ರಾಜ್ಯ ವಿಧಾನಸಭೆ ಉಪ ಚುನಾವಣೆ ಮತದಾನದ ದಿನಾಂಕ ಸಮೀಪಿಸುತ್ತಿದ್ದಂತೆ ಪ್ರಚಾರದ ಭರಾಟೆ ಜೋರಾಗುತ್ತಿದೆ. ಇದರ ಜತೆ ಜತೆಗೆ ರಾಜಕೀಯ ನಾಯಕರ ಮಧ್ಯೆ ಮಾತಿನ ಸಮರವೂ ತೀವ್ರಗೊಳ್ಳುತ್ತಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ವೈಯಕ್ತಿಕ ಸೈದ್ಧಾಂತಿಕ ಟೀಕೆ, ರಾಜಕೀಯ ಟೀಕೆಗಳಿಗಿಂತ ವೈಯಕ್ತಿಕ ಟೀಕೆಗಳೇ ಹೆಚ್ಚು ಪ್ರಾಧಾನ್ಯತೆ ಪಡೆಯುತ್ತಿವೆ. ಇದರ ಜತೆಗೆ ಈ ಬಾರಿ ಅನರ್ಹ ಶಾಸಕರ ವಿರುದ್ಧ ಮತದಾರರ ಆಕ್ರೋಶ ಎಂಬ ಹೊಸ ರೀತಿಯ ಚುನಾವಣಾ ರಾಜಕೀಯ ಶುರುವಾಗಿದೆ.
ಈ ಬಾರಿ ಉಪ ಚುನಾವಣೆ ನಡೆಯುತ್ತಿರುವ 15 ಕ್ಷೇತ್ರಗಳ ಪೈಕಿ 13 ಕ್ಷೇತ್ರಗಳಲ್ಲಿ ಮೈತ್ರಿ ಸರ್ಕಾರ ಉರುಳಿಸಿ ಅನರ್ಹಗೊಂಡ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರು ಸ್ಪರ್ಧಿಸುತ್ತಿದ್ದಾರೆ. ಈ ಕ್ಷೇತ್ರಗಳಲ್ಲಿ ಅನರ್ಹ ಶಾಸಕರು ಮತದಾರರ ಆಕ್ರೋಶಕ್ಕೆ ತುತ್ತಾಗುತ್ತಿದ್ದಾರೆ. ಸ್ಥಳೀಯವಾಗಿ ಮತದಾರರು ಅವರ ವಿರುದ್ಧ ತಿರುಗಿ ಬಿದ್ದಿದ್ದಾರೆ. ನಿಮ್ಮಿಂದಲೇ ಉಪ ಚುನಾವಣೆ ನಡೆಯುತ್ತಿದೆ, ಗೆಲ್ಲಿಸಿದ ಪಕ್ಷಕ್ಕೆ ಕೈಕೊಟ್ಟು ಮತ್ತೊಂದು ಪಕ್ಷ ಸೇರಿ ಮತ್ತೆ ನಮ್ಮ ಬಳಿ ಬಂದಿದ್ದೀರಿ. ನಿಮಗೆ ಈ ಬಾರಿ ಮತ ಇಲ್ಲ, ಕಾಂಗ್ರೆಸ್ ಜೆಡಿಎಸ್ ಗೆ ನಂಬಿಕೆ ದ್ರೋಹ ಮಾಡಿ ಇದೀಗ ಮತ್ತೊಂದು ಪಕ್ಷದಿಂದ ಅದು ಹೇಗೆ ಗೆದ್ದು ಬರುತ್ತೀರಿ ಎಂಬುದನ್ನು ನಾವೂ ನೋಡುತ್ತೇವೆ, ರಾಜೀನಾಮೆ ಕೊಡುವ ಮುನ್ನ ನಮ್ಮನ್ನು ಕೇಳದೆ ಇದೀಗ ಮತ್ತೆ ಮತ ಕೇಳಲು ಬಂದಿದ್ದೀರಾ ನಿಮಗೆ ನಾಚಿಕೆಯಿಲ್ಲವೇ…. ಹೀಗೆ ಅನರ್ಹ ಶಾಸಕರನ್ನು ನಾನಾ ರೀತಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಅದರಲ್ಲೂ ಅಥಣಿ ಕ್ಷೇತ್ರದ ಅನರ್ಹ ಶಾಸಕ, ಬಿಜೆಪಿ ಅಭ್ಯರ್ಥಿ ಮಹೇಶ್ ಕುಮುಟಳ್ಳಿ ಅವರಿಗೆ ಸ್ವಗ್ರಾಮ ತೆಲಸಂಗದಲ್ಲಿ, “ಅಥಣಿ ಶಿವಯೋಗಿಗಳ ಪುಣ್ಯಕ್ಷೇತ್ರ. ಇಲ್ಲಿ ಹಣಕ್ಕಾಗಿ ತಮ್ಮ ಶಾಸಕ ಸ್ಥಾನವನ್ನೇ ಮಾರಾಟ ಮಾಡಿಕೊಂಡ ಅನರ್ಹರಿಗೆ ನಮ್ಮ ಗ್ರಾಮಗಳಿಗೆ ಪ್ರವೇಶವಿಲ್ಲ” ಎಂಬ ಫಲಕ ಗ್ರಾಮದ ಪ್ರವೇಶದ್ವಾರದಲ್ಲೇ ಸ್ವಾಗತ ಕೋರುತ್ತಿದೆ. ಹುಣಸೂರಿನ ಎಚ್.ವಿಶ್ವನಾಥ್, ಯಲ್ಲಾಪುರದ ಶಿವರಾಮ ಹೆಬ್ಬಾರ್ ಅವರಿಗೂ ಕ್ಷೇತ್ರದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇಂತಹ ವಿರೋಧಗಳ ಬಗ್ಗೆ ಪ್ರಚಾರ ಹೆಚ್ಚಾಗುತ್ತಿದ್ದಂತೆ ಇತರೆ ಕ್ಷೇತ್ರಗಳಲ್ಲೂ ಇಂತಹ ವಿರೋಧಗಳು ತೀವ್ರಗೊಳ್ಳುತ್ತಿದೆ.
ಅನರ್ಹ ಶಾಸಕರಿಗೆ ಮತದಾರರಿಂದ ಆಗುತ್ತಿರುವ ಛೀಮಾರಿ, ಮಂಗಳಾರತಿ ಕೇವಲ ಆ ಅಭ್ಯರ್ಥಿಗಳಿಗೆ ಮಾತ್ರವಲ್ಲ, ಬಿಜೆಪಿಗೂ ತೀವ್ರ ಮುಜುಗರ ತಂದೊಡ್ಡುತ್ತಿದೆ. ಅಷ್ಟೇ ಅಲ್ಲ, ಬಿಜೆಪಿ ಅಭ್ಯರ್ಥಿಗಳಿಗೆ ಮತ ಹಾಕದಂತೆ ಕೇಳಿಕೊಳ್ಳಲು ಪ್ರತಿಪಕ್ಷದವರಿಗೂ ಹೊಸ ಅಸ್ತ್ರ ಸಿಕ್ಕಿದಂತಾಗಿದೆ. ಅನರ್ಹ ಶಾಸಕರಿಗೆ ಮತದಾರರ ವಿರೋಧವನ್ನೇ ಮುಂದಿಟ್ಟುಕೊಂಡು ಅವರು ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.
ಇದುವರೆಗೆ ಚುನಾವಣೆಗಳು ನಡೆದಾಗ ಶಾಸಕರಾಗಿದ್ದವರು ಮತ್ತೆ ಮತ ಕೇಳಲು ಬಂದಾಗ ಮತದಾರರಿಂದ ಆಕ್ರೋಶ ವ್ಯಕ್ತವಾಗುವುದು ಸಾಮಾನ್ಯವಾಗಿತ್ತು. ಗೆದ್ದು ಹೋದ ಮೇಲೆ ಮತ್ತೆ ಇದೇ ಮೊದಲ ಬಾರಿ ಮತ ಕೇಳಲು ಬರುತ್ತಿದ್ದೀರಿ. ಇದವರೆಗೆ ನಿಮಗೆ ನಮ್ಮ ನೆನಪೇ ಆಗಿಲ್ಲ. ನಮ್ಮ ಭಾಗದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ, ಮೂಲ ಸೌಕರ್ಯ ಒದಗಿಸಿಲ್ಲ ಎಂಬಿತ್ಯಾದಿ ಕಾರಣಗಳನ್ನು ಇಟ್ಟುಕೊಂಡು ಅಭ್ಯರ್ಥಿಗಳ ಮೇಲೆ ಮುಗಿಬೀಳುತ್ತಿದ್ದರು. ಇದೀಗ ಅಂಥವರಿಗೆ ಶಾಸಕರು ಅವಧಿಗೆ ಮುನ್ನವೇ ರಾಜೀನಾಮೆ ನೀಡಿ ಮತ್ತೆ ತಮ್ಮ ಬಳಿ ಮತ ಯಾಚನೆ ಮಾಡಲು ಬರುತ್ತಿರುವುದು ಹೊಸ ವಿಷಯವನ್ನು ಒದಗಿಸಿದಂತಾಗಿದೆ.
