ಕರೋನಾ ವೈರಾಣು ಸೋಂಕು ಮತ್ತು ಅದರ ನಿಯಂತ್ರಣ ಕ್ರಮವಾಗಿ ಹೇರಲಾಗಿರುವ ಲಾಕ್ ಡೌನ್ ಹಿನ್ನೆಲೆಯಲ್ಲಿ ವೈದ್ಯಕೀಯ ವೆಚ್ಚ ಮತ್ತು ಪರಿಹಾರ ಕಾರ್ಯಗಳಿಗೆ ಹಣಕಾಸು ಕ್ರೋಡೀಕರಣದ ಉದ್ದೇಶದಿಂದ ರಾಷ್ಟ್ರಪತಿಗಳಿಂದ ಸಂಸದರವರೆಗೆ ವೇತನ ಕಡಿತ ಮಾಡಲು ಕೇಂದ್ರ ಸಂಪುಟ ನಿರ್ಧಾರ ಕೈಗೊಂಡಿದೆ.
ರಾಷ್ಟ್ರಪತಿಗಳು, ರಾಜ್ಯಪಾಲರು, ಉಭಯ ಸದನ ಸಭಾಪತಿಗಳು, ಪ್ರಧಾನಮಂತ್ರಿ, ಸಚಿವರು ಮತ್ತು ಎಲ್ಲಾ ಸಂಸದರ ವೇತನ, ಭತ್ಯೆ ಮತ್ತು ಪಿಂಚಳಿಯಲ್ಲಿ ಏಪ್ರಿಲ್ ಒಂದರಿಂದಲೇ ಅನ್ವಯವಾಗುವಂತೆ ಶೇ.30ರಷ್ಟು ಕಡಿತ ಮಾಡಲು ಸರ್ಕಾರ ನಿರ್ಧರಿಸಿದೆ. ಈ ನಿರ್ಧಾರಕ್ಕೆ ರಾಷ್ಟ್ರಪತಿಗಳು, ರಾಜ್ಯಪಾಲರು, ಪ್ರಧಾನಿ ಸೇರಿದಂತೆ ಬಹುತೇಕ ಎಲ್ಲರ ಸಹಮತವೂ ಇದೆ ಎಂದು ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ. ಜೊತೆಗೆ ಸಂಸದರ ಎರಡು ವರ್ಷಗಳ ಅವಧಿಗೆ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯನ್ನೂ ಸ್ಥಗಿತಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದೂ ಅವರು ಹೇಳಿದ್ದಾರೆ.
ಸಂಸದರು ಸೇರಿದಂತೆ ಸಂವಿಧಾನಿಕ ಸ್ಥಾನಮಾನದ ಪ್ರಮುಖರ ವೇತನ ಕಡಿತವನ್ನು ಸ್ವಾಗತಿಸಿರುವ ಕಾಂಗ್ರೆಸ್, ಸಂಸದರ ಪ್ರದೇಶಾಭಿವೃದ್ಧಿ ನಿಧಿ ಸ್ಥಗಿತಗೊಳಿಸುವ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಕೋರಿದೆ. ಸಂಸದರ ನಿಧಿ ಎಂಬುದು ಯೋಜನಾರಹಿತ ವೆಚ್ಚದ ಭಾಗವಲ್ಲ. ಅದು ಆಯಾ ಸಂಸದರ ಕ್ಷೇತ್ರ ವ್ಯಾಪ್ತಿಯಲ್ಲಿ ತುರ್ತು ಕೆಲಸ-ಕಾಮಗಾರಿಗಳಿಗೆ ಸಂಸದರ ವಿವೇಚನೆಯಲ್ಲಿ ಬಳಕೆಗೆ ಅವಕಾಶವಿರುವ ಅಭಿವೃದ್ಧಿ ನಿಧಿ. ಹಾಗಾಗಿ ಅದನ್ನು ಸ್ಥಗಿತಗೊಳಿಸುವುದು ಕ್ಷೇತ್ರಗಳ ಅಭಿವೃದ್ಧಿ ಮತ್ತು ಸಂಸದರ ಕಾರ್ಯವಿಧಾನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಹಾಗಾಗಿ ಈ ಬಗ್ಗೆ ಸರ್ಕಾರ ತನ್ನ ನಿರ್ಧಾರವನ್ನು ಪುನರ್ ಪರಿಶೀಲಿಸಬೇಕು ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಹೇಳಿದ್ದಾರೆ.
