ಕ್ರಿಮಿನಲ್ ಪ್ರಕರಣ ಇರುವಂತಹ ವ್ಯಕ್ತಿಗಳಿಗೆ ಯಾವುದೇ ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಬಾರದು ಎಂದು ಭಾರತೀಯ ಚುನಾವಣಾ ಆಯೋಗವು ಸುಪ್ರಿಂ ಕೋರ್ಟ್‌ನಲ್ಲಿ ಮನವಿ ಮಾಡಿಕೊಂಡಿದೆ. 2018ರಲ್ಲಿ ಚುನಾವಣಾ ಆಯೋಗವು ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಮೇಲೆ ಕ್ರಿಮಿನಲ್ ಆರೋಪಗಳಿದ್ದರೆ ಅವುಗಳನ್ನು ಎಲೆಕ್ಟ್ರಾನಿಕ್ ಹಾಗೂ ಮುದ್ರಣ ಮಾಧ್ಯಮಗಳ ಮೂಲಕ ಜನರಿಗೆ ತಿಳಿಸುವಂತೆ ಆದೇಶವನ್ನು ಹೊರಡಿಸಿತ್ತು. ಆದರೆ, ಇದರಿಂದ ರಾಜಕೀಯ ಅಪರಾಧಗಳ ಸಂಖ್ಯೆ ಕಡಿಮೆಯಾಗದೇ ಇರುವುದನ್ನು ಗಮನಿಸಿದ ಚುನಾವಣಾ ಆಯೋಗ ಈಗ ಸುಪ್ರಿಂ ಮೊರೆ ಹೋಗಿದೆ.
ಅಪರಾಧಿ ಹಿನ್ನೆಲೆ ಉಳ್ಳಂತಹ ಚ್ಯಕ್ತಿಗಳಿಗೆ ಪಕ್ಷದಿಂದ ಚುನಾವಣೆಯನ್ನು ಸ್ಪರ್ಧಿಸಲು ಅವಕಾಶ ಮಾಡಿಕೊಡಬಾರದು ಎಂದು ಈಗ ಚುನಾವಣಾ ಆಯೋಗವು ಕೇಳಿಕೊಂಡಿದೆ. ಕೇವಲ ತಮ್ಮ ಮೇಲಿರುವ ಕೇಸುಗಳ ಪಟ್ಟಿಯನ್ನು ಘೋಷಿಸಿಕೊಂಡರೆ ಉಪಯೋಗವಿಲ್ಲ ಎಂಬುದು ಚುನಾವಣಾ ಆಯೋಗದ ವಾದ.
ಆರ್ ಎಫ್ ನರೀಮನ್ ಹಾಗೂ ಎಸ್ ರವೀಂದ್ರ ಭಟ್ ನ್ಯಾಯಾಧೀಶರಾಗಿ ಇದ್ದಂತಹ ಸುಪ್ರಿಂ ಕೋರ್ಟ್‌ನ ಪೀಠವು, ರಾಜಕೀಯವನ್ನು ಅಪರಾಧ ಮುಕ್ತಗೊಳಿಸುವ ಸಲುವಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತಾಗಿ ರೂಪು ರೇಷೆಯನ್ನು ಒಂದು ವಾರದೊಳಗಾಗಿ ಸಿದ್ದಪಡಿಸಲು ಹೇಳಿದೆ.

ಸಂಸತ್ತಿನಲ್ಲಿ 43% ಅಪರಾಧಿ ಹಿನ್ನೆಲೆ ಉಳ್ಳವರು!
ADR ವರದಿಯ ಪ್ರಕಾರ 2019ರಲ್ಲಿ ನಡೆದ ಸಂಸತ್ ಚುನಾವಣೆಯಲ್ಲಿ ಆಯ್ಕೆಗೊಂಡಂತಹ ಸಂಸದರಲ್ಲಿ ಶೇಕಡಾ 43ರಷ್ಟು ಜನರ ಮೇಲೆ ಕ್ರಮಿನಲ್ ಮೊಕದ್ದಮೆಗಳಿವೆ. ಇವರಲ್ಲಿ ಬಿಜೆಪಿಯ 116 ಸಂಸದರು ಕ್ರಿಮಿನಲ್ ಪ್ರಕರಣಗನ್ನು ಎದುರಿಸುತ್ತಿದ್ದರೆ, ಕಾಂಗ್ರೆಸ್‌ನ 29, ಜೆಡಿಯು ನ 13, ತಮಿಳುನಾಡಿನ DMKಯ 10 ಹಾಗೂ ತೃಣಮೂಲ ಕಾಂಗ್ರೆಸ್‌ನ 9 ಸಂಸದರ ಮೇಲೆ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿವೆ.
ಇನ್ನು 2014ರ ಚುನಾವಣೆಯಲ್ಲಿ ಆಯ್ಕೆಯಾದ ಸಂಸದರಲ್ಲಿ ಶೇಕಡಾ 34 ಸಂಸದರು ಕ್ರಿಮಿನಲ್ ಹಿನ್ನೆಲೆಯಿಂದ ಬಂದವರಾಗಿದ್ದರು. 185 ಸಂಸದರ ವಿರುದ್ದ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿದ್ದವು. ಅವರಲ್ಲಿ 112 ಜನರ ವಿರುದ್ದ ಕೊಲೆ, ಅತ್ಯಾಚಾರದಂತಹ ಗಂಭಿರವಾದ ಪ್ರಕರಣಗಳು ದಾಖಲಾಗಿದ್ದವು.
ಈಗಿನ ಪಾರ್ಲಿಮೆಂಟ್‌ನಲ್ಲಿ ಕ್ರಿಮಿನಲ್ ಹಿನ್ನೆಲೆ ಇರುವಂತಹ ಸಂಸದರಲ್ಲಿ ಶೇಕಡಾ 29 ಸಂಸದರ ಮೇಲೆ ಭಯೋತ್ಪಾದನೆ, ಅತ್ಯಾಚಾರ, ಕೊಲೆ, ಕೊಲೆ ಯತ್ನ, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯದಂತಹ ಗುರುತರವಾದ ಆರೋಪಗಳಿವೆ. 2009ರ ನಂತರ ಕ್ರಿಮಿನಲ್ ಹಿನ್ನೆಲೆ ಇರುವ ಸಂಸದರ ಸಂಖ್ಯೆ ಶೇಕಡಾ 109ರಷ್ಟು ಹೆಚ್ಚಾಗಿರುವ ಆಘಾತಕಾರಿ ಅಂಶವನ್ನು ADR ವರದಿ ಬಹಿರಂಗಪಡಿಸಿದೆ.

ಬಿಜೆಪಿಯ ಐವರು, ಬಹುಜನ ಸಮಾಜವಾದಿ ಪಾರ್ಟಿಯ ಇಬ್ಬರು, ಕಾಂಗ್ರೆಸ್, ಎನ್‌ಸಿಪಿ ಹಾಗೂ ವೈಎಸ್‌ಆರ್ ಪಕ್ಷದ ತಲಾ ಒಬ್ಬರ ಮೇಲೆ ಕೊಲೆ ಆರೋಪ ಇದೆ. ಇನ್ನು ಬಿಜೆಪಿಯ 2008ರ ಮಾಲೆಗಾಂವ್ ಸ್ಪೋಟದಲ್ಲಿ ಭಾಗಿಯಾಗುರುವ ಕುರಿತು ಬಿಜೆಪಿಯಿಂದ ಮೊದಲ ಬಾರಿ ಸಂಸತ್ತಿಗೆ ಆಯ್ಕೆಯಾದ ಪ್ರಗ್ಯಾ ಸಿಂಗ್ ಠಾಕೂರ್ ಅವರ ಮೇಲೆ ಭಯೋತ್ಪಾದನೆಯ ಪ್ರಕರಣ ದಾಖಲಾಗಿದೆ. ಕೇರಳದ ಇಡುಕ್ಕಿಯಿಂದ ಕಾಂಗ್ರೆಸ್ ಟಿಕೆಟ್ ಪಡೆದು ಗೆದ್ದಿರುವ ಕುರಿಯಕೋಸ್ ಅವರ ಮೇಲೆ ದರೋಡೆ, ನರಹತ್ಯೆ ಮುಂತಾದ 204 ಪ್ರಕರಣಗಳು ದಾಖಲಾಗಿವೆ. 29 ಸಂಸದರ ಮೇಲೆ ಪ್ರಚೋದನಕಾರಿ ಭಾಷಣಗಳನ್ನು ಮಾಡಿದಕ್ಕಾಗಿ, ಹಾಗೂ ಹೇಳಿಕೆಗಳನ್ನು ನೀಡಿದಕ್ಕಾಗಿ ಪ್ರಕರಣಗಳನ್ನು ದಾಖಲಿಸಲಾಗಿದೆ.
ಇವೆಲ್ಲಾ ಅಂಕಿ ಅಂಶಗಳನ್ನು ಗಮನಿಸಿದಾಗ, ಭಾರತದ ಸಂಸತ್ತು ಅಪರಾಧಿ ಹಿನ್ನೆಲೆಯಿಂದ ಬಂದಿರುವವರಿಂದ ತುಂಬಿ ತುಳುಕಿತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ. ಚುನಾವಣೆಯಲ್ಲಿ ಅಪರಾಧಿಗಳು ಗೆದ್ದು ಬಂದು ಕಾನೂನು ರೂಪಿಸಲು ಹೊರಟರೆ, ಬೇಲಿಯೇ ಎದ್ದು ಹೊಲ ಮೇಯ್ದ ಹಾಗೆ ಆಗುವುದು ಖಂಡಿತ. ಈ ನಿಟ್ಟಿನಲ್ಲಿ, ಚುನಾವಣಾ ಆಯೋಗವು ಸುಪ್ರಿಂ ಕೋರ್ಟ್‌ಗೆ ಸಲ್ಲಿಸಿರುವ ಮನವಿ ಬಹಳಷ್ಟು ಮಹತ್ವವನ್ನು ಪಡೆದಿದೆ. ಒಂದು ವೇಳೆ ಈ ಮನವಿಯನ್ನು ಸುಪ್ರಿಂ ಕೋರ್ಟ್ ಪುರಸ್ಕರಿಸಿದ್ದಲ್ಲಿ, ಅಪರಾಧಿಗಳು ಶಾಸನ ರೂಪಿಸುವುದನ್ನು ತಪ್ಪಿಸಬಹುದಾಗಿದೆ.