ಕರೋನಾ ಸೋಂಕು ವಿಚಾರದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಜಟಾಪಟಿ ಶುರುವಾಗಿದೆ. ಕೋಟಿ ಕೋಟಿ ಹಣವನ್ನು ಲೂಟಿ ಮಾಡಿದ್ದಾರೆ ಎನ್ನುವುದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇರ ಆರೋಪ. ನ್ಯಾಯಾಂಗ ತನಿಖೆ ಮಾಡಿಸಿ ಎಂದು ಆಗ್ರಹ ಕೂಡ ಮಾಡಿದ್ದಾರೆ. ಸುಮಾರು ನಾಲ್ಕು ಸಾವಿರ ಕೋಟಿ ವೆಚ್ಚ ಮಾಡಲಾಗಿದ್ದು, ಅದರಲ್ಲಿ 2 ಸಾವಿರ ಕೋಟಿಯಷ್ಟು ಹಣ ಲೂಟಿಯಾಗಿದೆ. ಇದಕ್ಕೆ ಸರ್ಕಾರ ಕೊಟ್ಟಿರುವ ಲೆಕ್ಕಪತ್ರಗಳೇ ಸಾಕ್ಷಿ ಎಂದು ವಾಗ್ದಾಳಿ ನಡೆಸುತ್ತಲೇ ಇದ್ದಾರೆ.
ಸಿದ್ದರಾಮಯ್ಯ ಆರೋಪಕ್ಕೆ ಬಿಜೆಪಿ ಸಚಿವರು ಕೂಡ ತಿರುಗೇಟು ನೀಡುತ್ತಲೇ ಬಂದಿದ್ದಾರೆ. ಆದರೂ ಸಿದ್ದರಾಮಯ್ಯ ಮಾತ್ರ ನನ್ನ ಆರೋಪ ಗಟ್ಟಿಯಾಗಿದೆ. ಬಿಜೆಪಿ ಸರ್ಕಾರ ತಪ್ಪನ್ನೇ ಮಾಡಿಲ್ಲ ಎನ್ನುವುದಾದರೆ ಹಾಲಿ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ಮಾಡಿಸಿ ಸಾಬೀತು ಮಾಡಲಿ ಎಂದು ಸವಾಲು ಹಾಕಿದ್ದಾರೆ. ಇದರಿಂದ ಗಲಿಬಿಲಿಗೊಂಡಿರುವ ರಾಜ್ಯ ಸರ್ಕಾರ ಸಿದ್ದರಾಮಯ್ಯ ಅವರ ಮಾತುಗಳ ನಿಯಂತ್ರಣಕ್ಕೆ ತಂತ್ರ ರೂಪಿಸುತ್ತಿದೆ. ಏನಾದರೂ ಆಗಲಿ ಸಿದ್ದರಾಮಯ್ಯ ಮಾಡುತ್ತಿರುವ ಭ್ರಷ್ಟಾಚಾರ ಆರೋಪ ಮುಂದುವರಿಯಬಾರದು ಎನ್ನುವ ನಿರ್ಧಾರಕ್ಕೆ ಬರಲಾಗಿದೆ. ಅದೇ ಕಾರಣದಿಂದ ಸಿದ್ಧರಾಮಯ್ಯ ಅವರ ಅತ್ಯಾಪ್ತರನ್ನೇ ವಾಗ್ದಾಳಿಗೆ ಮುಂದೆ ಬಿಡಲಾಗಿದೆ.
ತನ್ನ ರಾಜಕೀಯ ಮಾರ್ಗದರ್ಶಕನ ವಿರುದ್ಧವೇ ಮಾತನಾಡಿದ ಡಾ. ಸುಧಾಕರ್.!
ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲೂ ಸಾಕಷ್ಟು ಭ್ರಷ್ಟಾಚಾರ ನಡೆದಿದೆ ಎಂದು ಸಿದ್ದರಾಮಯ್ಯ ಆರೋಪ ಮಾಡಿದ್ದರು. ಸಿದ್ದರಾಮಯ್ಯ ಆರೋಪದ ಬಳಿಕ ಟ್ವೀಟ್ ಮಾಡಿದ್ದ ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್, ಸುಧೀರ್ಘ ರಾಜಕಾರಣದಲ್ಲಿ ಇದ್ದರೂ ಪ್ರಸ್ತಾವನೆಗೂ ಮಂಜೂರಾತಿಗೂ ವ್ಯತ್ಯಾಸ ಗೊತ್ತಿಲ್ಲವೇ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದರು. ಅದಕ್ಕೆ ಕಟುವಾಗಿ ಟೀಕಿಸಿದ ಸಿದ್ದರಾಮಯ್ಯ, ಡಾ. ಸುಧಾಕರ್ ಉಪಕಾರ ಸ್ಮರಣೆ ಇಟ್ಟುಕೊಂಡು ಮಾತನಾಡಲಿ. ಸುಧಾಕರ್ ಎಷ್ಟು ವರ್ಷ ಸಚಿವರಾಗಿದ್ದಾರೆ..? ನಾನು ಎಷ್ಟು ವರ್ಷ ಮಂತ್ರಿ ಆಗಿದ್ದೆ..? ಉಪಮುಖ್ಯಮಂತ್ರಿ, ಸಿಎಂ ಆಗಿಯೂ ಕೆಲಸ ಮಾಡಿದ್ದೇನೆ. ನನಗೆ ಪ್ರಸ್ತಾವನೆ, ಮಂಜೂರಾತಿ, ಅನುಮೋದನೆ, ವೆಚ್ಚ ಅಂದರೆ ಏನು ಅಂತಾ ಗೊತ್ತಿಲ್ಲದೇ 13 ಬಾರಿ ಬಜೆಟ್ ಮಂಡಿಸಿದ್ದೇನಾ..? ಎಂದು ಕುಟುಕಿದ್ದಾರೆ.
ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್, ಅಧಿಕಾರದ ಅಹಂನಿಂದ ಮಾತಾಡುತ್ತಿದ್ದಾರೆ. ಸುಧಾಕರ್ ಇಲಾಖೆಯ ೮೧೫ ಕೋಟಿ ಪ್ರಸ್ತಾಪ ಅವರದೇ ದಾಖಲೆಯಲ್ಲಿ ಇರೋದನ್ನು ಹೇಳಿದ್ದೇನೆ. ನನಗೆ ಏನೂ ಗೊತ್ತಿಲ್ಲದೇ ಟಿಕೆಟ್ ಕೊಡಿಸಿದೆನಾ..? ಅಧಿಕಾರ ಇದೆ ಅಂತ ಬಾಯಿಗೆ ಬಂದಂಗೆ ಮಾತಾಡಬಾರದು. ನನಗೇ ಪಾಠ ಹೇಳಿಕೊಡೋದಾ..? ಅಧಿಕಾರದ ಅಹಂನಿಂದ ಮಾತಾಡ್ತಿರೋದು ಸುಧಾಕರ್. ಅಧಿಕಾರ ಬಂದ ಮೇಲೆ ಹೀಗೆಲ್ಲ ಮಾತಾಡ್ತಿದ್ದಾರೆ. ಉಪಕಾರ ಸ್ಮರಣೆ ಇಟ್ಟುಕೊಂಡು ಮಾತನಾಡಿದರೆ ಸೂಕ್ತ ಎಂದಿದ್ದರು.
ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಸಿದ್ದರಾಮಯ್ಯ ಮಾತಿನಿಂದ ಮತ್ತೆ ಸಿಡಿದೆದ್ದಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್, ಮಾನ್ಯ ಸಿದ್ದರಾಮಯ್ಯನವರು ನಾನು ಅಧಿಕಾರದ ಅಹಂನಿಂದ ಮಾತನಾಡಿದ್ದೇನೆ ಎಂದಿದ್ದಾರೆ. ಜೊತೆಗೆ ನನಗೆ ಉಪಕಾರ ಸ್ಮರಣೆ ಇರಬೇಕು ಎಂದಿದ್ದಾರೆ. ಅವರು ಹಿಂದೆ ನೀಡಿರುವ ಸಹಕಾರ ಮತ್ತು ಮಾರ್ಗದರ್ಶನವನ್ನು ಸದಾ ಸ್ಮರಿಸುತ್ತೇನೆ. ಆದರೆ ನನ್ನ ಅಳಿಲು ಸೇವೆಯನ್ನು ಅವರೂ ಸಹ ಮರೆತಿಲ್ಲ ಎಂದು ಭಾವಿಸಿದ್ದೇನೆ. ಕಳೆದ 5 ತಿಂಗಳಿನಿಂದ ವೈದ್ಯಕೀಯ ಶಿಕ್ಷಣ ಇಲಾಖೆಯ ಜವಾಬ್ದಾರಿ ಹೊತ್ತಿದ್ದೇನೆ. ಕಾರ್ಯ ಕ್ಷಮತೆಯಿಂದ ಅವಿರತವಾಗಿ ಶ್ರಮಿಸುತ್ತಿದ್ದೇನೆ. ಇಂತಹ ಸನ್ನಿವೇಶದಲ್ಲಿ ನನ್ನ ಇಲಾಖೆಯ ವಿರುದ್ಧ ಸತ್ಯಕ್ಕೆ ದೂರವಾದ ಅರೋಪಗಳು ಬಂದಾಗ, ಜವಾಬ್ದಾರಿಯುತವಾಗಿ ವಾಸ್ತವಾಂಶವನ್ನು ಜನರ ಮುಂದಿಟ್ಟದ್ದೇನೆ. ಇದರಲ್ಲಿ ಯಾವುದೇ ವೈಯಕ್ತಿಕ ನಿಂದನೆ ಅಥವಾ ಅಪಹಾಸ್ಯದ ಉದ್ದೇಶವಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
ಸಿದ್ಧರಾಮಯ್ಯ ವಿರುದ್ಧ ಮಾಜಿ ಆಪ್ತ ಎಂಟಿಬಿ ನಾಗರಾಜ್..!!