ಸರ್ಕಾರದ ಮಹತ್ವದ ಈ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಹಿರಿಯ ನಾಯಕ ಮತ್ತು ಸಂಸದ ಸುಬ್ರಮಣಿಯನ್ ಸ್ವಾಮಿ, “ತಾವು ಈ ವೇತನ ಕಡಿತ ಕ್ರಮವನ್ನು ಸ್ವಾಗತಿಸುವುದಾಗಿ ಹೇಳಿದ್ದಾರೆ. ಜೊತೆಗೆ ಹಣಕಾಸು ಕ್ರೋಡೀಕರಣದ ಕ್ರಮವಾಗಿ ಸರ್ಕಾರ, ಸುಮಾರು 25 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಕ್ಕೆ ಮುಂದಾಗಿರುವ ನೂತನ ಸಂಸತ್ ಭವನದ ಕಾಮಗಾರಿಯನ್ನು ಕೂಡ ಒಂದು ವರ್ಷದ ಮಟ್ಟಿಗೆ ಮುಂದೂಡಿ, ಆ ಹಣವನ್ನು ಕೂಡ ಬಳಸಿಕೊಳ್ಳಬಹುದು” ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಟ್ವಿಟರ್ ನಲ್ಲಿ ತಮ್ಮ ಈ ಅಭಿಪ್ರಾಯವನ್ನು ಅವರು ಹಂಚಿಕೊಂಡಿದ್ದು, ಅದಕ್ಕೆ ವ್ಯಾಪಕ ಬೆಂಬಲವೂ ವ್ಯಕ್ತವಾಗಿದೆ.
ಆ ಮೂಲಕ ಸ್ವಾಮಿ ಅವರು, ಈ ಸಂಕಷ್ಟದ ಹೊತ್ತಲ್ಲಿ ಕೈಗೊಳ್ಳಬೇಕಾದ ದಿಟ್ಟ ನಿರ್ಧಾರಗಳ ಕುರಿತು ಸೂಚ್ಯವಾಗಿ ಸರ್ಕಾರದ ಗಮನ ಸೆಳೆದಿದ್ದು, ಸಂಸದರು, ಸಚಿವರ ವೇತನ ಕಡಿತದಂತಹ ಕ್ರಮಗಳು ದೇಶದ ಸದ್ಯದ ಆರ್ಥಿಕ ಸಂಕಷ್ಟದ ಹೊತ್ತಲ್ಲಿ ಸರ್ಕಾರಿ ಖಜಾನೆಗೆ ದೊಡ್ಡ ನಿರಾಳತೆ ತರಲಾರವು. ಅದಕ್ಕೆ ಬದಲಾಗಿ, ಬಹುಕೋಟಿ ಮೆಗಾ ಯೋಜನೆಗಳನ್ನು ಸದ್ಯಕ್ಕೆ ಮುಂದೂಡುವುದು ಅಥವಾ ಸ್ಥಗಿತಗೊಳಿಸುವುದು ಅನಿವಾರ್ಯ. ಅಂತಹ ಕ್ರಮಗಳ ಮೂಲಕ ಖಾಲಿಯಾಗಿರುವ ಖಜಾನೆಗೆ ಸಾಕಷ್ಟು ಹಣಕಾಸು ಸುರಿಯುವುದು ಕೂಡ ಸಾಧ್ಯವಿದೆ. ಹಾಗಾಗಿ ಸಂಸತ್ ಭವನ ನಿರ್ಮಾಣದಂತಹ ಅಷ್ಟೇನೂ ತುರ್ತು ಅಲ್ಲದ, ಮತ್ತು ಭಾರೀ ಮೊತ್ತದ ಅಗತ್ಯ ಬೀಳುವ ಯೋಜನೆಗಳನ್ನು ಸ್ಥಗಿತಗೊಳಿಸುವ ಅಥವಾ ತಾತ್ಕಾಲಿಕವಾಗಿ ಮುಂದೂಡುವ ಬಗ್ಗೆ ಕ್ರಮವಹಿಸುವುದು ಜಾಣ ನಡೆಯಾಗಲಿದೆ ಎಂದು ಸರ್ಕಾರಕ್ಕೆ ಕಿವಿಮಾತು ಹೇಳಿದ್ದಾರೆ.
ಹಾಗೆ ನೋಡಿದರೆ, ಸ್ವಾಮಿ ಅವರ ಸಲಹೆ ಅತ್ಯಂತ ಸಕಾಲಿಕವಾದದ್ದು ಮತ್ತು ವಿವೇಚನೆಯದ್ದು ಕೂಡ. ದೇಶದ ಸದ್ಯದ ಹಣಕಾಸು ಸ್ಥಿತಿಯೇ ತೀರಾ ಶೋಚನೀಯ ಸ್ಥಿತಿಯಲ್ಲಿದೆ ಎಂದು ಇತ್ತೀಚಿನ ಹಲವು ವರದಿಗಳು ಹೇಳಿವೆ. ಆರ್ ಬಿಐ ಮತ್ತು ಬ್ಯಾಂಕಿಂಗ್ ವಲಯದಿಂದಲೂ ಅಂತಹದ್ದೇ ಅಭಿಪ್ರಾಯಗಳು ಕೇಳಿಬಂದಿವೆ. ಜೊತೆಗೆ ಈಗಾಗಲೇ ಆರ್ಥಿಕ ಹಿಂಜರಿತ, ನೋಟ್ ರದ್ದತಿಯ ಪರಿಣಾಮ, ಜಿಎಸ್ ಟಿಯ ಅವಾಂತರಗಳಿಂದಾಗಿ ತೆವಳುತ್ತಿದ್ದ ದೇಶದ ಆರ್ಥಿಕತೆ, ಇದೀಗ ಕರೋನಾ ಕೊಟ್ಟ ಪೆಟ್ಟಿನಿಂದ ಸಂಪೂರ್ಣ ನೆಲಕಚ್ಚಿದೆ. ಇನ್ನು ಕರೋನಾದ ಪರಿಣಾಮ ಕನಿಷ್ಠ ಒಂದು ವರ್ಷ ಕಾಲ ದೇಶದ ಒಟ್ಟಾರೆ ಆರ್ಥಿಕತೆಯ ಮೇಲೆ ಭಾರೀ ಪರಿಣಾಮ ಬೀರಲಿದೆ. ಬಳಿಕ ಕನಿಷ್ಠ ಐದಾರು ವರ್ಷಗಳ ಕಾಲ ಸಾಕಷ್ಟು ಕಾಡಿಲಿದೆ. ದೇಶ ಮತ್ತೆ ವಾಪಸು ಕರೋನ ಪೂರ್ವದ ಸ್ಥತಿಗೆ ಮರಳಲು ದಶಕಗಳೇ ಬೇಕಾಗಬಹುದು ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಆ ಹಿನ್ನೆಲೆಯಲ್ಲಿ; ಈಗಾಗಲೇ ಆಗಿರುವ ಹಣಕಾಸು ಕೊರತೆಯ ಜೊತೆಗೆ ಭವಿಷ್ಯದ ತೆರಿಗೆ ಮತ್ತು ತೆರಿಗೆಯೇತರ ಆದಾಯ ಖೋತಾದ ಭೀಕರ ಪರಿಸ್ಥಿತಿಯನ್ನು ನಿಭಾಯಿಸುವ ಮತ್ತು ಅದೇ ಹೊತ್ತಿಗೆ ದೇಶದ ಪ್ರಾಥಮಿಕ ಅಭಿವೃದ್ಧಿ ಯೋಜನೆಗಳು, ಆಡಳಿತ ಯಂತ್ರ ನಿರ್ವಹಣೆ, ಜೀವನ ಭದ್ರತೆಯಂತಹ ಅನಿವಾರ್ಯ ಜನಕಲ್ಯಾಣ ಕಾರ್ಯಕ್ರಮಗಳ ವೆಚ್ಚಗಳನ್ನು ಸರಿದೂಗಿಸಿಕೊಂಡು ಹೋಗಬೇಕಾಗಿದೆ. ಅಂತಹ ಯಾವುದೇ ಕಾರಣಕ್ಕೂ ನಿಲ್ಲಿಸಲಾಗದ ವೆಚ್ಚಗಳನ್ನು ನಿಭಾಯಿಸಲು ಕೂಡ ಸರ್ಕಾರ ಆದಾಯ ಕ್ರೋಡೀಕರಣ ಮಾಡಬೇಕಾಗಿದೆ. ಹಾಗಾಗಿ ಸರ್ಕಾರದ ಮುಂದೆ ಏಕಕಾಲಕ್ಕೆ ಎರಡೆರಡು ಸವಾಲುಗಳಿವೆ. ಒಂದು ಆಗಿರುವ ಮತ್ತು ಆಗಲಿರುವ ಆದಾಯ ನಷ್ಟವನ್ನು ಭರಿಸುವುದು ಮತ್ತು ಅದೇ ಹೊತ್ತಿಗೆ ದೇಶದ ದೈನಂದಿನ ಬದುಕು ನಿಲ್ಲದಂತೆ ಕನಿಷ್ಠ ವೆಚ್ಚಗಳನ್ನು ನಿಭಾಯಿಸುವುದು.
