಏರ್ ಇಂಡಿಯಾ, ಸ್ಪೈಸ್ ಜೆಟ್, ಗೋಏರ್ ಸಂಸ್ಥೆಗಳು ಕಮ್ರಾ ವಿಮಾನ ಪ್ರಯಾಣಕ್ಕೆ ನಿಷೇಧ ಹೇರಿವೆ.
ವಿಮಾನಯಾನ ಸಂಸ್ಥೆಗಳು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕೈಗೊಂಬೆಗಳಾಗಿ ವರ್ತಿಸುತ್ತಿವೆ ಎಂಬುದನ್ನು ಅವುಗಳ ಈ ನಿರ್ಧಾರ ಸಾಬೀತುಪಡಿಸುತ್ತದೆ. ಈ ಹಿಂದೆ ಇದೇ ಅರ್ನಾಬ್ ಗೋಸ್ವಾಮಿಯವರು ರಿಪಬ್ಲಿಕ್ ಟಿವಿಯ ವರದಿಗಾರರು ಹಲವಾರು ಮಂದಿ ಗಣ್ಯರನ್ನು ವಿಮಾನ ಹಾರಾಟದ ಸಂದರ್ಭದಲ್ಲಿಯೇ ಸಂದರ್ಶನ ಮಾಡಿದ್ದಾರೆ. ಆಗ ನಿಷೇಧ ಹೇರುವ ನಿರ್ಧಾರ ಇಲ್ಲದಿದ್ದುದು ಈಗೇಕೆ ಎಂಬ ಪ್ರಶ್ನೆಗಳು ಎಲ್ಲೆಡೆಯಿಂದ ಬರತೊಡಗಿವೆ. ಇದೇ ಗೋಸ್ವಾಮಿಯವರು ತಮ್ಮ ವರದಿಗಾರರನ್ನು ಕಳುಹಿಸಿ ವಿಮಾನದೊಳಗೆ ಸಂದರ್ಶನ ಮಾಡಿಸುವಾಗ ಸಹಪ್ರಯಾಣಿಕರಿಗೆ ತೊಂದರೆಯಾಗುತ್ತದೆ ಎಂಬ ಕನಿಷ್ಠ ಪ್ರಜ್ಞೆಯೂ ಇರಲಿಲ್ಲವೇ? ಈಗ ತಮಗೆ ತೊಂದರೆಯಾಯಿತು ಎಂಬ ಕಾರಣಕ್ಕೆ ಪ್ರಭಾವ ಬೀರಿ ಕಮ್ರಾ ಮೇಲೆ ನಿಷೇಧ ಹೇರುವಂತೆ ಮಾಡಿದ್ದಾರೆ. ಅದಕ್ಕೇ ಹೇಳುವುದು ಬುಡಕ್ಕೆ ಬೆಂಕಿ ಬಿದ್ದಾಗಲೇ ಗೊತ್ತಾಗುವುದು ಅದರ ನೋವು ಎಂಬುದು. ಇಷ್ಟೇ ಅಲ್ಲದೇ, ಒಂದು ವೇಳೆ ಸಂದರ್ಶನ ಮಾಡಲು ಹೋದಾಗ ತಮ್ಮ ಸಿಬ್ಬಂದಿ ವಿರುದ್ಧ ಇದೇ ರೀತಿಯ ನಿಷೇಧ ಹೇರಿದ್ದರೆ ಅರ್ನಾಬ್ ಸುಮ್ಮನಿರುತ್ತಿದ್ದರೆ? ವಾರಗಟ್ಟಲೇ ತಮ್ಮ ರಿಪಬ್ಲಿಕ್ ಟಿವಿಯಲ್ಲಿ ನಿರ್ಧಾರವನ್ನು ಟೀಕಿಸುವ ಸುದ್ದಿಗಳನ್ನು ಪುಂಕಾನುಪುಂಕವಾಗಿ ಬಿತ್ತರಿಸುತ್ತಿರಲಿಲ್ಲವೇ? ಇದಕ್ಕೆ ಅರ್ನಾಬ್ ಉತ್ತರಿಸುತ್ತಾರೆ ಎಂಬ ನಿರೀಕ್ಷೆ ಯಾರೊಬ್ಬರಲ್ಲಿಯೂ ಇಲ್ಲ.
ಇಲ್ಲಿ ನಿಷೇಧ ಹೇರಿರುವ ವಿಮಾನಯಾನ ಸಂಸ್ಥೆಗಳು ಖಾಸಗಿಯಾಗಿದ್ದರೂ ಹೇಗೆ ಕೇಂದ್ರ ಸರ್ಕಾರದ ಕೈಗೊಂಬೆಗಳಾಗಿ ವರ್ತಿಸುತ್ತಿವೆ ಎಂಬುದಕ್ಕೆ ಕೆಲವು ನಿದರ್ಶನಗಳಿವೆ. ಸಾಮಾನ್ಯವಾಗಿ ಪ್ರತಿಯೊಂದು ವಿಮಾನಯಾನ ಸಂಸ್ಥೆಗಳಲ್ಲಿ ಕುಂದುಕೊರತೆ ನಿವಾರಣೆ ಸಮಿತಿ ಇರುತ್ತದೆ. ಇದರಲ್ಲಿನ ಅಧಿಕಾರಿಗಳು ಯಾವುದಾದರೂ ದೂರುಗಳು ಬಂದಲ್ಲಿ ಸ್ವಲ್ಪ ದಿನಗಳ ಕಾಲಾವಕಾಶ ತೆಗೆದುಕೊಂಡು ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಗಳನ್ನು ಪ್ರಕಟಿಸುತ್ತವೆ. ಆದರೆ, ಕಮ್ರಾ ಪ್ರಕರಣದಲ್ಲಿ ಕೆಲವೇ ಗಂಟೆಗಳಲ್ಲಿ ನಿಷೇಧ ಹೇರುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇದರ ಹಿಂದೆ ಕೇಂದ್ರ ಸರ್ಕಾರದ ಕೈವಾಡ ಇದೆ ಎಂಬುದಕ್ಕೆ ವಿಮಾನಯಾನ ಸಚಿವಾಲಯ ಟ್ವೀಟ್ ಮಾಡಿ ಪ್ರಯಾಣಿಕರಿಗೆ ತೊಂದರೆಯನ್ನುಂಟು ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿರುವುದು.