ಕಶ್ಮೀರ್ ಟೈಮ್ಸ್ ಪತ್ರಿಕೆಯನ್ನು ಜಮ್ಮು&ಕಾಶ್ಮೀರ ಆಡಳಿತ ಮುಚ್ಚಿದರ ಕುರಿತು ವ್ಯಾಪಕ ಟೀಕೆ ವ್ಯಕ್ತವಾಗಿದೆ. ಜಮ್ಮು ಕಾಶ್ಮೀರದ ಹಳೆಯ ಪತ್ರಿಕೆಯಾದ ಕಶ್ಮೀರ್ ಟೈಮ್ಸ್ ಅನ್ನು ಅಧಿಕಾರಿಗಳು ಯಾವುದೇ ಮುನ್ಸೂಚನೆ ಇಲ್ಲದೆ ಮುಚ್ಚಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಪತ್ರಿಕೆಯ ಆಡಳಿತ ಮಂಡಳಿ, ಕಛೇರಿಗೆ ಬಂದ ಅಧಿಕಾರಿಗಳು ಸರಿಯಾದ ಕ್ರಮವಿಲ್ಲದೆ ಏಕಾಏಕಿ ಪತ್ರಿಕಾ ಕಛೇರಿಯನ್ನು ಮುಚ್ಚಿಸಿದ್ದಾರೆ, ಅಧಿಕಾರಿಗಳೊಂದಿಗೆ ಕಛೇರಿ ಮುಚ್ಚಲು ಇರುವ ಆದೇಶ ಪತ್ರದ ಪ್ರತಿಯನ್ನು ಕೇಳಿದಾಗ, ನಮ್ಮಲ್ಲಿ ಯಾವುದೇ ಆದೇಶ ಪತ್ರವಿಲ್ಲ, ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಸೂಚಿಸಿದ್ದಾರೆ ಎಂದು ಆರೋಪಿಸಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಸರ್ಕಾರದ ಈ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಕಣಿವೆ ರಾಜ್ಯದ ಪತ್ರಕರ್ತರು ಕಶ್ಮೀರ್ ಟೈಮ್ಸ್ ನ ಬೆಂಬಲಕ್ಕೆ ನಿಂತಿದ್ದಾರೆ. ಇದು ಅವಿಭಜಿತ ಜಮ್ಮು ಕಾಶ್ಮೀರದ ಪತ್ರಿಕಾ ಸ್ವಾತಂತ್ರ್ಯವನ್ನು ಹಣಿಯುವ ಬೆದರಿಕೆ ತಂತ್ರ ಎಂದು ಹೇಳಲಾಗಿದೆ.
ಸರ್ಕಾರದ ಕ್ರಮವನ್ನು ಭಾರತದ ಸಂಪಾದಕರ ಸಂಘವೂ (Editors Guild of India) ಖಂಡಿಸಿದ್ದು, ಸರ್ಕಾರದ ನಡೆಯು ಕೇಂದ್ರಾಡಳಿತ ಪ್ರದೇಶಗಳ ಸ್ವತಂತ್ರ ಮಾಧ್ಯಮಗಳ ಪತ್ರಿಕಾ ಸ್ವಾತಂತ್ರ್ಯವನ್ನು ನಿರ್ಬಂಧಿಸುವ ಪ್ರಕ್ರಿಯೆ ಎಂದು ಕರೆದಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ EGI, ಕಶ್ಮೀರಿ ಟೈಮ್ಸ್ ನ ಮುಚ್ಚುವಿಕೆಯು ಖಂಡನೀಯ, ಇದು ಕೇಂದ್ರಾಡಳಿತ ಪ್ರದೇಶಗಳಾದ ಲಢಾಖ್, ಜಮ್ಮು ಮತ್ತು ಕಾಶ್ಮೀರದ ಮಾಧ್ಯಮಗಳಿಗೆ ಗೊಂದಲದ ಪರಿಣಾಮವನ್ನು ಬೀರಿದೆ ಎಂದು ಹೇಳಿದೆ.
