ದೇಶದ ಸುಪ್ರೀಂ ಕೋರ್ಟು ಐತಿಹಾಸಿಕವಾದ ಬಾಬ್ರಿ ಮಸೀದಿ -ರಾಮ ಜನ್ಮಭೂಮಿಯ ಕುರಿತ ತೀರ್ಪನ್ನು ಪ್ರಕಟಿಸಿ ರಾಮ ಮಂದಿರ ನಿರ್ಮಾಣಕ್ಕೆ ಅನುವು ಮಾಡಿ ಕೊಟ್ಟಿದೆ. ತೀರ್ಪು ಹೊರ ಬಿದ್ದ ನಂತರ ಮೂಲ ಕಕ್ಷಿದಾರರು ಹಾಗೂ ಅನೇಕ ಮುಸ್ಲಿಂ ಸಂಘಟನೆಗಳು ಸುಪ್ರೀಂ ಕೋರ್ಟಿನ ತೀರ್ಪಿನ ವಿರುದ್ದ ಪುನರ್ವಿಮರ್ಶೆ ಅರ್ಜಿ ಸಲ್ಲಿಸುವುದಿಲ್ಲ ಎಂದೂ ಹೇಳಿದ್ದವು. ಆದರೆ ಎರಡು ವಾರಗಳ ನಂತರ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ತೀರ್ಪಿನ ವಿರುದ್ದ ಪುನರ್ವಿಮರ್ಶಾ ಅರ್ಜಿಯನ್ನು ಸಲ್ಲಿಸುವುದಾಗಿ ಪ್ರಕಟಿಸಿದೆ.
ಕಳೆದ ಭಾನುವಾರ ಸಭೆ ಸೇರಿದ್ದ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸಮಿತಿ ಈ ಪ್ರಕರಣದಲ್ಲಿ ತಾನು ಕಕ್ಷಿದಾರ ಆಲ್ಲದಿದಿದ್ದರೂ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿರುವುದು ಅಚ್ಚರಿ ಮೂಡಿಸಿದೆ. ಪ್ರಕರಣದಲ್ಲಿ ಮುಸ್ಲಿಂ ಸಮುದಾಯದ ಮೂಲ ಅರ್ಜಿದಾರರಾದ ಉತ್ತರ ಪ್ರದೇಶದ ಸುನ್ನಿ ವಕ್ಫ್ ಬೋರ್ಡ್ ಮತ್ತು ಇಕ್ಬಾಲ್ ಅನ್ಸಾರಿ ಅವರು ತೀರ್ಪಿನ ವಿರುದ್ದ ಮೇಲ್ಮನವಿ ಸಲ್ಲಿಸುವುದಿಲ್ಲ ಎಂಬ ಘೋಷಣೆಯ ನಂತರ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಈ ತೀರ್ಮಾನ ತೆಗೆದುಕೊಂಡಿದೆ.
ಮಂಡಳಿಯು ಮೇಲ್ಮನವಿ ಸಲ್ಲಿಸುವ ತೀರ್ಮಾನ ತೆಗೆದುಕೊಳ್ಳುವ ಸಮಯದಲ್ಲೇ ಮಂಡಳಿಯ ಸದಸ್ಯರ ನಡುವೆ ಭಿನ್ನಾಭಿಪ್ರಾಯವೂ ಸೃಷ್ಟಿಯಾಗಿದೆ. ಮಂಡಳಿಯ ಬಹಳಷ್ಟು ಸದಸ್ಯರು ಈ ಮೇಲ್ಮನವಿ ಸಲ್ಲಿಸುವಿಕೆಯಿಂದ ತೀರ್ಪಿನ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ ಎಂಬ ಅಭಿಪ್ರಾಯವನ್ನು ಹೊಂದಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡಿದ ಮಂಡಳಿಯ ಹಿರಿಯ ಸದಸ್ಯ ಕಮಲ್ ಫರೂಕಿ ಅವರು ಮಂಡಳಿಯ ಸದಸ್ಯರ ನಡುವೆ ಭಿನ್ನಮತ ಇದ್ದರೂ ಕೂಡ ಇದೆಲ್ಲ ಪ್ರಜಾತಂತ್ರ ವ್ಯವಸ್ಥೆಯ ಒಳಗಿರುವ ಸಹಜ ಕ್ರಿಯೆ ಎಂದು ಹೇಳಿದ್ದಾರೆ. ತೀರ್ಪಿನ ಪ್ರಕಾರ 5 ಎಕರೆ ಭೂಮಿಯನ್ನು ಸರ್ಕಾರದಿಂದ ಪಡೆದುಕೊಳ್ಳುವುದನ್ನು ಮಂಡಳಿಯ ಸದಸ್ಯರು ಸರ್ವನುಮತದಿಂದ ವಿರೋಧಿಸಿದ್ದಾರೆ ಅದರೆ ಮೇಲ್ಮನವಿ ಸಲ್ಲಿಸುವ ಕುರಿತು ಪರ -ವಿರೋಧ ಇದೆ ನಂತರ ಮೇಲ್ಮನವಿ ಸಲ್ಲಿಸುವುದಕ್ಕೆ ಬಹುಮತದಿಂದ ತೀರ್ಮಾನಿಸಲಾಗಿದೆ ಎಂದು ಫರೂಕಿ ಹೇಳಿದರು.
ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ತೀರ್ಮಾನಕ್ಕೆ ಜಮಾತ್ ಉಲೇಮಾ ಎ ಹಿಂದ್ ಹೊರತು ಪಡಿಸಿದರೆ ದೇಶದ ಇನ್ಯಾವುದೇ ಮುಸ್ಲಿಂ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿಲ್ಲ ಎಂಬುದು ಗಮನಾರ್ಹ ವಿಚಾರ ವಾಗಿದೆ. ಉತ್ತರ ಪ್ರದೇಶದ ಸುನ್ನಿ ಮತ್ತು ಶಿಯಾ ವಕ್ಫ್ ಮಂಡಳಿಗಳು ಮೇಲ್ಮನವಿಯ ವಿರುದ್ದವಾಗಿವೆ. ತೀರ್ಪು ಹೊರಬಿದ್ದ ಕೂಡಲೇ
ಉತ್ತರ ಪ್ರದೇಶದ ಸುನ್ನಿ ವಕ್ಫ್ ಮಂಡಳಿಯ ಅದ್ಯಕ್ಷ ಜಫಾರ್ ಫಾರೂಕಿ ವಿನಮ್ರವಾಗಿ ನ್ಯಾಯಾಲಯದ ತೀರ್ಪನ್ನು ಒಪ್ಪಿಕೊಳ್ಳುವುದಾಗಿ ಹೇಳಿದ್ದರು. ಇವರ ಈ ಹೇಳಿಕೆಯಿಂದ ಯಾರಿಗೂ ಆಶ್ಚರ್ಯ ಆಗಲಿಲ್ಲ ಏಕೆಂದರೆ ಬಹಳ ವರ್ಷಗಳಿಂದಲೂ ಬಾಬ್ರಿ ಮಸೀದಿ ಪರ ಕೋರ್ಟಿನಲ್ಲಿ ಹೋರಾಟ ನಡೆಸುತಿದ್ದ ಬೋರ್ಡ್ ವಿಚಾರಣೆಯ ಕೊನೆಯ ವಾರ ತಾನು ಪ್ರಕರಣದಿಂದ ಹಿಂದೆ ಸರಿಯಲು ಬಯಸುವುದಾಗಿಯೂ ಹೇಳಿತ್ತು.
ಉತ್ತರ ಪ್ರದೇಶದ ಶಿಯಾ ವಕ್ಫ್ ಬೋರ್ಡ್ ಅದ್ಯಕ್ಷ ವಸೀಂ ರಿಜ್ವಿ ಅವರು ತೀರ್ಪನ್ನು ತಾವು ಸ್ವಗತಿಸುವುದಾಗಿ ಹೇಳಿದ್ದು ತಾವು ರಾಮ ಮಂದಿರ ನಿರ್ಮಾಣಕ್ಕೆ ವೈಯಕ್ತಿಕವಾಗಿ 51,000 ರೂಪಾಯಿಗಳನ್ನು ವಂತಿಗೆ ನೀಡುವುದಾಗಿಯೂ ಹೇಳಿದ್ದರು. ಸುನ್ನಿ ವಕ್ಫ್ ಮಂಡಳಿಯ ನ್ಯಾಯಾಲಯದಿಂದ ಅರ್ಜಿಯನ್ನು ಹಿಂಪಡೆಯುವ ತೀರ್ಮಾನಕ್ಕೆ ಸಮುದಾಯದಲ್ಲೇ ಟೀಕೆ ವ್ಯಕ್ತವಾಗಿದ್ದು ಮಂಡಳಿಯು ಒತ್ತಡಕ್ಕೆ ಮಣಿದಿದೆ ಎಂದು ಆರೋಪಿಸಲಾಗಿತ್ತು.
