ಆರ್ಥಿಕ ಕುಸಿತಕ್ಕೂ ಆರ್ಥಿಕ ಅಪರಾಧಗಳಿಗೂ ಸಂಬಂಧ ಇದೆಯೇ? ಆರ್ಥಿಕತೆ ಕುಸಿಯುತ್ತಿದ್ದಂತೆ ಆರ್ಥಿಕ ಅಪರಾಧಗಳು ಹೆಚ್ಚುತ್ತಿರುವುದು ಏಕೆ? ಮೇಲ್ನೋಟಕ್ಕೆ ಈ ಪ್ರಶ್ನೆಗಳಲ್ಲೇ ಉತ್ತರವೂ ಇದೆ. ಹೌದು. ದೇಶದ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿರುವಂತೆಯೇ ದೇಶದಲ್ಲಿ ವಿವಿಧ ರೀತಿಯ ಆರ್ಥಿಕ ಅಪರಾಧಗಳು ತ್ವರಿತವಾಗಿ ಏರುತ್ತಿವೆ. ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ ಹಿಂದಿನ ನಾಲ್ಕು ವರ್ಷಗಳಿಗೆ ಹೋಲಿಸಿದಾಗ, ಪ್ರಸಕ್ತ ವಿತ್ತೀಯ ವರ್ಷದಲ್ಲಿ ಆರ್ಥಿಕ ಅಪರಾಧಗಳು ತ್ವರಿತವಾಗಿ ಏರಿವೆ.
ಆರ್ಥಿಕ ಅಪರಾಧಗಳಿಂದಾಗಿ ಭಾರತದ ಬ್ಯಾಂಕುಗಳು ಅನುಭವಿಸಿರುವಷ್ಟು ಹಾನಿಯನ್ನು ಯಾವುದೇ ವಲಯವೂ ಅನುಭವಿಸಿಲ್ಲ. ಅಪನಗದೀಕರಣದ ವೇಳೆ ಭುಗಿಲೆದ್ದ ನಗದು ಕೊರತೆಯಿಂದಾಗಿ ನೂರಕ್ಕೂ ಹೆಚ್ಚಿನ ಸಾವುಗಳು ಸಂಭವಿಸಿದ್ದವು. ತೀರಾ ಇತ್ತೀಚೆಗೆ ಮುಂಬೈ ಮೂಲದ ಪಂಜಾಬ್ ಮತ್ತು ಮಹಾರಾಷ್ಟ್ರ ಕೋ-ಆಪರೇಟಿವ್ ಬ್ಯಾಂಕ್ (ಪಿಎಮ್‌ಸಿ) ನಲ್ಲಿ ನಡೆದ ವಂಚನೆ ಪ್ರಕರಣದ ಹಿನ್ನೆಲೆಯಲ್ಲಿ ಒಂಬತ್ತು ಠೇವಣಿದಾರರು ಸಾವಿಗೆ ಶರಣಾದರು. ಇದನ್ನು ಪ್ರತ್ಯೇಕ ಪ್ರಕರಣ ಎಂದು ಪರಿಗಣಿಸುವಂತಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅಂಕಿಅಂಶಗಳ ಪ್ರಕಾರ, ಕಳೆದ ಒಂದು ದಶಕದಲ್ಲಿ ಪಿಎಮ್‌ಸಿಯಂತಹ ಬ್ಯಾಂಕ್ ವಂಚನೆ ಪ್ರಕರಣಗಳು ಏರುಹಾದಿಯಲ್ಲಿ ಸಾಗಿವೆ. ಆರ್‌ಬಿಐ ತನ್ನ ಇತ್ತೀಚಿನ ವಾರ್ಷಿಕ ವರದಿಯಲ್ಲಿ, ಭಾರತೀಯ ಬ್ಯಾಂಕುಗಳಲ್ಲಿನ ವಂಚನೆ ಪ್ರಕರಣಗಳು ತ್ವರಿತವಾಗಿ ಏರುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ. 1 ಲಕ್ಷ ರುಪಾಯಿ ಮೀರಿದ ವಂಚನೆ ಪ್ರಕರಣಗಳಿಂದಾಗಿ ಭಾರತೀಯ ಬ್ಯಾಂಕುಗಳಿಗೆ 2018-19 ರಲ್ಲಿ ಆಗಿರುವ ನಷ್ಟವು 71,543 ಕೋಟಿ ರುಪಾಯಿಗಳು ಎಂದು ಅಂದಾಜಿಸಲಾಗಿದೆ. ಇದು 2017-18ನೇ ಸಾಲಿನಲ್ಲಿ ನಡೆದ ಒಟ್ಟು ವಂಚನೆ ಮೊತ್ತ 41,168 ಕೋಟಿಗಳಿಗೆ ಹೋಲಿಸಿದರೆ ಒಂದೇ ವರ್ಷದಲ್ಲಿ ಶೇ.74ರಷ್ಟು ವಂಚನೆ ಪ್ರಕರಣಗಳು ಹೆಚ್ಚಾದಂತಾಗಿದೆ. ನಾಲ್ಕು ವರ್ಷಗಳ ಹಿಂದಿನ ಪ್ರಮಾಣಕ್ಕೆ ಹೋಲಿಸಿದರೆ 2017-18ರಲ್ಲಿ ವಂಚನೆ ಪ್ರಕರಣಗಳು ನಾಲ್ಕು ಪಟ್ಟು ಹೆಚ್ಚಾಗಿವೆ.

