ನಗರದಿಂದ ತನ್ನ ಹಳ್ಳಿಗೆ ಸಾವಿರಾರು ಕಿಲೋಮೀಟರ್ ನಡೆದುಕೊಂಡೆ ವಲಸೆ ಹೋಗುತ್ತಿರುವವರ ಮನದಲ್ಲಿ ಯಾವ ಆಲೋಚನೆ ನಡೆದಿರುತ್ತದೆ. ಸತ್ತರೆ ಕುಟುಂಬದ ಜೊತೆಗೆ ಸತ್ತು ಬಿಡುವಾ ಎಂದೇ? ಅಥವಾ ಸಾಯುವ ಮುನ್ನ ಒಮ್ಮೆ ತನ್ನ ಅಮ್ಮ, ಅಪ್ಪ, ಹೆಂಡತಿ-ಮಕ್ಕಳ ಮುಖ ನೋಡಿ ಬಿಡುವಾ ಎಂದೇ? ನಗರದಲ್ಲಿ ಹಸಿವು, ಅಪಮಾನ, ಒತ್ತಡಗಳನ್ನೆಲ್ಲ ಅನುಭವಿಸುವುದು ತನ್ನ ಕುಟುಂಬದ ಹೊಟ್ಟೆ ತುಂಬಿಸಲು ಎಂದಲ್ಲವೇ? ಕಟ್ಟಡ ಕಾರ್ಮಿಕರು, ದಿನಗೂಲಿ ಕಾರ್ಮಿಕರು ಸೇರಿದಂತೆ ಇಲ್ಲಿ ಶ್ರಮಿಸುವ ಇಂಥಾ ಕಾರ್ಮಿಕರು ನಗರದ ಪಬ್ ಕ್ಲಬ್ ಮಾಲ್ ನಂಥ ಯಾವ ಐಷಾರಾಮಿ ಜೀವನವನ್ನೂ ನೋಡಿರದೆ ತಮ್ಮ ದುಡಿಮೆಯ ಅಷ್ಟೂಹಣವನ್ನು ದೂರದ ತನ್ನ ಕುಟುಂಬಕ್ಕೆ ಮೀಸಲಿಡುತ್ತದೆ. ಶ್ರೀಮಂತರು, ಮನೆ ಇರುವವರು ಖಂಡಿತಾ ಈ ಲಾಕ್ ಡೌನ್ ನ ಬಗ್ಗೆ ಮಾಹಿತಿಯನ್ನೂ ಹೊಂದುವರು ಎಚ್ಚರವನ್ನೂ ವಹಿಸುವರು ಆದರೆ ಕೂಲಿ ಕಾರ್ಮಿಕ ವರ್ಗ ಇಂತಹದ್ದನ್ನ ನಿಭಾಯಿಸಲು ಸಾಧ್ಯವಾಗುವುದಿಲ್ಲ.
ಬೆಟ್ಟದ ಹೂ ಚಿತ್ರದ ಕ್ಲೈಮಾಕ್ಸ್ ನಲ್ಲಿ ಒಂದು ದೃಶ್ಯ ನೆನಪಾಗುತ್ತಿದೆ. ಬಾಲಕನು, ಶೆರ್ಲಿ ಮೇಡಂಗಾಗಿ ಅಡವಿಯಿಂದ ಪ್ರತೀದಿನ ಹೂ ತಂದುಕೊಟ್ಟು ಒಂದು ರುಪಾಯಿಯ ಇನಾಮು ಪಡೆದು ಹಣ ಸಂಗ್ರಹಿಸುವ. ಆ ಹಣದಲ್ಲಿ ರಾಮಾಯಣ ಪುಸ್ತಕವನ್ನು ಖರೀದಿಸಬೇಕು ಎಂಬುದು ಅವನ ದೊಡ್ಡ ಆಸೆ. ಒಟ್ಟು ಕೂಡಿಟ್ಟ ಹಣ ತಂದು ಅಂಗಡಿಯ ಮುಂದೆ ನಿಂತು ಇನ್ನೇನು ಪುಸ್ತಕವನ್ನು ಕೊಳ್ಳಲು ಮುಂದಾದಾಗ, ಅವನಿಗೆ ತನ್ನ ತಾಯಿ ಗುಡಿಸಲಿನಲ್ಲಿ ಚಳಿಗೆ ಅನಾರೋಗ್ಯದಿಂದ ಬಳಲುತ್ತಿರುವುದು ನೆನಪಾಗಿ ಅವಳಿಗಾಗಿ ಒಂದು ಹೊದಿಕೆಯನ್ನು ಅದೇ ಹಣದಲ್ಲಿ ತೆಗೆದುಕೊಂಡು ರಾಮಾಯಣ ಪುಸ್ತಕದ ಆಸೆಯನ್ನು ಬಿಟ್ಟುಬಿಡುವ. ಈ ದೃಶ್ಯ ನನ್ನ ಮೇಲೆ ಅಗಾದವಾದ ಪರಿಣಾಮ ಬೀರಿತ್ತು. ಬಹುಶಃ ಪ್ರಪಂಚದ ಎಲ್ಲರ ಮನಸ್ಥಿತಿಯೂ ಹೀಗೆ ಅನಿಸುತ್ತದೆ. ಕುಟುಂಬ ಎಂಬುದು ಜಗತ್ತಿನ ಮಾನವೀಯತೆಗೆ ಬಹಳ ದೊಡ್ಡ ಕೊಂಡಿ.
ಸಾವಿರಾರು ಮೈಲಿ ನಡೆದು ಬರುತ್ತಿರುವವರಿಗೆ ಊಟವಿಲ್ಲ –ನಿದ್ರೆಯಿಲ್ಲ ಅವರೊಂದಿಗೆ ಮಹಿಳೆಯರು, ಏನೂ ಅರಿಯದ ಕಂದಮ್ಮಗಳು. ಕೊನೆಗೆ ಸತ್ತರೆ ನಮ್ಮ ಹಳ್ಳಿಯಲ್ಲೇ ಮಣ್ಣಾಗಿಬಿಡುವ ಆಲೋಚನೆಯಲ್ಲಿ ನಡೆಯುತ್ತಿದ್ದಾರೆ ಅನಿಸುತ್ತಿದೆ. ಸರಕಾರ ಈ ದೃಷ್ಟಿಕೋನದಲ್ಲಿ ನೋಡಬೇಕಾದ ಅಗತ್ಯವಿತ್ತು. EMI ಮುಂದೂಡುವ ಆಲೋಚನೆ ಒಳ್ಳೆಯದೇ ಅದಕ್ಕೂ ಮುನ್ನ ಕೂಲಿ ಕಾರ್ಮಿಕ ವರ್ಗದಕಡೆ ಗಮನ ಹರಿಸಬೇಕಿತ್ತು ಎಂಬುದು ಕಳಕಳಿಯ ಅನಿಸಿಕೆ ಅಷ್ಟೇ. ವಿದೇಶದಲ್ಲಿ ತನ್ನ ಕುಟುಂಬಕ್ಕಾಗಿ ದುಡಿಯುತ್ತಿರುವ ಮಕ್ಕಳದ್ದೂ ಬೇರೆ ಕತೆಯೇನಲ್ಲ. ಎಲ್ಲರೂ ಕೊನೆಗಾಲದಲ್ಲಿ ಕುಟುಂಬ ಸೇರುವ ತವಕವನ್ನು ವ್ಯವಸ್ಥೆ ಅರಿಯ ಬೇಕಿದೆ.
ನೂರಾರು ಕಿಲೋಮೀಟರ್ ಕೂಲಿ ಕಾರ್ಮಿಕರು ನಡೆಯುತ್ತಿದ್ದಾಗ, ರಾಜ್ಯದ ಗಡಿಗಳಲ್ಲಿ ಅವರನ್ನು ತಡೆಹಿಡಿದು, ರಾಸಾಯನಿಕ ಔಷಧಿಯನ್ನು ಅವರ ಮೇಲೆ ಸಿಂಪಡಿಸಿದ್ದು ಬಹಳ ಅಮಾನವೀಯ ಘಟನೆ ಎಂದು ಅನ್ನಿಸುತ್ತದೆ. ಹಿಟ್ಲರ್ನ ಗ್ಯಾಸ್ ಛೇಂಬರ್ ನೆನಪಾಗುತ್ತೆ. ಇಂತಹ ಕಾರ್ಮಿಕರಿಗೆ ಗೌರವ ನೀಡಿ ಬೇಕಾದ ಸೌಲಭ್ಯವನ್ನು ಸರ್ಕಾರ ಮಾಡಬೇಕಿತ್ತು.
ಇಷ್ಟೆಲ್ಲಾ ನೋವನ್ನು ಆ ಕಾರ್ಮಿಕರು ನೋಡುವ ಬದಲು, ಯಾವಾಗ ವಿದೇಶದಿಂದ ನೂರಾರು ಭಾರತೀಯರು ವಾಪಾಸ್ಸು ಬಂದರೋ, ಅವರೆಲ್ಲರನ್ನೂ ಒಂದು ಸುಸಜ್ಜಿತವಾದ ವ್ಯವಸ್ಥೆಯಡಿಯಲ್ಲಿ ಕ್ವಾರಂಟೈನ್ ಮಾಡಿದ್ದಿದ್ದರೆ ಇಂತಹ ದಿನಗಳನ್ನು ನೋಡುವ ಪರಿಸ್ಥಿತಿ ಇರುತ್ತಿಲಿಲ್ಲ. ಇದು ಸರ್ಕಾರದ ಅತೀ ದೊಡ್ಡ loophole ಅಂದರೆ ತಪ್ಪಾಗಲಾರದು. ಯಾಕೆ ಅನಿವಾಸಿ ಅಥವಾ ಪ್ರವಾಸಿ ಭಾರತೀಯರನ್ನು ಕ್ವಾರಂಟೈನ್ ಮಾಡಲಿಲ್ಲ ಎಂಬ ಪ್ರಶ್ನೆ ಎತ್ತಿದಲ್ಲಿ, ಚೀನಾ ಏಕೆ ಮಾಡಲಿಲ್ಲ, ಅಮೇರಿಕಾ ಏಕೆ ಮಾಡಲಿಲ್ಲ, ಇಟಲಿ ಮತ್ತು ಇತರ ರಾಷ್ಟ್ರಗಳು ಏಕೆ ಮಾಡಲಿಲ್ಲ ಎಂಬ ಮರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.
ಚುನಾವಣೆ ಬಂದಾಗ ಆರು ತಿಂಗಳಿಗಿಂತಲೂ ಮುಂಚೆಯಿಂದಲೇ, ರಾಜಕಾರಣಿಗಳ ಚುನಾವಣಾ ತಯಾರಿ ಶುರುವಾಗುತ್ತದೆ. ಕ್ಷೇತ್ರ, ಜಾತಿ, ಕುಲ, ಲಿಂಗಾನುಪಾತ ಹೀಗೆ ಎಲ್ಲವನ್ನೂ ಬಹಳ ಚಾಣಾಕ್ಷತೆಯಿಂದ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲು ಸಾಧ್ಯ ಆಗುತ್ತೆ. ಆದರೆ, ಲಾಕ್ಡೌನ್ ಆದಾಗ, ಡಿಮಾನಿಟೈಸೇಷನ್ ಮಾಡಿದಾಗ ಅಥವಾ ಜಿಎಸ್ಟಿ ಜಾರಿಗೆ ತಂದಾಗ ಯಾಕೆ ಈ ಸಿದ್ದತೆಗಳನ್ನು ಮಾಡಿಕೊಳ್ಳಲು ರಾಜಕಾರಣಿಗಳಿಗೆ ಸಾಧ್ಯವಾಗುವುದಿಲ್ಲ? ಇದು ಆಸಕ್ತಿಯ ಕೊರತೆಯಲ್ಲವೇ?
ನಮ್ಮ ದೇಶದಲ್ಲಿ ಈವರೆಗೆ ಹಲವಾರು ಅಲೆಮಾರಿ ಜನಾಂಗದವರ ಬಳಿ ರೇಷನ್ ಕಾರ್ಡುಗಳಿಲ್ಲ. ಅಂಥಹವರ ಪರಿಸ್ಥಿತಿ ಏನು? ಚುನಾವಣೆ ಸಂದರ್ಭದಲ್ಲಿ ಮನೆಮನೆಗೆ ಸೀರೆ ಹಂಚುವ ರಾಜಕಾರಣಿಗಳು, ಈಗ ಯಾಕೆ ಮನೆಮನೆಗೆ ಹೋಗಿ ಊಟ ಹಂಚಬಾರದು? ಓಟಿಗಾಗಿ ಸೀರೆ ಹಂಚುವಾಗ ಇದ್ದಂತಹ ಆಸಕ್ತಿ ಈಗ ಎಲ್ಲಿ ಹೋಯಿತು?
ದೇಶವನ್ನು ಕಟ್ಟುವ ವಿಚಾರದಲ್ಲಿ ರೈತರು ಮತ್ತು ಕೂಲಿ ಕಾರ್ಮಿಕರ ಕೊಡುಗೆ ಅತೀ ಹೆಚ್ಚು. ಅವರೆಲ್ಲರನ್ನು ಬಿಟ್ಟು ನಗರದಲ್ಲಿರುವ ಕೆಲವು ಕಾರ್ಪರೇಟ್ ಉದ್ಯಮಿಗಳು ಹಾಗೂ ರಾಜಕಾರಣಿಗಳಿಗೆ ಸರ್ಕಾರ ತಲೆಬಾಗುವುದು ಅಕ್ಷಮ್ಯ. ದೇಶ ಎಂದರೆ, ಕೇವಲ ಮಣ್ಣು, ಗಡಿ, ಸಂಸ್ಕೃತಿ ಮಾತ್ರವಲ್ಲ. ಇಲ್ಲಿ ಬದುಕುತ್ತಿರುವ ಮನುಷ್ಯರು. ಎಲ್ಲಾ ಸಮುದಾಯದ ಮನುಷ್ಯರು. ಅವರನ್ನು ನಾವು ನೋಡಬೇಕಾದ ಅಗತ್ಯ ಬಹಳ ಇತ್ತು. ಇಂದು ಆ ಕೆಲಸ ಆಗಿದೆಯೇ?
ಇಂತಹ ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿದ ಕೂಡಲೇ, ನೀವು ಇಂತಹ ಸಂಕಷ್ಟದ ಸಮಯದಲ್ಲಿ ರಾಜಕೀಯ ಮಾಡುತ್ತಿದ್ದೀರಿ ಎಂಬ ಆರೋಪವನ್ನು ಹೊರೆಸುತ್ತಾರೆ. ಖಂಡಿತವಾಗಿಯೂ ಇದು ರಾಜಕೀಯ ಅಲ್ಲ. ದೇಶದ ಬಗ್ಗೆ ನಾವು ಯೋಚನೆ ಮಾಡಲೇ ಬೇಕು. ಈ ಸಂದರ್ಭದಲ್ಲಿ ಎಲ್ಲರೂ ರಾಮಾಯಣ ನೋಡಿಕೊಂಡು ಚಪ್ಪಾಳೆ ತಟ್ಟಿಕೊಂಡು ಸಂತೋಷದಿಂದ ಇದ್ದರೆ, ಬೀದಿಯಲ್ಲಿ ಒಂದು ಹೊತ್ತಿನ ಊಟಕ್ಕೂ ಕಷ್ಟ ಪಡುವ ಜನರ ಬಗ್ಗೆ ಮಾತನಾಡುವವರು ಯಾರು? ಯಾರಾದರೂ ಈ ಕುರಿತು ವರದಿ ಮಾಡಿದರೆ ಅಂಥಹವರ ಬಾಯನ್ನು ಮುಚ್ಚಿಸುವ ವ್ಯವಸ್ಥಿತವಾದ ಪಂಗಡವೇ ಸಿದ್ದವಾಗಿರುವುದು ನಿಜಕ್ಕೂ ದುರಂತವೇ ಸರಿ.
ದೆಹಲಿಯ ಆನಂದ್ ವಿಹಾರ್ನಲ್ಲಿ ತಮ್ಮ ಊರುಗಳಿಗೆ ತೆರಳುವ ಕಟ್ಟಕಡೇಯ ಬಸ್ಗಳಲ್ಲಿ ತೆರಳಲು ಕಾಯುತ್ತಿದ್ದ ಸಾವಿರಾರು ಕೂಲಿ ಕಾರ್ಮಿಕರಲ್ಲಿ ಆವರಿಸಿದ್ದ ಭಯ ಏನೆಂದರೆ, ಕರೋನಾ ವೈರಸ್ ಧಾಳಿಯಿಂದ ಸಾವನ್ನಪ್ಪುವ ಮೊದಲು, ಅವರೆಲ್ಲಾ ಎಲ್ಲಿ ಹಸಿವಿನಿಂದ ಸಾವನ್ನಪ್ಪುತ್ತಾರೋ ಎಂದು. ಜೀವನದುದ್ದಕ್ಕೂ ಯಾವ ಹಸಿವನ್ನು ನೀಗಿಸಲು ಕಾರ್ಮಿಕರಾಗಿ ಪಟ್ಟಣದ ಕಡೆಗೆ ಮುಖ ಮಾಡಿದ್ದರೋ, ಇಂದು ಅದೇ ಹಸಿವಿನೊಂದಿಗೆ ತಮ್ಮ ಊರುಗಳಿಗೆ ವಾಪಾಸ್ಸಾಗುವ ಅವರ ಮುಖಗಳು ದೇಶದ ರಾಜಕೀಯ ಮತ್ತು ಆಡಳಿತ ವ್ಯವಸ್ಥೆಯ ನೈಜ್ಯ ಮುಖವನ್ನು ಅನಾವರಣ ಮಾಡಿವೆ.
ಲಾಕ್ಡೌನ್ ಅನ್ನು ಅತ್ಯುತ್ಸಾಹದಿಂದ ವಿವರಿಸಿದ ಮಾಧ್ಯಮಗಳು, ಬಡವರ ಮೇಲಿನ ಲಾಠೀ ಚಾರ್ಜ್ ಅನ್ನು ಸಂಭ್ರಮಿಸಿ ವರದಿ ಮಾಡಿದವು, ರಾಮಾಯಣವನ್ನು ನೋಡಿ ಎಂದು ತಾಸುಗಟ್ಟಲೆ ಕಾರ್ಯಕ್ರಮ ನೀಡಿದವು. ಆದರೆ, ನಿಜವಾಗಿಯೂ ಅವರು ಮಾಡಬೇಕಿದ್ದೇನು? ಗುಳೇ ಹೋಗುತ್ತಿರುವ ಕಾರ್ಮಿಕರ ಕುರಿತು ವರದಿಗಳನ್ನು ಪ್ರಸಾರ ಮಾಡಬೇಕಿತ್ತು, ರೈತರ ಸಂಕಷ್ಟಗಳ ಕುರಿತು ವರದಿ ಪ್ರಸಾರ ಮಾಡಬೇಕಿತ್ತು. ಆ ಕೆಲಸ ನಡೆಯಲೇ ಇಲ್ಲ. ಒಂದು ಕಡೆ ರೈತರು ತಾವು ಬೆಳೆದ ದ್ರಾಕ್ಷಿಯನ್ನು ಬೆಲೆಯಿಲ್ಲವೆಂದು ತಿಪ್ಪೆಗೆ ಎಸೆದರೆ, ಇನ್ನೊಂದೆಡೆ ಯಾರೋ ಒಬ್ಬ ಕೂಲಿ ಕಾರ್ಮಿಕ ಹಸಿವಿನಿಂದ ಪ್ರಾಣ ಬಿಡುತ್ತಿದ್ದಾನೆ. ಇಂಥಹವರನ್ನು ಬೆಸೆಯುವ ಕೊಂಡಿಯಾಗಬೇಕಿತ್ತು ಮಾಧ್ಯಮಗಳು.
ಭಾರತೀಯರಾದ ನಾವು ನಮ್ಮ ಆಹಾರ ಪದ್ದತಿಯನ್ನು ನಿಯಮಿತವಾಗಿ ಪಾಲಿಸಿದ್ದಲ್ಲಿ ಕರೋನಾದಂತಹ ಮಹಾಮಾರಿ ಅಷ್ಟೇನು ಭಾಧಿಸಲಿಕ್ಕಿಲ್ಲ ಎಂಬುದು ನನ್ನ ಅಭಿಪ್ರಾಯ. ವೈಜ್ಞಾನಿಕವಾಗಿ ಎಷ್ಟು ಸರಿ ಎಂಬುದು ಬೇರೆ ವಿಚಾರ. ಆದರೆ, ಭಾವನಾತ್ಮಕವಾಗಿ ಅದು ಸರಿಯೇನೋ ಎಂಬ ಅನಿಸಿಕೆ ನನ್ನದು. ಅದೇನೇ ಇದ್ದರೂ, ಹಸಿವಿನಿಂದ ನೂರಾರು ಕಿಲೋಮೀಟರ್ ನಡೆಯುವ ಕಾರ್ಮಿಕರ ದೇಹದಲ್ಲಿ ಕರೋನಾ ಬದುಕುಳಿಯಬಹುದೇ? ಎಂಬ ಪ್ರಶ್ನೆ ಕಾಡುತ್ತಿದೆ. ಆ ಬೆವರು, ಹಸಿವು ಮತ್ತು ತೊಳಲಾಟಗಳ ನಡುವೆ ಕರೋನಾ ಎಂಬ ಮಹಾಮಾರಿ ನಗಣ್ಯವಾಗಿ ಕಾಣಿಸುತ್ತದೆ. ಇದರೊಂದಿಗೆ ಲಾಕ್ಡೌನ್ ಘೋಷಣೆಯಾದಾಗ ಜನರು ಆಹಾರ ಸಾಮಾಗ್ರಿಗಳನ್ನು ಕೊಳ್ಳಲು ತೋರಿದ ಉತ್ಸಾಹ ಬೇರೆ ಯಾವುದೇ ಐಷಾರಾಂಇ ವಸ್ತುವನ್ನು ಕೊಳ್ಳಲು ತೋರಲಿಲ್ಲ. ಇದರಿಂದ ನಾವು ಕಲಿಯುವ ಪಾಠವೇನೆಂದರೆ, ನಮ್ಮ ದೇಶದ ರೈತರನ್ನು ಹಾಗೂ ದುಡಿಯುವ ವರ್ಗವನ್ನು ಗೌರವಿಸಿದಲ್ಲಿ ದೇಶದ ಆರೋಗ್ಯ ಮತ್ತು ಆರ್ಥಿಕ ಪರಿಸ್ಥಿತಿ ಉತ್ತಮವಾಗಿ ಇರಬಲ್ಲದು.