ಕಳೆದ ತಿಂಗಳು ಸುಪ್ರೀಂ ಕೋರ್ಟು ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸುವುದಕ್ಕೂ ಮುನ್ನವೇ ಮುಖ್ಯ ಮಂತ್ರಿ ಯೋಗಿ ಅದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ರಾಜ್ಯ ಸರ್ಕಾರ ಫಾರೂಕಿ ಅವರು ಅಕ್ರಮವಾಗಿ ವಕ್ಫ್ ಮಂಡಳಿಗೆ ಭೂಮಿಯನ್ನು ಖರೀದಿಸಿದ್ದು ಮತ್ತು ಮಾರಾಟ ಮಾಡಿದ ವಿಷಯದಲ್ಲಿ ಫಾರೂಕಿ ಅವರ ಮೇಲೆ ಆರೋಪ ಇರುವ ಕುರಿತು ಸಿಬಿಐ ತನಿಖೆಗೆ ಶಿಫಾರಸು ಮಾಡಿತ್ತು. ಫಾರೂಕಿ ಅವರ ವಿರುದ್ದ ದಾಖಲಾಗಿರುವ ಎಫ್ ಐ ಆರ್ ನ ಕಾರಣದಿಂದಾಗಿ ಉತ್ತರ ಪ್ರದೇಶದ ಜಮಅತ್ ಉಲೇಮಾ ಹಿಂದ್ ಫಾರೂಕಿ ಅವರ ನಡೆ ಸಂಶಯಾಸ್ಪದ ಎಂದೂ ಆರೋಪಿಸಿತ್ತು.
ಲಕ್ನೋದ ಸಾಮಾಜಿಕ ಕಾರ್ಯಕರ್ತ ಅನೀಸ್ ಅಹ್ಮದ್ ಅವರು ಫಾರೂಕಿ ಅವರು ಮೊಕದ್ದಮೆಗಳನ್ನು ಎದುರಿಸುತಿದ್ದು , ಇವರು ಸರ್ಕಾರೀ ಉದ್ಯೋಗಿಯೂ ಅಗಿರುವುದರಿಂದ ಇವರ ತೀರ್ಮಾನವನ್ನು ಆ ಹಿನ್ನೆಲೆಯಲ್ಲೇ ನೋಡಬೇಕು ಎಂದೂ ಹೇಳುತ್ತಾರೆ. ಸುನ್ನಿ ಹಾಗೂ ಶಿಯಾ ವಕ್ಫ್ ಬೋರ್ಡ್ ಗಳೆರಡೂ ಕೇಂದ್ರ ಸರ್ಕಾರದ ಅಲ್ಪ ಸಂಖ್ಯಾತ ವ್ಯವಹಾರಗಳ ಸಚಿವಾಲಯದ ಶಾಸನಬದ್ದ ಸಂಸ್ಥೆಗಳಾಗಿವೆ. ಅಹ್ಮದ್ ಅವರ ಪ್ರಕಾರ ಸ್ಥಳೀಯ ಒತ್ತಡ ಮತ್ತು ಕೆಲವು ಸ್ವಹಿತಾಸಕ್ತಿಯ ಕಾರಣಗಳೂ ಈ ಬೋರ್ಡ್ ಗಳ ತೀರ್ಮಾನದ ಮೇಲೆ ಪ್ರಭಾವ ಬೀರಿರಬಹುದು. ಸುನ್ನಿ ವಕ್ಫ್ ಬೋರ್ಡ್ ಒತ್ತಡದಿಂದ ಈ ತೀರ್ಮಾನ ತೆಗೆದುಕೊಂಡಿರುವುದು ಸ್ಪಷ್ಟವಾಗೇ ಗೋಚರಿಸುತ್ತಿದೆ ಎಂದು ಹೇಳುತ್ತಾರೆ.
ಉತ್ತರ ಪ್ರದೇಶದಲ್ಲಿ ರಾಜ್ಯ ಸರ್ಕಾರ ಬದಲಾದರೂ ಕೂಡ ಎರಡೂ ವಕ್ಫ್ ಮಂಡಳಿಗಳ ಅದ್ಯಕ್ಷರು ಇನ್ನೂ ಬದಲಾಗದಿರುವುದಕ್ಕೆ ಅನೇಕರು ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಕಳೆದ ಏಪ್ರಿಲ್ 2010 ರಿಂದ ಫಾರುಕಿ ಅವರು ಸುನ್ನಿ ವಕ್ಫ್ ಬೋರ್ಡ್ ಅದ್ಯಕ್ಷರಾಗಿದ್ದರೆ , ರಿಜ್ವಿ ಅವರು 2006 ರಿಂದಲೇ ಶಿಯಾ ವಕ್ಫ್ ಬೋರ್ಡ್ ಅದ್ಯಕ್ಷ ಹುದ್ದೆಯಲ್ಲಿದ್ದಾರೆ. ಕಳೆದ ವರ್ಷ ರಾಮನು ನನ್ನ ಕನಸಿನಲ್ಲಿ ಬಂದಿದ್ದ ಎಂದು ಹೇಳುವ ಮೂಲಕ ರಿಜ್ವಿ ವಿವಾದ ಸೃಷ್ಟಿಸಿದ್ದರು. ತಮ್ಮ ಅಧಿಕಾರಕ್ಕಾಗಿ ಇವರಿಬ್ಬರೂ ಮೌಲ್ಯಗಳ ಜತೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಎಂದು ಅಹ್ಮದ್ ಅರೋಪಿಸುತ್ತಾರೆ.
