ದೇಶದ ಸಾಮಾಜಿಕ ಮತ್ತು ಜಾತ್ಯತೀತ ನೇಯ್ಗೆಯನ್ನು ಇತ್ತೀಚಿನ ದಶಕಗಳಲ್ಲಿ ಛಿದ್ರಗೊಳಿಸಿದ್ದ ಶತಮಾನಗಳಷ್ಟು ಹಳೆಯ ಧಾರ್ಮಿಕ ವಿವಾದಕ್ಕೆ ದೇಶದ ಅತ್ಯುಚ್ಚ ನ್ಯಾಯಾಲಯ ಶನಿವಾರ ಕಾನೂನಿನ ತೆರೆ ಎಳೆಯಿತು.
ಅಯೋಧ್ಯೆಯ ಬಾಬರಿ ಮಸೀದಿ-ರಾಮಜನ್ಮಭೂಮಿಯ 2.77 ಎಕರೆಗಳಷ್ಟು ವಿವಾದಿತ ಜಮೀನನ್ನು ಹಿಂದೂಗಳಿಗೆ ನೀಡಿದ್ದು ಅಲ್ಲಿ ರಾಮಮಂದಿರ ನಿರ್ಮಾಣದ ಆರಂಭಕ್ಕೆ ಹಸಿರು ನಿಶಾನೆ ತೋರಿದೆ. ಕರಸೇವಕರು ಕೆಡವಿದ್ದ ಬಾಬರಿ ಮಸೀದಿಯ ಬದಲಿಗೆ ಹೊಸ ಮಸೀದಿ ಕಟ್ಟಿಕೊಳ್ಳಲು ಅಯೋಧ್ಯೆಯ ಪ್ರಮುಖ ಜಾಗದಲ್ಲಿ ಐದು ಎಕರೆ ಜಮೀನನ್ನು ಮುಸಲ್ಮಾನರಿಗೆ ನೀಡಬೇಕು ಎಂದು ತೀರ್ಪು ನೀಡಿದೆ.
ಈವರೆಗೆ ವಿವಾದಿತ ಎನ್ನಲಾಗುತ್ತಿದ್ದ ಈ ಜಾಗದಲ್ಲಿ ರಾಮಮಂದಿರ ನಿರ್ಮಾಣ ನಡೆಯಬೇಕು. ಈ ನಿರ್ಮಾಣದ ಉಸ್ತುವಾರಿ ನೋಡಿಕೊಳ್ಳುವ ವಿಶ್ವಸ್ಥ ಮಂಡಳಿಯೊಂದನ್ನು (ಟ್ರಸ್ಟ್) ಮೂರು ತಿಂಗಳ ಒಳಗಾಗಿ ರಚಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ನಿರ್ಮೋಹಿ ಅಖಾಡ ಮತ್ತು ಸುನ್ನಿ ವಕ್ಫ್ ಮಂಡಳಿಯ ದಾವೆಯನ್ನು ನ್ಯಾಯಾಲಯ ತಿರಸ್ಕರಿಸಿದೆ. ನಿರ್ಮೋಹಿ ಅಖಾಡಕ್ಕೆ ಸದ್ಯದಲ್ಲೇ ರಚಿಸಲಿರುವ ವಿಶ್ವಸ್ಥ ಮಂಡಳಿಯಲ್ಲಿ ಸೂಕ್ತ ಸ್ಥಾನ ನೀಡುವಂತೆ ಸರ್ಕಾರಕ್ಕೆ ಸೂಚಿಸಿದೆ.
ಸರ್ವಾನುಮತದ ತೀರ್ಪು ನೀಡಿರುವ ಈ ಸಾಂವಿಧಾನಿಕ ನ್ಯಾಯಪೀಠದಲ್ಲಿ ಮುಖ್ಯನ್ಯಾಯಮೂರ್ತಿ ರಂಜನ್ ಗೋಗೋಯ್, ಭಾವೀ ಮುಖ್ಯನ್ಯಾಯಮೂರ್ತಿ ಎಸ್.ಎ.ಬೋಬ್ಡೆ, ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್, ಅಶೋಕ್ ಭೂಷಣ್ ಹಾಗೂ ಎಸ್.ಅಬ್ದುಲ್ ನಜೀರ್ ಅವರು ಇದ್ದರು.
ಈ ವಿವಾದ ಕುರಿತು ಸತತ 40 ದಿನಗಳ ಸುಪ್ರೀಮ್ ಕೋರ್ಟ್ ವಿಚಾರಣೆ ಇತ್ತೀಚೆಗಷ್ಟೇ ಮುಗಿದಿತ್ತು. ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೋಯ್ ಮುಂಬರುವ ನವೆಂಬರ್ 17ರಂದು ನಿವೃತ್ತಿ ಹೊಂದಲಿದ್ದಾರೆ. ವಿಚಾರಣೆಯ ನ್ಯಾಯಪೀಠದ ನೇತೃತ್ವವನ್ನು ಅವರು ವಹಿಸಿದ್ದರು. ನಿವೃತ್ತಿಗೆ ಮುನ್ನ ತೀರ್ಪು ನೀಡಲೇಬೇಕಿತ್ತು. ಇಲ್ಲದೇ ಹೋಗಿದ್ದರೆ ಹೊಸ ನ್ಯಾಯಪೀಠ ರಚನೆಯಾಗಿ ಇಡೀ ವಿವಾದವನ್ನು ಪುನಃ ಮೊದಲಿನಿಂದ ಆಲಿಸಬೇಕಾಗಿ ಬರುತ್ತಿತ್ತು.
ವಿವಾದ ಕುರಿತು ಅಲಹಾಬಾದ್ ಹೈಕೋರ್ಟ್ 2010ರ ಸೆಪ್ಬಂಬರ್ ನಲ್ಲಿ ತೀರ್ಪು ನೀಡಿತ್ತು. 1992ರ ಡಿಸೆಂಬರ್ ಆರರ ತನಕ ಬಾಬರಿ ಮಸೀದಿ ನಿಂತಿದ್ದ 2.77ಎಕರೆಯಷ್ಟು ವಿವಾದಿತ ಜಮೀನನ್ನು ಈ ತೀರ್ಪು ನಿರ್ಮೋಹಿ ಅಖಾಡ, ರಾಮಲಲ್ಲಾ ವಿರಾಜಮಾನ್ ಹಾಗೂ ಉತ್ತರಪ್ರದೇಶದ ಸುನ್ನಿ ವಕ್ಫ್ ಮಂಡಳಿಗೆ ಸಮನಾಗಿ ಹಂಚಿಕೊಟ್ಟಿತ್ತು. ಹಿಂದುಗಳು ಮತ್ತು ಮುಸಲ್ಮಾನರು ಈ ಜಮೀನಿನ ಜಂಟಿ ಒಡೆಯರು ಎಂದು ತೀರ್ಮಾನಿಸಿತ್ತು. ಈ ತೀರ್ಪು ಅರ್ಜಿದಾರರಿಗೆ ಒಪ್ಪಿಗೆಯಾಗಿರಲಿಲ್ಲ. ಸುಪ್ರೀಮ್ ಕೋರ್ಟಿನಲ್ಲಿ ಪ್ರಶ್ನಿಸಿ ಮೇಲ್ಮನವಿಗಳನ್ನು ಸಲ್ಲಿಸಲಾಗಿತ್ತು.
ಅಯೋಧ್ಯೆಯಲ್ಲಿ ತಲೆ ತಲಾಂತರಗಳಿಂದ ರಾಮನನ್ನು ಪೂಜಿಸುತ್ತ ಬಂದಿರುವ ಸಾಧು ಸಂಘಟನೆಯಾದ ನಿರ್ಮೋಹಿ ಅಖಾಡ ವಿವಾದಿತ ಸ್ಥಳ ತನಗೇ ಸೇರಬೇಕೆಂದು ದಾವೆ ಹೂಡಿದೆ. ಖುದ್ದು ರಾಮದೇವರು ಕೂಡ ಈ ವಿವಾದದಲ್ಲಿ 2.77 ಎಕರೆಗೆ ದಾವೆ ಹೂಡಿರುವ ಅರ್ಜಿದಾರ. ‘ರಾಮಲಲ್ಲಾ ವಿರಾಜಮಾನ್’ನನ್ನೂ (ಬಾಲರಾಮನ ವಿಗ್ರಹ) ಜೀವಂತ ಅರ್ಜಿದಾರ ಎಂದೇ ಪರಿಗಣಿಸಲಾಗಿದೆ. ಈ ಜಾಗವು ಬಾಬರಿ ಮಸೀದಿಗೇ ಸೇರಿದ್ದು, ಕೆಡವಲಾಗಿರುವ ಮಸೀದಿಯನ್ನು ಪುನಃ ಅಲ್ಲಿಯೇ ಕಟ್ಟಬೇಕೆಂದು ಸುನ್ನಿ ವಕ್ಫ್ ಮಂಡಳಿ ದಾವೆ ಹೂಡಿತ್ತು.
