ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ದೆಹಲಿಯ ಶಹೀನ್ ಬಾಗ್ ನಲ್ಲಿ ಮಹಿಳೆಯರು ಸೇರಿದಂತೆ ಸಾವಿರಾರು ಹೋರಾಟಗಾರರು ಶಾಂತಿಯುತ ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ, ಇದನ್ನು ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಲ್ಲದೇ, ಮುಂದಿನ ತಿಂಗಳು ದೆಹಲಿ ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆಯ ಪ್ರಚಾರಕ್ಕೆ ಸರಕು ಇಲ್ಲದಂತಾಗಿದೆ ಮತ್ತು ಚುನಾವಣೆ ಪೂರ್ವ ಸಮೀಕ್ಷೆಗಳ ಪ್ರಕಾರ ಮತ್ತೆ ಆಮ್ ಆದ್ಮಿ ಪಾರ್ಟಿ ಜಯಭೇರಿ ಬಾರಿಸಲಿದೆ. ಹೀಗಾಗಿ ಎಂದಿನಂತೆ ಇಡೀ ಚುನಾವಣೆ ಪ್ರಚಾರದಲ್ಲಿ ಕೋಮುವಾದವನ್ನು ತುಂಬಲು ಆರಂಭಿಸಿದೆ.
ಉತ್ತರ ಭಾರತದ ಕೆಲವು ಬಿಜೆಪಿ ಶಾಸಕರು, ಸಂಸದರು ಮತ್ತು ಮಂತ್ರಿಗಳು ವಿವಾದಿತ ಸಿಎಎ ವಿಚಾರದಲ್ಲಿ ಬಾಯಿಗೆ ಬಂದಂತೆ ಮಾತನಾಡುತ್ತಾ ವಿವಾದಾಸ್ಪದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇವರು ಎಂತಹದ್ದೇ ಹೇಳಿಕೆಗಳನ್ನು ನೀಡಿದರೂ ಇವರಿಗೆ ಯಾವುದೇ ಕಾನೂನು ಅನ್ವಯವಾಗುವುದೇ ಇಲ್ಲ. ಆದರೆ, ಜನವಿರೋಧಿಯಾಗಿದ್ದರೂ ಅಂತಹ ನೀತಿಯನ್ನು ವಿರೋಧಿಸುವವರು, ಮೋದಿ-ಅಮಿತ್ ಶಾ ಎಂಬ ಜೋಡೆತ್ತುಗಳನ್ನು ಟೀಕಿಸುವವರಿಗೆಲ್ಲಾ ದೇಶದ್ರೋಹಿಗಳ ಬಣ್ಣ ಹಚ್ಚಿ ಅವರ ಮೇಲೆ ಕೇಸುಗಳನ್ನು ಹಾಕಲಾಗುತ್ತಿದೆ.
ತಾವು ಏನು ಬೇಕಾದರೂ ಹೇಳಿಕೆ ನೀಡಬಹುದು. ತಮ್ಮ ಹೇಳಿಕೆಯಿಂದ ಸಮಾಜದಲ್ಲಿ ಎಂತಹ ಅನಾಹುತಗಳು ನಡೆದರೂ ನಮ್ಮ ಬೆಂಬಲಕ್ಕೆ ಈ ಜೋಡೆತ್ತುಗಳಿವೆ ಎಂಬ ಭಾವನೆಯಿಂದ ಬಿಜೆಪಿ ನಾಯಕರು ಎಲುಬಿಲ್ಲದ ನಾಲಗೆಯನ್ನು ಹರಿಯ ಬಿಡುತ್ತಿದ್ದಾರೆ.
ದೆಹಲಿ ಚುನಾವಣೆ ಹೊಸ್ತಿಲಲ್ಲಿರುವ ಬಿಜೆಪಿಗೆ ಮತಗಳನ್ನು ಸೆಳೆಯಲು ಯಾವುದೇ ವಿಚಾರಗಳು ಸಿಗುತ್ತಿಲ್ಲ. ಇದೇ ಸಮಯಕ್ಕೆ ವಿವಾದಿತ ಸಿಎಎ ವಿಚಾರ ಎದುರು ಇದ್ದರೂ ಅದನ್ನು ಮುಂದಿಟ್ಟುಕೊಂಡು ಮತದಾರನ ಮನೆ ಬಾಗಿಲಿಗೆ ಹೋದರೆ ಬರುವ ವೋಟುಗಳೂ ಬರುವುದಿಲ್ಲ ಎಂಬುದು ಬಿಜೆಪಿ ನಾಯಕರಿಗೆ ಖಾತರಿಯಾಗಿದೆ.
ಈ ಹಿನ್ನೆಲೆಯಲ್ಲಿ ಸಿಎಎ ವಿರೋಧಿಸುತ್ತಿರುವವರೆಲ್ಲಾ ಮುಸಲ್ಮಾನರು ಎಂಬ ಭಾವನೆ ಬರುವ ರೀತಿಯಲ್ಲಿ ಬಿಂಬಿಸಿ ಹಿಂದೂಗಳ ಮತಗಳನ್ನು ಕ್ರೋಢೀಕರಿಸಲು ಬಿಜೆಪಿ ಪ್ರಯತ್ನ ಮಾಡುತ್ತಿದೆ. ಈ ಪ್ರಯತ್ನದ ಫಲವೇ ದಿನಕ್ಕೆ ಒಂದು ರೀತಿಯಲ್ಲಿ ಬಿಜೆಪಿ ನಾಯಕರು ವಿವಾದಿತ ಮತ್ತು ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುತ್ತಿರುವುದು.
ಸಂಸದ ಪರ್ವೇಶ್ ವರ್ಮಾ ಶಾಹಿನ್ ಬಾಗ್ ನಲ್ಲಿ ಪ್ರತಿಭಟನೆ ನಡೆಸುತ್ತಿರುವವರು ರೇಪಿಸ್ಟ್ ಗಳು ಮತ್ತು ಕೊಲೆಗಡುಕರು ಎಂಬ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ಕಾಶ್ಮೀರದಲ್ಲಿ ಬೆಂಕಿ ಹಚ್ಚಲಾಗಿತ್ತು. ಅಲ್ಲಿ ಕಾಶ್ಮೀರಿ ಪಂಡಿತರ ತಾಯಿ, ಸೋದರಿಯರ ಮೇಲೆ ಅತ್ಯಾಚಾರ ನಡೆಸಲಾಗಿತ್ತು. ನಂತರ ಉತ್ತರಪ್ರದೇಶ, ಹೈದ್ರಾಬಾದ್, ಕೇರಳದಲ್ಲಿ ಬೆಂಕಿ ಹಚ್ಚಲಾಗಿತ್ತು. ಈಗ ದೆಹಲಿಯ ಮೂಲೆಯಲ್ಲಿರುವ ಶಾಹೀನ್ ಬಾಗ್ ನಲ್ಲಿ ಬೆಂಕಿಯ ಕಿಡಿ ಹತ್ತುತ್ತಿದೆ. ಲಕ್ಷಾಂತರ ಜನ ಅಲ್ಲಿ ಸೇರುತ್ತಿದ್ದಾರೆ. ಈ ಬೆಂಕಿ ಯಾವುದೇ ಸಮಯದಲ್ಲಿ ದೆಹಲಿಯ ಮನೆ ಮನೆಗೂ ಬರಬಹುದು. ಎಲ್ಲರೂ ಎಚ್ಚರದಿಂದಿರಿ. ನಿಮ್ಮ ಮನೆಗೆ ಬೆಂಕಿ ಬಿದ್ದಾಗ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ರಕ್ಷಿಸಲು ಸಾಧ್ಯವಿಲ್ಲ ಎಂದು ಕೋಮುದ್ವೇಷದ ವಿಷಬೀಜ ಬಿತ್ತುವ ಪ್ರಯತ್ನ ಮಾಡಿದ್ದಾರೆ.
ಈ ಬೆಂಕಿ ನಮ್ಮ ಮನೆಗಳಿಗೂ ಬರಬಹುದು. ಆ ಜನರು ನಿಮ್ಮ ಮನೆಗೆ ನುಗ್ಗುತ್ತಾರೆ, ನಿಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳನ್ನು ಹೊತ್ತೊಯ್ದು ಅತ್ಯಾಚಾರ ಮಾಡಿ ಕೊಲೆ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ನಿಮಗೆ ಯೋಚನೆ ಮಾಡಲು ಇದು ಸಕಾಲವಾಗಿದೆ. ನೀವು ಈಗಲೇ ಎಚ್ಚರಗೊಳ್ಳಬೇಕಿದೆ. ನೀವು ಎಚ್ಚರಗೊಂಡರೆ ಮಾತ್ರ ಪ್ರಧಾನಿ ಮತ್ತು ಗೃಹ ಸಚಿವರು ನಿಮ್ಮ ನೆರವಿಗೆ ಬರಲು ಸಾಧ್ಯ ಎಂದು ಹೇಳುವ ಮೂಲಕ ಬಿಜೆಪಿಗೆ ಮತ ಹಾಕದಿದ್ದರೆ ನಿಮ್ಮ ನೆರವಿಗೆ ಕೇಂದ್ರ ಸರ್ಕಾರ ಬರುವುದಿಲ್ಲ ಎಂದು ಹೇಳಿದ್ದಾರೆ.