ಆತಂಕದ ಸಂಗತಿ ಎಂದರೆ ವಂಚನೆ ಪ್ರಕರಣಗಳು ಹೆಚ್ಚಾಗಿ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ನಡೆದಿವೆ. ನಡೆದಿರುವ ವಂಚನೆ ಮೊತ್ತದ ಪೈಕಿ ಶೇ.90ರಷ್ಟು ಮತ್ತು ವಂಚನೆ ಪ್ರಕರಣಗಳ ಸಂಖ್ಯೆ ಪೈಕಿ 55ರಷ್ಟು ಈ ಬ್ಯಾಂಕುಗಳಲ್ಲೇ ನಡೆದಿರುವ ಬಗ್ಗೆಯೂ ಆರ್ಬಿಐ ಕಳವಳ ವ್ಯಕ್ತಪಡಿಸಿದೆ. ಪ್ರಸಕ್ತ ವಿತ್ತೀಯ ವರ್ಷದಲ್ಲೂ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿನ ವಂಚನೆ ಪ್ರಕರಣಗಳು ತ್ವರಿತವಾಗಿ ಏರಿವೆ. ರಾಜ್ಯಸಭೆಯಲ್ಲಿ ಇತ್ತೀಚೆಗೆ ಲಿಖಿತ ಪ್ರಶ್ನೆಗೆ ಉತ್ತರಿಸಿರುವ ಹಣಕಾಸು ಸಚಿವರು, ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಕಳೆದ ವರ್ಷದಲ್ಲಿ ನಡೆದ 64,509 ಕೋಟಿಗೆ ಹೋಲಿಸಿದರೆ, ಪ್ರಸಕ್ತ ಸಾಲಿನಲ್ಲಿ ಏಪ್ರಿಲ್- ಸೆಪ್ಟೆಂಬರ್ ಅವಧಿಯಲ್ಲಿ 95,760 ಕೋಟಿ ರುಪಾಯಿಗಳಷ್ಟು ವಂಚನೆ ನಡೆದಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅತಿ ಹೆಚ್ಚು ಅಂದರೆ 25,417 ಕೋಟಿ ರುಪಾಯಿ ವಂಚನೆ ಪ್ರಕರಣಗಳಿಂದಾಗಿ ನಷ್ಟ ಅನುಭವಿಸಿದೆ. ಎರಡನೇ ಸ್ಥಾನದಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ 10,822 ಕೋಟಿ ರುಪಾಯಿ ಮತ್ತು ಮೂರನೇ ಸ್ಥಾನದಲ್ಲಿರುವ ಬ್ಯಾಂಕ್ ಆಫ್ ಬರೋಡ 8,273 ಕೋಟಿ ರುಪಾಯಿ ನಷ್ಟ ಅನುಭವಿಸಿವೆ ಎಂದು ಮಾಹಿತಿ ನೀಡಿದ್ದಾರೆ.
