ರೈಲುಗಳಲ್ಲಿ ಜನ ತುಂಬಿ ತುಳುಕುತ್ತಿದ್ದಾರೆ, ಮದುವೆಗಳು ಜೋರಾಗಿ ನಡೆಯುತ್ತಿವೆ,.. ಹಾಗಾಗಿ ದೇಶದ ಆರ್ಥಿಕ ಪರಿಸ್ಥಿತಿ ಮಜಬೂತಾಗಿದೆ ಎಂಬ ಬಿಜೆಪಿ ಸರ್ಕಾರದ ಧೋರಣೆ ಒಂದು ಕಡೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನಿರುದ್ಯೋಗ ಪ್ರಮಾಣ, ಜಿಡಿಪಿ ಕುಸಿತ, ಏರುತ್ತಿರುವ ವಸೂಲಾಗದ ಸಾಲದ ಹೊರೆ, ಬೆಟ್ಟದಂತೆ ಬೆಳೆಯುತ್ತಿರುವ ಕಾರ್ಪೊರೇಟ್ ವಲಯದ ಬಾಕಿ ಸಾಲದಂತಹ ಅರ್ಥವ್ಯವಸ್ಥೆಯನ್ನು ಪ್ರಪಾತಕ್ಕೆ ತಳ್ಳುವ ಕಟು ವಾಸ್ತವ ಮತ್ತೊಂದು ಕಡೆ.
ಈ ಸೋಗಲಾಡಿ ಹೇಳಿಕೆಗಳು ಮತ್ತು ಕಟುವಾಸ್ತವದ ನಡುವೆ, ನಿಜವಾಗಿಯೂ ದೇಶ ಎತ್ತಸಾಗುತ್ತಿದೆ ಎಂಬುದನ್ನು ಪರಿಶೀಲಿಸಬೇಕಾದ, ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕಾದ ಹೊಣೆಗಾರಿಕೆಯ ಅರ್ಥಸಚಿವರು ಮತ್ತು ಅವರ ಸಹಾಯಕ ಸಚಿವರು, ‘ಗೋಲಿ ಮಾರೋ …’ ಅಭಿಯಾನದಲ್ಲಿ ವ್ಯಸ್ತರಾಗಿದ್ದಾರೆ. ಪ್ರಧಾನಿ ಮೋದಿಯವರೇನೋ ಮತ್ತೊಂದು ಸುತ್ತಿನ ಸ್ಟಿಮ್ಯುಲಸ್ (ಉತ್ತೇಜನಾ ನಿಧಿ) ನೀಡುವ ಮೂಲಕ ವಸೂಲಾಗದ ಸಾಲದ (ಎನ್ ಪಿಎ) ಭಾರದಲ್ಲಿಕುಸಿಯುತ್ತಿರುವ ಬ್ಯಾಂಕಿಂಗ್ ವಲಯಕ್ಕೆ ಪುನಃಶ್ಚೇತನ ಪ್ರಯತ್ನ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಸದ್ಯ ಮೋದಿಯವರು ತಾವು ಸೋಷಿಯಲ್ ಮೀಡಿಯಾದಲ್ಲಿ ಮುಂದುವರಿಯಬೇಕೇ ಅಥವಾ ಬೇಡವೇ ಎಂಬ ಬಗ್ಗೆಯೇ ರಾಷ್ಟ್ರೀಯ ಚರ್ಚೆಯನ್ನು ಹುಟ್ಟುಹಾಕಿದ್ದಾರೆ!
