ಕರೋನಾ ಮತ್ತು ಲಾಕ್‌ಡೌನ್‌ನಂತಹ ಅವಳಿ ಕಷ್ಟಗಳು ದೇಶಕ್ಕೆ ಅಪ್ಪಳಿಸಿದ ನಂತರ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ರಾಹುಲ್ ಗಾಂಧಿ, ಭಾರತೀಯ ರಿಸರ್ವ್ ಬ್ಯಾಂಕ್ ಮಾಜಿ ಗೌವರ್ನರ್ ಡಾ. ರಘುರಾಮ್ ರಾಜನ್ ಮತ್ತು ನೋಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ನಿರಂತರವಾಗಿ ತಮ್ಮ ಮೌಲಿಕ ಸಲಹೆಗಳನ್ನು ನೀಡುತ್ತಿದ್ದಾರೆ. ಇವರ ಮಾತಿಗೆ ಕೇಂದ್ರ ಸರ್ಕಾರ, ಅದರಲ್ಲೂ ಮುಖ್ಯವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಿವಿಗೊಡುತ್ತಿಲ್ಲದಿದ್ದರೂ ಇವರುಗಳು ಮಾತ್ರ ಈ ದುರ್ದಿನದಲ್ಲಿ ಒಳಿತನ್ನು ಹೇಳುವುದು ತಮ್ಮ ಕರ್ತವ್ಯ ಎಂಬಂತೆ ಪದೇ ಪದೇ ತುರ್ತಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಎಚ್ಚರಿಸುತ್ತಲೇ ಇದ್ದಾರೆ.
ರಾಹುಲ್ ಗಾಂಧಿ ಕರೋನಾ ಮತ್ತು ಲಾಕ್‌ಡೌನ್ ಹೊರತುಪಡಿಸಿ ಭಾರತ-ಚೀನಾ ಗಡಿ ಸಮಸ್ಯೆ, ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳ ಮತ್ತಿತರ ವಿಷಯಗಳ ಬಗ್ಗೆಯೂ ಮಾತನಾಡುತ್ತಿದ್ದಾರೆ. ಡಾ. ರಘುರಾಮ್ ರಾಜನ್ ಮತ್ತು ಅಭಿಜಿತ್ ಬ್ಯಾನರ್ಜಿ ಅವರ ಕ್ಷೇತ್ರವಾದ ಆರ್ಥಿಕತೆ ಬಗ್ಗೆ ಮಾತ್ರ ಬೆಳಕು ಚೆಲ್ಲುತ್ತಿದ್ದಾರೆ. ಮೊನ್ನೆ ಕೂಡ ಡಾ. ರಘುರಾಮ್ ರಾಜನ್ ಅವರು ‘ಸದ್ಯ ದೇಶದಲ್ಲಿ ರೇಟಿಂಗ್ ಗಳ ಬಗ್ಗೆ ತಲೆಕೆಡಿಸಿಕೊಳ್ಳಬಾರದು, ಕಷ್ಟದಲ್ಲಿರುವ ಜನರಿಗೆ ಮೊದಲು ನೆರವು ನೀಡಬೇಕು. ಅವರ ಬದುಕು ಹಳಿಗೆ ಮರಳಿದ ಮೇಲೆ ಆರ್ಥಿಕ ಪ್ರಗತಿಯತ್ತ ದೃಷ್ಟಿ ಹರಿಸಬೇಕು’ ಎಂದಿದ್ದರು. ಈಗ ಅಭಿಜಿತ್ ಬ್ಯಾನರ್ಜಿ ಅವರ ಸರದಿ.
ನ್ಯಾಷನಲ್ ಕೌನ್ಸಿಲ್ ಆಫ್ ಅಪ್ಲೈಡ್ ಎಕಾನಾಮಿಕ್ ರೀಸರ್ಚ್ (ಎನ್ ಸಿಎಇಆರ್) ಪ್ಯಾನಲ್ ಡಿಸ್ಕಷನ್ ನಲ್ಲಿ ಮಾತನಾಡುತ್ತಿದ್ದ ಅಭಿಜಿತ್ ಬ್ಯಾನರ್ಜಿ ಅವರು, ಭಾರತ ಸದ್ಯದ ಕಷ್ಟದ ಪರಿಸ್ಥಿತಿಯಿಂದ ಹೊರಬರಲು ತನ್ನ ಸಮಾಜ ಕಲ್ಯಾಣ ಕಾರ್ಯಕ್ರಮಗಳನ್ನು ವಿನ್ಯಾಸ ಮಾಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಅದರಲ್ಲಿ ಅವರು ಮುಖ್ಯವಾಗಿ ಉಲ್ಲೇಖಿಸಿರುವುದು ನ್ಯಾಷನಲ್ ರೂರಲ್ ಎಂಪ್ಲಾಯ್ಮೆಂಟ್ ಗ್ಯಾರಂಟಿ ಆ್ಯಕ್ಟ್ (ಎನ್ ಆರ್ ಇ ಜಿ ಎ) ಕಾರ್ಯಕ್ರಮದ ಬಗ್ಗೆ. ಗ್ರಾಮೀಣ ಭಾಗದಲ್ಲಿ ಉದ್ಯೋಗ ಒದಗಿಸಲೆಂದೇ ಹಿಂದಿನ ಯುಪಿಎ ಸರ್ಕಾರ ತಂದ ಪರಿಣಾಮಕಾರಿ ಕಾರ್ಯಕ್ರಮ ಇದು. ಇದರಿಂದ ಜನ ಗುಳೆ ಹೋಗುವುದು ತಪ್ಪಿತು. ಗ್ರಾಮೀಣ ಭಾರತದ ನಿರುದ್ಯೋಗ ಸಮಸ್ಯೆ ನಿಯಂತ್ರಣಕ್ಕೆ ಬಂದಿತ್ತು. ಹಳ್ಳಿಗಾಡುಗಳಲ್ಲಿ ಜನರಿಗೆ ನೇರವಾಗಿ ನಗದು ಸಿಗುವಂತಾಗಿತ್ತು.
ಆದರೆ ಇದು ಹಿಂದಿನ ಯುಪಿಎ ಸರ್ಕಾರದ ಫ್ಲಾಗ್ ಶಿಪ್ ಯೋಜನೆ ಎನ್ನುವ ಏಕೈಕ ಕಾರಣಕ್ಕೆ 2014ರಲ್ಲಿ ಪ್ರಧಾನ ಮಂತ್ರಿ ಆದ ನರೇಂದ್ರ ಮೋದಿ ನರೇಗಾ ಕಾರ್ಯಕ್ರಮದ ಬಗ್ಗೆ ಅಷ್ಟೇನೂ ಆಸಕ್ತಿ ತೋರಲಿಲ್ಲ. ಅವರ ನೇತೃತ್ವದ ಕೇಂದ್ರ ಸರ್ಕಾರ ಯೋಜನೆಗೆ ಸರಿಯಾಗಿ ಹಣ ಬಿಡುಗಡೆ ಮಾಡಿರಲಿಲ್ಲ. ಈ ಬಗ್ಗೆ ರಾಜ್ಯಗಳ ಬೇಡಿಕೆಗೆ ಕಿಮ್ಮತ್ತು ನೀಡಿರಲಿಲ್ಲ. ಆದರೀಗ ಪರಿಸ್ಥಿತಿ ಭಿನ್ನವಾಗಿದೆ. ಕರೋನಾ ಮತ್ತು ಲಾಕ್ಡೌನ್ ಕಾರಣಗಳಿಂದ ಜನ ನಗರಗಳನ್ನು ತ್ಯಜಿಸಿ ಅವರವರ ಊರು ಸೇರಿಕೊಂಡಿದ್ದಾರೆ. ಪರಿಣಾಮವಾಗಿ ಈಗ ಗ್ರಾಮೀಣ ಭಾರತದಲ್ಲಿ ತೀವ್ರವಾದ ನಿರುದ್ಯೋಗ ಸಮಸ್ಯೆ ನಿರ್ಮಾಣವಾಗಿದೆ. ಜೊತೆಗೆ ಕರೋನಾ ಮತ್ತು ಲಾಕ್ಡೌನ್ ಕಾರಣಗಳಿಂದ ಜನರ ಬಳಿ ಹಣವೂ ಇಲ್ಲದಂತಾಗಿದೆ. ಆದುದರಿಂದ ಪ್ರಧಾನ ಮಂತ್ರಿಗಳ ಗರೀಬ್ ಕಲ್ಯಾಣ್ ಯೋಜನೆಯ ಮೂಲಕ ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಸಲು ಮತ್ತು ಜನರಿಗೆ ಹಣ ಸಿಗುವಂತೆ ಮಾಡಲು ಪ್ರಯತ್ನಿಸಿತು. ಆದರೆ ಅದು ಸಾಧ್ಯವಾಗಲಿಲ್ಲ. ಹಾಗಾಗಿ ಅನಿವಾರ್ಯವಾಗಿ ಈಗ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಯುಪಿಎ ಸರ್ಕಾರದ ಇದೇ ನರೇಗಾ ಯೋಜನೆಯ ಮೊರೆಹೋಗುವಂತಾಗಿದೆ.
