ಕರೋನಾ ವೈರಸ್ ಭಾರತದಲ್ಲಿ ಸಮುದಾಯಕ್ಕೆ ಹರಡಿದೆಯೇ? ಹೀಗಂತ ಹತ್ತು ಹಲವು ಅನುಮಾನಗಳು ಕಾಡುತ್ತಲೇ ಇವೆ. ಅದಕ್ಕೊಂದು ಕಾರಣನೂ ಇದೆ. ದೇಶದಲ್ಲಿ ಒಂದೂವರೆ ತಿಂಗಳಿಗೂ ಅಧಿಕ ಲಾಕ್‌ಡೌನ್ ಘೋಷಿಸಿದರೂ ಇದುವರೆಗೂ ಕರೋನಾ ನಿರೀಕ್ಷಿತ ಮಟ್ಟದ ಕುಸಿತ ಕಂಡಿಲ್ಲ. ಬದಲಾಗಿ ದಿನವೊಂದಕ್ಕೆ ಸಾವಿರಾರು ಮಂದಿಯಲ್ಲಿ ಕರೋನಾ ಸೋಂಕು ದೃಢಪಡುತ್ತಿದ್ದರೆ, ನೂರಾರು ಮಂದಿ ಬಲಿಯಾಗುತ್ತಿದ್ದಾರೆ. ಈ ಕುರಿತು ʼಪ್ರತಿಧ್ವನಿʼ ವಿಸ್ತೃತ ವರದಿ ತಯಾರಿಸಿತ್ತು. ನಿಜಕ್ಕೂ ಎರಡು ಹಂತದ ಲಾಕ್‌ಡೌನ್ ನಿಂದ ಕರೋನಾ ನಿಯಂತ್ರಣಕ್ಕೆ ಬಂದಿದೆಯಾ ಅನ್ನೋದರ ಅಂಕಿ-ಅಂಶ ಸಹಿತ ʼಪ್ರತಿಧ್ವನಿʼ ಸತ್ಯಾಂಶ ಮುಂದಿಟ್ಟಿತ್ತು. ಇದರಿಂದಾಗಿ ದೇಶದಲ್ಲಿ ಕರೋನಾ ಹರಡುತ್ತಿರುವ ರೀತಿಯ ಬಗ್ಗೆ ಜಿಜ್ಞಾಸೆಗಳು ಹುಟ್ಟಿಕೊಂಡಿದ್ದಾವೆ. ಕೆಲವು ತಜ್ಞರು ʼಈಗಾಗಲೇ ಭಾರತದಲ್ಲಿ ಸಮುದಾಯಕ್ಕೆ ಕರೋನಾ ಸೋಂಕು ತಲುಪಿದೆʼ ಅಂತಾ ಈ ಹಿಂದೆಯೇ ತಿಳಿಸಿದ್ದರು.
ಅದಕ್ಕೆ ಪೂರಕವೆನ್ನುವಂತೆ ಕರೋನಾ ಸೋಂಕು ಬಾಧಿತನ ಜೊತೆ ನೇರ ಅಥವಾ ಪರೋಕ್ಷ ಸಂಬಂಧವಿಲ್ಲದ ಧಾರಾವಿ ಸ್ಲಂ ನಲ್ಲಿ ಕಾರ್ಮಿಕನೊಬ್ಬನಿಗೆ ಕರೋನಾ ಕಂಡುಬಂದಿದ್ದು ಆ ನಂತರ ಆ ವ್ಯಕ್ತಿ ಸಾವನ್ನಪ್ಪಿದ್ದರು. ಅವರಿಂದಾಗಿ ಇನ್ನಿತರರಿಗೂ ಅಲ್ಲಿ ಕರೋನಾ ಸೋಂಕು ಹಬ್ಬಿತ್ತು. ಯಾವುದೇ ಪ್ರವಾಸ ಇತಿಹಾಸ ಹೊಂದಿಲ್ಲದ ಆ ವ್ಯಕ್ತಿಗೆ ಕರೋನಾ ದೃಢಪಟ್ಟಿದಾದರೂ ಹೇಗೆ ಅನ್ನೋದು ತಿಳಿಯದಾದಾಗ ಅದಾಗಲೇ ಕೆಲವು ಮಾಧ್ಯಮಗಳು ದೇಶದಲ್ಲಿ ಕರೋನಾ ಮೂರನೇ ಹಂತ ತಲುಪಿದೆ ಎಂದು ಸುದ್ದಿ ಮಾಡಿದ್ದವು. ಮೂರನೇ ಹಂತ ತಲುಪಿದರೆ ಸೋಂಕು ಬಾಧಿತನ ಹಿನ್ನೆಲೆ, ರೂಟ್ ಮ್ಯಾಪ್ ಅಥವಾ ಚಾರ್ಟ್ ರಚನೆ ಇದ್ಯಾವುದೂ ಸಾಧ್ಯವಾಗದು. ಆದರೆ ಸದ್ಯ ಭಾರತದಲ್ಲಿ ಆ ಹಂತದಲ್ಲಿ ಕರೋನಾ ಇದೆಯಾ ಅನ್ನೋದರ ಕುರಿತು ಹೆಚ್ಚು ಹೆಚ್ಚು ಅನುಮಾನಗಳು ಕಾಡತೊಡಗಿದ್ದಾವೆ.
ಕಳೆದ ಒಂದೂವರೆ ತಿಂಗಳಿನಿಂದ ಕರೋನಾ ನಿಯಂತ್ರಣಕ್ಕೆ ಬಾರದೇ ಇದ್ದರೂ, ಇದೀಗ ಮತ್ತೆ ನಾಲ್ಕನೇ ಹಂತದ ಲಾಕ್‌ಡೌನ್ ಮುಂದುವರಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತನ್ನ ವೀಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ. ಇದರಿಂದಾಗಿ ಜನರಿಗೆ ಇನ್ನಷ್ಟು ಆತಂಕ ಎದುರಾಗಿದೆ. ಒಂದು ವೇಳೆ ಮೂರನೇ ಹಂತ ಅಥವಾ ಸಮುದಾಯಕ್ಕೆ ಕರೋನಾ ಸೋಂಕು ಹರಡಿದಲ್ಲಿ ಅದರ ನಿಯಂತ್ರಣ ಸಾಧ್ಯವೇ ಅನ್ನೋ ಭಯವೂ ಕಾಡುತ್ತಿದೆ. ಈಗಾಗಲೇ ಲಾಕ್‌ಡೌನ್ ಸಡಿಲಿಕೆಯಿಂದ ಬೆಂಗಳೂರಿನಂತಹ ಮಹಾನಗರಗಳಲ್ಲಿ ಟ್ರಾಫಿಕ್ ಸಮಸ್ಯೆ ಶುರುವಾಗಿದೆ. ಅಂದರೆ ಅಷ್ಟರ ಮಟ್ಟಿಗೆ ಸಡಿಲಿಕೆ ನೀಡಲಾಗಿದೆ ಅನ್ನೋದನ್ನ ಅರ್ಥೈಸಬಹುದು.
ಇದೀಗ ಇದೆಲ್ಲಕ್ಕೂ ಉತ್ತರ ನೀಡಲು ಹೆಚ್ಚು ಜವಾಬ್ದಾರಿ ಸ್ಥಾನದಲ್ಲಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ICMR) ಮುಂದಾಗಿದೆ. ಇದೇ ವಾರದಲ್ಲಿ ಸರ್ವೇ ನಡೆಸಲು ಮುಂದಾಗಿರುವ ICMR ತನ್ನ ಅಧ್ಯಯನವನ್ನ ಹತ್ತು ದಿನಗಳ ಒಳಗಾಗಿ ವರದಿ ತಯಾರಿಸಲು ಯೋಜಿಸಿದೆ. ಈ ಮೂಲಕ ದೇಶದ ಜನರ ಗೊಂದಲಕ್ಕೆ ಉತ್ತರ ನೀಡುವ ಪ್ರಯತ್ನದಲ್ಲಿ ICMR ಇದೆ.
ಆದರೆ ಈವರೆಗೂ ಭಾರತದಲ್ಲಿ ಕರೋನಾ ಸಾಮುದಾಯಿಕ ಸೋಂಕು ಆಗಿ ಬದಲಾಗಿಲ್ಲ ಅಂತಾ ICMR ಹೇಳುತ್ತಾ ಬಂದಿದೆ. ಆದರೆ ಅದೆಲ್ಲವೂ ಕೋವಿಡ್-19 ಚಿಕಿತ್ಸೆ ನೀಡುವ ಆಸ್ಪತ್ರೆಗಳ ವರದಿ ಅನ್ವಯಿಸಿಯೇ ಆಗಿತ್ತು. ಆದ್ದರಿಂದ ಇದೀಗ ICMR ಖುದ್ದು ಅಧ್ಯಯನಕ್ಕೆ ವೈದ್ಯಕೀಯ ತಂಡವನ್ನ ಇಳಿಸಲಿದೆ. ಮಾತ್ರವಲ್ಲದೇ ಎಪ್ರಿಲ್ ತಿಂಗಳಿನಲ್ಲಿ ಕೆಲವೊಂದು ವ್ಯಕ್ತಿಗಳಲ್ಲಿ ನಿಗೂಢವಾಗಿ ಕರೋನಾ ಕಾಣಿಸಿಕೊಂಡಿದ್ದು, ಇದು ಹೇಗೆ ಸಾಧ್ಯವಾಯಿತು ಅನ್ನೋದರ ಬಗ್ಗೆ ICMR ಉತ್ತರ ಕಂಡುಕೊಳ್ಳಬೇಕಿದೆ. ಕಾರಣ, ಅದರಲ್ಲಿ ಎಷ್ಟೋ ಮಂದಿಗೆ ಪ್ರವಾಸ ಇತಿಹಾಸ ಇರಬಹುದು ಅಥವಾ ಸೋಂಕಿತ ಸಂಪರ್ಕ ಮುಂತಾದ ಯಾವುದೇ ಸಾಧ್ಯತೆಗಳು ಇರಲಿಲ್ಲ. ಆದರೂ ಸೋಂಕಿಗೆ ತುತ್ತಾಗಿದ್ದು ಅಚ್ಚರಿಯಾಗಿತ್ತು.
