ಕರೋನಾ ಸಂಕಷ್ಟದ ನಡುವೆಯೇ ರಾಜ್ಯ ಸರ್ಕಾರದ ಅಡಿಪಾಯ ಅಲುಗಾಡುವ ಪರಿಸ್ಥಿತಿ ಎದುರಾಗಿದೆ. ನಿನ್ನೆ ರಾತ್ರಿ ಉತ್ತರ ಕರ್ನಾಟಕ ಭಾಗದ ಅತೃಪ್ತ ಶಾಸಕರು ಸಭೆ ನಡೆಸಿರುವುದು ರಾಜ್ಯ ರಾಜಕೀಯ ಬೆಳವಣಿಗೆಗೆ ಸಾಕ್ಷಿಯಾಗಿದೆ. ಈ ನಡುವೆ ನಿನ್ನೆ ನಡೆದಿರುವ ಸಭೆ ಬಗ್ಗೆ ಬಿಜೆಪಿ ನಾಯಕರಿಂದ ಭಿನ್ನ ಭಿನ್ನ ಹೇಳಿಕೆಗಳು ಹೊರ ಬೀಳುತ್ತಿದ್ದು, ಸರ್ಕಾರದ ಮಟ್ಟದಲ್ಲಿ ಏನೇನೋ ಬದಲಾವಣೆ ಆಗುತ್ತಿದೆ ಎನ್ನುವುದನ್ನು ಸಾರಿ ಸಾರಿ ಹೇಳುವಂತಿದೆ. ನಿನ್ನೆಯ ಸಭೆಯಲ್ಲಿ ಪ್ರಮುಖ ವಿಚಾರವಾಗಿ ಚರ್ಚೆ ನಡೆದಿರುವುದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಬದಲಾವಣೆ ಮಾಡಿಸಬೇಕು ಎನ್ನುವುದು ಎನ್ನಲಾಗುತ್ತಿದೆ. ಈ ಮಾಹಿತಿ ಗೊತ್ತಾಗುತ್ತಿದ್ದಂತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಅತೃಪ್ತ ಶಾಸಕರ ಮನವೊಲಿಸುವ ಕೆಲಸ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಜೊತೆಗೆ ನಾಲ್ಕೈದು ಶಾಸಕರು ರಾಜೀನಾಮೆ ಕೊಟ್ಟು ಸರ್ಕಾರಕ್ಕೆ ಶಾಕ್ ಕೊಡಲು ಮುಂದಾದರೆ ಕಾಂಗ್ರೆಸ್ನಿಂದ ನಾಲ್ಕೈದು ಜನರನ್ನು ರಾಜೀನಾಮೆ ಕೊಡಿಸಲು ತಂತ್ರಗಾರಿಕೆ ನಡೆಯುತ್ತಿದ್ಯಾ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
ನಿನ್ನೆ ನಡೆದಿರುವ ಸಭೆ ಹಿರಿಯ ಬಿಜೆಪಿ ಶಾಸಕ ಉಮೇಶ್ ಕತ್ತಿ ನೇತೃತ್ವದಲ್ಲಿ ನಡೆದಿದೆ. ಸಭೆ ನಡೆದಿರುವ ಬಗ್ಗೆ ಮಾತನಾಡಿರುವ ಶಾಸಕ ಉಮೇಶ್ ಕತ್ತಿ, ನಾವು ಯಾವುದೇ ಬಂಡಾಯ ಸಭೆ ನಡೆಸಿಲ್ಲ. ಆದರೆ ನಾವು ಕೆಲವು ಶಾಸಕರು ಲಾಕ್ಡೌನ್ ಆದ ಬಳಿಕ ಊಟಕ್ಕೆ ಸೇರಲು ಸಾಧ್ಯವಾಗಿರಲಿಲ್ಲ. ಹಾಗಾಗಿ ನಾವು ಒಟ್ಟಿಗೆ ಸೇರಿ ಊಟ ಮಾಡಿದ್ದೇವೆ ಅಷ್ಟೆ. ಯಾವುದೇ ರಾಜಕೀಯ ಚರ್ಚೆ ನಡೆಸಿಲ್ಲ ಎಂದಿದ್ದಾರೆ. ಆದರೆ ಬೇರೆ ಬೇರೆ ನಾಯಕರು ನೀಡಿರುವ ಹೇಳಿಕೆಗಳು ಮುಖ್ಯಮಂತ್ರಿ ಬದಲಾವಣೆಗೆ ವೇದಿಕೆ ಸಜ್ಜಾಗಿದೆ ಎನ್ನುವುದನ್ನು ಸಾಬೀತು ಮಾಡುವಂತಿದೆ.
ನಿನ್ನೆಯ ಸಭೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ ನಿನ್ನೆ ಸಭೆ ಸೇರಿದ್ದನ್ನು ಒಪ್ಪಿಕೊಂಡಿದ್ದಾರೆ. ಯಡಿಯೂರಪ್ಪ ಸಿಎಂ ಆಗಿ ಮುಂದುವರಿಯುವ ವಿಚಾರದ ಬಗ್ಗೆ ನಾನು ಮಾಧ್ಯಮಗಳ ಮುಂದೆ ಮಾತನಾಡಲ್ಲ. ಅದನ್ನು ಪಕ್ಷದ ಹಿರಿಯರ ಮುಂದೆ ಹೇಳ್ತೇನೆ ಎಂದಿರುವ ಯತ್ನಾಳ್, ಯಡಿಯೂರಪ್ಪ ನಿಮ್ಮ ನಾಯಕರಲ್ವಾ..? ಅನ್ನೋ ಪ್ರಶ್ನೆಗೆ ಯಡಿಯೂರಪ್ಪ ನಮ್ಮ ಮುಖ್ಯಮಂತ್ರಿಗಳು ಅಷ್ಟೇ. ನನ್ನನ್ನು ಮಂತ್ರಿ ಮಾಡಿ ಅಂತಾ ನಾನು ಕೇಳಲಿಲ್ಲ. ಬೇಕಿದ್ದರೆ ಯಡಿಯೂರಪ್ಪನವರ ಕೇಳಿನೋಡಿ. ಸರ್ಕಾರ ಬಂದ ಮೇಲೆ ನಾನು ಯಡಿಯೂರಪ್ಪ ಸಿಎಂ ಆಗಿರಲಿ ಅಂದಿದ್ದೆ. ಆದರೆ ಮುಂದಿನ ದಿನಗಳಲ್ಲಿ ಅದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತೆ ಎನ್ನುವ ಮೂಲಕ ಸಿಎಂ ಬದಲಾವಣೆ ಪ್ರಕ್ರಿಯೆ ಚಾಲ್ತಿಗೆ ಬಂದಿದೆ ಎನ್ನುವುದನ್ನು ಪರೋಕ್ಷವಾಗಿ ಸೂಚ್ಯವಾಗಿ ತಿಳಿಸಿದ್ದಾರೆ.
ನಾನು ಗಣಿಗಾರಿಕೆ ಅವಕಾಶ ಕೊಡಿ, ಲೈಸನ್ಸ್ ರಿನಿವಲ್ ಮಾಡಿಕೊಡಿ ಅಥವಾ ಕಂದಾಯ ಇಲಾಖೆ ಜಮೀನನ್ನು ನಮಗೆ ಕೊಡಿ ಎಂದು ಕೇಳಲು ಯಾವತ್ತೂ ಹೋಗಿಲ್ಲ. ಹೋಗಿರುವುದು ನನ್ನ ಕ್ಷೇತ್ರದ ಅಭಿವೃದ್ಧಿ ವಿಚಾರಕ್ಕೆ ಮಾತ್ರ. ಆದರೆ ಕೆಲಸಗಳು ಆಗಿಲ್ಲ ಎನ್ನುವ ಬೇಸರವಿದೆ. ನನಗೆ ಯೋಗ್ಯತೆ ಇದ್ದರೆ ಪಕ್ಷ ಮಂತ್ರಿ ಮಾಡಲಿ. ಆದರೆ, ಯಡಿಯೂರಪ್ಪ ಮುಖ್ಯಮಂತ್ರಿ ಆಗಿರೋವರೆಗೂ ನಾನು ಮಂತ್ರಿ ಮಾಡಿ ಎಂದು ಕೇಳಲ್ಲ. ಮುಂದೆ ಸಿಎಂ ಚರ್ಚೆಗೆ ಕರೆದ್ರೂ ನಾನು ಹೋಗಲ್ಲ. ಕೆಲಸ ಆಗಲ್ಲ ಅಂದ ಮೇಲೆ ಪದೇ ಪದೇ ಹೋಗಿ ಅವರನ್ನ ಭೇಟಿ ಮಾಡಿ ನಾನ್ಯಾಕೆ ತೊಂದರೆ ಕೊಡಲಿ ಎಂದು ಪರೋಕ್ಷವಾಗಿ ಸಿಎಂ ಬದಲಾವಣೆ ಬಗ್ಗೆ ಮಾತನಾಡಿದ್ದಾರೆ. ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಇಳಿದ ಮೇಲೆ ನಾನು ಮಂತ್ರಿ ಆಗ್ತೀನಿ ಎನ್ನುವ ಗುಟ್ಟನ್ನೂ ಬಿಚ್ಚಿಟ್ಟಿದ್ದಾರೆ.
ಶಕ್ತಿಯುತ ನಾಯಕ ಯಡಿಯೂರಪ್ಪ ಮಾತಿನ ಬಾಣ!
ತುಮಕೂರಿನಲ್ಲಿ ಮಾತನಾಡಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ, ಯಾರೆಲ್ಲಾ ಮುಖ್ಯಮಂತ್ರಿ ಬದಲಾವಣೆಗಾಗಿ ಸಭೆ ಮಾಡಿದ್ದಾರೆ ಎನ್ನುವುದು ಗೊತ್ತಿಲ್ಲ. ಮಾಧ್ಯಮಗಳಲ್ಲಿ ಬರುವುದನ್ನು ನೋಡಿದ್ದೇನೆ ಅಷ್ಟೆ ಎಂದಿದ್ದಾರೆ.
ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ ಕೂಡ ನನಗೂ ಮುಖ್ಯಮಂತ್ರಿ ಮೇಲೆ ಬೇಸರವಿದೆ. ನಾನೂ ಕೂಡ ಹಿರಿಯ ಶಾಸಕನಾಗಿದ್ದೇನೆ. 6 ಬಾರಿ ಆಯ್ಕೆಯಾಗಿದ್ದೇನೆ. ಅಸಮಾಧಾನ ಇದೆ. ಅನೇಕರ ತ್ಯಾಗದಿಂದ ಕಟ್ಟಿದ ಪಕ್ಷ ಬಿಜೆಪಿ ಎಂದಿದ್ದಾರೆ. ಇನ್ನೂ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಮಾತನಾಡಿ, ನಮ್ಮ ಜಿಲ್ಲೆ ಕಡೆಗಣನೆ ಆಗಿರುವುದು ನಿಜ. ಸಾರ್ವಜನಿಕವಾಗಿ ನೋವು ಹೇಳಿಕೊಳ್ಳುವಂತಿಲ್ಲ, ಹೊರಗಿನವರೇ ಉಸ್ತುವಾರಿ ಮಂತ್ರಿಗಳಾಗುತ್ತಿದ್ದಾರೆ. ಅವರಿಂದ ಮಲತಾಯಿ ಧೋರಣೆ ಆಗುತ್ತಿದೆ ಎಂದು ದೂರಿದ್ದಾರೆ.
ಆಪರೇಷನ್ ಹೀರೋಗಳಿಗೆ ಪೀಕಲಾಟ..!
ಕಳೆದ ವರ್ಷ ಇದೇ ಸಮಯದಲ್ಲಿ ಆಪರೇಷನ್ ಕಮಲ ಆರಂಭವಾಗಿತ್ತು. ಈಗ ಮುಖ್ಯಮಂತ್ರಿ ಆಗಿರುವ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲೇ ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಸೆಳೆಯುವ ಕೆಲಸ ಆರಂಭವಾಗಿತ್ತು. ಆ ಬಳಿಕ ಆಪರೇಷನ್ ಕಮಲ ಮೂಲಕ 18 ಜನ ಶಾಸಕರು ಬಿಜೆಪಿ ಸೇರಿದ್ದರು. ಇದೀಗ ಬಿಎಸ್ ಯಡಿಯೂರಪ್ಪ ನಂಬಿ ಬಿಜೆಪಿಗೆ ಹೋದವರಿಗೆ ಪೀಕಲಾಟ ಶುರುವಾಗಿದೆ. ಈ ಬಗ್ಗೆ ಮಾತನಾಡಿರುವ ಶಾಸಕ ಮಹೇಶ್ ಕುಮಟಳ್ಳಿ, ನಾವು ಪ್ರಧಾನಿ ಮೋದಿ, ಅಮಿತ್ ಷಾ ಹಾಗೂ ಬಿ.ಎಸ್ ಯಡಿಯೂರಪ್ಪ ಅವರನ್ನು ನಂಬಿ ಬಿಜೆಪಿಗೆ ಬಂದಿದ್ದೇವೆ. ಆದರೆ ಬಂಡಾಯದ ಸಭೆ ಯಾಕೆ ಮಾಡಿದ್ದಾರೆ ಎನ್ನುವುದು ಗೊತ್ತಿಲ್ಲ. ನಾವು ಬಿಜೆಪಿ ಬಿಡುವ ಪ್ರಶ್ನೆ ಇಲ್ಲ ಎಂದಿದ್ದಾರೆ.
ಯಡಿಯೂರಪ್ಪ ಪರ ಬ್ಯಾಟಿಂಗ್ ಆರಂಭ..!
ಬೆಂಗಳೂರಿನ ಶಾಸಕರ ಭವನದಲ್ಲಿ ಮಾತನಾಡಿರುವ ದಾವಣಗೆರೆಯ ಚೆನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ, ರಾಜ್ಯದಲ್ಲಿ ಪಕ್ಷ, ಯಡಿಯೂರಪ್ಪ ಸೇರಿ ಎರಡು ಬಾರಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದಾರೆ. ಈಗ ಭಿನ್ನಮತ ಮಾಡ್ತಿರೋರು ಹಿಂದೆ ಯಡಿಯೂರಪ್ಪ ಅವರಿಂದಲೇ ಸರ್ಕಾರ ಬಂತು ಅಂತ ಹೇಳಿದ್ರು. ಅನೇಕ ಉಪ ಚುನಾವಣೆಯಲ್ಲಿ ಯಡಿಯೂರಪ್ಪ ಶಕ್ತಿ ಗೊತ್ತಾಗಿದೆ. ಸ್ಥಾನ ಸಿಕ್ಕಿಲ್ಲ ಅಂತ ಹೀಗೆ ಭಿನ್ನಮತ ಮಾಡೋದು ಸರಿಯಲ್ಲ. ಪಕ್ಷಕ್ಕೆ ಮುಜುಗರ ತರೋ ಇಂತಹ ಕೆಲಸ ಯಾರು ಮಾಡಬಾರದು. 