ಕರೋನಾ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಭಾರತ ಅಷ್ಟೇ ಅಲ್ಲ ಇಡೀ ವಿಶ್ವವೇ ದಿಗ್ಬ್ರಮೆಗೊಂಡಿದೆ. ಅಮೆರಿಕದಲ್ಲಿ ಬರೋಬ್ಬರಿ ಐದೂವರೆ ಲಕ್ಷ ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಪ್ರತಿದಿನ ಕನಿಷ್ಠ ಒಂದೂವರೆ ಸಾವಿರ ಜನರು ಸಾವನ್ನಪ್ಪುತ್ತಿದ್ದಾರೆ. ವಿಶ್ವದಾದ್ಯಂತ ಜನರು ಕರೋನಾ ಸೋಂಕು ಹರಡುತ್ತಿರುವುದಕ್ಕಿಂತ ಅಮೆರಿಕದಲ್ಲಿ ಹರಡುತ್ತಿರುವುದು ವಿಶ್ವದ ಆತಂಕವನ್ನು ಹೆಚ್ಚಾಗುವಂತೆ ಮಾಡಿದೆ. ವಿಶ್ವವೇ ಲಾಕ್‌ಡೌನ್ ಮಾಡಿದೆ. ಆದರೆ ಎಲ್ಲಾ ದೇಶಗಳು ಮುಂಜಾಗ್ರತಾ ಕ್ರಮಕೈಗೊಂಡು ನಂತರ ಲಾಕ್‌ಡೌನ್ ಮಾಡುವ ನಿರ್ಧಾರ ಮಾಡಿದ್ದವು. ಆದರೆ ಭಾರತ ಮಾತ್ರ ಮಾರ್ಚ್ 22ರಂದು ಜನತಾ ಕರ್ಫ್ಯೂ ಹೆಸರಲ್ಲಿ ಒಂದು ದಿನವನ್ನು ಮನೆಯಲ್ಲೇ ಕಳೆದ ಬಳಿಕ ಮಾರ್ಚ್ 23ರಂದು ಒಂದು ದಿನದ ಅಂತರದಲ್ಲಿ ಮಾರ್ಚ್ 24ರಂದು 21 ದಿನಗಳ ಲಾಕ್‌ಡೌನ್ ಎಂದು ಏಕಾಏಕಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದರು.
ದೆಹಲಿಯಿಂದ ಕಾಲ್ನಡಿಗೆಯಲ್ಲಿ ಹೊರಟಿದ್ದ ಕಾರ್ಮಿಕ ಹೃದಯಾಘಾತದಿಂದ ಸಾವನ್ನಪ್ಪಿದ ಬಳಿಕ ವಿಶ್ವಸಂಸ್ಥೆ ಮಾನವ ಹಕ್ಕುಗಳ ಅಧ್ಯಕ್ಷರು ಆತಂಕ ವ್ಯಕ್ತಪಡಿಸಿದ್ದರು. ಮುಂಜಾಗ್ರತಾ ಕ್ರಮಕೈಗೊಂಡ ಬಳಿಕ ಲಾಕ್‌ಡೌನ್ ಮಾಡಬೇಕಿತ್ತು ಎಂದಿದ್ದರು. ಆ ಬಳಿಕ ಕರ್ನಾಟಕ ಸೇರಿದಂತೆ ಲಾಕ್‌ಡೌನ್ ಹೊಡೆತಕ್ಕೆ ಸಿಲುಕಿ ಅಲ್ಲಲ್ಲಿ ಸಾವಿನ ಸುದ್ದಿಗಳು ಬಂದಿದ್ದವು. ಆದರೀಗ ಇಡೀ ಮನಕಲಕುವ ಘಟನೆ ನಡೆದಿದೆ.
ರಾಷ್ಟ್ರೀಯ ಸುದ್ದಿ ಮಾಧ್ಯಮಗಳು ವರದಿ ಮಾಡಿರುವಂತೆ ಲಾಕ್ಡೌನ್ನಿಂದಾಗಿ ಉತ್ತರ ಪ್ರದೇಶದಲ್ಲಿ ಅನ್ನ ಸಿಗದೆ ಮಹಿಳೆಯೊಬ್ಬಳು ತನ್ನ ಐವರು ಮಕ್ಕಳನ್ನು ಗಂಗಾ ನದಿಗೆ ಹಾಕಿ, ತಾನೂ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಭಾನುವಾರ ಈ ಘಟನೆ ನಡೆದಿದ್ದು, ಲಾಕ್ಡೌನ್ನಿಂದ ಅನ್ನ ಸಿಗದೆ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಸು ಮಾಡಿದ್ದಾಳೆ ಎನ್ನಲಾಗಿದೆ. ಜಹಗೀರ ಗ್ರಾಮದ ಮಂಜು ಎಂಬಾತನ ಪತ್ನಿ ಮನೆ ಖರ್ಚಿಗೆ ಗಂಡನ ಬಳಿಕ ಹಣ ಕೇಳಿದ್ದಳು. ಆದರೆ ದಿನಗೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದ ಈ ಕುಟುಂಬ ದಿನಗೂಲಿ ಸಿಗದ ಕಾರಣ ಹಣವಿರಲಲಿಲ್ಲ. ಗಂಡನ ಬಳಿ ಹಣವಿಲ್ಲದ ವಿಚಾರವಾಗಿ ಗಂಡ ಹೆಂಡತಿ ನಡುವೆ ಮಾತಿಗೆ ಮಾತು ಬೆಳೆದು ವಾಗ್ವಾದಕ್ಕೆ ಕಾರಣವಾಗಿತ್ತು. ಮಕ್ಕಳ ಹಸಿವಿನ ಎದುರು ಗಂಡನ ಸಂಕಷ್ಟವನ್ನು ಅರ್ಥಮಾಡಿಕೊಳ್ಳಲು ವಿಫಲವಾದ ಹೆಂಡತಿ, ತನ್ನ 5 ಮಕ್ಕಳನ್ನು ಕರೆದುಕೊಂಡು ಗಂಗಾ ನದಿ ತೀರಕ್ಕೆ ಹೋಗಿದ್ದಳು. ಬಳಿಕ ಬಲವಂತವಾಗಿ ಮಕ್ಕಳನ್ನು ನದಿಗೆ ತಳ್ಳಿ ನಂತರ ತಾನೂ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
8 ವರ್ಷದ ಮಗ ಶಿವಶಂಕರ್, 3 ವರ್ಷದ ಕೇಶವ್ ಪ್ರಸಾದ್, 6 ವರ್ಷದ ಬಾಲಕಿ ಸರಸ್ವತಿ ಹಾಗೂ 10 ಮತ್ತು 12 ವರ್ಷದ ಇಬ್ಬರು ಮಕ್ಕಳು ಸೇರಿ ಐವರು ಮಕ್ಕಳು ಮತ್ತು ಆ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವುದು ದೃಢವಾಗಿದೆ. ಪಕ್ಕದಲ್ಲೇ ಕೆಲಸ ಮಾಡುತ್ತಿದ್ದ ಜನರು ರಕ್ಷಣೆ ಮುಂದಾಗಿದ್ದರು ಆದರೆ ಸಾಧ್ಯವಾಗಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾ ಮಾಜಿಸ್ಟ್ರೇಟ್ (ಜಿಲ್ಲಾಧಿಕಾರಿ) ರಾಜೇಂದ್ರ ಪ್ರಸಾದ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಬಧನ್ ಸಿಂಗ್ ಭೇಟಿ ನೀಡಿದ್ದಾರೆ. ಬಳಿಕ ಮಾತನಾಡಿರುವ ಜಿಲ್ಲಾ ಮಾಜಿಸ್ಟ್ರೇಟ್ (ಜಿಲ್ಲಾಧಿಕಾರಿ) ರಾಜೇಂದ್ರ ಪ್ರಸಾದ್, ಸಾಯುವ ನಿರ್ಧಾರ ತೆಗೆದುಕೊಳ್ಳುವ ಮೊದಲು ಗಂಡ ಹೆಂಡತಿ ನಡುವೆ ಜಗಳವಾಗಿದೆ. ಆ ಬಳಿಕ ಐದು ಮಕ್ಕಳನ್ನು ನದಿಗೆ ಎಸೆಯುವ ನಿರ್ಧಾರ ಮಾಡಿದ್ದಾಳೆ. ಕೊನೆಗೆ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದಿದ್ದಾರೆ.