ನೀವು ಬಿಜೆಪಿಗೆ ಮತ ಹಾಕಿ ಅಧಿಕಾರಕ್ಕೆ ಬರುವಂತೆ ಮಾಡಿ. ಅಧಿಕಾರಕ್ಕೆ ಕೇವಲ ಒಂದು ತಿಂಗಳಲ್ಲಿ ಪ್ರತಿಭಟನಾಕಾರರನ್ನು ಮುಲಾಜಿಲ್ಲದೇ ತೆರವುಗೊಳಿಸಲಾಗುತ್ತದೆ ಎಂದು ಹೇಳಿರುವ ವರ್ಮಾ, ನಿಮಗೆ ಶಾಹೀನ್ ಬಾಗ್ ನ ದೆಹಲಿ ಬೇಕಾ? ಮೂಲ ದೆಹಲಿ ಬೇಕಾ? ಎಂಬ ಪ್ರಶ್ನೆಯನ್ನು ಹಾಕುವ ಮೂಲಕ ಶಾಹೀನ್ ಬಾಗ್ ಪ್ರತಿಭಟನೆಯ ಹಕ್ಕನ್ನು ಕಿತ್ತುಕೊಳ್ಳುವ ಮಾತುಗಳನ್ನಾಗಿದ್ದಾರೆ.
ಕಳೆದ 45 ದಿನಗಳಿಂದ ಮುಸ್ಲಿಂ ಮಹಿಳೆಯರು ಸೇರಿದಂತೆ ಸಾವಿರಾರು ಮಂದಿ ಶಾಹೀನ್ ಬಾಗ್ ನಲ್ಲಿ ಸಿಎಎ ಮತ್ತು ಎನ್ಆರ್ ಸಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಇದು ಸಂಪೂರ್ಣವಾಗಿ ಶಾಂತಿಯುತವಾಗಿ ನಡೆಯುತ್ತಿರುವ ಪ್ರತಿಭಟನೆಯಾಗಿದೆ. ಅಲ್ಲದೇ, ಇಲ್ಲಿ ಹೋರಾಟಗಾರರು ಪ್ರತಿಭಟನೆ ಆರಂಭವಾದ ದಿನದಿಂದ ಇದುವರೆಗೆ ರಾಜಕೀಯ ವಿಚಾರವನ್ನಾಗಲೀ ಯಾವುದೇ ರಾಜಕೀಯ ಪಕ್ಷದ ವಿಚಾರವನ್ನಾಗಲೀ ಪ್ರಸ್ತಾಪ ಮಾಡಿಯೇ ಇಲ್ಲ. ಆದರೆ, ಬಿಜೆಪಿ ಮಾತ್ರ ಈ ಶಾಹೀನ್ ಬಾಗ್ ಪ್ರತಿಭಟನೆ ವಿಚಾರವನ್ನು ದೆಹಲಿ ಚುನಾವಣೆ ಪ್ರಚಾರದ ಪ್ರಮುಖ ವಿಷಯವನ್ನಾಗಿಸಿಕೊಳ್ಳಲು ಆರಂಭಿಸಿದೆ.
ವರ್ಮಾ ರೀತಿಯಲ್ಲಿ ನಾಲಗೆಯನ್ನು ಹರಿ ಬಿಟ್ಟವರು ಸಾಕಷ್ಟು ಜನರಿದ್ದಾರೆ. ಗೃಹ ಮಂತ್ರಿ ಅಮಿತ್ ಶಾ ಪಾಲ್ಗೊಂಡಿದ್ದ ರ್ಯಾಲಿಯಲ್ಲಿ ಕೇಂದ್ರ ಸಚಿವ ಅನುರಾಗ್ ಠಾಕೂರ್, ದೇಶದ್ರೋಹಿಗಳನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ತಮ್ಮ ಸಚಿವ ಸ್ಥಾನದ ಜವಾಬ್ದಾರಿಯನ್ನೂ ಮರೆತು ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದರು.