ಫೆಬ್ರುವರಿ ಒಂದರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ಮಾಡುತ್ತಾ ಇಂದಿನ ಕಾಲಘಟ್ಟದಲ್ಲಿ ಡೇಟಾ ಎಷ್ಟು ಪರಿಣಾಮಕಾರಿ ಎಂಬುದರ ಕುರಿತು ಮಾತನಾಡಿದರು. ನಾವು ಒದಗಿಸುವ ಡೇಟಾ ವಿಶ್ವಾಸಾರ್ಹ ಮೂಲವನ್ನು ಹೊಂದಿರಬೇಕು ಎಂದು ಅವರು ಪ್ರತಿಪಾದಿಸಿದರು. ಅವರ ಈ ಮಾತು ಅವರಿಗೇ ತಿರುಮಂತ್ರವಾಗಿದೆ. ಬಜೆಟ್ ಮಂಡಿಸಿದ ನಂತರ ಮಾಧ್ಯಮಗಳಿಗೆ ಎರಡು ಬಜೆಟ್ ಪ್ರತಿಗಳನ್ನು ನೀಡಲಾಗಿತ್ತು.
PDF ಮತ್ತು Excel ಶೀಟ್‌ಗಳ ಪ್ರತ್ಯೇಕ ಪ್ರತಿಗಳನ್ನು ಎಲ್ಲಾ ಮಾಧ್ಯಮ ಸಂಸ್ಥೆಗಳಿಗೆ ನೀಡಲಾಗಿತ್ತು. ಇವೆರಡನ್ನೂ ಗಮನಿಸಿದ ರಾಷ್ಟ್ರೀಯ ಮಾಧ್ಯಮವೊಂದು ಬಜೆಟ್‌ನಲ್ಲಿ ಅಂಕಿ ಅಂಶಗಳ ದೋಷವಿದೆಯೆಂದು, ಆ ಕುರಿತಾಗಿ ಹಣಕಾಸು ಇಲಾಖೆಗೆ ಇ-ಮೈಲ್ ಕಳುಹಿಸಿತ್ತು. ಇದನ್ನು ಮನಗಂಡ ಹಣಕಾಸು ಇಲಾಖೆ ಸದ್ದಿಲ್ಲದೇ, ಬಜೆಟ್‌ನ ಅಂಕಿ ಅಂಶಗಳನ್ನು ಬದಲಾಯಿಸಿದೆ.
“ವಿಶ್ವಾಸಾರ್ಹ ಮೂಲಗಳಿಂದ ಬಂದಿರುವ ಡೆಟಾ ವಿಶ್ಲೇಷಿಸಿ ಅಭಿವೃದ್ದಿ ಕಾರ್ಯ ಕೈಗೊಳ್ಳಲಾಗುವುದು,” ಎಂದಿದ್ದರು ನಿರ್ಮಲಾ ಸೀತಾರಾಮನ್. ಆದರೆ, ಅವರೇ ಮಂಡಿಸಿರುವ ಬಜೆಟ್‌ನ ಡೇಟಾ ಸರಿಯಿಲ್ಲದಿರುವುದು ಹಣಕಾಸು ಇಲಾಖೆಗೆ ತೀವ್ರ ಮುಜುಗರ ಉಂಟು ಮಾಡಿದೆ. ತಾವು ಹೇಳುವುದೊಂದು ಮಾಡುವುದೊಂದು ಎಂಬುದನ್ನು ಮತ್ತೆ ಮತ್ತೆ ಸಾಬೀತು ಪಡಿಸುತ್ತಲೇ ಬಂದಿದೆ ಕೇಂದ್ರ ಸರ್ಕಾರ.
