ಕರೋನಾ ದಾಳಿಗೆ ತತ್ತರಿಸಿರುವ ಭಾರತವನ್ನು ರಕ್ಷಣೆ ಮಾಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ನಿನ್ನೆ ರಾತ್ರಿ 8 ಗಂಟೆಗೆ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. ಆ ವೇಳೆ ಹೇಳಿದ ಒಂದು ಮಾತು ಎಂದರೆ ಇಂದು ಮಧ್ಯರಾತ್ರಿ 12 ಗಂಟೆಯಿಂದ ಒಡೋ ದೇಶವನ್ನೇ ಬಂದ್ ಮಾಡಲಾಗುತ್ತದೆ. ಮುಂದಿನ 21 ದಿನಗಳ ಕಾಲ ಭಾರತ ಕರ್ಫ್ಯೂ ರೀತಿ ಇರಲಿದೆ. ಅತ್ಯವಶ್ಯಕ ಕೆಲಸಗಳನ್ನು ಹೊರತು ಪಡಿಸಿ ಬೇರೆ ಯಾವುದೇ ಚಟುವಟಿಕೆ ನಡೆಯುವಂತಿಲ್ಲ. ಎಲ್ಲಾ ವ್ಯವಹಾರಗಳು ಇಂದು ರಾತ್ರಿ 12 ಗಂಟೆಯಿಂದ ಏಪ್ರಿಲ್ 14ರ ತನಕ ನಿಲ್ಲಿಸಬೇಕು. ಇಲ್ಲದಿದ್ದರೆ ಮದ್ದೇ ಇಲ್ಲದ ಕರೋನಾ ವೈರಸ್ ಅನ್ನು ನಿಯಂತ್ರಣಕ್ಕೆ ತರುವುದಕ್ಕೆ ಸಾಧ್ಯವೇ ಇಲ್ಲ. ಆದರೂ ಪ್ರಧಾನಿ ನರೇಂದ್ರ ಮೋದಿ ಮಾತನ್ನು ಮೀರಿದ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತನ್ನದೇ ಮಾತಿಗೂ ಸಡ್ಡು ಹೊಡೆದು ಹಲವರ ವಿರೋಧಕ್ಕೆ ಕಾರಣರಾದರು.
ಕರೋನಾ ತಡೆಗಟ್ಟಲು ಸಾಧ್ಯವೇ ಇಲ್ಲ ಎಂದು ಇಡೀ ದೇಶವೇ ಬೊಬ್ಬೆಯೊಡೆಯುತ್ತಿದೆ. ಅದೇ ಕಾರಣಕ್ಕಾಗಿ ನಗರಗಳಲ್ಲಿರುವ ಕರೋನಾ ವೈರಸ್ ಅನ್ನು ಹಳ್ಳಿಗಳ ಕಡೆಗೆ ಹಬ್ಬಿಸಬೇಡಿ. ದಯಮಾಡಿ ಎಲ್ಲೆಲ್ಲಿ ಇದ್ದೀರೋ ಅಲ್ಲಲ್ಲೇ ಇದ್ದು ಬಿಡಿ. ಯುಗಾದಿ ಎನ್ನುವ ಕಾರಣಕ್ಕೂ ಬೆಂಗಳೂರಿನಿಂದ ಹಳ್ಳಿಗಳಿಗೆ ತೆರಳಬೇಡಿ. ಯಾವುದೇ ಕರೋನಾ ಸೋಂಕು ಕಾಣದೆ ಸ್ವಚ್ಛಂದವಾಗಿರುವ ಹಳ್ಳಿಗಳಲ್ಲೂ ಆತಂಕಕ್ಕೆ ದೂಡಬೇಡಿ ಎಂದು ಸಿಎಂ ಯಡಿಯೂರಪ್ಪ ಜನತಾ ಕರ್ಫ್ಯೂ ಘೋಷಣೆ ಮಾಡಿದ್ದ ದಿನ ಹೇಳಿಕೆ ಕೊಟ್ಟಿದ್ದರು. ಆ ಬಳಿಕ ನಿನ್ನೆ ಕೂಡ ಯಾರೂ ಬೀದಿಗೆ ಬರಬಾರದು. ಬಂದು ಪೊಲೀಸರು ಕಾನೂನು ಕ್ರಮ ಕೈಗೊಂಡರೆ ನನ್ನನ್ನು ದೂಷಿಸಬೇಡಿ ಎಂದಿದ್ದರು. ಸಂಜೆ ಆರೇಳು ಗಂಟೆ ವೇಳೆಗೆ ತನ್ನ ನಿರ್ಧಾರ ಬದಲಿಸಿ ಬೆಂಗಳೂರು ಬಿಟ್ಟು ಹೋಗುವವರು, ಬೆಂಗಳೂರಿಗೆ ಬರುವವರು ಯಾರಾದರೂ ಇದ್ದರೆ ಬಂದು ಬಿಡಿ, ಮಾರ್ಚ್ 25ರಿಂದ ರಾಜ್ಯದಲ್ಲಿ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಘೋಷಣೆ ಮಾಡಿದರು. ಸಿಎಂ ಘೋಷಣೆ ಮಾಡುತ್ತಿದ್ದಂತೆ ಸ್ವಂತ ವಾಹನಗಳು ಸೇರಿದಂತೆ ಸಿಕ್ಕ ಸಿಕ್ಕ ವಾಹನಗಳ ಮೂಲಕ ಹುಟ್ಟೂರುಗಳತ್ತ ಹೊರಟು ನಿಂತರು. ಈ ನಿರ್ಧಾರ ಪ್ರಧಾನಿ ಮೋದಿ ಮಧ್ಯರಾತ್ರಿ 12 ಗಂಟೆಯಿಂದ ಇಡೀ ದೇಶವೇ ಲಾಕ್ಡೌನ್ ಆಗುತ್ತದೆ ಎಂದ ಬಳಕವೂ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಮನಸ್ಸು ಮಾಡಲಿಲ್ಲ. ಈ ನಿರ್ಧಾರ ಹಲವರನ್ನು ಚಕಿತಗೊಳಿಸಿದ್ರೆ, ಕೆಲವರನ್ನು ಕೆರಳಿಸಿತು.
ಭಾನುವಾರ ಮೋದಿ ಕರೆ ಕೊಟ್ಟಿದ್ದ ಜನತಾ ಕರ್ಫ್ಯೂ, ಸೋಮವಾರ ಕೂಡ ರಾಜ್ಯ ಸರ್ಕಾರದಿಂದ ಯಥಾಸ್ಥಿತಿ ಮುಂದುವರಿಸಲಾಗಿತ್ತು. ಮಂಗಳವಾರ 144 ಸೆಕ್ಷನ್ ಜಾರಿ ಮಾಡಿದ್ದ ರಾಜ್ಯ ಸರ್ಕಾರ ಎಲ್ಲಾ ಗಡಿಗಳನ್ನು ಬಂದ್ ಮಾಡುವ ಮೂಲಕ ವಾಹನ ಸಂಚಾರಕ್ಕೆ ಕಡಿವಾಣ ಹಾಕಿತ್ತು. ಆ ಬಳಿಕ ಸಿಎಂ ಘೋಷಣೆ ಮಾಡಿದ್ದು ಎಷ್ಟು ಸರಿ ಎನ್ನುವ ಪ್ರಶ್ನೆ ಎದುರಾಗಿತ್ತು. ಸೋಷಿಯಲ್ ಡಿಸ್ಟೆನ್ಸ್ ಮಾಡಿ ಎಂದು ಮೋದಿ ಕರೆ ಕೊಟ್ಟರೆ, ಸಿಎಂ ಯಡಿಯೂರಪ್ಪ ಮಾಡುತ್ತಿರುವುದು ಏನು? ಬಸ್ಗಳಿಲ್ಲ ಜನರು ಕುರಿಗಳಂತೆ ಟ್ರ್ಯಾಕ್ಟರ್ ಸೇರಿದಂತೆ ಟೆಂಪೋ ಟ್ರಾವೆಲ್ಲರ್, ಆಟೋ, ಬೈಕ್ ಸೇರಿದಂತೆ ಸಿಕ್ಕ ಸಿಕ್ಕ ವಾಹನಗಳಲ್ಲಿ ಎದ್ದೆನೋ ಬಿದ್ದನೋ ಎನ್ನುವಂತೆ ಓಡಿಹೋದರು. ಸಿಎಂ ಯಡಿಯೂರಪ್ಪ ಹಳ್ಳಿಗಳಿಗೆ ಹೋಗುವುದಾದರೆ ಹೋಗಿ ಎಂದಾಗ ಬಸ್ ಸೌಲಭ್ಯ ಒದಗಿಸಬೇಕಿತ್ತು. ಅದನ್ನು ಬಿಟ್ಟು ಹೋಗುವವರು ಹೋಗಿ ಎಂದು ಹೇಳಿದ್ದು, ಖಾಸಗಿ ಬಸ್ನವರಿಗೆ ಹಾಲು ಅನ್ನ ಉಂಡಂತಾಯ್ತು. ಅದೂ ಅಲ್ಲದೆ ಮೋದಿ ಸೋಷಿಯಲ್ ಡಿಸ್ಟೆನ್ಸ್ ಮಾಡಿ ಎಂದ ಮೇಲೂ ಹೊರಕ್ಕೆ ಹೋಗಲು ಬಿಟ್ಟಿದ್ದು ಎಷ್ಟು ಸರಿ? ಈಗ ಹಳ್ಳಿಗಳಿಗೆ ಕರೋನಾ ವೈರಸ್ ಹರಡುವುದಿಲ್ಲವೇ? ಎಂದೆಲ್ಲಾ ಪ್ರಶ್ನೆ ಮಾಡಲಾಯ್ತು. ಆದರೆ ಇದೀಗ ಸಿಎಂ ಯಡಿಯೂರಪ್ಪ ಕೈಗೊಂಡ ನಿರ್ಧಾರ ಎಷ್ಟು ಸರಿ ಎನ್ನುವಂತಾಗಿದೆ.
