ಸಾಮಾಜಿಕ ಸಂಪರ್ಕದ ಮೆಸೇಜಿಂಗ್ ಆ್ಯಪ್ ವಾಟ್ಸಪ್ ತನ್ನ ಬಳಕೆದಾರರ ಖಾಸಗೀ ಮಾಹಿತಿಯನ್ನು ಸಂಸ್ಥೆಯ ಇತರೆ ಜಾಲತಾಣಗಳು ಮತ್ತು ವ್ಯವಹಾರ ಸಂಸ್ಥೆಗಳೊಂದಿಗೆ ಹಂಚಿಕೊಳ್ಳುವುದಾಗಿ ಹೇಳಿರುವ ಹಿನ್ನೆಲೆಯಲ್ಲಿ ಬಳಕೆದಾರರು ಆತಂಕಕ್ಕೊಳಗಾಗಿದ್ದಾರೆ.
ಅದರಲ್ಲೂ ಭಾರತದಲ್ಲಿ ಅತಿ ಜನಪ್ರಿಯವಾಗಿರುವ ವಾಟ್ಸಪ್ ನ ಈ ಹೊಸ ನಿಯಮಗಳು ಭಾರತೀಯ ಬಳಕೆದಾರರಿಗೆ ಆತಂಕ ತಂದಿದ್ದು, ದಿಢೀರನೇ ಟೆಲಿಗ್ರಾಂ, ಸಿಗ್ನಲ್ ಮತ್ತಿತರ ಆ್ಯಪ್ ಗಳತ್ತ ಬಳಕೆದಾರರು ಮುಖಮಾಡಿದ್ದಾರೆ. ಫೇಸ್ ಬುಕ್ ಮಾಲೀಕತ್ವದ ವಾಟ್ಸಪ್ ಕಳೆದ ವಾರದಿಂದ ತನ್ನ ಬಳಕೆದಾರರಿಗೆ ಇನ್ ಆ್ಯಪ್ ಸೂಚನೆಗಳನ್ನು ರವಾನಿಸುತ್ತಿದ್ದು, ಬಳಕೆದಾರರ ಮಾಹಿತಿಯನ್ನು ತನ್ನದೇ ಫೇಸ್ ಬುಕ್ ಸರ್ವರುಗಳಲ್ಲಿ ಸಂಗ್ರಹಿಸಿಡುವುದಾಗಿಯೂ ಮತ್ತು ಇತರೆ ತನ್ನ ವ್ಯವಹಾರಗಳಲ್ಲಿ ಮತ್ತು ವ್ಯಾವಹಾರಿಕ ಉದ್ದೇಶಗಳಲ್ಲಿ ಬಳಕೆ ಮಾಡುವುದಾಗಿಯೂ ಹೇಳಿದೆ. ತನ್ನ ಈ ನಿಬಂಧನೆಗೆ ಬಳಕೆದಾರರು ಫೆಬ್ರವರಿ 8ರ ಒಳಗೆ ಒಪ್ಪಿಗೆ ಕೊಡಬೇಕು. ಇಲ್ಲವಾದಲ್ಲಿ ವಾಟ್ಸಪ್ ಸೇವೆಯನ್ನು ಕಡಿತ ಮಾಡುವುದಾಗಿಯೂ ಸಂದೇಶ ರವಾನಿಸಲಾಗಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಜನರಲ್ಲಿ ತನ್ನ ಉತ್ಪನ್ನದ ಬಳಕೆಯನ್ನು ಜನಪ್ರಿಯಗೊಳಿಸಿ, ಅವರು ಅದರ ಬಳಕೆಯನ್ನು ಬಿಟ್ಟಿರಲಾಗದ ವ್ಯಸನದಂತೆ ಹಚ್ಚಿಕೊಂಡಿದ್ದಾರೆ ಎಂಬುದು ಖಚಿತವಾದ ಬಳಿಕ ಉತ್ಪನ್ನದ ದಾಸರಾಗಿದ್ದಾರೆ ಎಂಬುದನ್ನೇ ಅಸ್ತ್ರವಾಗಿಸಿಕೊಂಡು ಗ್ರಾಹಕರನ್ನು ಶೋಷಿಸುವ, ದುರ್ಬಳಕೆ ಮಾಡಿಕೊಳ್ಳುವ, ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವ ಕಾರ್ಪೊರೇಟ್ ಉದ್ಯಮಗಳ ಚಾಳಿಯನ್ನೇ ಇದೀಗ ಫೇಸ್ ಬುಕ್ ಕಂಪನಿ ತನ್ನ ವಾಟ್ಸಪ್ ಆ್ಯಪ್ ವಿಷಯದಲ್ಲಿ ಪ್ರಯೋಗಿಸತೊಡಗಿದೆ. ಬಳಕೆದಾರರ ಖಾಸಗೀ ಮಾಹಿತಿಗೆ ಎನ್ ಕ್ರಿಪ್ಷನ್ ಸೌಲಭ್ಯದ ಮೂಲಕ ಗೌಪ್ಯತೆ ಮತ್ತು ಖಾಸಗೀತನ ಕಾಯುವುದರಲ್ಲಿ ತಾನು ಜಗತ್ತಿನಲ್ಲೇ ಮೊದಲಿಗ ಎಂದು ಹೇಳಿದ್ದ ಸಂಸ್ಥೆ ಇದೀಗ ಹೀಗೆ ಯೂ ಟರ್ನ ಹೊಡೆದು, ಬಳಕೆದಾರರ ಮಾಹಿತಿಯನ್ನು ತನ್ನದೇ ಇತರ ಸಂಸ್ಥೆಗಳೊಂದಿಗೆ ಮಾತ್ರವಲ್ಲದೆ ಹೊರಗಿನ ಇತರ ಉದ್ಯಮ, ಮಾರುಕಟ್ಟೆ ಸಂಸ್ಥೆಗಳೊಂದಿಗೂ ಹಂಚಿಕೊಳ್ಳುವುದಾಗಿಯೂ ಮತ್ತು ಅಂತಹ ತನ್ನ ಸರ್ವಾಧಿಕಾರಿ ಧೋರಣೆಯನ್ನು ಒಪ್ಪಿಕೊಂಡಲ್ಲಿ ಮಾತ್ರ ತನ್ನ ಆ್ಯಪ್ ಬಳಸಬಹುದು ಎಂದೂ ಹೇಳಿರುವುದು ಸಹಜವಾಗೇ ಬಳಕೆದಾರರ ಅಸಹನೆ ಮತ್ತು ಆತಂಕಕ್ಕೆ ಕಾರಣವಾಗಿದೆ.
ಈ ನಡುವೆ, ಫೇಸ್ ಬುಕ್ ಭಾರತವೂ ಸೇರಿದಂತೆ ವಿವಿಧ ದೇಶಗಳ ರಾಜಕಾರಣ ಮತ್ತು ಕೆಲವು ನಾಯಕರು ಮತ್ತು ಆಯ್ದ ಪಕ್ಷ, ಸಿದ್ಧಾಂತಗಳ ಪರ ಪರೋಕ್ಷವಾಗಿ ತಂತ್ರ ಹೆಣೆಯುತ್ತಿದೆ. ದೇಶಗಳ ಆಂತರಿಕ ವಿಷಯಗಳಲ್ಲಿ, ಸಾಮಾಜಿಕ ಸಾಮರಸ್ಯದಲ್ಲಿ ಮೂಗು ತೂರಿಸುತ್ತಿರುವ ಬಗ್ಗೆ ಇತ್ತೀಚಿನ ದಿನಗಳಲ್ಲಿ ಹಲವು ಪ್ರಕರಣಗಳು ಬಯಲಾಗಿವೆ. ಭಾರತದ ಚುನಾವಣೆಗಳಲ್ಲಿ ಮತ್ತು ಆಡಳಿತರೂಢ ಬಿಜೆಪಿ ಮತ್ತು ಅದರ ಬಲಪಂಥೀಯ ಸಿದ್ಧಾಂತದ ಪರ ಅದರ ಪ್ರಾದೇಶಿಕ ಅಧಿಕಾರಿ ಕೆಲಸ ಮಾಡಿದ್ದರು ಎಂಬ ಹಿನ್ನೆಲೆಯಲ್ಲಿ ವಿವಾದವೆದ್ದಿತ್ತು. ಅದಾದ ಬಳಿಕ, ಇದೀಗ ಅಮೆರಿಕದ ಸಂಸತ್ ಮೇಲೆ ಡೊನಾಲ್ಡ್ ಟ್ರಂಪ್ ಬೆಂಬಲಿಗರು ನಡೆಸಿದ ದಾಳಿಗೂ ಪೇಸ್ ಬುಕ್ ಪರೋಕ್ಷವಾಗಿ ಕುಮ್ಮಕ್ಕು ನೀಡಿದೆ ಎಂಬ ಗಂಭೀರ ಆರೋಪಗಳೂ ಕೇಳಿಬರುತ್ತಿವೆ.
ಅದರಲ್ಲೂ ಜಗತ್ತಿನ ಅತ್ಯಂತ ಶ್ರೀಮಂತ ಎಂಬ ಪಟ್ಟಕ್ಕೆ ಏರಿರುವ ಎಲಾನ್ ಮಸ್ಕ್ ಫೇಸ್ ಬುಕ್ ವಿರುದ್ಧದ ತಮ್ಮ ನಿರಂತರ ಟೀಕೆಗಳ ಮುಂದುವರಿದ ಭಾಗವಾಗಿ ಅಮೆರಿಕದ ಸಂಸತ್ ಮೇಲಿನ ದಾಳಿಗೆ ಪರೋಕ್ಷವಾಗಿ ಫೇಸ್ ಬುಕ್ ಕುಮ್ಮಕ್ಕು ನೀಡಿದೆ ಎಂಬ ಟ್ವೀಟ್ ಮಾಡಿದ್ದು ಮತ್ತು ಬಳಿಕ ಾ ಹಿನ್ನೆಲೆಯಲ್ಲಿ ಇನ್ನು ಸಿಗ್ನಲ್ ಎಂಬ ಮೆಸೇಜಿಂಗ್ ಆ್ಯಪ್ ಬಳಸಿ ಎಂದು ತಮ್ಮ ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ಕರೆ ನೀಡಿದ ಬಳಿಕ ಕಳೆದ ಎರಡು ಮೂರು ದಿನಗಳಲ್ಲಿ ವಾಟ್ಸಪ್ ಬಳಕೆದಾರರು ಜಾಗತಿಕ ಮಟ್ಟದಲ್ಲಿ ಸಿಗ್ನಲ್ ಆ್ಯಪ್ ಕಡೆ ವಲಸೆ ಹೋಗುತ್ತಿದ್ದಾರೆ. ಈ ಡಿಜಿಟಲ್ ವಲಸೆ ಎಷ್ಟು ದೊಡ್ಡ ಮಟ್ಟದಲ್ಲಿದೆ ಎಂದರೆ; ತನ್ನ ಹೊಸ ಬಳಕೆದಾರರ ಮೊಬೈಲ್ ಸಂಖ್ಯೆಗಳನ್ನು ಸಕಾಲದಲ್ಲಿ ಪರಿಶೀಲಿಸಲೂ ತನಗೆ ಸಮಯ ಸಿಗದಷ್ಟು ಬೇಡಿಕೆ ಬಂದಿದೆ. ಹಾಗಾಗಿ ವಿಳಂಬಕ್ಕಾಗಿ ಕ್ಷಮೆ ಯಾಚಿಸುವುದಾಗಿ ಸಿಗ್ನಲ್ ಸಂಸ್ಥೆ ಟ್ವೀಟ್ ಮಾಡಿದೆ!
ಹಾಗಾದರೆ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ವಾಟ್ಸಪ್ ಬಳಕೆದಾರರು ಸಿಗ್ನಲ್ ಆಪ್ ಕಡೆ ವಲಸೆ ಹೋಗುವಂತಹದ್ದು ಆ ಮೆಸೇಜಿಂಗ್ ಆ್ಯಪ್ ನಲ್ಲಿ ಅಂತಹದ್ದೇನಿದೆ ಎಂಬ ಪ್ರಶ್ನೆ ಕಾಡುವುದು ಸರಳ. ಜೊತೆಗೆ ಟೆಲಿಗ್ರಾಂನಂತಹ ಸಾಕಷ್ಟು ಜನಪ್ರಿಯ ಆ್ಯಪ್ ಬದಲಾಗಿ ಭಾರತದಲ್ಲಿ ಅಷ್ಟೇನೂ ಜನಪ್ರಿಯವಲ್ಲದ ಈ ಹೊಸ ಆ್ಯಪ್ ಬಗ್ಗೆ ದಿಢೀರ್ ವಿಶ್ವಾಸ ಮತ್ತು ನಂಬಿಕೆ ಬರಲು ಕಾರಣವೇನು ಎಂಬ ಕುತೂಹಲವೂ ಸಹಜ.
ವಾಸ್ತವವಾಗಿ 2016ರಲ್ಲಿ ವಾಟ್ಸಪ್ ತನ್ನ ಮೆಸೇಜಿಂಗ್ ಸೇವೆಯಲ್ಲಿ ಬಳಕೆಗೆ ತಂದ ಎಂಡ್ ಟು ಎಂಡ್ ಎನ್ ಕ್ರಿಪ್ಷನ್ ನಂತಹ ಹೆಚ್ಚಿನ ಖಾಸಗೀತನದ ವ್ಯವಸ್ಥೆಯನ್ನು ಅದಕ್ಕೆ ಕಲ್ಪಿಸಿಕೊಟ್ಟಿದ್ದ ಓಪನ್ ವಿಸ್ಪರ್ ಸಿಸ್ಟಮ್ಸ್ . ಜಾಗತಿಕ ಮಟ್ಟದಲ್ಲಿ ಎನ್ ಕ್ರಿಪ್ಷನ್ ಕಮ್ಯುನಿಕೇಷನ್ಸ್ ನ ವಿಷಯದಲ್ಲಿ ಸರಿಸಾಟಿ ಇಲ್ಲದ ಗುಣಮಟ್ಟಕ್ಕೆ ಹೆಸರಾಗಿರುವ ಈ ಓಪನ್ ವಿಸ್ಪರ್ ಸಿಸ್ಟಮ್ಸ್ ಸಹಯೋಗದಲ್ಲಿಯೇ ಸಿಗ್ನಲ್ ಫೌಂಡೇಷನ್, ಲಾಭರಹಿತ ಸೇವಾಸಂಸ್ಥೆಯಾಗಿ ಅಸ್ತಿತ್ವಕ್ಕೆ ಬಂದಿದೆ. ಆ ಸಂಸ್ಥೆಯ ಮೆಸೇಜಿಂಗ್ ಆಪ್ ಹೆಸರೇ ಸಿಗ್ನಲ್!