ಆ ಹಿನ್ನೆಲೆಯಲ್ಲಿ ಸುಬ್ರಮಣಿಯನ್ ಸ್ವಾಮಿ ಅವರ ಸೂಚ್ಯ ಸಲಹೆ ಸರ್ಕಾರದ ಕಣ್ಣು ತೆರೆಸುವುದೇ ಎಂಬುದನ್ನು ಕಾದುನೋಡಬೇಕಿದೆ. ಹಾಗೆ ನೋಡಿದರೆ, ಸ್ವಾಮಿ ಅವರು ಹೆಸರಿಸಿರುವುದು ಸದ್ಯಕ್ಕೆ ನೂತನ ಸಂಸತ್ ಭವನವನ್ನು ಮಾತ್ರ. ಆದರೆ, ಜಾಗತಿಕ ಮಟ್ಟದ ಹಲವು ಆರ್ಥಿಕ ತಜ್ಞರು, ಅಭಿವೃದ್ಧಿಯ ತಜ್ಞರು ಭವಿಷ್ಯ ನುಡಿದಂತೆ ಭಾರತವೂ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಉದ್ಯಮ ಚಟುವಟಿಕೆಗಳು, ವ್ಯವಹಾರ ಮತ್ತು ವಹಿವಾಟು ಕರೋನಾ ಪೂರ್ವದ ಸ್ಥಿತಿಗೆ ಮರಳಲು ದಶಕಗಳೇ ಬೇಕಾಗಬಹುದು. ಆ ಹಿನ್ನೆಲೆಯಲ್ಲಿ ನೋಡಿದರೆ, ಈ ಹಿಂದಿನ ನಮ್ಮ ಉದ್ಯಮ- ವ್ಯವಹಾರಗಳ ಬೆಳವಣಿಗೆಯ ವೇಗಕ್ಕೆ ತಕ್ಕಂತೆ ಭವಿಷ್ಯದ ಅಗತ್ಯ ಮನಗಂಡು ಜಾರಿಗೆ ತಂದಿರುವ, ತರಲಾಗುತ್ತಿರುವ ಹಲವು ಮೆಗಾ ಯೋಜನೆಗಳನ್ನು ಕೂಡ ತಾತ್ಕಾಲಿಕವಾಗಿ ಮುಂದೂಡುವ ಅಥವಾ ಸ್ಥಗಿತಗೊಳಿಸುವ ಬಗ್ಗೆಯೂ ಸರ್ಕಾರ ಗಂಭೀರ ಯೋಚನೆ ಮಾಡಲು ಸ್ವಾಮಿ ಅವರ ಈ ಹೇಳಿಕೆ ದಿಕ್ಸೂಚಿಯಾಗಿದೆ.
ಬರೋಬ್ಬರಿ 8.57 ಲಕ್ಷ ಕೋಟಿ ಅಂದಾಜು ವೆಚ್ಚದ ಸಾಗರ್ ಮಾಲಾ ಯೋಜನೆ, 7.70 ಲಕ್ಷ ಕೋಟಿ ಅಂದಾಜು ವೆಚ್ಚದ ಸೇತು ಭಾರತಂ ಯೋಜನೆ, ಸುಮಾರು 5.5 ಲಕ್ಷ ಕೋಟಿ ವೆಚ್ಚದ ಭಾರತ್ ಮಾಲಾ ಯೋಜನೆ ಮುಂತಾದ ಲಕ್ಷಾಂತರ ಕೋಟಿ ವೆಚ್ಚದ ಹಲವು ಯೋಜನೆಗಳನ್ನು ತಾತ್ಕಾಲಿಕವಾಗಿಯಾದರೂ ಮುಂದೂಡುವ ಅಥವಾ ಸ್ಥಗಿತಗೊಳಿಸುವ ಮೂಲಕ ಕನಿಷ್ಠ ಒಂದು ವರ್ಷದ ಅವಧಿಗೆ ಆ ಯೋಜನೆಗಳಿಗೆ ವೆಚ್ಚಮಾಡಬಹುದಾದ ಬೃಹತ್ ಮೊತ್ತದ ಹಣವನ್ನು ಸಂಕಷ್ಟ ಪರಿಹಾರ ಕಾರ್ಯಗಳಿಗೆ ಬಳಸಿಕೊಳ್ಳಬಹುದು.
ಹಾಗೇ, ವಿವಿಧ ರಾಜ್ಯಗಳಲ್ಲಿ ಕೇಂದ್ರ ಮತ್ತು ಸ್ಥಳೀಯ ರಾಜ್ಯ ಸರ್ಕಾರಗಳ ಅನುದಾನದಲ್ಲಿ ತಲೆ ಎತ್ತುತ್ತಿರುವ ನೂರಾರು ಬೃಹತ್ ಪ್ರತಿಮೆಗಳು, ಧ್ವಜಸ್ಥಂಭಗಳು, ಈಜುಕೊಳ, ಕ್ರೀಡಾಂಗಣಗಳು, ಐಷಾರಾಮಿ ಮನೋರಂಜನಾ ಪಾರ್ಕುಗಳು, ನಗರ ಸೌಂದರ್ಯೀಕರಣ ಯೋಜನೆಗಳನ್ನು ಕೂಡ ಸ್ಥಗಿತಗೊಳಿಸುವ ಮೂಲಕ ಸಾವಿರಾರು ಕೋಟಿ ರೂಪಾಯಿ ಹಣಕಾಸು ಕ್ರೋಡೀಕರಣ ಅವಕಾಶಗಳಿವೆ. ಎರಡು ವರ್ಷಗಳ ಅವಧಿಗೆ ಸಂಸದರ ಪ್ರದೇಶಾಭಿವೃದ್ಧಿ ನಿಧಿ ತಡೆಯುವ ಮೂಲಕ ಕೇಂದ್ರ ಸರ್ಕಾರಕ್ಕೆ ಉಳಿತಾಯವಾಗುವುದು ಕೇವಲ 7,900 ಕೋಟಿ ರೂ.ಗಳು ಮಾತ್ರ! ಅದಕ್ಕೆ ಬದಲಾಗಿ ಇಂತಹ ಹಲವು ತೀರಾ ಅನಿವಾರ್ಯವಲ್ಲದ, ತುರ್ತು ಇರದ ಯೋಜನೆಗಳನ್ನು ಮುಂದೂಡುವ ಅಥವಾ ಸ್ಥಗಿತಗೊಳಿಸುವ ಮೂಲಕ ಲಕ್ಷಾಂತ್ರ ಕೋಟಿ ಹಣಕಾಸು ಕ್ರೋಡೀಕರಣಕ್ಕೆ ಅವಕಾಶವಿದೆ.
ಜೊತೆಗೆ, ಇಂತಹ ಹಣಕಾಸು ಉಳಿತಾಯದ ಕ್ರಮಗಳ ಬಳಿಕವೂ ಅಗತ್ಯ ಕರ್ಚುವೆಚ್ಚ ನಿರ್ವಹಣೆಗೆ ಕೊರತೆಯಾದಲ್ಲಿ; ಕೇಂದ್ರ ಸರ್ಕಾರದ ಯುಜಿಸಿ ವೇತನದಾರರು, ರೈಲ್ವೆ, ಟೆಲಿಕಾಂ, ಐಎಎಸ್, ಐಪಿಎಸ್ ಮುಂತಾದ ಉನ್ನತ ಶ್ರೇಣಿಯ ವೇತನದಾರರ ವೇತನದಲ್ಲಿ ಕಡಿತ ಮಾಡುವ ಬಗ್ಗೆ ಸರ್ಕಾರ ಯೋಚನೆ ಮಾಡಬಹುದು. ಆದರೆ, ಅಂತಹ ನಿರ್ಧಾರ ಕೈಗೊಳ್ಳಲು ಸರ್ಕಾರಕ್ಕೆ ದಿಟ್ಟ ಜನಪರ ನಿಲುವು ಮತ್ತು ಚುನಾವಣೆ, ಮತಗಳಿಕೆಯ ಮೀರಿದ; ದೇಶದ ಹಿತಾಸಕ್ತಿಯೊಂದೇ ಮುಖ್ಯ ಎಂಬ ಎದೆಗಾರಿಕೆ ಬೇಕಾಗುತ್ತದೆ. ಮತಬ್ಯಾಂಕ್ ರಾಜಕಾರಣವೇ ಅಧಿಕಾರಕ್ಕೇರುವ ಗುಟ್ಟಾಗಿರುವ ಈ ಹೊತ್ತಿನಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಅಂತಹ ದಿಟ್ಟ ನಿಲುವು ಕೈಗೊಳ್ಳುವುದೇ?