ಬ್ಯಾಂಕ್ ಗಳಲ್ಲಿ ನಡೆಯುತ್ತಿರುವ ವಂಚನೆ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವ ಕಳವಳಕಾರಿಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ವಂಚನೆ ಪ್ರಕರಣಗಳನ್ನು ತ್ವರಿತವಾಗಿ ಪತ್ತೆಹಚ್ಚಲು ಹೆಚ್ಚಿನ ಗಮನವನ್ನು ಬ್ಯಾಂಕುಗಳು ನೀಡುತ್ತಿವೆ. ಹಾಗೆ ತ್ವರಿತವಾಗಿ ವಂಚನೆ ಪ್ರಕರಣಗಳನ್ನು ವರದಿ ಮಾಡುತ್ತಿವೆ. 50 ಕೋಟಿ ಮೀರಿದ ಪ್ರತಿ ವಂಚನೆ ಪ್ರಕರಣಗಳನ್ನು ತ್ವರಿತವಾಗಿ ತನಿಖೆಗೆ ಒಳಪಡಿಸಬೇಕು ಎಂದು ಆರ್ಬಿಐ ಎಲ್ಲಾ ಬ್ಯಾಂಕುಗಳಿಗೂ ಆದೇಶಿಸಿದೆ. ಮತ್ತು ಇಂತಹ ವಂಚನೆ ಪ್ರಕರಣಗಳ ಮಾಹಿತಿ ದಾಖಲಿಸಲೂ ಸೂಚಿಸಿದ್ದು, ಕೇಂದ್ರೀಯ ವಂಚನೆ ಪ್ರಕರಣಗಳ ನೊಂದಣಿ ವ್ಯವಸ್ಥೆಯನ್ನು ರೂಪಿಸಲಾಗಿದೆ.
ದೊಡ್ಡ ಮೊತ್ತವನ್ನೊಳಗೊಂಡ ಬ್ಯಾಂಕ್ ವಂಚನೆ ಪ್ರಕರಣಗಳು ಹೆಚ್ಚು ಗಮನ ಸೆಳೆಯುತ್ತಿವೆ. ಆದರೆ, ಆರ್ಥಿಕ ಅಪರಾಧಗಳ ಪೈಕಿ ಅವು ಒಂದು ಭಾಗ ಮಾತ್ರ. ಆದರೆ, ಒಟ್ಟಾರೆಯಾಗಿ ಆರ್ಥಿಕ ಅಪರಾಧಗಳು ಹೆಚ್ಚುತ್ತಲೇ ಇರುವುದನ್ನು ರಾಷ್ಟ್ರೀಯ ಅಪರಾಧ ದಾಖಲಾತಿ ಬ್ಯೂರೋ (ಎನ್ಸಿಆರ್ಬಿ) ಅಂಕಿಅಂಶಗಳು ಸಾರಿ ಹೇಳುತ್ತಿವೆ. ಎನ್ಸಿಆರ್ಬಿ 2017ರ ಅಪರಾಧ ವರದಿಗಳ ಪ್ರಕಾರ, ಪ್ರತಿ ಹತ್ತು ಲಕ್ಷ ಜನಕ್ಕೆ 2014ರಲ್ಲಿ 110 ಆರ್ಥಿಕ ಅಪರಾಧಗಳು ನಡೆದಿದ್ದರೆ, 2017ರಲ್ಲಿ ಈ ಪ್ರಮಾಣವು 111.3ಕ್ಕೆ ಏರಿದೆ. ಇತ್ತೀಚೆಗೆ ಎಟಿಎಂ ವಂಚನೆಗಳು, ನಕಲಿ ನೋಟುಗಳ ಚಲಾವಣೆ ತ್ವರಿತವಾಗಿ ಏರುತ್ತಿವೆ. ಆರ್ಥಿಕ ಅಪರಾಧಗಳ ಪೈಕಿ ಫೋರ್ಜರಿ, ಮೋಸ ಮತ್ತು ವಂಚನೆಯು ಶೇ.84ರಷ್ಟಿದೆ.

2016ರಲ್ಲಿ ನರೇಂದ್ರ ಮೋದಿ ಸರ್ಕಾರ ಅಪನಗದೀಕರಣ ಜಾರಿಗೆ ತಂದಾಗ ಖೋಟಾ ನೋಟುಗಳನ್ನು ಚಲಾವಣೆ ಮಾಡಿ ಭಯೋತ್ಪಾದನೆಗೆ ಹಣಕಾಸು ನೆರವು ನೀಡುವುದನ್ನು ನಿಗ್ರಹಿಸಲು ಈ ಕ್ರಮ ಕೈಗೊಂಡಿರುವುದಾಗಿ ಘೋಷಿಸಿತ್ತು. ಆದರೆ, ಎನ್ಸಿರ್ಆಬಿ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ಖೋಟಾ ನೋಟು ಚಲಾವಣೆ ಎಂದಿನಂತಿದೆ. ಅಪನಗದೀಕರಣ ಜಾರಿ ಮಾಡಿದ ಒಂದು ವರ್ಷದ ನಂತರವೂ ದೇಶದಲ್ಲಿ ಸುಮಾರು 28 ಕೋಟಿ ರುಪಾಯಿ ಮೌಲ್ಯದಷ್ಟು ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪೈಕಿ 2000 ಮುಖಬೆಲೆಯ 15 ಕೋಟಿಯಷ್ಟು ನಕಲಿ ನೋಟು ಪತ್ತೆಯಾಗಿದೆ.
