ನಾಯಕತ್ವದ ಸಮಸ್ಯೆಯಿಂದ ಬಳಲುತ್ತಿರುವ ರಾಜ್ಯ ಕಾಂಗ್ರೆಸ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರಿತವಾಗುತ್ತಿರುವ ಬೆನ್ನಲ್ಲೇ ಪಕ್ಷದ ಪಾಲಿನ ಟ್ರಬಲ್ ಶೂಟರ್ ಡಿ. ಕೆ. ಶಿವಕುಮಾರ್ ಜೈಲಿನಿಂದ ಹೊರಬರುತ್ತಿರುವುದು ಮೂಲ ಕಾಂಗ್ರೆಸಿಗರಲ್ಲಿ ಸಮಾಧಾನದ ನಿಟ್ಟುಸಿರು ಬರುವಂತೆ ಮಾಡಿದೆ. ತಮ್ಮ ಆಪ್ತರನ್ನು ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಪ್ರತಿಪಕ್ಷ ಉಪ ನಾಯಕರನ್ನಾಗಿ ಮಾಡಲು ಪ್ರಯತ್ನಿಸುತ್ತಿರುವ ಸಿದ್ದರಾಮಯ್ಯ ಅವರು ಇನ್ನಾದರೂ ಪಕ್ಷದ ಇತರೆ ಮುಖಂಡರ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳಬಹುದು ಎಂಬ ವಿಶ್ವಾಸ ಮೂಡಿದೆ.
ಸಿದ್ದರಾಮಯ್ಯ ಅವರಿಗೆ ಪ್ರಮುಖ ಸ್ಥಾನಮಾನ ನೀಡುತ್ತಿರುವುದರ ಬಗ್ಗೆ ಆರಂಭದಿಂದಲೂ ಅಸಮಾಧಾನವಿದ್ದರೂ ಅದನ್ನು ತೋರ್ಪಡಿಸಿಕೊಳ್ಳಲು ಧೈರ್ಯವಿಲ್ಲದೆ ವರಿಷ್ಠರು ಹೇಳಿದ್ದಕ್ಕೆಲ್ಲಾ ಗೋಣು ಆಡಿಸುತ್ತಿದ್ದ ಮೂಲ ಕಾಂಗ್ರೆಸಿಗರ ಪಾಡು ಡಿ. ಕೆ. ಶಿವಕುಮಾರ್ ಜೈಲಿಗೆ ಹೋದ ಬಳಿಕವಂತೂ ಯಾರಿಗೂ ಬೇಡ ಎನ್ನುವಂತಿತ್ತು. ಅತ್ತ ಪಕ್ಷ ಸಂಘಟಿಸುವ ಶಕ್ತಿಯೂ ಇಲ್ಲ, ಇತ್ತ ಸಿದ್ದರಾಮಯ್ಯ ಅವರನ್ನು ಎದುರುಹಾಕಿಕೊಂಡು ಮುಂದೆ ಬರಲೂ ಆಗುತ್ತಿಲ್ಲ ಎಂಬ ಅಡಕತ್ತರಿಯಲ್ಲಿ ಸಿಕ್ಕಿ ಒದ್ದಾಡುತ್ತಿದ್ದರು. ಪಕ್ಷದಲ್ಲಿ ಪ್ರಮುಖ ಸ್ಥಾನಮಾನ ಹೊಂದಿದ್ದವರು ಸಿದ್ದರಾಮಯ್ಯ ಅವರೊಂದಿಗೆ ಬಲವಂತವಾಗಿ ರಾಜಿ ಮಾಡಿಕೊಂಡು ಅವರ ಬೆನ್ನಿಗೆ ನಿಂತಿದ್ದರು.
ಹೀಗಾಗಿ ಪಕ್ಷದಲ್ಲಿ ಮತ್ತಷ್ಟು ಬಲಾಢ್ಯರಾದ ಸಿದ್ದರಾಮಯ್ಯ ವಿಧಾನಸಭೆ ಉಪ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದರ ಜತೆಗೆ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಪ್ರತಿಪಕ್ಷದ ಉಪನಾಯಕರ ಸ್ಥಾನಗಲಿಗೆ ತಮ್ಮ ಆಪ್ತರಾದವರನ್ನು ಆಯ್ಕೆ ಮಾಡಲು ಮುಂದಾಗಿದ್ದರು. ವಿಧಾನಸಭೆ ಪ್ರತಿಪಕ್ಷ ಉಪನಾಯಕರಾಗಿ ಮಾಜಿ ಸಚಿವ ಕೃಷ್ಣಬೈರೇಗೌಡ ಮತ್ತು ವಿಧಾನ ಪರಿಷತ್ ಪ್ರತಿಪಕ್ಷ ಉಪನಾಯಕರಾಗಿ ಎಚ್. ಎಂ. ರೇವಣ್ಣ ಅವರನ್ನು ನೇಮಿಸುವ ಬಗ್ಗೆ ಯೋಚಿಸಿದ್ದರು. ಆದರೆ, ಈ ಬಗ್ಗೆ ಮೂಲ ಕಾಂಗ್ರೆಸಿಗರ ವಿರೋಧವಿದೆ.
ಕೃಷ್ಣಬೈರೇಗೌಡ ಮೂಲ ಕಾಂಗ್ರೆಸಿಗರಲ್ಲ. ಜನತಾ ಪರಿವಾರದಲ್ಲಿ ಇದ್ದು ಬಳಿಕ ಕಾಂಗ್ರೆಸ್ ಸೇರಿದವರು. ಹೀಗಾಗಿ ಆರಂಭದಿಂದಲೂ ಅವರು ಜೆಡಿಎಸ್ ನಿಂದ ಕಾಂಗ್ರೆಸಿಗೆ ಬಂದಿದ್ದ ಸಿದ್ದರಾಮಯ್ಯ ಅವರೊಂದಿಗೆ ಆತ್ಮೀಯರಾಗಿಯೇ ಇದ್ದಾರೆ. ವಯಸ್ಸು ಮತ್ತು ರಾಜಕಾರಣದಲ್ಲಿ ಕಿರಿಯರಾಗಿದ್ದರೂ ಸಿದ್ದರಾಮಯ್ಯ ಸರ್ಕಾರದಲ್ಲಿ ಕೃಷಿಯಂತಹ ಮಹತ್ವದ ಖಾತೆ ಹೊಂದಿದ್ದರು. ಅಲ್ಲದೆ, ಜಿಎಸ್ ಟಿ (ಸರಕು ಮತ್ತು ಸೇವಾ ತೆರಿಗೆ) ಮಂಡಳಿಯಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಅವಕಾಶವನ್ನೂ ಪಡೆದಿದ್ದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಾಗ ಕಾನೂನು ಮತ್ತು ಸಂಸದೀಯ ವ್ಯವಹಾರ ಖಾತೆಯನ್ನು ಪಡೆದಿದ್ದಲ್ಲದೆ, ಜಿಎಸ್ ಟಿ ಮಂಡಳಿಯಲ್ಲೂ ಮುಂದುವರಿದಿದ್ದರು. ಇದಕ್ಕೆ ಸಿದ್ದರಾಮಯ್ಯ ಅವರ ಬೆಂಬಲವೂ ಪ್ರಮುಖ ಕಾರಣ. ಇನ್ನು ಎಚ್. ಎಂ. ರೇವಣ್ಣ ಅವರು ಸಿದ್ದರಾಮಯ್ಯ ಅವರ ಸಮುದಾಯವಾಗಿರುವ ಕುರುಬ ಸಮುದಾಯಕ್ಕೆ ಸೇರಿದವರು. ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತರುವಲ್ಲಿ ಎಚ್. ವಿಶ್ವನಾಥ್ ಮತ್ತು ಎಚ್. ಎಂ. ರೇವಣ್ಣ ಪ್ರಮುಖ ಪಾತ್ರ ವಹಿಸಿದ್ದರು. ನಂತರದಲ್ಲಿ ಯಾವತ್ತೂ ಸಿದ್ದರಾಮಯ್ಯ ಜತೆ ಗುರುತಿಸಿಕೊಂಡಿದ್ದರು. ಈ ಕಾರಣಕ್ಕಾಗಿ ಇಬ್ಬರಿಗೂ ಪ್ರಮುಖ ಸ್ಥಾನಮಾನ ನೀಡಬೇಕು ಎಂಬುದು ಸಿದ್ದರಾಮಯ್ಯ ಅವರ ಬಯಕೆಯಾಗಿದೆ.