ಇದರ ಎನ್ ಕ್ರಿಪ್ಷನ್ ವ್ಯವಸ್ಥೆಯ ಮೇಲೆ ಜಾಗತಿಕ ಮಟ್ಟದಲ್ಲಿ ಇರುವ ವಿಶ್ವಾಸಾರ್ಹತೆ ಮತ್ತು ಅದು ತನ್ನ ಬಳಕೆದಾರರಿಂದ ಸಂಗ್ರಹಿಸುವ ಕನಿಷ್ಟ ಮಾಹಿತಿಯ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ಪತ್ರಕರ್ತರು, ಭದ್ರತಾ ವಿಷಯ ತಜ್ಞರು, ಖಾಸಗೀತನ ಕುರಿತ ಸಂಶೋಧಕರು, ಶೈಕ್ಷಣಿಕ ಆಸಕ್ತರು ಮತ್ತಿತರು ವೃತ್ತಿಪರರು ಹೆಚ್ಚಾಗಿ ಈ ಆ್ಯಪ್ ಬಳಸುತ್ತಾರೆ. ವಾಟ್ಸಪ್ ಮತ್ತು ಫೇಸ್ ಬುಕ್ ಮೆಸೆಂಜರ್ ಆ್ಯಪ್ ಗಳಿಗೆ ಹೋಲಿಸಿದರೆ ಸಿಗ್ನಲ್ ಆ್ಯಪ್ ಬಳಕೆದಾರರ ಯಾವುದೇ ಮಾಹಿತಿ- ಡೇಟಾವನ್ನು ಸಂಗ್ರಹಿಸುವುದಿಲ್ಲ. ಸಿಗ್ನಲ್ ಸಂಗ್ರಹಿಸುವ ಬಳಕೆದಾರರ ಡೇಟಾ ಎಂದರೆ ಅದು ಅವರ ಮೊಬೈಲ್ ಸಂಖ್ಯೆ ಮಾತ್ರ. ಅಲ್ಲದೆ, ಆ ಮೊಬೈಲ್ ಸಂಖ್ಯೆಯನ್ನು ಕೂಡ ಬಳಕೆದಾರರ ವೈಯಕ್ತಿಕ ಗುರುತಿಗೆ ಲಿಂಕ್ ಮಾಡುವುದಿಲ್ಲ.
ವಾಟ್ಸಪ್ ಬಳಕೆದಾರರ ಖರೀದಿ ಮಾಹಿತಿ, ಹಣಕಾಸು ವಹಿವಾಟು ಮಾಹಿತಿ, ಸ್ಥಳ(ಲೊಕೇಶನ್) ಮಾಹಿತಿ, ಲೊಕೇಶನ್ ಬದಲಾವಣೆಯ ವಿವರ, ಸಂಪರ್ಕಗಳ ಮಾಹಿತಿ, ಮೊಬೈಲ್ ಸಂಖ್ಯೆ, ಇಮೇಲ್ ವಿಳಾಸ, ಡೇಟಾ ಬಳಕೆ ಸೇರಿದಂತೆ ಬಹುತೇಕ ಮಾಹಿತಿಯನ್ನು ಸಂಗ್ರಹಿಸುತ್ತದೆ. ಬಳಕೆದಾರರು ಯಾವ ವಿಷಯದ ಕುರಿತು ಹೆಚ್ಚು ಮಾತನಾಡುತ್ತಾರೆ, ಯಾರೊಂದಿಗೆ ಹೆಚ್ಚು ಮಾತನಾಡುತ್ತಾರೆ, ಅವರ ಆಸಕ್ತಿಯ ವಿಷಯಗಳೇನು? ಅವರ ವ್ಯವಹಾರಿಕ ಆಸಕ್ತಿಗಳೇನು? ಅವರ ರಾಜಕೀಯ ಮತ್ತು ಸಾಮಾಜಿಕ ಆಸಕ್ತಿಗಳೇನು? ಇಂಟರ್ ನೆಟ್ ನಲ್ಲಿ ಏನನ್ನು ಅವರು ಹುಡುಕುತ್ತಾರೆ ಎಂಬೆಲ್ಲಾ ಮಾಹಿತಿಯನ್ನು ಸಂಗ್ರಹಿಸುತ್ತದೆ. ಈ ಪೈಕಿ ಕೆಲವು ಮಾಹಿತಿಯನ್ನು ತನ್ನ ಮಾತೃಸಂಸ್ಥೆ ಫೇಸ್ ಬುಕ್ ಮತ್ತು ಇತರೆ ಸಂಸ್ಥೆಗಳೊಂದಿಗೆ ಹಂಚಿಕೊಳ್ಳುವುದಾಗಿಯೂ ಅದಕ್ಕೆ ಒಪ್ಪಿಗೆ ಇದ್ದಲ್ಲಿ ನೀವು ವಾಟ್ಸಪ್ ಬಳಕೆ ಮುಂದುವರಿಸಬಹುದು ಎಂದೂ ಆ ಆ್ಯಪ್ ಸೂಚನೆಗಳು ಹೇಳುತ್ತಿವೆ.
