ಮುಂಬೈ ಸೇರಿದಂತೆ ದೇಶದ ಬೇರೆ ಕಡೆಗಳಲ್ಲಿ ವಾಸ ಆಗಿರುವ ವಲಸೆ ಕಾರ್ಮಿಕರನ್ನು ವಾಪಸ್ಸು ತವರು ರಾಜ್ಯಕ್ಕೆ ಕರೆತರಬೇಕೆಂದು ಪ್ರತಿಧ್ವನಿ ಆಗ್ರಹ ಮಾಡಿತ್ತು. ಕಾರ್ಮಿಕರ ಸಚಿವರು ಏನು ಮಾಡುತ್ತಾ ಇದ್ದಾರೆ..? ನಮ್ಮ ರಾಜ್ಯದ ಕಾರ್ಮಿಕರನ್ನು ವಾಪಸ್ ಕರೆತರುವ ಜವಾಬ್ದಾರಿ ಅವರಿಗಿಲ್ಲವೇ ಎನ್ನುವ ಪ್ರಶ್ನೆಯನ್ನು ಜನರ ಮುಂದಿಟ್ಟಿತ್ತು. ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕೂಡ ಸರ್ಕಾರಕ್ಕೆ ಈ ಬಗ್ಗೆ ಒತ್ತಾಯ ಮಾಡಿದ್ದರು. ಅದಕ್ಕೂ ಮೊದಲೇ ಸ್ವತಃ ಸಿಎಂ ಯಡಿಯೂರಪ್ಪ ಅವರ ಕ್ಯಾಬಿನೆಟ್ನಲ್ಲಿ ಸಚಿವ ಆಗಿರುವ ಕೋಟಾ ಶ್ರೀನಿವಾಸ ಪೂಜಾರಿ ಸಹ ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆದು ಒತ್ತಾಯ ಮಾಡಿದ್ದರು. ಆದರೆ ಸರ್ಕಾರ ಮಾತ್ರ ಅತ್ತ ಕಡೆಗೆ ಗಮನ ಕೊಡಲೇ ಇಲ್ಲ. ಸರ್ಕಾರದ ಈ ಎಡವಟ್ಟು ಗ್ರಾಮಸ್ಥರಿಗೆ ಆಪತ್ತು ತರುವ ಆತಂಕಕ್ಕೆ ಕಾರಣವಾಗಿದೆ.
ಮಂಡ್ಯ, ಹಾಸನ ಸೇರಿದಂತೆ ಕರಾವಳಿ ಭಾಗದಿಂದ ಸಾವಿರಾರು ಜನರು ಮುಂಬೈ ನಗರದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಕರೋನಾ ಭೀತಿಯಲ್ಲಿ ಕಂಗೆಟ್ಟಿರುವ ಮಹಾರಾಷ್ಟ್ರದ ಕಾರ್ಮಿಕರು ತಮ್ಮ ಹುಟ್ಟೂರುಗಳಿಗೆ ತೆರಳಲು ಹವಣಿಸುತ್ತಿದ್ದಾರೆ, ಈಗಾಗಲೇ ಮಹಾರಾಷ್ಟ್ರ ಸೇರಿದಂತೆ ದೇಶದ ನಾನಾ ಭಾಗಗಳಿಂದ ವಾಣಿಜ್ಯ ವಾಹನಗಳ ಸಂಚಾರ ಆರಂಭವಾಗಿದೆ. ಕೃಷಿ ಸರಕುಗಳು ಸೇರಿದಂತೆ ರೈತರು ಬೆಳೆದ ಬೆಳೆ ರಾಜ್ಯದ ಗಡಿದಾಟಿ ಮುಂದೆ ಹೋಗುತ್ತಿದೆ. ಇದರ ಲಾಭ ಪಡೆಯುತ್ತಿರುವ ವಲಸೆ ಕಾರ್ಮಿಕರು ತಮ್ಮ ರಾಜ್ಯಗಳಿಗೆ ವಾಪಸ್ ಆಗಲು ಮುಂದಾಗುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಸರಕು ಸಾಗಣೆ ವಾಹನಗಳು ದುಪಟ್ಟು ಹಣ ಪಡೆದುಕೊಂಡು ಕಾರ್ಮಿಕರನ್ನು ವಾಪಸ್ ಕರೆತರುವ ಕೆಲಸ ಮಾಡುತ್ತಿದ್ದಾರೆ. ಕಾರ್ಮಿಕರನ್ನು ರಾಜ್ಯಕ್ಕೆ ವಾಪಸ್ ಕರೆತರಬೇಕು ಎನ್ನುವುದು ಪ್ರತಿಧ್ವನಿಯ ಕಳಕಳಿ. ಆದರೆ ವಾಪಸ್ ಬರುವ ಕಾರ್ಮಿಕರನ್ನು ರಾಜ್ಯದಲ್ಲೇ ಕ್ವಾರಂಟೈನ್ ಮಾಡಿ, ಮನೆಗಳಿಗೆ ವಾಪಸ್ ಕಳುಹಿಸಬೇಕು. ಇಲ್ಲದಿದ್ದರೆ ರಾಜ್ಯದ ನಗರ, ಪಟ್ಟಣಗಳಲ್ಲಿರುವ ಕರೋನಾ ಹೆಮ್ಮಾರಿ ಹಳ್ಳಿಗಳಿಗೆ ದಾಪುಗಾಲು ಹಾಕಲಿದೆ.