ಇದು ಮೂಲ ಕಾಂಗ್ರೆಸಿಗರಿಗೆ ಸಿದ್ದರಾಮಯ್ಯ ಬಗ್ಗೆ ಇರುವ ಅಸಮಾಧಾನ ಇನ್ನಷ್ಟು ಹೆಚ್ಚುವಂತೆ ಮಾಡಿದೆ. ಸಿದ್ದರಾಮಯ್ಯ ಅವರು ಪ್ರಸ್ತುತ ವಿಧಾನಸಭೆ ಪ್ರತಿಪಕ್ಷ ನಾಯಕರಾಗಿದ್ದಾರೆ. ಇದರ ಜತೆಗೆ ಅವರ ಆಪ್ತರಾಗಿರುವ ಕೃಷ್ಣ ಬೈರೇಗೌಡ ಪ್ರತಿಪಕ್ಷ ಉಪನಾಯಕರಾದರೆ ವಿಧಾನಸಭೆಯಲ್ಲಿ ಮೂಲ ಕಾಂಗ್ರೆಸಿಗರ ಕೂಗಿಗೆ ಹೆಚ್ಚಿನ ಬೆಲೆ ಇಲ್ಲದಂತಾಗುತ್ತದೆ. ಅದೇ ರೀತಿ ವಿಧಾನ ಪರಿಷತ್ತಿನಲ್ಲಿ ರೇವಣ್ಣ ಅವರು ಪ್ರತಿಪಕ್ಷ ಉಪನಾಯಕರಾದರೆ ಅಲ್ಲೂ ಸಿದ್ದರಾಮಯ್ಯ ಅವರೇ ಪಾರುಪತ್ಯ ಸಾಧಿಸುವಂತಾಗುತ್ತದೆ. ಹೀಗಾದರೆ ಪಕ್ಷ ವತ್ತು ವಿಧಾನ ಮಂಡಲದಲ್ಲಿ ತಮ್ಮ ಪರಿಸ್ಥಿತಿ ಏನು ಎಂದು ಆಕಾಂಕ್ಷಿಗಳು ಯೋಚಿಸುತ್ತಿದ್ದರು.
ಶಿವಕುಮಾರ್ ಬಿಡುಗಡೆ ಶಕ್ತಿ ತರುವುದೇ?
ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಮತ್ತು ಡಿ. ಕೆ. ಶಿವಕುಮಾರ್ ಅವರ ಸಂಬಂಧ ಆರಂಭದಿಂದಲೂ ಅಷ್ಟಕ್ಕಷ್ಟೆ. ಈ ಕಾರಣದಿಂದ ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗ ಸಾಕಷ್ಟು ಸಮಯ ಶಿವಕುಮಾರ್ ಸಂಪುಟದಿಂದ ಹೊರಗಿದ್ದರು. ಬಳಿಕ ವರಿಷ್ಠರ ಮೂಲಕ ಒತ್ತಡ ಹೇರಿ ಸಚಿವರಾದರು. ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ನಲ್ಲಿರುವ ಸಿದ್ದರಾಮಯ್ಯ ಬೆಂಬಲಿಗ ಶಾಸಕರು ಮತ್ತು ಜೆಡಿಎಸ್ ಮಧ್ಯೆ ವಿರಸ ಕಂಡುಬಂದಾಗ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರ ಪರ ನಿಂತು ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದರು. ಮೈತ್ರಿ ಸರ್ಕಾರ ಉರುಳಿದ ಮೇಲೂ ಕುಮಾರಸ್ವಾಮಿ ಬಗ್ಗೆ ಸಿದ್ದರಾಮಯ್ಯ ಬಹಿರಂಗವಾಗಿ ಕಿಡಿ ಕಾರಿದಾಗ ಶಿವಕುಮಾರ್ ಪರೋಕ್ಷವಾಗಿ ಕುಮಾರಸ್ವಾಮಿ ಪರ ಮಾತನಾಡಿದ್ದರು. ಇದರಿಂದಾಗಿ ಮೂಲ ಕಾಂಗ್ರೆಸಿಗರಿಗೆ ಶಿವಕುಮಾರ್ ತಮ್ಮೊಂದಿಗಿದ್ದಾರೆ ಎಂಬ ಧೈರ್ಯವಿತ್ತು.
ಆದರೆ, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಶಿವಕುಮಾರ್ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿದ ಬಳಿಕ ಮೂಲ ಕಾಂಗ್ರೆಸ್ಸಿಗರಿಗೆ ಶಕ್ತಿ ಉಡುಗಿದಂತಾಗಿತ್ತು. ಇದರಿಂದಾಗಿ ಸಿದ್ದರಾಮಯ್ಯ ಅವರನ್ನು ಪ್ರತಿಪಕ್ಷ ನಾಯಕರಾಗಿ ಆಯ್ಕೆ ಮಾಡುವುದು ಇಷ್ಟವಿಲ್ಲದಿದ್ದರೂ ವರಿಷ್ಠರು ಹೇಳಿದಾಗ ಮೌನವಾಗಿ ಒಪ್ಪಿಕೊಂಡಿದ್ದರು. ಇದರ ಮಧ್ಯೆ ಸಿದ್ದರಾಮಯ್ಯ ಪಕ್ಷದಲ್ಲಿ ಏಕಸ್ವಾಮ್ಯ ನಿರ್ಧಾರಗಳನ್ನು ಕೈಗೊಳ್ಳುತ್ತಾ ಮುಂದುವರಿಯುತ್ತಿದ್ದಾರೆ.