ಫೇಸ್ ಬುಕ್ ಮೆಸೆಂಜರ್ ಆ್ಯಪ್ ಕೂಡ ಬಹುತೇಕ ವಾಟ್ಸಪ್ ಸಂಗ್ರಹಿಸುವ ಬಳಕೆದಾರರ ಮಾಹಿತಿಯನ್ನು ಸಂಗ್ರಹಿಸುತ್ತದೆ. ಜೊತೆಗೆ ಬಳಕೆದಾರರ ಫೋಟೋ, ವಿಡಿಯೋ ಮತ್ತು ಆಡಿಯೋ ಮಾಹಿತಿಯನ್ನೂ ಸಂಗ್ರಹಿಸುತ್ತದೆ. ಈ ಎರಡಕ್ಕೆ ಹೋಲಿಸಿದರೆ ಟೆಲಿಗ್ರಾಂ ಬಹಳ ಕಡಿಮೆ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುತ್ತದೆ. ಟೆಲಿಗ್ರಾಂನಲ್ಲಿ ಸಂಪರ್ಕ ಮಾಹಿತಿ, ಸಂಪರ್ಕ ಮತ್ತು ಬಳಕೆದಾರರ ಐಡಿ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ.
ಹಾಗಾಗಿ ಸಹಜವಾಗೇ ಬಳಕೆದಾರರ ಯಾವುದೇ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸ ಸಿಗ್ನಲ್ ಆ್ಯಪ್ ಈಗ ದಿಢೀರ್ ಜನಪ್ರಿಯವಾಗಿದ್ದು, ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಕೋಟ್ಯಂತರ ಮಂದಿ ಹೊಸ ಆ್ಯಪ್ ನತ್ತ ವಲಸೆ ಆರಂಭಿಸಿದ್ದಾರೆ. ಮುಖ್ಯವಾಗಿ ಖಾಸಗೀತನಕ್ಕೆ ಸಿಗ್ನಲ್ ನಲ್ಲಿ ಇರುವ ನೈಜ ಆದ್ಯತೆ ಮತ್ತು ಅದು ವಾಟ್ಸಪ್ ಮತ್ತು ಫೇಸ್ ಬುಕ್ ರೀತಿಯಲ್ಲಿ ಯಾವುದೇ ಉದ್ಯಮ ಹಿತಾಸಕ್ತಿಗಾಗಿ ಲಾಬಿ ನಡೆಸುವ ಬೃಹತ್ ಕಾರ್ಪೊರೇಟ್ ಸಂಸ್ಥೆಯ ಹಿಡಿತದಲ್ಲಿಲ್ಲ. ಬದಲಾಗಿ ಜನರ ಖಾಸಗೀತನವನ್ನು ರಕ್ಷಿಸುವ ಧ್ಯೇಯದಿಂದಲೇ ಅಸ್ತಿತ್ವಕ್ಕೆ ಬಂದಿರುವ ಒಂದು ಸೇವಾ ಸಂಸ್ಥೆಯ ಸಹಯೋಗದಲ್ಲಿದೆ ಎಂಬುದು ಹೆಚ್ಚು ಜನರನ್ನು ಅದರತ್ತ ಸೆಳೆಯುವ ಪ್ರಮುಖ ಅಂಶಗಳಾಗಿವೆ.