ಮಿಂಟ್ ವರದಿ ಪ್ರಕಾರ, ಆರ್ಥಿಕ ಅಪರಾಧಗಳು ಗ್ರಾಮಾಂತರ ಪ್ರದೇಶಗಳಿಗಿಂತ ನಗರ ಪ್ರದೇಶಗಳಲ್ಲಿ ಹೆಚ್ಚು. ದೇಶದ ರಾಜಧಾನಿ ದೆಹಲಿ ಮತ್ತು ಆರ್ಥಿಕ ರಾಜಧಾನಿ ಮುಂಬೈನಲ್ಲಿ ಅತಿ ಹೆಚ್ಚು ಆರ್ಥಿಕ ಅಪರಾಧಗಳು ನಡೆದಿವೆ. ಜನಸಂಖ್ಯೆ ಲೆಕ್ಕದಲ್ಲಿ ದೇಶದಲ್ಲಿ ನಡೆದಿರುವ ಆರ್ಥಿಕ ಅಪರಾಧಗಳನ್ನು ವಿಶ್ಲೇಷಿಸುವುದಾಗಿ ಕರ್ನಾಟಕದ ರಾಜಧಾನಿ ಬೆಂಗಳೂರು ಮೂರನೇ ಸ್ಥಾನದಲ್ಲಿದೆ. ಪ್ರತಿ ಹತ್ತು ಲಕ್ಷ ಜನರಿಗೆ 407 ಆರ್ಥಿಕ ಅಪರಾಧಗಳು ಬೆಂಗಳೂರಿನಲ್ಲಿ ನಡೆದಿವೆ. ಪ್ರತಿ ಹತ್ತು ಲಕ್ಷ ಜನರಿಗೆ 1405 ಆರ್ಥಿಕ ಅಪರಾಧಗಳೊಂದಿಗೆ ಜೈಪುರ ಮೊದಲ ಸ್ಥಾನದಲ್ಲಿದೆ. 650 ಅಪರಾಧಗಳೊಂದಿಗೆ ಲಕ್ನೊ ಎರಡನೇ ಸ್ಥಾನದಲ್ಲಿದೆ. ಅತಿ ಕಡಮೆ ಎಂದರೆ ಚನ್ನೈನಲ್ಲಿ ಪ್ರತಿ ಹತ್ತು ಲಕ್ಷ ಜನರಿಗೆ 76 ಆರ್ಥಿಕ ಅಪರಾಧಗಳು ನಡೆದಿವೆ. ಅಪನಗದೀಕರಣ ನಂತರದಲ್ಲಿ ರಿಯಲ್ ಎಸ್ಟೇಟ್ ವಲಯದ ಕುಸಿತ, ಚಿಟ್ ಫಂಡ್ ಗಳ ವಂಚನೆ ಮತ್ತು ಸಹಕಾರಿಗಳ ಬ್ಯಾಂಕುಗಳ ವಂಚನೆಗಳು ಜೈಪುರದಲ್ಲಿ ಭಾರಿ ಪ್ರಮಾಣದಲ್ಲಿ ನಡೆದಿವೆ.
ಸಾಮಾನ್ಯವಾಗಿ ಆರ್ಥಿಕ ಬೆಳವಣಿಗೆ ಮಂದಗತಿಯಲ್ಲಿದ್ದಾಗ ಆರ್ಥಿಕ ಅಪರಾಧಗಳು ಹೆಚ್ಚುತ್ತವೆ. ಅದು ಜಾಗತಿಕವಾಗಿ ಕಂಡುಬಂದಿರುವ ವಾಸ್ತವಿಕ ಸತ್ಯ. ಈ ಹಂತದಲ್ಲಿ ಆರ್ಥಿಕ ಅಪರಾಧಗಳನ್ನು ತಡೆಯುವ ಪ್ರಯತ್ನದ ಜತೆಗೆ ಆರ್ಥಿಕತೆಯ ಚೇತರಿಕೆಯನ್ನು ಉದ್ದೀಪಿಸುವ ಕಾರ್ಯಕ್ರಮಗಳನ್ನು ರೂಪಿಸುವುದು ಅಗತ್ಯ. ಆಗ ಮಾತ್ರವೇ ವ್ಯವಸ್ಥಿತವಾಗಿ ಆರ್ಥಿಕ ಅಪರಾಧಗಳನ್ನು ತಡೆಯಲು ಸಾಧ್ಯ.