ಇದೀಗ ಡಿ. ಕೆ. ಶಿವಕುಮಾರ್ ಜೈಲಿನಿಂದ ಬಿಡುಗಡೆಯಾಗಿ ಬರುತ್ತಿರುವುದು ಮೂಲ ಕಾಂಗ್ರೆಸಿಗರಲ್ಲಿ ಚೈತನ್ಯ ಬಂದಂತಾಗಿದೆ. ಅಷ್ಟೇ ಅಲ್ಲ, ತಮ್ಮ ಆಪ್ತರನ್ನು ವಿಧಾನಸಭೆ ಮತ್ತು ವಿಧಾನ ಪರಿಷತ್ ಪ್ರತಿಪಕ್ಷ ಉಪನಾಯಕರಾಗಿ ನೇಮಿಸಲು ಮುಂದಾಗಿದ್ದ ಸಿದ್ದರಾಮಯ್ಯ ಅವರೂ ಈ ಬಗ್ಗೆ ಸ್ವಲ್ಪ ಯೋಚಿಸಿ ತೀರ್ಮಾನ ಕೈಗೊಳ್ಳಬೇಕಾಗಿದೆ.
ಶಿವಕುಮಾರ್ ಅವರ ಬಗ್ಗೆ ರಾಜ್ಯ ನಾಯಕರು ಏನೇ ಹೇಳಲಿ, ಹೈಕಮಾಂಡ್ ಮಟ್ಟದಲ್ಲಂತೂ ಅವರಿಗೆ ಮಣೆ ಹಾಕಲಾಗುತ್ತದೆ. ಗುಜರಾತ್ ಶಾಸಕರಿಗೆ ಬೆಂಗಳೂರಿನಲ್ಲಿ ರಕ್ಷಣೆ ನೀಡಿದ್ದು, ಮೈತ್ರಿ ಸರ್ಕಾರ ಉಳಿಸಲು ನಡೆಸಿದ ಪ್ರಯತ್ನಗಳು ಸೇರಿದಂತೆ ಪಕ್ಷ ಸಂಕಷ್ಟದಲ್ಲಿದ್ದಾಗಲೆಲ್ಲಾ ಗಟ್ಟಿಯಾಗಿ ನಿಂತು ನಿಭಾಯಿಸಿದ ಕಾರಣಗಳಿಗಾಗಿ ರಾಜ್ಯದಲ್ಲಿ ಏನೇ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವುದಿದ್ದರೂ ವರಿಷ್ಠರು ಶಿವಕುಮಾರ್ ಅವರ ಅಭಿಪ್ರಾಯ ಕೇಳುತ್ತಾರೆ. ಸಾಧ್ಯವಾದಷ್ಟು ಅವರ ಮಾತಿಗೆ ಒಪ್ಪುತ್ತಾರೆ ಕೂಡ.
ಇದೀಗ ಜೈಲಿನಿಂದ ಜಾಮೀನು ಪಡೆದು ಬಿಡುಗಡೆಯಾಗಲಿರುವ ಶಿವಕುಮಾರ್ ಹೊಸ ಶಕ್ತಿಯೊಂದಿಗೆ ಪಕ್ಷದಲ್ಲಿ ಕಾಣಿಸಿಕೊಳ್ಳಬಹುದು. ದೆಹಲಿಯ ಜೈಲಿನಿಂದ ಬೆಂಗಳೂರಿಗೆ ಬಂದ ಬಳಿಕ ನೇರವಾಗಿ ಸಕ್ರಿಯ ರಾಜಕಾರಣಕ್ಕೆ ಇಳಿದರೆ ಜನಬೆಂಬಲ ಅವರ ಪರವಾಗಿರುತ್ತದೆ. ಶಿವಕುಮಾರ್ ಬಂಧನದ ವೇಳೆ ನಡೆದ ಹೋರಾಟ ಇದಕ್ಕೆ ಉದಾಹರಣೆ. ಹೀಗಾಗಿ ಶಿವಕುಮಾರ್ ಬಂದ ಬಳಿಕ ಕಾಂಗ್ರೆಸ್ಸಿನಲ್ಲಿ ಸಿದ್ದರಾಮಯ್ಯ ಅವರ ಏಕಸ್ವಾಮ್ಯಕ್ಕೆ ಕಡಿವಾಣ ಬೀಳುವುದೇ ಎಂದು ಮೂಲ ಕಾಂಗ್ರೆಸ್ಸಿಗರು ಎದುರು ನೋಡುತ್ತಿದ್ದಾರೆ.