ರಾಮ ಹುಟ್ಟಿದ ಸ್ಥಳದಲ್ಲಿದ್ದ ಮಂದಿರವನ್ನು ಕೆಡವಿ16ನೆಯ ಶತಮಾನದಲ್ಲಿ ಮೊಗಲ್ ದಾಳಿಕೋರ ದೊರೆ ಬಾಬರ್ ಮಸೀದಿ ಕಟ್ಟಿಸಿದ ಎಂಬುದು ಸಂಘ ಪರಿವಾರ ಮತ್ತು ಹಲವು ಹಿಂದೂ ಸಾಧು ಸಂತ ಸಂಘಟನೆಗಳ ವಾದವಾಗಿತ್ತು. ಮಸೀದಿ ನಿಂತಿದ್ದ ಜಾಗದಲ್ಲಿ ಪುನಃ ಭವ್ಯ ರಾಮಮಂದಿರ ನಿರ್ಮಿಸಬೇಕೆಂದು ಲಾಲ್ ಕೃಷ್ಣ ಅಡ್ವಾಣಿ ನೇತೃತ್ವದಲ್ಲಿ ಜರುಗಿದ ಬಿಜೆಪಿ ರಥಯಾತ್ರೆ ದೇಶಾದ್ಯಂತ ಕೋಮುಜ್ವಾಲೆಯನ್ನು ಭುಗಿಲೆಬ್ಬಿಸಿತ್ತು. ಈ ‘ಜ್ವಾಲೆ’ಯು 1992ರಲ್ಲಿ ಬಾಬರಿ ಮಸೀದಿಯ ನೆಲಸಮಕ್ಕೆ ದಾರಿ ಮಾಡಿತು. ವಿವಾದಿತ ಸ್ಥಳದಲ್ಲಿ ನಿಂತಿದ್ದ ಬಾಬರಿ ಮಸೀದಿಯನ್ನು1992ರ ಡಿಸೆಂಬರ್ ಆರರಂದು ಹಿಂದೂ ಕರಸೇವಕರು ನೆಲಸಮ ಮಾಡಿದರು. ನಂತರ ದೇಶದಾದ್ಯಂತ ನಡೆದ ಕೋಮು ಗಲಭೆಗಳಿಗೆ ಕನಿಷ್ಠ ಎರಡು ಸಾವಿರ ಮಂದಿ ಬಲಿಯಾಗಿದ್ದರು.
ತಾಂತ್ರಿಕವಾಗಿ ಈ 2.77 ಎಕರೆ ಜಮೀನಿನ ಹಕ್ಕನ್ನು ಮೂವರು ಅರ್ಜಿದಾರರಲ್ಲಿ ಖುದ್ದು ಒಬ್ಬನಾಗಿದ್ದ ದೈವ ಶ್ರೀರಾಮನಿಗೇ (ರಾಮಲಲ್ಲಾ ಅರ್ಥಾತ್ ಬಾಲರಾಮ) ನೀಡಲಾಗಿದೆ. ವಿವಾದಿತ ಸ್ಥಳದ ಹೊರಪ್ರಾಂಗಣವು ಸತತವಾಗಿ ತಮ್ಮ ಅಧೀನದಲ್ಲಿತ್ತು ಮತ್ತು ಅಲ್ಲಿ ಪೂಜೆ ಪುನಸ್ಕಾರಗಳು ಯಾವ ಕಾಲದಲ್ಲೂ ನಿಲ್ಲದೆ ನಡೆಯುತ್ತ ಬಂದಿವೆ ಎಂಬ ಅಂಶವನ್ನು ಹಿಂದೂಗಳು ನ್ಯಾಯಾಲಯದ ಮುಂದೆ ರುಜುವಾತು ಮಾಡಿ ತೋರಿದ್ದಾರೆ. ಆದರೆ ಒಳಾಂಗಣವು ಸತತವಾಗಿ ತನ್ನ ಅಧೀನದಲ್ಲಿತ್ತು ಮತ್ತು ಅಲ್ಲಿ ನಮಾಜು ನಿರಂತರವಾಗಿ ನಿಲ್ಲದೆ ನಡೆಯಿತು ಎಂಬುದನ್ನು ಸಮರ್ಥಿಸುವಲ್ಲಿ ಮುಸ್ಲಿಮ್ ಅರ್ಜಿದಾರರು ವಿಫಲರಾಗಿದ್ದಾರೆ ಎಂದು ತೀರ್ಪಿನಲ್ಲಿ ಹೇಳಲಾಗಿದೆ.
ಭಾರತ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ವರದಿಯನ್ನು ನ್ಯಾಯಾಲಯದ ತೀರ್ಪು ವ್ಯಾಪಕವಾಗಿ ಅವಲಂಬಿಸಿದೆ. ವಿವಾದಿತ ಜಮೀನಿನ ಕೆಳಗೆ ಹಿಂದೂ ಮಂದಿರದ ಅವಶೇಷಗಳು ದೊರೆತಿವೆ ಎಂದು ಈ ವರದಿ ಹೇಳಿತ್ತು. ಆದರೆ ಮಂದಿರವನ್ನು ಕೆಡವಿ ಆ ಜಾಗದಲ್ಲಿ ಬಾಬರಿ ಮಸೀದಿ ಕಟ್ಟಲಾಗಿದೆಯೇ ಎಂಬುದರ ಕುರಿತು ಮೌನ ತಳೆದಿತ್ತು. ಹಿಂದೂಗಳು ಈ ಜಾಗವನ್ನು ರಾಮಜನ್ಮಭೂಮಿ ಎಂದು ನಂಬುತ್ತಾರೆ. ಈ ನಂಬಿಕೆ ನಿರ್ವಿವಾದಿತ. ಮುಸಲ್ಮಾನರೂ ಇದನ್ನು ಅಲ್ಲಗಳೆದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಸೀತಾ ರಸೋಯಿ (ಸೀತೆಯ ಅಡುಗೆ ಮನೆ), ರಾಮ್ ಚಬೂತ್ರ ಹಾಗೂ ಭಂಡಾರ ಗೃಹಗಳ ಅಸ್ತಿತ್ವವು ಈ ಜಾಗದ ಧಾರ್ಮಿಕ ಸ್ವರೂಪದ ಸಾಕ್ಷ್ಯಗಳು ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.
ಇಂದು ಹೊರಬಿದ್ದ ತೀರ್ಪಿನ ಆದೇಶದ ಭಾಗಗಳು ಹೀಗಿವೆ-
ಈ ತಕರಾರಿನ ಸಂಗತಿಗಳು, ಸಾಕ್ಷ್ಯಗಳು ಹಾಗೂ ಮೌಖಿಕ ವಾದ ಮಂಡನೆಗಳು ಇತಿಹಾಸ, ಪುರಾತತ್ವಶಾಸ್ತ್ರ, ಧರ್ಮ ಹಾಗೂ ಕಾನೂನಿನ ಕ್ಷೇತ್ರಗಳನ್ನು ಸಂಚರಿಸಿವೆ. ರಾಜಕೀಯ, ಇತಿಹಾಸ, ಧರ್ಮ ಹಾಗೂ ಸಿದ್ಧಾಂತದ ವಾದಗಳಿಂದ ಕಾನೂನು ಪ್ರತ್ಯೇಕವಾಗಿ ನಿಲ್ಲಬೇಕು.
ನಮ್ಮ ಬಹುಸಂಸ್ಕೃತಿಯ ಸಮಾಜ ನಿಂತಿರುವ ಸೌಧದ ತಳಪಾಯವನ್ನು ಒದಗಿಸಿಕೊಡುವುದು ಕಾನೂನೇ ಎಂಬುದನ್ನು ಮರೆಯುವಂತಿಲ್ಲ. ಸಂವಿಧಾನದ ಪ್ರಕಾರ ಎಲ್ಲ ಬಗೆಯ ನಂಬಿಕೆಗಳು, ಪೂಜೆಗಳು ಹಾಗೂ ಪ್ರಾರ್ಥನೆಗಳು ಸಮಾನ.
ಹಾಲಿ ತಕರಾರಿನಲ್ಲಿ ಸ್ಥಿರಾಸ್ತಿಯೊಂದರ ಒಡೆತನದ ವಿವಾದವನ್ನು ಕಾನೂನು ಮತ್ತು ಸಾಕ್ಷ್ಯಾಧಾರಗಳಿಗೆ ಅನುಸಾರವಾಗಿ ಇತ್ಯರ್ಥಪಡಿಸಲಾಗಿದೆ.
ವಿವಾದಿತ ಸ್ಥಳದ ಕುರಿತು ಕಾನೂನು ಪ್ರಕಾರ ತಕರಾರು ಎದ್ದದ್ದು 1857ರಲ್ಲಿ. ಅಲ್ಲಿಯ ತನಕ ಈ ಹದಿನಾರನೆಯ ಶತಮಾನದಲ್ಲಿ ಕಟ್ಟಲಾಗಿದ್ದ ಬಾಬರಿ ಮಸೀದಿ ತನ್ನ ಸಂಪೂರ್ಣ ಸ್ವಾಧೀನದಲ್ಲಿತ್ತು ಎಂಬುದನ್ನು ರುಜುವಾತು ಮಾಡುವಲ್ಲಿ ಮುಸಲ್ಮಾನರು ವಿಫಲರಾಗಿದ್ದಾರೆ. ಈ ಕುರಿತು ಯಾವ ಸಾಕ್ಷ್ಯವನ್ನೂ ಅವರು ಹಾಜರು ಮಾಡಿಲ್ಲ. ನಮಾಜು ನಿರಂತರವಾಗಿ ನಡೆಯಿತೆನ್ನಲು ಸಾಕ್ಷ್ಯ್ಯಾಧಾರ ಇಲ್ಲ. ಇಲ್ಲಿ ಕಟ್ಟಕಡೆಯ ನಮಾಜು ನಡೆದದ್ದು 1949ರ ಡಿಸೆಂಬರ್ 16ರಂದು. 1949ರ ಡಿಸೆಂಬರ್ 22-23ರ ನಡುವಣ ರಾತ್ರಿ ಹಿಂದೂ ದೇವತೆಗಳ ಮೂರ್ತಿಗಳನ್ನು ಒಳಪ್ರಾಂಗಣದಲ್ಲಿ ತಂದಿಟ್ಟು ಮಸೀದಿಯನ್ನು ಅಪವಿತ್ರಗೊಳಿಸಲಾಯಿತು. ಆ ಸಂದರ್ಭದಲ್ಲಿ ಮುಸಲ್ಮಾನರನ್ನು ಅಲ್ಲಿಂದ ಹೊರದಬ್ಬಿದ್ದು ಕಾನೂನು ಬಾಹಿರವಾಗಿತ್ತು. ಅವರ ಧಾರ್ಮಿಕ ತಾಣವನ್ನು ಅವರ ಕೈ ತಪ್ಪಿಸುವ ಲೆಕ್ಕಾಚಾರದ ಕೃತ್ಯವಾಗಿತ್ತು.
ಕ್ರಿಮಿನಲ್ ಪ್ರಕರಣವೊಂದನ್ನು ದಾಖಲು ಮಾಡಿಕೊಂಡ ನಂತರ ರಿಸೀವರ್ ನೇಮಕ ಮಾಡಿ ಒಳಪ್ರಾಂಗಣವನ್ನು ಮುಟ್ಟುಗೋಲು ಹಾಕಿಕೊಂಡ ನಂತರ ಹಿಂದೂ ದೇವತಾ ಮೂರ್ತಿಗಳ ಪೂಜೆಗೆ ಅವಕಾಶ ಮಾಡಿಕೊಡಲಾಯಿತು. ತಕರಾರು ಅರ್ಜಿಗಳ ವಿಚಾರಣೆ ಬಾಕಿ ಇರುವಂತೆಯೇ ಇಡೀ ಮಸೀದಿಯನ್ನು ನೆಲಸಮ ಮಾಲಾಯಿತು. ಸಾರ್ವಜನಿಕ ಪೂಜಾ ಸ್ಥಳವನ್ನು ನಾಶ ಮಾಡಿದ ಲೆಕ್ಕಾಚಾರದ ಕೃತ್ಯವದು. 450 ವರ್ಷಗಳ ಹಿಂದೆ ಕಟ್ಟಲಾಗಿದ್ದ ಮಸೀದಿಯೊಂದನ್ನು ಮುಸಲ್ಮಾನರ ಕೈ ತಪ್ಪಿಸಿದ್ದು ತಪ್ಪು.