ಜಿಡಿಪಿ ಬೆಳವಣಿಗೆ ದರ ಏಳು ವರ್ಷದಲ್ಲೇ ಅತಿ ದೊಡ್ಡ ಕುಸಿತ ಕಂಡಿದ್ದು, ಶೇ.4.7ಕ್ಕೆ ತಲುಪಿದೆ ಎಂದು ಕಳೆದ ವಾರದ ವರದಿಗಳು ಹೇಳಿವೆ. ನಿರುದ್ಯೋಗ ಪ್ರಮಾಣ ಕೂಡ ನಾಲ್ಕು ದಶಕದ ಹಿಂದಿನ ಮಟ್ಟಕ್ಕೆ ಏರಿದ್ದು, ಶೇ.7.78 ಕ್ಕೆ ತಲುಪಿದೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ನಿರುದ್ಯೋಗ ಪ್ರಮಾಣ ಏರಿಕೆ ಕಂಡಿರುವುದು ಅಪಾಯಕಾರಿ ಸೂಚನೆ ಎನ್ನಲಾಗುತ್ತಿದೆ. ‘ತಾಲಿನಾಮಿಕ್ಸ್’ನಂತಹ ಚಮತ್ಕಾರಿ ಪದಪುಂಜಗಳ ಮೂಲಕ ದೇಶದ ಅರ್ಥವ್ಯವಸ್ಥೆ ಸುಧಾರಣೆಯ ಹಾದಿಯಲ್ಲಿದೆ ಎಂದು ಹಣಕಾಸು ಸಚಿವರು, ಭೂರಿ ಭೋಜನದ ಭರವಸೆಯ ಮಾತುಗಳನ್ನಾಡುತ್ತಿದ್ದರೂ, ಸ್ವತಃ ಪ್ರಧಾನಿಯವರು ಮುಂದಿನ ಮೂರು ವರ್ಷದಲ್ಲಿ ಭಾರತ 5 ಟ್ರಿಲಿಯನ್ ಡಾಲರ್ ಆರ್ಥಿಕಶಕ್ತಿಯಾಗಲಿದೆ ಎಂಬ ಭರವಸೆ ನೀಡುತ್ತಿದ್ದರೂ, ಕಣ್ಣೆದುರಿನ ವಾಸ್ತವ ಬೇರೆಯದೇ ಕಥೆ ಹೇಳುತ್ತಿದೆ.
‘ಸಬ್ ಚೆಂಗಾಸಿ’ ಟ್ರೇಡ್ ಮಾರ್ಕ್ ನಿಲುವಿನ ರಾಜಕಾರಣ ಮತ್ತು ಅದೇ ರಾಜಕಾರಣದ ನೆಲೆಯ ಆರ್ಥಿಕ ನಿಲುವುಗಳು ದೇಶದ ಅರ್ಥವ್ಯವಸ್ಥೆಯನ್ನು ಎಂಥ ಅಪಾಯಕ್ಕೆ ಒಡ್ಡಿವೆ ಎಂಬುದಕ್ಕೆ ಮತ್ತೊಂದು ಉದಾಹರಣೆ ಎನ್ ಪಿಎ ಬಿಕ್ಕಟ್ಟು. ಈಗಾಗಲೇ ಸುಮಾರು 9.10 ಲಕ್ಷ ಕೋಟಿ ರೂ. ವಸೂಲಾಗದ ಸಾಲದ ಸುಳಿಯಲ್ಲಿ ಸಿಕ್ಕಿ ಕುಸಿಯುವ ಭೀತಿಯಲ್ಲಿರುವ ಭಾರತೀಯ ಬ್ಯಾಂಕಿಂಗ್ ವಲಯಕ್ಕೆ ಸೋಮವಾರ ಮತ್ತೊಂದು ಆಘಾತಕಾರಿ ಸುದ್ದಿ ಎರಗಿದ್ದು, ‘ಇಂಡಿಯಾ ರೇಟಿಂಗ್ಸ್ ಅಂಡ್ ರೀಸರ್ಚ್’ ಸಂಸ್ಥೆ ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ಮುಂದಿನ ಮೂರು ವರ್ಷಗಳಲ್ಲಿ ಕಾರ್ಪೊರೇಟ್ ವಲಯದ ಸುಸ್ತಿ ಸಾಲದ ಪ್ರಮಾಣ ಬರೋಬ್ಬರಿ 10.52 ಲಕ್ಷ ಕೋಟಿ ರೂ. ತಲುಪಲಿದೆ. ಆ ಪೈಕಿ ಸುಮಾರು 2.52 ಲಕ್ಷ ಕೋಟಿ ರೂ. ಎನ್ ಪಿಎ ಆಗಲಿದ್ದು, ಈಗಾಗಲೇ ಇರುವ ಎನ್ ಪಿಎ ಹೊರೆಯನ್ನು ಇನ್ನಷ್ಟು ಹಿಗ್ಗಿಸಲಿದೆ!.
ಸದ್ಯ ದೇಶದ ಸಾರ್ವಜನಿಕ ವಲಯದ ಬ್ಯಾಂಕುಗಳ ಪರಿಸ್ಥಿತಿ ತೀರಾ ಗಂಭೀರವಾಗಿದ್ದು, ಕಳೆದ 2019ರ ಮಾರ್ಚ್ ಅಂತ್ಯಕ್ಕೆ ಸುಮಾರು 7.39 ಲಕ್ಷ ಕೋಟಿ ರೂ. ಎನ್ ಪಿಎ ಹೊರೆ ಇತ್ತು. ಇದೀಗ ಕಳೆದ ಒಂದು ವರ್ಷದ ಅವಧಿಯಲ್ಲಿ ಪ್ರಮುಖವಾಗಿ ಕಾರ್ಪೊರೇಟ್ ಸಂಸ್ಥೆಗಳ ಬಾಕಿ ಸಾಲದ ಪ್ರಮಾಣದಲ್ಲಿ ಆಗಿರುವ ಭಾರೀ ಏರಿಕೆ, ಟೆಲಿಕಾಂ ವಲಯದ ಕಂಪನಿಗಳು ಉಳಿಸಿಕೊಂಡಿರುವ ಸುಸ್ತಿ ಸಾಲದ ಹೊರೆ, ಹಾಗೂ ಆರ್ಥಿಕ ಹಿಂಜರಿತದ ಹಿನ್ನೆಲೆಯಲ್ಲಿ ಉತ್ಪಾದನಾ, ಕೃಷಿ ಮತ್ತು ಸೇವಾ ವಲಯದ ಕುಸಿತಗಳು ಬ್ಯಾಂಕ್ ಸಾಲದ ಮರುಪಾವತಿಗೆ ಪೆಟ್ಟು ಕೊಟ್ಟಿವೆ. ಹಾಗಾಗಿ ಸಹಜವಾಗೇ ಈ ತಿಂಗಳಾಂತ್ಯಕ್ಕೆ ಕೊನೆಗೊಳ್ಳವ 2019-20ನೇ ಹಣಕಾಸು ವರ್ಷದಲ್ಲಿ ಎನ್ ಪಿಎ ಪ್ರಮಾಣದಲ್ಲಿ ಭಾರೀ ಏರಿಕೆಯಾಗಲಿದೆ. ಇದು ಖಂಡಿತವಾಗಿಯೂ ದೇಶದ ಆರ್ಥಿಕತೆಗೆ ಆಘಾತಕಾರಿ ಪೆಟ್ಟು ಕೊಡಲಿದೆ ಎಂದು ಆರ್ಥಿಕ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಇನ್ನು ಖಾಸಗೀ ವಲಯದ ಬ್ಯಾಂಕುಗಳ ಪರಿಸ್ಥಿತಿ ಕೂಡ ಭಿನ್ನವಾಗೇನೂ ಇಲ್ಲ. ಪ್ರಮುಖವಾಗಿ ಬ್ಯಾಂಕೇತರ ಹಣಕಾಸು ಸಂಸ್ಥೆಗಳ ದಿಢೀರ್ ಕುಸಿತ ಮತ್ತು ಗ್ರಾಮೀಣ ಆರ್ಥಿಕತೆಯ ಹಿಂಜರಿತದ ಪರಿಣಾಮ ಖಾಸಗೀ ವಲಯದ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಆಗಿದೆ. ಹಾಗಾಗಿ, ಖಾಸಗೀ ಬ್ಯಾಂಕುಗಳ ಪೈಕಿ ಬಹುತೇಕ ಬ್ಯಾಂಕುಗಳು ಸಂಕಷ್ಟದಲ್ಲಿವೆ ಎನ್ನಲಾಗುತ್ತಿದೆ.
ದೇಶದ ಆರ್ಥಿಕತೆಯನ್ನೇ ಮುಳುಗಿಸುವ ಮಟ್ಟಿಗೆ ಬೆಳೆದು ನಿಂತಿರುವ ಎನ್ ಪಿಎ ಪ್ರಮಾಣದಲ್ಲಿ ದೇಶದ ಮೊದಲ ಬೃಹತ್ 12 ಕಾರ್ಪೊರೇಟ್ ಸಂಸ್ಥೆಗಳ ಪಾಲು ಅತ್ಯಧಿಕ ಎಂಬುದು ಸಾರ್ವಜನಿಕ ತೆರಿಗೆ ಹಣ ಬ್ಯಾಂಕ್ ಸಾಲದ ರೂಪದಲ್ಲಿ ಯಾರ ಪಾಲಾಗುತ್ತಿದೆ ಎಂಬುದಕ್ಕೆ ನಿದರ್ಶನ. ಒಟ್ಟು 9.10 ಲಕ್ಷ ಕೋಟಿ ಮೊತ್ತದ ಎನ್ ಪಿಎ ಪೈಕಿ, ದೇಶದ ಮೊದಲ 12 ಕಾರ್ಪೊರೇಟ್ ಸಂಸ್ಥೆಗಳ ಪಾಲು ಬರೋಬ್ಬರಿ 3.5 ಲಕ್ಷ ಕೋಟಿ! ಅಂದರೆ, ವಸೂಲಾಗದ ಸಾಲದ ಒಟ್ಟು ಮೊತ್ತದ ಪೈಕಿ ಸುಮಾರು ಅರ್ಧದಷ್ಟು ಮೊತ್ತವನ್ನು ನುಂಗಿರುವುದು ದೇಶದ ಬೆರಳೆಣಿಕೆಯ ಕಾರ್ಪೊರೇಟ್ ಸಂಸ್ಥೆಗಳು!
ಇನ್ನೂ ವಿಚಿತ್ರವೆಂದರೆ, ವಸೂಲಾಗದ ಸಾಲದ ಈ ಪರಿಯ ಪ್ರಮಾಣದ ಜೊತೆಗೆ, ಕಳೆದ ಆರು ವರ್ಷಗಳಲ್ಲಿ ಕೇಂದ್ರ ಸರ್ಕಾರ, ಉತ್ತೇಜನಾ ನಿಧಿಯಾಗಿ ಬ್ಯಾಂಕಿಂಗ್ ವಲಯಕ್ಕೆ ನೀಡಿರುವ ಹಣಕಾಸು ಬೆಂಬಲದ ಮೊತ್ತ ಬರೋಬ್ಬರಿ 7.77 ಲಕ್ಷ ಕೋಟಿ ರೂ! ಅಲ್ಲದೆ, ಸುಮಾರು 2.4 ಲಕ್ಷ ಕೋಟಿ ರೂ.ನಷ್ಟು ಭಾರೀ ಮೊತ್ತದ ತೆರಿಗೆ ಕಡಿತವನ್ನು ಕೂಡ ಕಳೆದ ಒಂದು ವರ್ಷದಲ್ಲಿ ಕಾರ್ಪೊರೇಟ್ ವಲಯಕ್ಕೆ ಘೋಷಿಸಲಾಗಿದೆ. ಅದೇ ಹೊತ್ತಿಗೆ ಕಳೆದ ವರ್ಷ ಬರೋಬ್ಬರಿ 85 ಸಾವಿರ ಕೋಟಿ ರೂ.ನಷ್ಟು ಉತ್ತೇಜನಾ ನಿಧಿಯನ್ನು ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ನೀಡಲಾಗಿದೆ.
ಇಷ್ಟಾಗಿಯೂ ಬ್ಯಾಂಕುಗಳ ಎನ್ ಪಿಎ ಪ್ರಮಾಣ ಆತಂಕಕಾರಿ ಪ್ರಮಾಣದಲ್ಲಿ ಏರುಗತಿಯಲ್ಲೇ ಇರುವುದು ಇಡೀ ದೇಶದ ಅರ್ಥವ್ಯವಸ್ಥೆಯನ್ನು ಕೆಲವೇ ಕೆಲವು ಮಂದಿ ನಿಯಂತ್ರಿಸುತ್ತಿರುವ ಮತ್ತು ತಮ್ಮ ವೈಯಕ್ತಿಕ ಗಳಿಕೆಗೆ ಬಳಸಿಕೊಳ್ಳುತ್ತಿರುವ ಅನುಮಾನಗಳನ್ನು ಗಟ್ಟಿಗೊಳಿಸಿದೆ. ಆ ಆತಂಕಗಳ ಹಿನ್ನೆಲೆಯಲ್ಲಿ ಭಾರತದ ಆರ್ಥಿಕತೆ ಸಮಾಜವಾದಿ ಅರ್ಥವ್ಯವಸ್ಥೆಯ ನೆಲೆಯಿಂದ ಕಾರ್ಪೊರೇಟ್ ಅರ್ಥವ್ಯವಸ್ಥೆಯಾಗಿ ಬದಲಾಗುತ್ತಿದೆ ಎಂಬ ಮಾತುಗಳು ಕೇಳಿಬರತೊಡಗಿವೆ. ಅಂತಹ ಮಾತುಗಳಿಗೆ ಪೂರಕವಾಗಿ, ಕಾರ್ಪೊರೇಟ್ ವಲಯ ಮತ್ತು ಆ ವಲಯಕ್ಕಾಗಿ ದೇಶದ ಅರ್ಥವ್ಯವಸ್ಥೆಯನ್ನೇ ಉಸಿರುಗಟ್ಟಿಸುವ ಮಟ್ಟಿಗೆ ಸಾಲ-ಸೌಲಭ್ಯ ನೀಡಿರುವ ಬ್ಯಾಂಕುಗಳು, ದೇಶದ ಶೇ.60ರಷ್ಟು ಮಂದಿಗೆ ಉದ್ಯೋಗ ಕಲ್ಪಿಸಿರುವ ಮತ್ತು ಆ ಕಾರಣದಿಂದ ದೇಶದ ಜಿಡಿಪಿ ದರ ನಕಾರಾತ್ಮಕ ದಿಕ್ಕಿಗೆ ಹೊರಳುವುದನ್ನು ತಪ್ಪಿಸಿರುವ ಕೃಷಿ ವಲಯಕ್ಕೆ ನೀಡಿರುವ ಸಾಲ ಮತ್ತು ಸಾಲ ಮನ್ನಾ ಪ್ರಮಾಣದ ಚಿತ್ರಣ ಕಣ್ಣಮುಂದೆ ಬರುತ್ತದೆ.
ಕಳೆದ ಒಂದು ದಶಕದಲ್ಲಿ ಒಟ್ಟು ವಿವಿಧ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರ ಘೋಷಿಸಿದ ವಿವಿಧ ಕೃಷಿ ಸಾಲ ಮನ್ನಾ ಯೋಜನೆಗಳಡಿ ಮನ್ನಾ ಆಗಿರುವ ಕೃಷಿ ಸಾಲದ ಮೊತ್ತ 4.7 ಲಕ್ಷ ಕೋಟಿ ಮಾತ್ರ! ಕೃಷಿ ವಲಯಕ್ಕೆ ಒಟ್ಟು ನೀಡಿರುವ ಸಾಲದ ಮೊತ್ತ ಸುಮಾರು 12 ಲಕ್ಷ ಕೋಟಿ ರೂ. ಮಾತ್ರ. ಅಂದರೆ, ಇಡೀ ದೇಶದ ಕೃಷಿ ವಲಯದ ಬಾಕಿ ಸಾಲದ ಪೈಕಿ ಕಳೆದ ಹತ್ತು ವರ್ಷಗಳಲ್ಲಿ ಮನ್ನಾ ಮಾಡಲಾಗಿರುವ ಒಟ್ಟು ಮೊತ್ತ ಕೇವಲ 12 ಕಾರ್ಪೊರೇಟ್ ಕಂಪನಿಗಳ ಎನ್ ಪಿಎ ಬಾಕಿಗೆ ಸಮ! ಅಂದರೆ, ದೇಶದ ಒಟ್ಟು ಹಣಕಾಸು ಬೆಂಬಲ ವ್ಯವಸ್ಥೆಯಲ್ಲಿ ಕೃಷಿ ವಲಯಕ್ಕೆ ಎಷ್ಟು ಪ್ರಧಾನ್ಯತೆ ಇದೆ ಎಂಬುದಕ್ಕೆ ಈ ಮಾಹಿತಿ ಒಂದು ಉದಾಹರಣೆ.
ಹಾಗಾಗಿಯೇ ದೇಶದ ಇಡೀ ಅರ್ಥವ್ಯವಸ್ಥೆ ಬೆರಳೆಣಿಕೆಯ ಕೆಲವು ಕಾರ್ಪೊರೇಟ್ ಕುಳಗಳ ಆಡುಂಬೊಲವಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಅಷ್ಟಾಗಿಯೂ ದೇಶದ ಆರ್ಥಿಕ ಪರಿಸ್ಥಿತಿಯ ಸುಧಾರಣೆಯ ದಿಕ್ಕಿನಲ್ಲಿ ಕಾರ್ಪೊರೇಟ್ ಸಂಸ್ಥೆಗಳ ಕೊಡುಗೆ ಏನು ಎಂದರೆ; ಪ್ರತಿ ಆರು ತಿಂಗಳಿಗೊಮ್ಮೆ ತೆರಿಗೆ ಮನ್ನಾ, ಸಾಲ ಮನ್ನಾದ ಬೇಡಿಕೆ ಮುಂದಿಟ್ಟು, ಅಂತಾರಾಷ್ಟ್ರೀಯ ಲಾಭಿ ಮತ್ತು ಪ್ರಭಾವಗಳ ಮೂಲಕ ಸರ್ಕಾರಗಳನ್ನು ಮಣಿಸುವುದು ಹೊರತು ಬೇರೇನೂ ಇಲ್ಲ ಎಂಬುದಕ್ಕೆ ಸತತ ಏಳು ವರ್ಷಗಳಿಂದ ಅಧೋಮುಖಿಯಾಗಿರುವ ಜಿಡಿಪಿ ಬೆಳವಣಿಗೆ ದರವೇ ನಿದರ್ಶನ. ವಾಸ್ತವಾಂಶಗಳು ಹೀಗಿರುವಾಗ, ಪ್ರಧಾನಮಂತ್ರಿಗಳು ಮತ್ತೊಂದು ಸುತ್ತಿನ ಉತ್ತೇಜನಾ ನಿಧಿ ಘೋಷಿಸುವ ಸೂಚನೆ ನೀಡಿದ್ದಾರೆ.
ನೋಟು ರದ್ದತಿ ಮತ್ತು ಜಿಎಸ್ ಟಿಯ ಹೊಡೆತದಿಂದಾಗಿ ಸಂಪೂರ್ಣ ನೆಲಕಚ್ಚಿರುವ ಕೃಷಿ ವಲಯ ಮತ್ತು ಗ್ರಾಮೀಣ ಆರ್ಥಿಕತೆಗೆ ಗ್ರಾಮೀಣ ಉದ್ಯೋಗ ಖಾತ್ರಿಗೆ ಹೆಚ್ಚುವರಿ ಅನುದಾನ, ಕೃಷಿ ಸಾಲ ಹೆಚ್ಚಳ, ಕೃಷಿ ಪೂರಕ ಚಟುವಟಿಕೆ ಉತ್ತೇಜನದಂತಹ ಕ್ರಮಗಳನ್ನು ಕೈಗೊಳ್ಳಬೇಕಾಗಿದ್ದ ದೇಶದ ಚುಕ್ಕಾಣಿ ಹಿಡಿದವರು, ಕಾರ್ಪೊರೇಟ್ ಸಂಸ್ಥೆಗಳ ಪ್ರವರ್ತಕರಂತೆ ವರ್ತಿಸುತ್ತಿರುವಾಗ, ದೇಶದ ಸಮಗ್ರ ಆರ್ಥಿಕ ಚೇತರಿಕೆಯನ್ನು ನಿರೀಕ್ಷಿಸಲಾದೀತೆ? ಕಾರ್ಪೊರೇಟ್ ಸಂಸ್ಥೆಗಳ ಮತ್ತು ಬ್ಯಾಂಕಿಂಗ್ ವಲಯದ ಅಪವಿತ್ರ ಮೈತ್ರಿ ಇದೀಗ ದೇಶದ ಅರ್ಥವ್ಯವಸ್ಥೆಯತ್ತಲೇ ಗುರಿ ಇಟ್ಟು ‘ಗೋಲಿ ಮಾರೋ..’ ಎನ್ನುತ್ತಿವೆ! ಎನ್ ಪಿಎ ಎಂಬ ಗುಂಡೇಟು ಅರ್ಥವ್ಯವಸ್ಥೆಯ ಗುಂಡಿಗೆ ಸೀಳುವ ಕಾಲ ಸನ್ನಿಹಿತವಾಗುತ್ತಿದೆ!