ಗ್ರಾಹಕನ ಸೇವೆಯೇ ಪರಮ ಗುರಿ ಅನ್ನೋದು ಬಹುತೇಕ ವ್ಯಾಪಾರ ಸಂಸ್ಥೆ, ಬ್ಯಾಂಕಿಂಗ್, ಆನ್‍ಲೈನ್ ಮಾರ್ಕೆಟಿಂಗ್ ಸಂಸ್ಥೆಗಳ ದೊಡ್ಡದಾದ ಘೋಷವಾಕ್ಯ. ಹಾಗಂತ ದೇಶದಲ್ಲಿ ಪ್ರತಿದಿನ ಲಕ್ಷಾಂತರ ಮಂದಿ ವ್ಯಾಪಾರ ಸಂಸ್ಥೆಗಳಿಂದ ಮೋಸ ಹೋಗುತ್ತಲೇ ಇರುತ್ತಾರೆ. ಇತ್ತೀಚಿನ ದಿನಗಳಲ್ಲಂತೂ ಗ್ರಾಹಕ ಆನ್‌ಲೈನ್ ಮಾರ್ಕೆಟಿಂಗ್ ಮೋಹಕ್ಕೆ ಬಿದ್ದು ಎಷ್ಟೋ ಬಾರಿ ಮೋಸ ಹೋಗಿದ್ದೂ ಇದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 70 ವರುಷಗಳೇ ಕಳೆದರೂ ಇದುವರೆಗೂ ಖರೀದಿಸುವ ಗ್ರಾಹಕನಿಗೆ ಸಂಪೂರ್ಣವಾಗಿ ತನ್ನ ಹಕ್ಕುಗಳು ದೊರೆತಿಲ್ಲ ಅಂದರೆ ತಪ್ಪಾಗಲಾರದು.
ಭಾರತದಂತಹ ದೇಶದಲ್ಲಿ ಗ್ರಾಹಕನಿಗೆ ಖರೀದಿಸಿದ ವಸ್ತುವಿನ ಮೇಲೆ ಸುರಕ್ಷತೆ ಹಕ್ಕು, ಮಾಹಿತಿ ಹಕ್ಕು, ಆಯ್ಕೆಯ ಹಕ್ಕು, ಆಲಿಸುವ ಹಕ್ಕು, ಕುಂದುಕೊರತೆ ನಿವಾರಿಸುವ ಹಕ್ಕು, ಗ್ರಾಹಕರ ಶಿಕ್ಷಣದ ಹಕ್ಕು. ಹೀಗೆ ಆರು ಗ್ರಾಹಕರ ಹಕ್ಕುಗಳನ್ನು ಹೊಂದಿರುತ್ತಾನೆ. ಆದರೆ ಇಂದಿನ ಡಿಜಿಟಲ್ ಯುಗದಲ್ಲಿ ಗ್ರಾಹಕ ಹಲವು ರೀತಿಯಲ್ಲಿ ಮೋಸ ಹೋಗುತ್ತಲೇ ಇದ್ದಾನೆ. ಆನ್‌ಲೈನ್ ಮಾರ್ಕೆಟಿಂಗ್‌ನಿಂದ ಆಗುವ ಅನ್ಯಾಯದ ಬಗ್ಗೆ ಪ್ರಬಲವಾಗಿ ಹೋರಾಟ ನಡೆಸಲೂ ಸಾಧ್ಯವಾಗುತ್ತಿಲ್ಲ ಅನ್ನೋ ಕೊರಗು ದೇಶದ ಗ್ರಾಹಕರನ್ನು ಕಾಡುತ್ತಲೇ ಇದೆ. ಅಲ್ಲದೇ ಈ ರೀತಿಯ ಆನ್‌ಲೈನ್ ಮಾರ್ಕೆಟಿಂಗ್‌ಗಳ ವಂಚನೆ ಬಗ್ಗೆಯೂ ಗ್ರಾಹಕನ ಸುರಕ್ಷತೆ ಎತ್ತಿ ಹಿಡಿಯುವ ಕಾಯ್ದೆಗಳು ಬರಬೇಕೆನ್ನುವುದು ಓರ್ವ ಪ್ರಬುದ್ಧ ಗ್ರಾಹಕನ ಒತ್ತಾಯವೂ ಆಗಿದೆ.
ಓರ್ವ ಗ್ರಾಹಕನಾದವನಿಗೆ ತಾನು ಖರೀದಿಸುವ ವಸ್ತುವಿನ ಮೇಲೆ ಹಲವು ಹಕ್ಕುಗಳನ್ನು ಹೊಂದಿರುತ್ತಾನೆ. ಅದರಲ್ಲೂ ಪ್ರಮುಖವಾಗಿ ತೂಕದ ವ್ಯತ್ಯಾಸ, ಸರಕಿಗೆ ನೀಡಲಾಗುವ ಟ್ರೇಡ್ ಮಾರ್ಕ್, ವ್ಯಾಪಾರ ಸಂಸ್ಥೆಯ ವಿಳಾಸ, ಗುಣಮಟ್ಟ, ಸುರಕ್ಷತೆ, ವ್ಯಾಲಿಡಿಟಿ ಇದೆಲ್ಲವನ್ನ ಗಮನಿಸುವ ಹಕ್ಕನ್ನ ಓರ್ವ ಗ್ರಾಹಕ ಹೊಂದಿರುತ್ತಾನೆ. ಅದು ಆತನ ಮೂಲಭೂತ ಹಕ್ಕೂ ಆಗಿರುತ್ತವೆ. ಅಂತೆಯೇ ಇದು ಕೇವಲ ದೇಶಕ್ಕೆ ಮಾತ್ರ ಸೀಮಿತವಾಗದೇ ಅಂತರಾಷ್ಟ್ರೀಯ ಮಟ್ಟದಲ್ಲೂ ಬಹುತೇಕ ಎಲ್ಲಾ ದೇಶಗಳು ತಮ್ಮ ತಮ್ಮ ದೇಶಗಳ ಗ್ರಾಹಕರಿಗೆ ಇಂತಹದ್ದೇ ಹಕ್ಕುಗಳನ್ನ ನೀಡಿದ್ದಾವೆ. ವ್ಯಾಪಾರ ಸಂಸ್ಥೆಗಳಿಂದ ಅನ್ಯಾಯವಾದರೆ ಗ್ರಾಹಕ ನ್ಯಾಯಾಲಯಕ್ಕೆ ಹೋಗುವ ಅವಕಾಶಗಳೂ ಗ್ರಾಹಕನಿಗೆ ಭಾರತ ಸಹಿತ ಹಲವು ದೇಶಗಳು ಕಲ್ಪಿಸಿದೆ.
ಗ್ರಾಹಕರ ಹಕ್ಕುಗಳ ಬಗ್ಗೆ ಧ್ವನಿ ಎತ್ತಿದ್ದ ಅಮೆರಿಕಾ ಅದ್ಯಕ್ಷ:
1962 ರಲ್ಲಿ ಅಂದಿನ ಅಮೆರಿಕಾ ಅಧ್ಯಕ್ಷರಾಗಿದ್ದ ಜೆ.ಎಫ್. ಕೆನಡಿ ಅವರು ಅಮೆರಿಕಾ ಸಂಸತ್‌ನಲ್ಲಿ ಗ್ರಾಹಕರ ಹಕ್ಕುಗಳ ಬಗ್ಗೆ ಮೊದಲ ಬಾರಿಗೆ ಧ್ವನಿ ಎತ್ತಿದ್ದರು. ಮಾರುಕಟ್ಟೆಯಲ್ಲಿ ಗ್ರಾಹಕರು ತಮ್ಮ ಸರಕುಗಳ ಮೇಲೆ ಕೆಲವೊಂದು ಮೂಲಭೂತ ಹಕ್ಕುಗಳನ್ನು ಹೊಂದಿರುತ್ತಾನೆ ಎಂದು ಪ್ರತಿಪಾದಿಸಿದ ಅವರು ನಾಲ್ಕು ವಿಧೇಯಕಗಳನ್ನು ಮಂಡಿಸಿದರು. ಇದಕ್ಕನುಗುಣವಾಗಿ 1983ರಿಂದ ವಿಶ್ವ ಗ್ರಾಹಕರ ಹಕ್ಕುಗಳ ದಿನ ಆಚರಣೆ ಮುನ್ನೆಲೆಗೆ ಬಂದಿತು. ಅಂದಿನಿಂದ ಮಾರ್ಚ್ ೧೫ ರಿಂದ ಪ್ರತಿವರುಷವೂ ವಿಶ್ವ ಗ್ರಾಹಕ ಹಕ್ಕುಗಳ ದಿನವನ್ನಾಗಿ ಈ ದಿನವನ್ನ ಆಚರಿಸಲಾಗುತ್ತಿದೆ. ಇದು ಮಾತ್ರವಲ್ಲದೇ ಭಾರತ ದೇಶವು 1986ರ ಡಿಸೆಂಬರ್ 24 ರಂದು ಗ್ರಾಹಕರ ಸಂರಕ್ಷಣಾ ಕಾಯ್ದೆಯನ್ನ ಜಾರಿಗೆ ತಂದಿತು. ಅದರ ಪ್ರಕಾರ ಗ್ರಾಹಕನಿಗೂ ತಾನು ಖರೀದಿಸುವ ಸರಕಿನ ಮೇಲೆ ಆರು ಮೂಲಭೂತ ಹಕ್ಕುಗಳನ್ನ ನೀಡಲಾಯಿತು. ಅಂದಿನಿಂದ ಭಾರತವು ಡಿಸೆಂಬರ್ ೨೪ನ್ನು ರಾಷ್ಟ್ರೀಯ ಗ್ರಾಹಕ ಹಕ್ಕುಗಳ ದಿನವನ್ನಾಗಿ ಆಚರಿಸುತ್ತಿದೆ.
ʼಸುಸ್ಥಿರ ಗ್ರಾಹಕʼ 2020 ರ ಥೀಮ್ ಸಂದೇಶ:
ವಿಶ್ವ ಗ್ರಾಹಕರ ಹಕ್ಕುಗಳ ದಿನವನ್ನಾಗಿ ಆಚರಿಸುವ ಈ ದಿನ ವಿಶ್ವ ಗ್ರಾಹಕ ವೇದಿಕೆಯು ʼಸುಸ್ಥಿರ ಗ್ರಾಹಕʼ (ದಿ ಸಸ್ಟೈನೇಬಲ್ ಕನ್ಸ್ಯೂಮರ್) ಅನ್ನೋ ಥೀಮ್ ಸಂದೇಶ ನೀಡಿದೆ. ಜಾಗತಿಕವಾಗಿ ಮುಂದುವರೆದಿರುವ ಗ್ರಾಹಕ ಬಳಗಕ್ಕೆ ಈ ಮೂಲಕ ಜವಾಬ್ದಾರಿಯನ್ನು ವಹಿಸಿಕೊಡುವ ಕೆಲಸವನ್ನ ವಿಶ್ವ ಗ್ರಾಹಕ ವೇದಿಕೆ ಕೈಗೆತ್ತಿಕೊಂಡಿದೆ. ಗ್ರಾಹಕನಾದವನು ತಾನು ಖರೀದಿಸುವ, ಬಳಕೆ ಮಾಡುವ ಉತ್ಪನ್ನಗಳಿಂದ ಪರಿಸರ ಹಾನಿಯಾಗದಂತೆ ಗಮನವಹಿಸುವ ಕುರಿತು ಈ ಥೀಮ್ ಸಂದೇಶ ಸಾರಿದೆ. ಜಾಗತಿಕ ತಾಪಮಾನ ಹೆಚ್ಚುತ್ತಿರುವ ಈ ಕಾಲಘಟ್ಟದಲ್ಲಿ ಗ್ರಾಹಕ ಸಂಪನ್ಮೂಲ ಮರುಬಳಕೆಯ ಹಾಗೂ ಜೀವವೈವಿಧ್ಯಗಳ ಬಗ್ಗೆಯೂ ಕಾಳಜಿ ವಹಿಸುವಂತೆ ಭಿನ್ನಯಿಸಲಾಗಿದೆ.