ಸಿದ್ದರಾಮಯ್ಯ ನನ್ನ ಎದೆಯಲ್ಲಿ ಇದ್ದಾರೆ ಎಂದು ಹೇಳುವ ಮೂಲಕ ಸುದ್ದಿಯಾಗಿದ್ದ ಎಂಟಿಬಿ ನಾಗರಾಜ್ ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ರಾಜಕಾರಣದಲ್ಲಿ ಯಾರೂ ಸತ್ಯ ಹರಿಶ್ಚಂದ್ರರಲ್ಲ. ನಿಮ್ಮ ಬಂಡವಾಳ ಏನು ಅಂತ ನನಗೆ ಗೊತ್ತಿದೆ. ನಾನು 40 ವರ್ಷ ರಾಜಕಾರಣ ಮಾಡಿದ್ದೇನೆ. ಮುಖ್ಯಮಂತ್ರಿ ಆಗಿದ್ದಾಗ ಯಾರು ಎಷ್ಟು ಎಷ್ಟು ಹಗರಣ ಮಾಡಿದ್ದಾರೆ ಎಂದು ನಂಗೆ ಗೊತ್ತಿದೆ. ಆದರೆ ಈಗ ಅದರ ಬಗ್ಗೆ ಮಾತನಾಡುವ ಸಮಯ ಅಲ್ಲ. ಈಗ ಕರೋನಾ ವಿರುದ್ಧ ಹೋರಾಟ ಮಾಡುವ ಅಗತ್ಯತೆ ಇದೆ. ಸಮಯ ಬಂದಾಗ ದಾಖಲೆ ಸಮೇತ ಬಿಚ್ಚಿಡುತ್ತೆನೆ ಎಂದಿರುವ ಎಂಟಿಬಿ ನಾಗರಾಜ್, ಬಿಜೆಪಿ ವಿರುದ್ಧ ಆರೋಪ ಮಾಡಿ ದೊಡ್ಡ ಹೆಸರು ಮಾಡಲು ಕಾಂಗ್ರೆಸ್ ಹೊರಟಿದೆ ಎಂದು ಕಿಡಿಕಾರಿದ್ದಾರೆ.
ಆಪ್ತರಿಗೆ ಬೆದರಿ ಸುಮ್ಮನಾಗುತ್ತಾರೆಯೇ ಸಿದ್ದರಾಮಯ್ಯ..?
ರಾಜಕಾರಣದಲ್ಲಿ ಸಾಕಷ್ಟು ಲೋಪದೋಷಗಳು ಇರುವುದು ಖಂಡಿತ. ಆ ಲೋಪದೋಷಗಳು ಜೊತೆಗಿದ್ದವರಿಗೂ ಅಲ್ಪಸ್ವಲ್ಪ ತಿಳಿದಿರುತ್ತವೆ. ಅದನ್ನು ಹೊರ ಪ್ರಪಂಚಕ್ಕೆ ಹೇಳಿಕೊಂಡಿರುವುದಿಲ್ಲ. ಇದೀಗ ತಮ್ಮ ಜೊತೆಯಲ್ಲಿ ಇದ್ದವರೇ ಬಿಜೆಪಿ ಸರ್ಕಾರದಲ್ಲಿ ಸಚಿವ, ಶಾಸಕರಾಗಿದ್ದಾರೆ. ಇದೀಗ ಸಿದ್ದರಾಮಯ್ಯ ಅವರ ಕೆಲವು ವಿಚಾರಗಳನ್ನು ಬಯಲಿಗೆ ತರುತ್ತೇವೆ ಎನ್ನುವ ಬೆದರಿಕೆ ಹಾಕಿದ್ದಾರೆ. ಅದು ಸರ್ಕಾರದ ಲೋಪದೋಷಗಳು ಹಾಗೂ ಅಕ್ರಮಗಳಾಗಿದ್ದಾರೆ, ದಾಖಲೆ ಸಮೇತ ಬಿಚ್ಚಿಡಲಿ. ಆದರೆ ಈ ಬೆದರಿಕೆಗೆ ಅಂಜಿ ಸಿದ್ದರಾಮಯ್ಯ ಭ್ರಷ್ಟಾಚಾರ ಆರೋಪದಿಂದ ವಿಮುಖರಾಗುವರೇ ಎನ್ನುವ ಅನುಮಾನ ಮೂಡಿಸಿದೆ. ಎದುರಾಳಿಗಳನ್ನು ಎದುರಿಸಲಾರದವರು ಕೆಲವೊಂದು ತಂತ್ರಗಳನ್ನು ಹುಡುಕುವುದು ಸಾಮಾನ್ಯ. ಅದೇ ರೀತಿ ಬಿಜೆಪಿ ನಾಯಕರು ಭ್ರಷ್ಟಾಚಾರ ಆರೋಪವನ್ನು ತನಿಖೆ ಮಾಡಿಸಿ ಸಾಬೀತು ಮಾಡಲು ಮನಸ್ಸಿಲ್ಲದೆ ಅನ್ಯ ಮಾರ್ಗವನ್ನು ಹುಡುಕಿಕೊಂಡಿದ್ದಾರೆ ಎನ್ನಲಾಗ್ತಿದೆ.