10 ತಿಂಗಳು ಹಿಂದೆ ಯಾಕೆ ಇವರು ಸಭೆ ಮಾಡಿರಲಿಲ್ಲ. ಇವಾಗ ಸಭೆ ಮಾಡ್ತಾರೆ ಅಂದರೆ ಏನರ್ಥ..? ಯಡಿಯೂರಪ್ಪರ ಶ್ರಮದಿಂದ ಸರ್ಕಾರ ಬಂದಿದೆ. ಯಾರೋ ಸ್ವಲ್ಪ ಜನ ಹೇಳಿದ್ರೆ ನಾಯಕತ್ವ ಬದಲಾಗಲ್ಲ. ಯಡಿಯೂರಪ್ಪ ಜೊತೆ ಶಾಸಕರು ಇಲ್ಲವಾ..? ಯಡಿಯೂರಪ್ಪ ಅವರೇ ನಮ್ಮ ನಾಯಕರು. ಮುಂದೆಯೂ ಅವರೇ ಅಧಿಕಾರ ಪೂರ್ಣ ಮಾಡ್ತಾರೆ ಎಂದಿದ್ದಾರೆ. ಯಡಿಯೂರಪ್ಪ ನಾಯಕ ಅಲ್ಲ ಅಂದ್ರೆ ಶಾಸಕಾಂಗ ಪಕ್ಷದಲ್ಲಿ ನಾವೇ ಅಲ್ಲವೇ ಆಯ್ಕೆ ಮಾಡಿದ್ದು..? ಯಾವ ಬಾಯಲ್ಲಿ ಯಡಿಯೂರಪ್ಪ ನಮ್ಮ ನಾಯಕ ಅಲ್ಲ ಅಂತಾರೆ..? ಎನ್ನುವ ಮೂಲಕ ಯತ್ನಾಳ್ ಮಾತಿಗೆ ತಿರುಗೇಟು ಕೊಟ್ಟಿದ್ದಾರೆ.
ಸಿದ್ದರಾಮಯ್ಯ ಮಾಸ್ಟರ್ ಪ್ಲ್ಯಾನ್ ನಡೀತಿದ್ಯಾ..?
ಕಳೆದ ವರ್ಷ ಆಪರೇಷನ್ ಕಮಲದ ಹಿಂದಿನ ರೂವಾರಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಎನ್ನುವ ಮಾತು ರಾಜಕೀಯ ಪಡಸಾಲೆಯಲ್ಲಿ ಹರಿದಾಡಿತ್ತು. ಅದಕ್ಕೆ ಕಾರಣ ಸಿದ್ದರಾಮಯ್ಯ ಅವರ ಆಪ್ತ ಬಳಗವೇ ಬಿ.ಎಸ್ ಯಡಿಯೂರಪ್ಪ ಅವರ ಹಿಂದೆ ಸಾಗಿತ್ತು. ಇದೀಗ ಮತ್ತೆ ಸಿದ್ದರಾಮಯ್ಯ ಅಖಾಡಕ್ಕೆ ಇಳಿದಿದ್ದಾರೆ ಎನ್ನಲಾಗ್ತಿದೆ. ಮಾಜಿ ಸಚಿವ ಉಮೇಶ್ ಕತ್ತಿ ಸಿದ್ದರಾಮಯ್ಯ ಅವರನ್ನು ಸಂಪರ್ಕ ಮಾಡಿದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯ ಬಳಿ ಮಾತನಾಡುವುದು ಇದೆ, ಭೇಟಿಗೆ ಸಮಯ ನೀಡಿ ಎಂದಿದ್ದಾರೆ ಎನ್ನಲಾಗ್ತಿದೆ.
ಮತ್ತೆ ಆಪರೇಷನ್ಗೆ ಮನಸ್ಸು ಮಾಡಿದ್ರಾ ಸಿಎಂ..?
ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಅಧಿಕಾರ ಸಿಗಲಿಲ್ಲ ಎನ್ನುವ ಕಾರಣಕ್ಕೆ ಕಳೆದ ವರ್ಷ ಆಪರೇಷನ್ ಕಮಲ ಮಾಡಿದ್ದರು. ಇದೀಗ ಸರ್ಕಾರ ಉಳಿಸಿಕೊಳ್ಳಲು ಆಪರೇಷನ್ ಕಮಲ ನಡೆಸುವ ಇರಾದೆ ಇದೆಯಾ ಎನ್ನುವ ಅನುಮಾನ ಕಾಡುತ್ತಿದೆ. ಇದಕ್ಕೆ ಕಾರಣ ಆಪರೇಷನ್ ಕಮಲದ ರೂವಾರಿ ರಮೇಶ್ ಜಾರಕಿಹೊಳಿ ನೀಡಿರುವ ಹೇಳಿಕೆ. ಬಿಜೆಪಿ ಹೈಕಮಾಂಡ್ ಅನುಮತಿ ನೀಡಿದ್ರೆ ಮತ್ತೆ 5 ಜನ ಕಾಂಗ್ರೆಸ್ ಶಾಸಕರನ್ನು ರಾಜೀನಾಮೆ ಕೊಡಿಸುತ್ತೇನೆ ಎಂದಿದ್ದಾರೆ. ಚಾಮರಾಜನಗರದ ಕೊಳ್ಳೇಗಾಲದಲ್ಲಿ ಮಾತನಾಡಿರುವ ಸಚಿವ ರಮೇಶ್ ಜಾರಕಿಹೊಳಿ, ಕಾಂಗ್ರೆಸ್ನ 22 ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ. ಮೊದಲಿಗೆ ಪ್ರಾಯೋಗಿಕವಾಗಿ 5 ಜನ ರಾಜೀನಾಮೆ ಕೊಡಿಸುತ್ತೇನೆ. ಅದೂ ಕೂಡ ಒಂದು ವಾರದಲ್ಲಿ ರಾಜೀನಾಮೆ ಕೊಡಿಸುತ್ತೇನೆ. ನಾನು ಸಿಎಂ ಯಡಿಯೂರಪ್ಪನವರ ಪರ ಎಂದಿದ್ದಾರೆ.
ಒಟ್ಟಿನಲ್ಲಿ ಬಿಜೆಪಿಯಲ್ಲಿ ಕರೋನಾ ನಡುವೆ ರಾಜಕೀಯ ಮೇಲಾಟಕ್ಕೆ ವೇದಿಕೆ ಸಿಕ್ಕಿದೆ. ಇದಕ್ಕೆ ಹೈಕಮಾಂಡ್ ಹುಕ್ಕುಂ ಕೂಡ ಇದೆ ಎನ್ನುವ ಮಾತುಗಳು ಅಲ್ಲಲ್ಲಿ ಕೇಳಿಬರುತ್ತಿದೆ. ಕಳೆದ ಬಾರಿ ಸಚಿವ ಸಂಪುಟ ವಿಸ್ತರಣೆ ವೇಳೆ ಸ್ಥಾನ ಸಿಗದಿದ್ದಾಗ ದೆಹಲಿಯಲ್ಲಿ ಬೀಡುಬಿಟ್ಟಿದ್ದ ಉಮೇಶ್ ಕತ್ತಿ ಸಂತೋಷ್ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದರು. ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಸಂಘ ಪರಿವಾರ, ಹಿಂದುತ್ವ ಅಜೆಂಡಾವನ್ನೇ ಶಕ್ತಿಯನ್ನಾಗಿ ಮಾಡಿಕೊಂಡಿರುವ ಶಾಸಕ, ಹೈಕಮಾಂಡ್ ಸೂಚನೆಯಂತೆಯಂತೆಯೇ ಎಲ್ಲಾ ಪ್ರಕ್ರಿಯೆಗಳು ನಡೆಯುತ್ತಿವೆ.