ಬಜೆಟ್ 2020-2021ನಲ್ಲಿ ಏನಿಲ್ಲವೆಂದರೂ ಕನಿಷ್ಟ ಪಕ್ಷ 14 ಇಂತಹ ಅಂಕಿ ಅಂಶಗಳ ದೋಷ ಇರುವುದನ್ನು ಆಂಗ್ಲ ಅಂತರ್ಜಾಲ ತಾಣ indiatoday.in ಪತ್ತೆ ಹಚ್ಚಿತ್ತು. ತಮ್ಮ ವೆಬ್‌ಸೈಟ್‌ನಲ್ಲಿ ಬಜೆಟ್ ಕುರಿತಾದ ವಿಶ್ಲೇ಼ಷಣೆಯನ್ನು ಬರೆಯಲು ಹೊರಟಿದ್ದವರಿಗೆ ಬಜೆಟ್‌ನಲ್ಲಿರುವ ಅಂಕಿ ಅಂಶ ದೋಷಗಳು ಕಂಡಿದ್ದವು. ಬಜೆಟ್‌ನ ಪ್ರತಿಯನ್ನು www.indiabudget.gov.in ಅಂತರ್ಜಾಲ ತಾಣದಲ್ಲಿ ಕೂಡಾ ಅಪ್ಲೋಡ್ ಮಾಡಲಾಗಿತ್ತು. ಇದರಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸೇರಿದ ಬಜೆಟ್ ಮೀಸಲು ನೋಡಿದಾಗ ಹಲವು ಸಂಸ್ಥೆಗಳಿಗೆ ಹಾಗೂ ಯೋಜನೆಗಳಿಗೆ ಮೀಸಲಿರಿಸಿದ್ದ ಮೊತ್ತದಲ್ಲಿ ವ್ಯತ್ಯಾಸ ಕಂಡು ಬಂದಿತ್ತು. ಈವರೆಗೆ ಕಂಡು ಬಂದಿರುವ 14 ಅಂಕಿ ಅಂಶ ದೋಷಗಳು ಕೇವಲ ಒಂದು ಇಲಾಖೆಗೆ ಸೇರಿದಂತಹವು.
ಈ ಅಂಕಿ ಅಂಶದಲ್ಲಿನ ದೋಷಗಳ ಕುರಿತಾಗಿ ಇಂಡಿಯಾ ಟುಡೇ ಸಂಸ್ಥೆಯು ಹಣಕಾಸು ಇಲಾಖೆಯ ಅಧೀನದಲ್ಲಿರುವ ಆಯವ್ಯಯ ಇಲಾಖೆಗೆ ಇ-ಮೈಲ್ ಕಳುಹಿಸಿ ಸ್ಪಷ್ಟನೆಯನ್ನು ಕೇಳಿತ್ತು. ಈ ಸಂಧರ್ಭದಲ್ಲಿ, ಇ-ಮೈಲ್‌ಗೆ ಪ್ರತಿಕ್ರೀಯಿಸುವ ಗೋಜಿಗೆ ಹೋಗದ ಇಲಾಖೆ ಸದ್ದಿಲ್ಲದೇ ಅಂಕಿ ಅಂಶಗಳಲ್ಲಿ ಬದಲಾವಣೆಯನ್ನು ತಂದಿತು. ಇಂಡಿಯಾ ಟುಡೇ ಕಳುಹಿಸಿದ ಇ-ಮೈಲ್‌ನಲ್ಲಿ ಈ ಕೆಳಕಂಡ ಪ್ರಶ್ನೆಗಳನ್ನು ಕೇಳಲಾಗಿತ್ತು
- ಕೇಂದ್ರ ಬಜೆಟ್‌ನಲ್ಲಿ ಮಂಡಿಸಲಾದ ಬಜೆಟ್ ಪ್ರತಿಗಳಲ್ಲಿ (PDF ಮತ್ತು Excel) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸೇರಿದ ಬಜೆಟ್‌ನಲ್ಲಿ ಈ ರೀತಿಯ ಅಂಕಿ ಅಂಶ ದೋಷಗಳು ಏಕಾಗಿವೆ?
- ದೋಷಪೂರಿತವಾದ ಬಜೆಟ್ ಪ್ರತಿಗಳಲ್ಲಿ ಯಾವ ಅಂಕಿ ಅಂಶವನ್ನು ನಾವು ವಿಶ್ಲೇಷಣೆಗೆ ಪರಿಗಣಿಸಬೇಕು?
- ಸರ್ಕಾರವು ಈ ದೋಷಗಳನ್ನು ಸರಿಪಡಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಹೊಸ ಬಜೆಟ್ ಪ್ರತಿಯನ್ನು ಬಿಡುಗಡೆ ಮಾಡಲಿದೆಯೇ? ಒಂದು ವೇಳೆ ಆ ರೀತಿ ಮಾಡಿದ್ದಲ್ಲಿ ಯಾವಾಗ ಹೊಸ ಬಜೆಟ್ ಪ್ರತಿ ಬಿಡುಗಡೆಯಾಗಬಹುದು?
ಈ ಮೂರು ಪ್ರಶ್ನೆಗಳನ್ನು ಹೊಂದಿರುವ ಇ-ಮೈಲ್ ಅನ್ನು ಫೆಬ್ರುವರಿ 4ರಂದು ಬೆಳಿಗ್ಗೆ 11.12ಕ್ಕೆ dprfinance@gamil.com ಇ-ಮೈಲ್ ವಿಳಾಸಕ್ಕೆ ಕಳುಹಿಸಲಾಗಿತ್ತು. ಈ ಇ-ಮೈಲ್‌ಗೆ ಇನ್ನೂ ಉತ್ತರ ನೀಡದ ಹಣಕಾಸು ಇಲಾಖೆ, Excel ಪ್ರತಿಯಲ್ಲಿನ ಅಂಕಿ ಅಂಶಗಳನ್ನು ತಿದ್ದಿ ಅಧಿಕೃತ ಅಂತರ್ಜಾಲ ತಾಣದಲ್ಲಿ ಮತ್ತೆ ಅಪ್ಲೋಡ್ ಮಾಡಿದೆ. PDFನಲ್ಲಿರುವ ಅಂಕಿ ಅಂಶಗಳನ್ನು ಉಳಿಸಿ ಕೇವಲ Excelನಲ್ಲಿದ್ದ ಅಂಕಿ ಅಂಶಗಳನ್ನು ತಿದ್ದಲಾಗಿದೆ. ಈ ವಿಷಯವನ್ನು ಯಾರ ಗಮನಕ್ಕೂ ತರದೆ ಅಂಕಿ ಅಂಶ ತಿದ್ದುಪಡಿಯ ಕಾರ್ಯ ನಡೆದಿದೆ. ಹಳೆಯ ಎರಡೂ ಪ್ರತಿಗಳು ತಮ್ಮಲ್ಲಿವೆ ಎಂದು ಇಂಡಿಯಾ ಟುಡೆ ಸಂಸ್ಥೆಯು ಹೇಳಿಕೊಂಡಿದೆ. ಹೊಸ ಪ್ರತಿಗಳಲ್ಲಿರುವ ಅಂಕಿ ಅಂಶಗಳು ಈಗ ಒಂದಕ್ಕೊಂದು ತಾಳೆಯಾಗುತ್ತಿವೆ.
ಇಲ್ಲಿ ಗಮನಿಸಬೇಕಾದ ಇನ್ನೊಂದು ವಿಷಯವೇನೆಂದರೆ, ವಿಶ್ವಾಸಾರ್ಹವಾದ ಮೂಲಗಳಿಂದ ಪಡೆದ ಡೆಟಾ ಬಳಸಿ ತಯಾರಿಸಿರುವ ಬಜೆಟ್ ಎಂದು ಹೇಳಿಕೊಂಡಿರುವ ನಿರ್ಮಾಲಾ ಸೀತಾರಾಮನ್ ಅವರು ಬಜೆಟ್‌ಗಾಗಿ ಪರಿಗಣಿಸಿದ ವಿಶ್ವಾಸಾರ್ಹ ಮೂಲ ವಿಕಿಪೀಡಿಯಾ. ವಿಕಿಪೀಡಿಯಾ ಅತ್ಯಂತ ಜನಪ್ರಿಯ ಅಂತರ್ಜಾಲ ತಾಣ ನಿಜ, ಆದರೆ, ಅಲ್ಲಿರುವ ಅಂಕಿ ಅಂಶಗಳು ವಿಶ್ವಾಸಾರ್ಹವೇ ಎಂಬುದು ಪ್ರಶ್ನೆ.
ಕೃಪೆ: Indiatoday.in