ಆದರೆ ಫರೂಕಿ ಅವರು ಆರೋಪವನ್ನು ಸ್ಪಷ್ಟವಾಗಿ ನಿರಾಕರಿಸಿದ್ದು ತಾವು ತೀರ್ಪು ಬರುವುದಕ್ಕೂ ಅನೇಕ ವರ್ಷಗಳ ಮೊದಲೇ ತೀರ್ಪನ್ನು ಒಪ್ಪಿಕೊಳ್ಳುವುದಾಗಿ ಹೇಳಿದ್ದನ್ನು ಉಲ್ಲೇಖಿಸುತ್ತಾರೆ. ಮೇಲ್ಮನವಿ ಸಲ್ಲಿಸುವ ಅವಕಾಶ ಇದೆ ಎಂದೂ ನಮಗೆ ಗೊತ್ತಿತ್ತು ಆದರೆ ಮೊದಲೇ ತೀರ್ಮಾನಿಸಿದ ನಿಲುವಿಗೆ ಬದ್ದ ಎಂದೂ ಫಾರೂಕಿ ತಿಳಿಸಿದರು. ಸರ್ಕಾರದ ಪ್ರಭಾವ ಮತ್ತು ಯಾವುದೇ ಬಾಹ್ಯ ಒತ್ತಡ ಇದ್ದಿದ್ದರೆ ಕೊನೆತನಕ ಇಷ್ಟು ವರ್ಷ ಮೊಕದ್ದಮೆ ನಡೆಸುವ ಅಗತ್ಯ ಏನಿತ್ತು ? ಮೊದಲೇ ಹಿಂದೆ ಸರಿಯಬಹುದಿತ್ತಲ್ಲವೇ ಎಂದೂ ಅವರು ಪ್ರಶ್ನಿಸಿದರು.
ತಮ್ಮ ಮೇಲಿನ ಅರೋಪವನ್ನು ಸರ್ಕಾರ ಸಿಬಿಐ ಗೆ ಒಪ್ಪಿಸುವುದಕ್ಕೂ ಮೊದಲು ಫೆಬ್ರುವರಿ 2018 ರಂದು ಫಾರೂಕಿ ತಮ್ಮ ತಂಡದೊಂದಿಗೆ ಬೆಂಗಲೂರಿಗೆ ಬಂದು ಆಧ್ಯಾತ್ಮ ಗುರು ಶ್ರೀ ರವಿಶಂಕರ್ ಗುರೂಜಿ ಅವರನ್ನು ಭೇಟಿಯಾಗಿದ್ದರು. ನಂತರ ರವಿಶಂಕರ್ ಅವರು ಈ ಭೇಟಿಯನ್ನು ನ್ಯಾಯಾಲಯದ ಹೊರಗೆ ವಿವಾದ ಬಗೆಹರಿಸುವುದಕ್ಕೆ ಬೆಂಬಲವಾಗಲಿದೆ ಎಂದಿದ್ದರು.
ಈ ಭೇಟಿಯಲ್ಲಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯ ಸಲ್ಮಾನ್ ನದ್ವಿ ಅವರೂ ಇದ್ದು ನಂತರ ಮಸೀದಿಯನ್ನು ವಿವಾದಿತ ಭೂಮಿಯಿಂದ ಹೊರಗೆ ಸ್ಥಳಾಂತರಿಸುವ ಇಂಗಿತ ವ್ಯಕ್ತಪಡಿಸಿದ್ದರು. ಇದಾದ ನಂತರ ನದ್ವಿ ಅವರನ್ನು ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯತ್ವ ಸ್ಥಾನದಿಂದ ವಜಾ ಮಾಡಲಾಗಿತ್ತು.
ಒಟ್ಟಿನಲ್ಲಿ ಮೊಕದ್ದಮೆ ಮುಂದುವರೆಸುವ ವಿಚಾರದಲ್ಲಿ ಮುಸ್ಲಿಂ ಸಮುದಾಯದಲ್ಲೇ ಪರ -ವಿರೋಧ ಅಭಿಪ್ರಾಯಗಳು ದಿನೇ ದಿನೇ ಹೆಚ್ಚಳವಾಗುತ್ತಿವೆ.