ಜಾಗತಿಕ ಹವಾಮಾನ ಬದಲಾವಣೆಗೆ ಬೇಕಾದ ಕ್ಷಿಪ್ರ ಕಾರ್ಯಯೋಜನೆಗೂ ಕೈ ಜೋಡಿಸುವಂತೆ ʼಕನ್ಸ್ಯೂಮರ್ಸ್ ಇಂಟರ್‌ನ್ಯಾಶನಲ್ʼ ಸಂಸ್ಥೆ ಕರೆ ನೀಡಿದೆ. ಅಲ್ಲದೇ ಇಂದು ತಮ್ಮೆಲ್ಲಾ ಫೇಸ್‌ಬುಕ್, ಟ್ವಿಟ್ಟರ್ ಖಾತೆಗಳಲ್ಲಿ ಹ್ಯಾಷ್ ಟ್ಯಾಗ್ (#) ಬಳಸುವ ಮೂಲಕ #SustainableConsumer ಅನ್ನೋದಾಗಿ ಬರೆದು ಜಾಗೃತಿ ಮೂಡಿಸುವಂತೆಯೂ ವಿಶ್ವ ಗ್ರಾಹಕ ವೇದಿಕೆ ಕೇಳಿಕೊಂಡಿದೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿರುವ ಹವಾಮಾನ ಬದಲಾವಣೆ ಕುರಿತ ಜಾಗೃತಿ ಸಂದೇಶ ಮೂಡಿಸಲು ʼಕನ್ಸ್ಯೂಮರ್ಸ್ ಇಂಟರ್‌ನ್ಯಾಶನಲ್ʼ ಯೋಜನೆ ರೂಪಿಸಿದೆ. ಕಳೆದ ವರುಷ 2019 ರ ಥೀಮ್ ಸಂದೇಶವಾಗಿ ‘ವಿಶ್ವಾಸಾರ್ಹ ಸ್ಮಾರ್ಟ್ ಉತ್ಪನ್ನಗಳುʼ ಅನ್ನೋ ವಿಭಿನ್ನವಾದ ಕಾನ್ಸೆಪ್ಟ್ ಮೂಲಕ ಜನಜಾಗೃತಿ ಮೂಡಿಸಿತ್ತು. ಈ ಬಾರಿ ಅದಕ್ಕಿಂತಲೂ ತುಸು ಜವಾಬ್ದಾರಿಯುತ ವಿಷಯ ಎತ್ತಿಕೊಂಡಿರುವ ಸಂಸ್ಥೆಯು ಗ್ರಾಹಕನಿಗೆ ಇರಬೇಕಾದ ಸಾಮಾನ್ಯ ಪ್ರಜ್ಞೆಯನ್ನ ಹೆಚ್ಚಿಸಲು ಶ್ರಮಿಸಿದೆ.
ಒಟ್ಟಿನಲ್ಲಿ 1983 ರಲ್ಲಿ ಆರಂಭವಾದ ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ ಇಂದು ಜಾಗತಿಕ ಮಟ್ಟದಲ್ಲಿ ವಿಶಾಲ ಅರ್ಥಕೋನದಲ್ಲಿ ಆಚರಿಸಲ್ಪಡುತ್ತಿದೆ. ಸಮಾಜದಲ್ಲಿ ಗ್ರಾಹಕ ಅದೆಷ್ಟು ಪ್ರಬುದ್ಧನಾಗಿದ್ದಾನೆ ಅನ್ನೋದನ್ನ ಇದು ಎತ್ತಿ ತೋರಿಸುತ್ತಿದೆ. ಆದರೆ ಇನ್ನೊಂದಡೆ ಗ್ರಾಹಕ ಮೋಸದ ಸುಳಿಗೆ ಸಿಲುಕಿ ವಂಚನೆಗೊಳಗಾಗುವುದು ತಪ್ಪಿಲ್ಲ ಅನ್ನೋದನ್ನ ಮರೆಯಲಾಗದು. ಆದ್ದರಿಂದ ಗ್ರಾಹಕರ ಹಕ್ಕುಗಳ ರಕ್ಷಣೆಗೆ ಪ್ರತಿ ದೇಶಗಳು ಕೂಡಾ ಇತ್ತೀಚಿನ ದಿನಗಳಲ್ಲಿ ಆಗುತ್ತಿರುವ ಆನ್‌ಲೈನ್ ಹಾಗೂ ಡಿಜಿಟಲ್ ಮೋಸದ ಬಗ್ಗೆಯೂ ಕಾನೂನು ಜಾರಿ ತರಲು ಶ್ರಮಿಸಬೇಕಾದ ಅನಿವಾರ್ಯತೆಯಿದೆ.