ಈ ಬಗ್ಗೆ ಅಭಿಜಿತ್ ಬ್ಯಾನರ್ಜಿ, ಇದು ತುರ್ತು ಪರಿಸ್ಥಿತಿಗೆ ಎಂದು ರೂಪಿಸಿರುವ ಕಾರ್ಯಕ್ರಮವಲ್ಲ. ಕೇಂದ್ರ ಸರ್ಕಾರ ಈಗ ಕಷ್ಟದ ಕಾಲ ಅಂತಾ ಕಾರ್ಯಕ್ರಮಕ್ಕೆ ಉತ್ತೇಜನ ನೀಡಿ ನಂತರ ಕೈಬಿಡಬಾರದು. ಸದೃಢ ಗ್ರಾಮೀಣ ಭಾರತದ ನಿರ್ಮಾಣಕ್ಕಾಗಿ ನರೇಗಾ ಯೋಜನೆಯನ್ನು ಮತ್ತಷ್ಟು ಸದೃಢಗೊಳಿಸಬೇಕು. ಜೊತೆಗೆ ಈಗ ಕರೋನಾ ಮತ್ತು ಲಾಕ್ಡೌನ್ ಕಾರಣಗಳಿಂದ ನಗರ ಪ್ರದೇಶಗಳಲ್ಲೂ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿರುವುದರಿಂದ ‘ಈ ಉದ್ಯೋಗ ಭದ್ರತೆ’ಯ ಕಾರ್ಯಕ್ರಮವನ್ನು ನಗರ ಪ್ರದೇಶಗಳಲ್ಲೂ ಅನುಷ್ಠಾನಕ್ಕೆ ತರಬೇಕು ಎಂದು ಸಲಹೆ ನೀಡಿದ್ದಾರೆ.
ಇದೇ ರೀತಿ ಎಲ್ಲಾ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆಯೂ ಪರಮಾರ್ಶೆ ನಡೆಸಿ ಅವುಗಳಿಗೆ ಇನ್ನಷ್ಟು ಉತ್ತೇಜನ ನೀಡಬೇಕು. ಕರೋನಾ ಮತ್ತು ಲಾಕ್ಡೌನ್ ಕಾರಣಗಳಿಂದ ಜನ ತೀವ್ರ ಕಷ್ಟ ಅನುಭವಿಸುತ್ತಿರುವ ಈ ಸಂದರ್ಭದಲ್ಲಿ ಕಲ್ಯಾಣ ಕಾರ್ಯಕ್ರಮಗಳ ಮರುವಿನ್ಯಾಸದ ಮೂಲಕ ನೆರವು ನೀಡಬೇಕು. ಜನ ಸಾಮಾನ್ಯರು ಬದುಕು ಕಟ್ಟಿಕೊಳ್ಳುವ ಮೂಲಕ ದೇಶದ ಆರ್ಥಿಕತೆ ಕಟ್ಟುವ ಕೆಲಸಕ್ಕೆ ಕೇಂದ್ರ ಸರ್ಕಾರ ಸಹಕಾರ ನೀಡಬೇಕು ಎಂದು ಹೇಳಿದ್ದಾರೆ.
‘ಒನ್ ನೇಷನ್ ಒನ್ ರೇಷನ್’ ಎಂಬ ಕಲ್ಪನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ಅಭಿಜಿತ್ ಬ್ಯಾನರ್ಜಿ, ಇದೇ ರೀತಿ ಎಲ್ಲಾ ಕಲ್ಯಾಣ ಕಾರ್ಯಕ್ರಮಗಳ ಪುನರ್ ವ್ಯಾಖ್ಯಾನ ಆಗಬೇಕು. ಜನರಿಗೆ ಅದು ಪರಿಣಾಮಕಾರಿಯಾಗಿ ಉಪಯೋಗಿ ಆಗುವಂತೆ ಮಾಡಬೇಕು. ಒನ್ ನೇಷನ್ ಒನ್ ರೇಷನ್ ಕಾರ್ಯಕ್ರಮ ಯಶಸ್ವಿಗೊಳಿಸುವುದು ಕಷ್ಟ. ಆದರೆ ನಂಬಿಕೆ ಇಟ್ಟು ಪಡಿತರ ಚೀಟಿ ವ್ಯವಸ್ಥೆ ಮಾಡಿ ಬಡವರಿಗೆ ಪಡಿತರ ಪದಾರ್ಥಗಳು ಸಿಗುವಂತೆ ಮಾಡಬೇಕು ಎಂದಿದ್ದಾರೆ.
ಇದಲ್ಲದೆ ಇವತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ‘ನರೇಗಾ ಯೋಜನೆ ಬಗ್ಗೆ ನರೇಂದ್ರ ಮೋದಿ ಟೀಕಿಸಿದ್ದರು. ಯೋಜನೆಯ ಮುಖಾಂತರ ಬಸ್ ಹೊಂಡಗಳನ್ನು ಅಗೆಯಲಾಗುತ್ತದೆ ಎಂದಿದ್ದರು. ಆದರೆ ಇಂದು ಅದೇ ಹಳ್ಳಕ್ಕೆ ಬಡವರನ್ನು ತಳ್ಳುತ್ತಿದ್ದಾರೆ. ನರೇಗಾ ಯೋಜನೆ ಇಲ್ಲದಿದ್ದರೆ ಬಡತನವು ಕಣ್ಮರೆಯಾಗುವುದಿಲ್ಲ’ ಎಂದು ಟ್ವೀಟ್ ಮಾಡಿ ಕೇಂದ್ರ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ. ರಾಹುಲ್ ಗಾಂಧಿ ಮತ್ತು ಅಭಿಜಿತ್ ಬ್ಯಾನರ್ಜಿ ಅವರ ಸಲಹೆಗಳನ್ನು ಈ ಬಾರಿಯಾದರೂ ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತದೆಯೇ ಎಂಬುದನ್ನು ಕಾದುನೋಡಬೇಕು.