ಸದ್ಯ ನಡೆಯಲಿರುವ ಸರ್ವೇ 21 ರಾಜ್ಯಗಳ 69 ಜಿಲ್ಲೆಗಳಲ್ಲಿ ನಡೆಯಲಿದೆ. ಇದರಲ್ಲಿ ಕರ್ನಾಟಕದ ಬೆಂಗಳೂರು ನಗರ ಸೇರಿದಂತೆ ಮಹಾರಾಷ್ಟ್ರದ ಮುಂಬೈ ಹಾಗೂ ಪುಣೆ, ಕೋಲ್ಕತ್ತಾ, ದೆಹಲಿ ಮುಂತಾದೆಡೆ ಪ್ರಮುಖವಾಗಿ ಸರ್ವೇ ಕಾರ್ಯ ನಡೆಯಲಿರುವುದಾಗಿ ICMR ತಿಳಿಸಿದೆ.
ನಿಜಕ್ಕಾದರೆ ಈಗಾಗಲೇ ICMR ತನ್ನ ಸರ್ವೇ ಕಾರ್ಯ ಮುಗಿಸಬೇಕಿತ್ತು. ಆದರೆ ಸರ್ವೇ ನಡೆಸಲು ಬೇಕಾದ ಕಿಟ್‌ಗಳು ಚೀನಾದಿಂದ ಆಮದು ಮಾಡಿಕೊಳ್ಳಲಾಗಿತ್ತಾದರೂ, ಅದು ದೋಷ ಪೂರಿತ ಎಂದು ಗೊತ್ತಾಗುತ್ತಲೇ ಅದು ತನ್ನ ಕಾರ್ಯಯೋಜನೆಯನ್ನ ಕೈ ಬಿಟ್ಟಿತ್ತು. ಆದರೆ ಇದೀಗ ಈ ವಾರದಲ್ಲಿಯೇ ಸರ್ವೇ ಕಾರಾಯ ನಡೆಸಲಿದ್ದು, ಆ ಮೂಲಕ ಕರೋನಾ ಸೋಂಕು ಸಾಮುದಾಯಿಕವಾಗಿ ಹರಡಿದೆಯೇ ಅನ್ನೋದರ ಕುರಿತು ವರದಿ ತಯಾರಿಸಲಿದೆ. ಅಲ್ಲದೇ ಇದು ದೇಶಾದ್ಯಂತ ಕರೋನಾ ಹರಡುತ್ತಿರುವ ಬಗೆಗೆ ಒಂದು ಸ್ಪಷ್ಟ ಚಿತ್ರಣ ನಮ್ಮ ಮುಂದಿಡಲಿದೆ ಎಂದು ICMR ತಿಳಿಸಿದೆ.
ಒಟ್ಟಿನಲ್ಲಿ ಸಮುದಾಯಕ್ಕೆ ಸೋಂಕು ಹರಡಿದ ಹೊರತಾಗಿಯೂ, ಸಾವಿರ ಸಾವಿರ ಸಂಖ್ಯೆಯಲ್ಲಿ ಸಾವಿನ ಪ್ರಮಾಣ ಕಂಡಿದ್ದ ಸ್ಪೇಯ್ನ್ ನಲ್ಲಿ ಆರು ವಾರಗಳ ಲಾಕ್‌ಡೌನ್ ನಿಂದ ಬಹಳ ಪರಿಣಾಮಕಾರಿ ನಿಯಂತ್ರಣಕ್ಕೆ ಬಂದಿದೆ ಅನ್ನೋದನ್ನ ಕಳೆದ ಒಂದು ತಿಂಗಳ ವರದಿಯೇ ನಮ್ಮ ಮುಂದಿಡುತ್ತವೆ. ಆದರೆ ಭಾರತದಲ್ಲಿ ಮಾತ್ರ ಲಾಕ್‌ಡೌನ್ ನಾಲ್ಕನೇ ಹಂತ ತಲುಪಿದರೂ ಯಾಕಾಗಿ ನಿಯಂತ್ರಣಕ್ಕೆ ಬರುತ್ತಿಲ್ಲ ಅನ್ನೋ ಪ್ರಶ್ನೆಗೂ ICMR ಉತ್ತರ ಕಂಡುಕೊಳ್ಳಬೇಕಿದೆ.