Also Read: ಲಾಕ್‌ಡೌನ್: ಹಸಿವಿನಿಂದ ಕಂಗೆಟ್ಟಿರುವ ಬಡವರಿಗೆ ಯಾರು ದಿಕ್ಕು?
ಒಂದು ಹಳ್ಳಿಯನ್ನು ಸೀಲ್‌ಡೌನ್ ಮಾಡಿದ ಸರ್ಕಾರ..!
ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಹಳ್ಳಿಯೊಂದನ್ನು ಸೀಲ್‌ಡೌನ್ ಮಾಡಲಾಗಿದೆ. ಬಿಂಡಿಗನವಿಲೆ ಸಮೀಪದ ಸಾತೇನಹಳ್ಳಿ ಗ್ರಾಮಕ್ಕೆ ಮೂರ್ನಾಲ್ಕು ದಿನಗಳ ಹಿಂದೆ ಬಾಂಬೆಯಿಂದ ಒಬ್ಬರು ಆಗಮಿಸಿದ್ದು, ಇದೀಗ ಇಡೀ ಕುಟುಂಬವನ್ನು ಜಿಲ್ಲಾಡಳಿತ ಕ್ವಾರಂಟೈನ್ಗೆ ಕರೆದುಕೊಂಡು ಹೋಗಿದೆ. ಗ್ರಾಮದಿಂದ ಹೊರ ಹೋಗುವ ಎಲ್ಲಾ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಗ್ರಾಮದ ಜನರಿಗೂ ಅಧಿಕಾರಿಗಳು ಎಚ್ಚರಿಕೆ ಕೊಟ್ಟಿದ್ದು, ಊರಿನಿಂದ ಹೊರ ಹೋಗದಂತೆ ಸೂಚನೆ ಕೊಡಲಾಗಿದೆ. ಈ ವ್ಯಕ್ತಿ ತರಕಾರಿ ಗಾಡಿಯಲ್ಲಿ ಆಗಮಿಸಿದ್ದು, ಮನೆಗೆ ಬಂದ ಬಳಿಕ ಜ್ವರ ಬಂದಿತ್ತು ಎನ್ನುವ ಮಾತುಗಳು ಕೇಳಿಬಂದಿವೆ. ಆದರೆ ಜಿಲ್ಲಾ ಆರೋಗ್ಯ ಅಧಿಕಾರಿಗಳು ಹಾಗೂ ಡಿವೈಎಸ್ಪಿ ಗ್ರಾಮಕ್ಕೆ ಆಗಮಿಸಿ ಆಂಬ್ಯುಲೆನ್ಸ್ನಲ್ಲಿ ಕರೆದುಕೊಂಡು ಹೋಗುತ್ತಿದ್ದಂತೆ ಗ್ರಾಮಸ್ಥರಲ್ಲಿ ಕಳವಳ ಹೆಚ್ಚಾಗಿದೆ. ಇದರಲ್ಲಿ ಗ್ರಾಮಸ್ಥರ ತಪ್ಪೂ ಕೂಡ ಇದೆ. ಬಾಂಬೆಯಿಂದ ಬಂದಿದ್ದ ವ್ಯಕ್ತಿಯ ಬಗ್ಗೆ ಮಾಹಿತಿ ಕೊಡಬೇಕಿತ್ತು. ಆದರೆ ಆಶಾ ಕಾರ್ಯಕರ್ತೆಯರು ಬಂದು ಮಾಹಿತಿ ಪಡೆಯುವ ತನಕ ಯಾವುದೇ ಮಾಹಿತಿ ಸರ್ಕಾರಕ್ಕೆ ಸಿಕ್ಕಿರಲಿಲ್ಲ. ಇದೀಗ ಒಂದು ಕುಟುಂಬವನ್ನು ಕ್ವಾರಂಟೈನ್ಗೆ ಕರೆದುಕೊಂಡು ಹೋಗಿದ್ದು, ಕರೋನಾ ಪಾಸಿಟೀವ್ ಬರುತ್ತಾ..? ಇನ್ನೂ ಯಾರಿಗೆಲ್ಲಾ ಕಂಟಕ ಕಾದಿದೆ ಎಂದು ಗ್ರಾಮಸ್ಥರು ಆತಂಕದಲ್ಲಿ ಕಾಲ ದೂಡುತ್ತಿದ್ದಾರೆ. ಗಿಡುವಿನ ಹೊಸಹಳ್ಳಿ ಗ್ರಾಮಸ್ಥರು ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರು ರಸ್ತೆಗಳನ್ನು ಬಂದ್ ಮಾಡಿದ್ದಾರೆ.

ಇದೇ ರೀತಿ ಈಗಾಗಲೇ ಹಲವಾರು ಹಳ್ಳಿಗಳಲ್ಲಿ ವಲಸೆ ಕಾರ್ಮಿಕರು ಆಗಮಿಸಿದ್ದಾರೆ. ಒಂದು ವೇಳೆ ಮುಂಬೈ ನಗರದಲ್ಲಿ ಅಟ್ಟಹಾಸ ಮೆರೆಯುತ್ತಿರುವ ಕರೋನಾ ವೈರಸ್, ರಾಜ್ಯದ ಹಳ್ಳಿಗಳಿಗೆ ದಾಳಿ ಮಾಡಿದರೆ ಪರಿಸ್ಥಿತಿ ನಿಯಂತ್ರಿಸಲು ಕಷ್ಟವಾಗಬಹುದು. ಕಳ್ಳ ಮಾರ್ಗದಲ್ಲಾದರೂ ಸರಿ ಹುಟ್ಟೂರು ಸೇರಬೇಕು ಎನ್ನುವುದು ವಲಸೆ ಕಾರ್ಮಿಕರ ಚಿಂತೆ. ಇದಕ್ಕೆ ಕಾರಣ ಮುಂಬೈ ನಗರದಲ್ಲಿ ಹೆಚ್ಚುತ್ತಿರುವ ಕರೋನಾ ವೈರಸ್ ಸೋಂಕು. ಇಲ್ಲೀವರೆಗೂ ಭಾರತದಲ್ಲಿ 27,892 ಸೋಂಕು ಕಾಣಿಸಿಕೊಂಡಿದ್ದು, ಮಹಾರಾಷ್ಟ್ರದಲ್ಲಿ ಬರೋಬ್ಬರಿ 7,628 ಕೇಸ್‌ಗಳು ಪತ್ತೆಯಾಗಿದ್ದು, ಅದರಲ್ಲಿ 323 ಜನರು ಸಾವನ್ನಪ್ಪಿದ್ದಾರೆ. ಧಾರಾವಿ ಕೊಳಚೆ ಪ್ರದೇಶದಲ್ಲಿ ಪ್ರತಿದಿನ 25 ಪ್ರಕರಣಗಳು ಪತ್ತೆಯಾಗುತ್ತಿವೆ. ಇದೇ ಕಾರಣಕ್ಕೆ ವಲಸೆ ಕಾರ್ಮಿಕರನ್ನು ಕಳ್ಳ ಮಾರ್ಗವಾದರೂ ಸರಿ ಊರು ಸೇರೋಣ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ.
ರಾಜ್ಯ ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳುವ ಮೂಲಕ ನಮ್ಮ ರಾಜ್ಯದ ಕಾರ್ಮಿಕರನ್ನು ಕರೆತಂದು ಕ್ವಾರಂಟೈನ್ ಮಾಡುವ ಮೂಲಕ ಕರೋನಾ ಸೋಂಕು ಹರಡುವುದನ್ನು ತಪ್ಪಿಸಬೇಕಿದೆ. ಇಲ್ಲದಿದ್ದರೆ ಹಳ್ಳಿಗಳಲ್ಲಿ ಸ್ಮಶಾನ ನರ್ತನ ಶುರುವಾಗಲಿದೆ.
ಗುಜರಾತ್, ಉತ್ತರ ಪ್ರದೇಶ ರಾಜಸ್ಥಾನ ಸೇರಿದಂತೆ ಹಲವು ರಾಜ್ಯ ಸರ್ಕಾರಗಳು ತಮ್ಮ ರಾಜ್ಯದ ಕಾರ್ಮಿಕರನ್ನು ವಾಪಸ್ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ರಾಜ್ಯ ಸರ್ಕಾರ ಮಾತ್ರ ಈ ಬಗ್ಗೆ ಚಕಾರವನ್ನೇ ಎತ್ತುತ್ತಿಲ್ಲ. ವಿರೋಧ ಪಕ್ಷದ ನಾಯಕರು ಹಾಗೂ ಸ್ವತಃ ಕ್ಯಾಬಿನೆಟ್ ಸಚಿವರೇ ಪತ್ರ ಬರೆದು ಒತ್ತಾಯ ಮಾಡಿದರೂ ಸರ್ಕಾರ ಜಾಣ ಕಿವುಡು ಪ್ರದರ್ಶನ ಮಾಡುತ್ತಿದೆ.