ಜಮ್ಮು ಮತ್ತು ಕಾಶ್ಮೀರದ ಮಾಧ್ಯಮಗಳು, ಪತ್ರಿಕೆಗಳು ಈಗಾಗಲೇ ಸಂಘರ್ಷಗಳಿಂದ ಧ್ವಂಸಗೊಂಡಿವೆ. ಸಂಪಾದಕರು ಹಾಗೂ ವರದಿಗಾರರು ಸಂಕಷ್ಟದಲ್ಲಿದ್ದಾರೆ. ಕಳೆದ ಒಂದು ದಶಕದಿಂದ ಸ್ಥಿರವಾಗಿ ಜಾಹಿರಾತನ್ನು ಕಳೆದುಕೊಂಡಿವೆ, ಕರೋನಾ ಸಾಂಕ್ರಾಮಿಕ ಹಾಗೂ ಲಾಕ್‌ಡೌನ್‌ನಿಂದಾಗಿ ಆದಾಯ ನಿಂತಿದೆ. ಇಂಟರ್‌ನೆಟ್ ವೇಗವನ್ನು ಸರ್ಕಾರ ನಿಯಂತ್ರಿಸುತ್ತಿರುವುದರಿಂದ ಆನ್‌ಲೈನ್ ಆವೃತ್ತಿಗಳೂ ನಿರಾಶದಾಯಕವಾಗಿದೆ.
ಈ ಕರಾಳ ಕಾಲದಲ್ಲಿ ಹೆಚ್ಚು ಅಗತ್ಯವಿರುವ ಮಾಧ್ಯಮಗಳಿಗೆ ಸಹಾಯ ಮಾಡುವ ಬದಲು, ಯಾವುದೇ ಮುನ್ಸೂಚನೆಯಿಲ್ಲದೆ ಆಡಳಿತವು ಕಾಶ್ಮೀರ ಟೈಮ್ಸ್ ಕಚೇರಿಯ ಮೇಲೆ ಹಿಡಿತ ಸಾಧಿಸಿ, ಅದನ್ನು ಮುಚ್ಚಿಸಿದೆ. ಸಂಪಾದಕರೂ ಸೇರಿದಂತೆ ಕಛೇರಿ ನೌಕರರಿಗೆ ಕಛೇರಿಯಲ್ಲಿರುವ ದಾಖಲೆಗಳನ್ನು, ಕಂಪ್ಯೂಟರ್, ಪೀಠೋಪಕರಣಗಳನ್ನು ಪಡೆಯಲೂ ನಿರಾಕರಿಸಲಾಗಿದೆ.
ರಾಜ್ಯ ಆಡಳಿತದ ಕ್ರಮವು ಕಾಶ್ಮೀರ ಟೈಮ್ಸ್‌ಗೆ ಮಾತ್ರವಲ್ಲ, ಕೇಂದ್ರಾಡಳಿತ ಪ್ರದೇಶದ ಸಂಪೂರ್ಣ ಮುಕ್ತ ಮಾಧ್ಯಮಕ್ಕೂ ಪ್ರತೀಕಾರಕ ಮತ್ತು ಹಾನಿಕಾರಕವೆಂದು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಪರಿಗಣಿಸುತ್ತದೆ. ಯಥಾಸ್ಥಿತಿಯನ್ನು ಪುನಃಸ್ಥಾಪಿಸಲು ಮತ್ತು ಮಾಧ್ಯಮಗಳು ಯಾವುದೇ ಅಡೆತಡೆಯಿಲ್ಲದೆ ಮತ್ತು ಭಯವಿಲ್ಲದೆ ಕಾರ್ಯನಿರ್ವಹಿಸುವಂತಹ ಸಂದರ್ಭಗಳನ್ನು ಸೃಷ್ಟಿಸಲು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಜಮ್ಮು ಮತ್ತು ಕಾಶ್ಮೀರ ಸರ್ಕಾರವನ್ನು ಕೋರುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ.