ದೇಶದ ವಿವಿಧ ರಾಜಕೀಯ ಪಕ್ಷಗಳು ಉದ್ಯಮಿಗಳು , ಶ್ರೀಮಂತರೊಂದಿಗೆ ಹೊಂದಿರುವ ನಂಟು ಹೊಸತೇನಲ್ಲ. ಇದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಉದ್ಯಮಿಗಳು ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆ ಅಥವಾ ಕೊಡುಗೆಗೆ ಪ್ರತಿಯಾಗಿ ತಮ್ಮ ಉದ್ಯಮಕ್ಕೆ ಅನುಕೂಲವಾಗುವಂತೆ ಹಲವು ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಾರೆ ಎಂಬುದು ಜನಸಾಮಾನ್ಯರ ನಂಬಿಕೆ. ಅದರೆ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವವರ ಹೆಸರೇ ಗೊತ್ತಾಗದೇ ಹೋದರೆ ? ಆಳುವ ಪಕ್ಷದ ರಾಜಕಾರಣಿಗಳು ಯಾರಿಗೆ ಯಾವ ರೀತಿಯ ಫೇವರ್ ಮಾಡಿದ್ದಾರೆ ಎಂದು ಕನಿಷ್ಟ ಪಕ್ಷ ಊಹಿಸಲೂ ಸಾಧ್ಯವೇ ಇಲ್ಲ. ಅದರೆ, ಆಡಳಿತದ ಪಾರದರ್ಶಕತೆಗೆ ಸಂಪೂರ್ಣವಾಗಿ ವಿರುದ್ದವಾಗಿರುವಂತಹ ವಿಚಾರವಿದು.
ಅಸೋಸಿಯೇಷನ್ ಫಾರ್ ಡೆಮಾಕ್ರಾಟಿಕ್ ರಿಫಾರ್ಮ್ಸ್ ಸಂಸ್ಥೆ ಬಿಡುಗಡೆ ಮಾಡಿರುವ ವರದಿಯಲ್ಲಿ (ADR Report) ಭಾರತದ ಏಳು ರಾಷ್ಟ್ರೀಯ ಪಕ್ಷಗಳು 2018 -19 ರ ಆರ್ಥಿಕ ವರ್ಷದಲ್ಲಿ 3,749.37 ಕೋಟಿ ರೂ.ಗಳನ್ನು ಪಡೆದಿದ್ದು, ಅದರಲ್ಲಿ 67% ನಷ್ಟು “ಅಪರಿಚಿತ ಮೂಲಗಳಿಂದ” ಬಂದಿದ್ದು ಇದರ ಮೂಲ ಕಂಡುಹಿಡಿಯಲಾಗುವುದಿಲ್ಲ ಎಂದು ಹೇಳಿದೆ. ಒಟ್ಟು ಹಣದ ಪೈಕಿ, ದೇಶದ ಆಡಳಿತಾರೂಢ ಭಾರತೀಯ ಜನತಾ ಪಕ್ಷವು 1,612.04 ಕೋಟಿ ರೂಪಾಯಿಗಳ ದೇಣಿಗೆ ಪಡೆದಿದ್ದು, ಇದು ಇತರ ರಾಷ್ಟ್ರೀಯ ಪಕ್ಷಗಳ ಒಟ್ಟು ಆದಾಯದ 64% ಪಟ್ಟು ಹೆಚ್ಚು ಎಂದು ವರದಿಯಲ್ಲಿ ತಿಳಿಸಲಾಗಿದೆ. “ಬಿಜೆಪಿಯ ಆದಾಯವು ಇತರ 5 ರಾಷ್ಟ್ರೀಯ ಪಕ್ಷಗಳು (ರೂ. 900.94 ಕೋಟಿ) ಘೋಷಿಸಿದ ಅಪರಿಚಿತ ಮೂಲಗಳಿಂದ ಬರುವ ಆದಾಯಕ್ಕಿಂತ ಒಂದೂವರೆ ಪಟ್ಟು ಹೆಚ್ಚು” ಎಂದು ವರದಿ ತಿಳಿಸಿದೆ.
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ರಾಜಕೀಯ ಲಾಭದಾಯಕತೆಯ ಮೇಲೆ ಕಾರ್ಯನಿರ್ವಹಿಸುವ ಲಾಭರಹಿತ ಸಂಸ್ಥೆಯಾಗಿದ್ದು, ಅದರ ಸಂಶೋಧಕರು ಬಿಜೆಪಿ, ಕಾಂಗ್ರೆಸ್, ಬಹುಜನ ಸಮಾಜ ಪಕ್ಷ, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ, ತೃಣಮೂಲ ಕಾಂಗ್ರೆಸ್, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಮತ್ತು ಭಾರತದ ಕಮ್ಯುನಿಸ್ಟ್ ಪಕ್ಷವು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ತೆರಿಗೆ ರಿಟರ್ನ್ಸ್ ಮತ್ತು ದೇಣಿಗೆ ವರದಿಗಳನ್ನು ಅಧ್ಯಯನ ಮಾಡಿ ಈ ವರದಿಯನ್ನು ಸಿದ್ದಪಡಿಸಿದೆ. ಸಿಪಿಐ (ಎಂ) ಪಕ್ಷದ 2017-18 ರ ಮಾಹಿತಿಗಳು ಲಭ್ಯವಿರದ ಕಾರಣದಿಂದ ಅಧ್ಯಯನದಲ್ಲಿ ಮೌಲ್ಯಮಾಪನ ಮಾಡಲಾಗಿಲ್ಲ ಎಂದು ಸಂಸ್ಥೆ ಹೇಳಿದೆ.
ಬಹುಜನ ಸಮಾಜ ಪಕ್ಷವು ಸ್ವಯಂಪ್ರೇರಿತ ಕೊಡುಗೆಗಳಿಂದ (20,000 ರೂ.ಗಿಂತ ಹೆಚ್ಚಿನ ಅಥವಾ ಅದಕ್ಕಿಂತ ಕಡಿಮೆ), ಕೂಪನ್‌ಗಳು / ಚುನಾವಣಾ ಬಾಂಡ್‌ಗಳ ಮಾರಾಟ ಅಥವಾ ಅಪರಿಚಿತ ಆದಾಯದ ಮೂಲಗಳಿಂದ ಯಾವುದೇ ಹಣವನ್ನು ಸ್ವೀಕರಿಸಲಿಲ್ಲ ಎಂದು ಘೋಷಿಸಿದೆ ಎಂದು ವರದಿ ತಿಳಿಸಿದೆ. ಇತರ ಆರು ಪಕ್ಷಗಳ ಪೈಕಿ, ಕಾಂಗ್ರೆಸ್ ಪಕ್ಷವು 728.88 ಕೋಟಿ ರೂ ಪಡೆದಿದ್ದು ಇದು ಇತರ ಎಲ್ಲಾ ಪಕ್ಷಗಳ ಒಟ್ಟು ಆದಾಯದ 29%. ಆಗಿದೆ. 2018-19 ರ ಅವಧಿಯಲ್ಲಿ ಚುನಾವಣಾ ಬಾಂಡ್‌ಗಳಿಂದ ಪಕ್ಷಗಳ ಅಪರಿಚಿತ ಆದಾಯದ ಪಾಲು 1960.68ಕೋಟಿ ರೂಪಾಯಿಗಳಾಗಿವೆ.
ಇದನ್ನೂ ಓದಿ: ಬಿಜೆಪಿ ಬೊಕ್ಕಸ ತುಂಬುವ ಎಲೆಕ್ಟೋರಲ್ ಬಾಂಡ್!
ರಾಷ್ಟ್ರೀಯ ಪಕ್ಷಗಳು 2004-05 ಮತ್ತು 2018-19 ರ ನಡುವೆ ಒಟ್ಟು 11,234.12 ಕೋಟಿ ರೂಪಾಯಿಗಳ ಅದಾಯ ಪಡೆದಿವೆ . ಪಕ್ಷಗಳ 2018-19 ಹಣಕಾಸು ವರ್ಷದ ವರದಿಯ ಪ್ರಕಾರ ರಾಜಕೀಯ ಪಕ್ಷಗಳು 71.44 ಲಕ್ಷ ರೂ.ನಗದು ದೇಣಿಗೆ ಸ್ವೀಕರಿಸಿವೆ. ಕಾಂಗ್ರೆಸ್ ಮತ್ತು ಎನ್‌ಸಿಪಿ 2004-’05 ಮತ್ತು 2018-’19 ರ ನಡುವೆ ಕೂಪನ್‌ಗಳ ಮಾರಾಟದ ಮೂಲಕ 3902.63 ಕೋಟಿ ರೂ.ಗಳನ್ನು ಗಳಿಸಿವೆ ಎಂದು ವರದಿ ತಿಳಿಸಿದೆ. ವರದಿಯ ಪ್ರಕಾರ ತಿಳಿದಿರುವ ಮೂಲಗಳಿಂದ ಬರುವ 20,000 ರೂ.ಗಿಂತ ಹೆಚ್ಚಿನ ಆದಾಯವನ್ನು ದೇಣಿಗೆ ಎಂದು ವ್ಯಾಖ್ಯಾನಿಸಿದೆ. ಈ ರೀತಿ ನೀಡಿರುವ ಹಣದ ದಾನಿಗಳ ವಿವರಗಳನ್ನು ಪಕ್ಷಗಳು ಲಭ್ಯವಾಗಿಸಿವೆ. ತೆರಿಗೆ ರಿಟರ್ನ್‌ಗಳಲ್ಲಿ 20,000 ರೂ.ಗಿಂತ ಕಡಿಮೆ ನೀಡಲಾದ ದೇಣಿಗೆಗಳನ್ನು ಆದಾಯವೆಂದು ಘೋಷಿಸಲಾಗಿದೆ ಆದರೆ ಗುರುತಿಸಲಾಗದ ಮೂಲಗಳಿಂದ ಬಂದಿರುವ ಹಣವನ್ನು ಅಪರಿಚಿತ ಮೂಲಗಳಿಂದ ಬಂದಂತಹ ಗಳಿಕೆ ಎಂದು ವರ್ಗೀಕರಿಸಲಾಗಿದೆ. ಅಂತಹ ಮೂಲಗಳಲ್ಲಿ ಚುನಾವಣಾ ಬಾಂಡ್‌ಗಳು, ಕೂಪನ್‌ಗಳು, ಪರಿಹಾರ ನಿಧಿಗಳು ಮತ್ತು ಸಭೆಗಳ ಕೊಡುಗೆಗಳು ಸೇರಿವೆ.
ಚುನಾವಣಾ ಬಾಂಡ್‌ಗಳು ನಾಗರಿಕರು ಅಥವಾ ಕಾರ್ಪೊರೇಟ್ ಗುಂಪುಗಳು ಬ್ಯಾಂಕಿನಿಂದ ಖರೀದಿಸಿ ರಾಜಕೀಯ ಪಕ್ಷಕ್ಕೆ ನೀಡಬಹುದಾದ ವಿತ್ತೀಯ ಸಾಧನಗಳಾಗಿವೆ. ನಂತರ ಅವುಗಳನ್ನು ಪಕ್ಷಗಳು ಸೂಕ್ತ ರೀತಿಯಲ್ಲಿ ವಿನಿಯೋಗಿಸಿಕೊಳ್ಳುತ್ತವೆ. ಕೇಂದ್ರ ಹಣಕಾಸು ಮಾಜಿ ಸಚಿವ ಅರುಣ್ ಜೇಟ್ಲಿ ಅವರು 2017 ರಲ್ಲಿ ತಮ್ಮ ಬಜೆಟ್ ಭಾಷಣದಲ್ಲಿ ಈ ಯೋಜನೆಯನ್ನು ಘೋಷಿಸಿದ್ದರು, ರಾಜಕೀಯ ಧನಸಹಾಯವನ್ನು ಸ್ವಚ್ಚಗೊಳಿಸಲು ಮತ್ತು ಅದನ್ನು ಪಾರದರ್ಶಕ ಪ್ರಕ್ರಿಯೆಯನ್ನಾಗಿ ಮಾಡಲು ಸರ್ಕಾರ ಬಯಸಿದೆ ಎಂದು ಹೇಳಿದ್ದರು. ಮಾರ್ಚ್‌ನಿಂದ ಬ್ಯಾಂಕ್ ಬಾಂಡ್‌ಗಳನ್ನು ಮಾರಾಟ ಮಾಡಲು ಪ್ರಾರಂಭಿಸಿತು.
ಇದನ್ನೂ ಓದಿ: ಮೋದಿ ಪಕ್ಷಕ್ಕೆ ಸಾವಿರಾರು ಕೋಟಿ ಲಾಭ ತಂದುಕೊಟ್ಟ ಎಲೆಕ್ಟೊರಲ್ ಬಾಂಡ್ ಯೋಜನೆ
ಆದಾಗ್ಯೂ, ಈ ಬಾಂಡ್‌ಗಳ ಖರೀದಿಯನ್ನು ಯಾರೂ ಘೋಷಿಸುವ ಅಗತ್ಯವಿಲ್ಲದ ಕಾರಣ ಮತ್ತು ರಾಜಕೀಯ ಪಕ್ಷಗಳು ಹಣದ ಮೂಲವನ್ನು ಘೋಷಿಸುವ ಅಗತ್ಯವಿಲ್ಲದ ಕಾರಣ ಇಡೀ ಪ್ರಕ್ರಿಯೆಯು ಅನಾಮಧೇಯವಾಗಿದೆ. ಚೆಕ್ ಮೂಲಕ ಹಣವನ್ನು ನೀಡಬೇಕಾಗಿರುವುದರಿಂದ ಹಣವನ್ನು “ಕಪ್ಪು” ಆಗುವ ಸಾಧ್ಯತೆಯಿಲ್ಲ ಎಂದು ಸರ್ಕಾರ ವಾದಿಸಿದೆ. ಒಟ್ಟಿನಲ್ಲಿ ಈ ರೀತಿ ಅನಾಮಧೇಯ ಮೂಲಗಳಿಂದ ದೇಣಿಗೆ ಸ್ವೀಕರಿಸಲು ಸರ್ಕಾರವೇ ಅನುವು ಮಾಡಿಕೊಟ್ಟಿದ್ದರೂ ರಾಜಕೀಯ ಪಕ್ಷಗಳ ದೇಣಿಗೆ ವ್ಯವಸ್ಥೆ ಸ್ವಚ್ಚವಾಗಿಲ್ಲ ಎಂಬುದನ್ನು ನಿರೂಪಿಸುತ್ತದೆ.