ಸಿಎಂ ನಿರ್ಧಾರದ ಹಿಂದೆ ಇತ್ತ ಅಸಲಿ ಸತ್ಯ..!?
ಕರೋನಾ ವೈರಸ್ ಹರಡಬಾರದು ಎನ್ನುವ ನರೇಂದ್ರ ಮೋದಿ 21 ದಿನಗಳ ಕಾಲ ಮನೆಯಿಂದ ಹೊರಬರಬೇಡಿ ಎಂದು ಘೋಷಣೆ ಮಾಡಿದ್ದಾರೆ. ಅಷ್ಟು ದಿನ ಬೆಂಗಳೂರಿನಲ್ಲಿ ಇರುವ ಕೂಲಿ ಕಾರ್ಮಿಕರು, ಗಾರ್ಮೆಂಟ್ಸ್ ನೌಕರರು ಸೇರಿದಂತೆ ದೀನಗೂಲಿಗೆ ದುಡಿಯುವ ಜನರು ಎಲ್ಲಿ ಊಟ ಮಾಡಬೇಕು? ಬೆಂಗಳೂರಿನಲ್ಲಿ ಕೆಲಸ ಅರಸಿ ಬಂದಿದ್ದ ಬ್ಯಾಚುಲರ್ ಹುಡುಗರು ಜೀವನ ಮಾಡುವುದು ಹೇಗೆ? 21 ದಿನಗಳ ಕಾಲ ಸಂಕಷ್ಟ ಎದುರಾಗುವುದಿಲ್ಲವೇ? ಇದೇ ಕಾರಣಕ್ಕೆ ಬೆಂಗಳೂರಿನಿಂದ ಹೊರಗೆ ಹೋಗುವವರು ಹೋಗಬಹುದು, ಬರುವವರು ಬರಬಹುದು ಎಂದಿದ್ದರು. ಬಹುತೇಕ ಜನರು ಬೆಂಗಳೂರು ಖಾಲಿ ಮಾಡಿದ್ದಾರೆ. ಇದೀಗ ಹಳ್ಳಿಗಳಿಗೆ ಸೇರಿಕೊಂಡಿರುವ ಜನರು 21 ದಿನಗಳ ಕಾಲ ಯಾವುದೇ ಸಮಸ್ಯೆ ಇಲ್ಲದೆ ಜೀವನ ನಡೆಸುತ್ತಾರೆ.
ಒಂದು ವೇಳೆ ಹಳ್ಳಿಗಳಲ್ಲಿರುವ ಜನರಿಗೆ ಸರ್ಕಾರ ಯಾವುದೇ ಸೌಲಭ್ಯ ಕೊಡದಿದ್ದರೂ ಜೀವನ ನಡೆಸುತ್ತಾರೆ. ಆಹಾರ ಸಾಮಗ್ರಿ ಕೊರತೆಯಾದರೂ ನೈಸರ್ಗಿಕವಾಗಿ ಸಿಗುವ ಆಹಾರ ಪದಾರ್ಥಗಳನ್ನು ಸೇವಿಸುವ ಮೂಲಕ ತಮ್ಮ ಜೀವನ ನಡೆಸುತ್ತಾರೆ. ಜೊತೆಗೆ ಬೆಂಗಳೂರಿನ ಜನಸಾಂಧ್ರತೆಯೂ ಕಡಿಮೆ ಆದಂತೆ ಆಗುತ್ತೆ ಎನ್ನುವ ಕಾರಣಕ್ಕೆ ಸಿಎಂ ಯಡಿಯೂರಪ್ಪ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ 21 ದಿನಗಳ ಕಾಲ ವಿಧಿಸುತ್ತಿರುವ ಹೋಮ್ ಕ್ವಾರಂಟೈನ್ ಬಗ್ಗೆಯೂ ಸಿಎಂಗೆ ಅರಿವಿತ್ತು ಎನ್ನಲಾಗಿದೆ. ಒಟ್ಟಾರೆ, ಅದೇನೇ ಆಗಲಿ, ಕರೋನಾ ತಡೆಯಲು ನರೇಂದ್ರ ಮೋದಿ ಮನೆಯನ್ನೇ ಜೈಲು ಮಾಡಿದ್ದಾರೆ. ಈ ನಡುವೆ ಸಿಎಂ ಯಡಿಯೂರಪ್ಪ ಕೈಗೊಂಡ ನಿರ್ಧಾರ ಹಳ್ಳಿ ಜನರಿಗೆ ನೆಮ್ಮದಿ ತಂದಿದೆ.