ಪ್ರಸ್ತುತ ಕಾಂಗ್ರೆಸ್ ಮತ್ತು ಜೆಡಿಎಸ್ ಈ ಅನರ್ಹ ಶಾಸಕರನ್ನೇ ಗುರಿಯಾಗಿಸಿಕೊಂಡು ಪ್ರಚಾರ ಮಾಡುತ್ತಿರುವುದರಿಂದ, ವಿಶ್ವಾಸದ್ರೋಹವೆಸಗಿದ ಅನರ್ಹ ಶಾಸರನ್ನು ಸೋಲಿಸಿ ಎಂದು ಪದೇ ಪದೇ ಹೇಳುತ್ತಿರುವುದರಿಂದ ಗ್ರಾಮೀಣ ಭಾಗದಲ್ಲಿ ವ್ಯಕ್ತವಾಗುತ್ತಿರುವ ಆಕ್ರೋಶ ಅನರ್ಹರ ವಿರುದ್ಧ ಗ್ರಾಮಸ್ಥ ಪ್ರತಿಭಟನೆ, ಸಿಟ್ಟು ಎಂಬಂತೆ ವ್ಯಕ್ತವಾಗುತ್ತಿದೆ. ಈ ರೀತಿಯ ಸಿಟ್ಟು ಸ್ವಲ್ಪ ಮಟ್ಟಿಗೆ ಮತದಾರರಲ್ಲಿ ಇರಬಹುದಾದರೂ ಅದಕ್ಕಿಂತ ಹೆಚ್ಚಾಗಿ ಇರುವುದು ರಾಜಕೀಯ ಎಂಬುದರಲ್ಲಿ ಎರಡು ಮಾತಿಲ್ಲ.
ಜನರ ಈ ಆಕ್ರೋಶ ಫಲಿತಾಂಶದ ಮೇಲೆ ಪರಿಣಾಮ ಬೀರುವುದೇ?
ಹಾಗೆಂದು ಅನರ್ಹ ಶಾಸಕರ ಮೇಲೆ ಮತದಾರರು ತಿರುಗಿ ಬೀಳಲು ಉಪ ಚುನಾವಣೆಗೆ ಅವರು ಕಾರಣರಾದರು, ಪಕ್ಷಾಂತರ ಮಾಡಿದರು ಎಂಬುದಷ್ಟೇ ಕಾರಣವಾಗಿಲ್ಲ. ಇದರ ಹಿಂದೆ ಪ್ರತಿಪಕ್ಷಗಳ ಕೈವಾಡ ಮತ್ತು ಪ್ರಚಾರದ ಹಪಹಪಿ ಕೂಡ ಕಾಣಿಸುತ್ತಿದೆ. ಯಾವುದೇ ಅಭ್ಯರ್ಥಿ ಆಗಲಿ, ಒಂದು ಪಕ್ಷ ಬದಲಿಸಿ ಇನ್ನೊಂದು ಪಕ್ಷಕ್ಕೆ ಹೋದಾಗ ಅವರು ಹಿಂದೆ ಇದ್ದ ಪಕ್ಷದ ಕಾರ್ಯಕರ್ತರು ತಿರುಗಿ ಬೀಳುವುದು ಖಚಿತ. ಹೀಗಾಗಿ ಅಂಥವರು ಮತ ಕೇಳಲು ಬಂದಾಗ ಹಿಂದೆ ಇದ್ದ ಪಕ್ಷದ ಕಾರ್ಯಕರ್ತರು ಅವರನ್ನು ಪ್ರಶ್ನಿಸುವುದು, ತರಾಟೆಗೆ ತೆಗುದೊಳ್ಳುವುದು ಸಾಮಾನ್ಯ.
ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಬ್ರೇಕಿಂಗ್ ನ್ಯೂಸ್ ಗಳಿಗಾಗಿ ಕಾಯುತ್ತಿರುವ ದೃಶ್ಯ ಮಾಧ್ಯಮಗಳಿಗೆ ಇಂತಹ ವಿರೋಧಗಳೇ ಪ್ರಮುಖ ಆಹಾರ. ಹೀಗಾಗಿ ಅಭ್ಯರ್ಥಿಗಳಿಗೆ ಗ್ರಾಮಗಳಲ್ಲಿ ವಿರೋಧ ವ್ಯಕ್ತವಾಗುತ್ತಿರುವುದು ದೃಶ್ಯ ಮಾಧ್ಯಮಗಳ ಪ್ರತಿನಿಧಿಗಳು ಇದ್ದಾಗಲೇ ಹೆಚ್ಚು. ಉದಾಹರಣೆಗೆ ತೆಗೆದುಕೊಳ್ಳುವುದಿದ್ದರೆ, ಅಭ್ಯರ್ಥಿಗಳು ಪ್ರಚಾರಕ್ಕೆ ಹೋಗುವ ಎಲ್ಲಾ ಕಡೆಗಳಲ್ಲಿ ದೃಶ್ಯ ಮಾಧ್ಯಮದವರು ಹೋಗುವುದಿಲ್ಲ. ಆದರೆ, ಎಲ್ಲಿ ಅವರಿಗೆ ಘೇರಾವ್ ಹಾಕುವ ಅಥವಾ ತರಾಟೆಗೆ ತೆಗೆದುಕೊಳ್ಳುವ ಘಟನೆಗಳು ನಡೆಯುತ್ತವೆಯೋ ಅಲ್ಲೆಲ್ಲಾ ದೃಶ್ಯ ಮಾಧ್ಯಮದವರು ಘಟನೆಯನ್ನು ಚಿತ್ರೀಕರಿಸಿರುತ್ತಾರೆ. ಅಂದರೆ, ಪ್ರತಿಭಟನೆ ನಡೆಸುವ ಬಗ್ಗೆ ಮಾಧ್ಯಮದವರಿಗೆ ಮೊದಲೇ ಮಾಹಿತಿ ನೀಡಿರುತ್ತಾರೆ. ಇಲ್ಲಿ ಪ್ರತಿಭಟನೆ ನಡೆಸುವವರಿಗೆ ಅಭ್ಯರ್ಥಿ ವಿರುದ್ಧ ಇರುವ ಆಕ್ರೋಶಕ್ಕಿಂತಲೂ ತಮಗೆ ಸಿಗುವ ಪ್ರಚಾರವೇ ಮುಖ್ಯವಾಗಿರುತ್ತದೆ ಎಂಬುದು ಸ್ಪಷ್ಟ.
ಹೀಗಾಗಿ ಅನರ್ಹ ಶಾಸಕರ ವಿರುದ್ಧ ಕ್ಷೇತ್ರದಲ್ಲಿ ವ್ಯಕ್ತವಾಗುತ್ತಿರುವ ಆಕ್ರೋಶ, ವಿರೋಧ, ಪ್ರತಿಭಟನೆಗಳು ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ, ಅನರ್ಹ ಶಾಸಕರು ಹಿಂದೆ ಇದ್ದ ಪಕ್ಷದ (ಕಾಂಗ್ರೆಸ್, ಜೆಡಿಎಸ್) ಕಾರ್ಯಕರ್ತರು ಪ್ರತಿಭಟನೆ ನಡೆಸಿದರೆ, ಈ ಹಿಂದೆ ಅವರನ್ನು ವಿರೋಧಿಸುತ್ತಿದ್ದ ಬಿಜೆಪಿಯವರು ಬೆಂಬಲ ವ್ಯಕ್ತಪಡಿಸಿರುತ್ತಾರೆ. ಹೀಗಾಗಿ ಅಭ್ಯರ್ಥಿಗಳ ವೈಯಕ್ತಿಕ ವರ್ಚಸ್ಸಿನ ಜತೆಗೆ ಅವರು ಸ್ಪರ್ಧಿಸುತ್ತಿರುವ ಪಕ್ಷದ ಪ್ರಾಬಲ್ಯ ಹೆಚ್ಚಾಗಿದ್ದರೆ ಫಲಿತಾಂಶದ ಮೇಲೆ ಆ ಅಂಶವೇ ಪರಿಣಾಮ ಬೀರುತ್ತದೆ ಹೊರತು ಇಂತಹ ವಿರೋಧ, ಪ್ರತಿಭಟನೆಗಳು ಅಲ್ಲ.