ಈ ವಿವಾದಿತ ಸ್ಥಳವನ್ನು ಮೂವರೂ ಅರ್ಜಿದಾರರಿಗೆ ಸಮನಾಗಿ ಹಂಚಿಕೊಟ್ಟಿರುವ ಹೈಕೋರ್ಟ್ ತೀರ್ಪು ಕಾನೂನಿನ ಪ್ರಕಾರ ಊರ್ಜಿತವಲ್ಲ. ಸಾರ್ವಜನಿಕ ಶಾಂತಿ ಕಾಪಾಡುವಲ್ಲಿಯೂ ಈ ಕ್ರಮ ಕಾರ್ಯಸಾಧ್ಯವಲ್ಲ. ಇಡೀ ವಿವಾದಿತ ಜಾಗದ ವಿಸ್ತೀರ್ಣ 1500 ಚದರ ಗಜಗಳು. ಇದನ್ನು ಹಂಚಿಕೆ ಮಾಡಿದರೆ ಯಾವ ಅರ್ಜಿದಾರರ ಹಿತವೂ ಪೂರ್ಣವಾಗುವುದಿಲ್ಲ. ಜೊತೆಗೆ ಚಿರಕಾಲ ಶಾಂತಿ ನೆಲೆಸುವುದೂ ಅಸಾಧ್ಯ.
1949ರಲ್ಲಿ ಮುಸ್ಲಿಮರ ಮಸೀದಿಯನ್ನು ಅಪವಿತ್ರಗೊಳಿಸಿ, 1992ರಲ್ಲಿ ನೆಲಸ ಮಾಡಲಾದ ಕಾರಣ ಅವರಿಗೆ ಪ್ರತ್ಯೇಕ ನಿವೇಶನ ನೀಡುವುದು ಅತ್ಯಗತ್ಯ. ತಪ್ಪಿಗೆ ಪರಿಹಾರ ದೊರೆಯಬೇಕು. ಕಾನೂನಿನ ಆಡಳಿತವಿರುವ ಜಾತ್ಯತೀತ ದೇಶವೊಂದರಲ್ಲಿ ಮಸೀದಿಯೊಂದನ್ನು ಮುಸ್ಲಿಮರ ಕೈ ತಪ್ಪಿಸಲು ನಡೆದ ಕೃತ್ಯವನ್ನು ನ್ಯಾಯಾಲಯ ನಿರ್ಲಕ್ಷಿಸುವುದು ಸಾಧ್ಯವಿಲ್ಲ. ಸಂವಿಧಾನದ ಪ್ರಕಾರ ಎಲ್ಲ ಧರ್ಮಗಳೂ ಸಮಾನ. ಸಹಿಷ್ಣುತೆ ಮತ್ತು ಸಹಬಾಳ್ವೆಯು ನಮ್ಮ ದೇಶಕ್ಕೆ ಮತ್ತು ಅದರ ಜನಸಮೂಹಗಳಿಗೆ ನೀಡಲಾಗುವ ಜಾತ್ಯತೀತ ಪ್ರತಿಬದ್ಧತೆ. ಈ ಹಿನ್ನೆಲೆಯಲ್ಲಿ ಉತ್ತರಪ್ರದೇಶ ಸರ್ಕಾರವಾಗಲಿ, ಕೇಂದ್ರ ಸರ್ಕಾರವೇ ಆಗಲಿ ಸುನ್ನಿ ಕೇಂದ್ರ ವಕ್ಫ್ ಮಂಡಳಿಗೆ ಅಯೋಧ್ಯೆಯಲ್ಲಿ ಐದು ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಂಡು ಹಂಚಿಕೆ ಮಾಡಬೇಕು. ಈ ಹಸ್ತಾಂತರ ಮತ್ತು ವಿವಾದಿತ ಜಮೀನಿನ ಹಸ್ತಾಂತರ ಜೊತೆ ಜೊತೆಗೆ ಜರುಗಬೇಕು.
ವಿವಾದಿತ ಜಮೀನನ್ನು ವಿಶ್ವಸ್ಥ ಮಂಡಳಿಯೊಂದನ್ನು ಮೂರು ತಿಂಗಳ ಒಳಗಾಗಿ ರಚಿಸಿ ಅದಕ್ಕೆ ಹಸ್ತಾಂತರ ಮಾಡಬೇಕು. ಅಲ್ಲಿಯ ತನಕ ಈ ಜಮೀನು ಕೇಂದ್ರ ಸರ್ಕಾರದ ರಿಸೀವರ್ ಅಧೀನದಲ್ಲಿರುತ್ತದೆ.