ಈಗಾಗಲೇ ಆ ಮಹಿಳೆಗೆ ಮಾನಸಿಕ ಸ್ಥಿತಿ ಸರಿ ಇರಲಿಲ್ಲ ಎನ್ನುವ ಮಾಹಿತಿಗಳು ಹರಿದಾಡುತ್ತಿದೆ. ಆದರೆ ನನ್ನ ಪತ್ನಿಗೆ ಮಾನಸಿಕವಾಗಿ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ಆಕೆ ಯಾಕೀ ನಿರ್ಧಾರ ತೆಗೆದುಕೊಂಡಳು ಎನ್ನುವುದು ಗೊತ್ತಾಗುತ್ತಿಲ್ಲ ಎಂದಿದ್ದಾನೆ. ಲಾಕ್ಡೌನ್ನಿಂದಾಗಿ ಕೂಲಿ ಸಿಗದ ಕಾರಣಕ್ಕೆ ಹಣವಿಲ್ಲದೆ, ಆಹಾರವಿಲ್ಲದೆ ಹಸಿದ ತಾಯಿಯೊಬ್ಬಳು ಹಸಿದ ಮಕ್ಕಳನ್ನು ನದಿಗೆ ತಳ್ಳಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದಕ್ಕೆ ಯಾರು ಹೊಣೆ ಎಂದು ಸಾಮಾಜಿಕ ಜಾಲ ತಾಣದಲ್ಲಿ ಸಾವಿರಾರು ಜನರು ಸರ್ಕಾರದ ವಿರುದ್ಧ ಕೆಂಡಕಾರಿದ್ದಾರೆ. #StopHungerDeaths ಎನ್ನುವ ಹ್ಯಾಷ್ ಟ್ಯಾಗ್ ಜೊತೆಗೆ ಸಾವಿರಾರು ಟ್ವಿಟ್ಟಿಗರು, ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೂಡಲೇ ಹಸಿವಿನಿಂದ ಸಾಯುತ್ತಿರುವ ಜನರ ರಕ್ಷಣೆಗೆ ಮುಂದಾಗಬೇಕೆಂದು ಆಗ್ರಹ ಮಾಡುತ್ತಿದ್ದಾರೆ.
ನಮ್ಮ ಕರ್ನಾಟಕದಲ್ಲೂ ರಾಯಚೂರಿನ 29 ವರ್ಷದ ಗಂಗಮ್ಮ ಎಂಬ ಮಹಿಳೆ ಲಾಕ್ ಡೌನ್ ಎಫೆಕ್ಟ್ ನಿಂದ ಮೂರು ದಿನಗಳ ಕಾಲ ಯಾವುದೇ ಅನ್ನ, ನೀರು ಸಿಗದೆ ಬಳ್ಳಾರಿ ಆಸ್ಪತ್ರೆಗೆ ದಾಖಲಾದ ಬಳಿಕ ಸಾವನ್ನಪ್ಪಿದ್ದಳು. ಆದರೆ ಸರ್ಕಾರ ಮಾಹಿತಿ ಪಡೆಯುವ ಮಾತನಾಡಿ ತೆಪ್ಪಗಾಗಿತ್ತು. ಆದರೆ ಆ ಮಹಿಳೆಗೆ ಬೇರೆ ಕಾಯಿಲೆ ಇತ್ತು, ಆ ಕಾರಣಕ್ಕಾಗಿ ಸತ್ತಿದ್ದಾಳೆ ಎಂದು ಹಾದಿ ತಪ್ಪಸುವ ಕೆಲಸವೂ ನಡೆದಿತ್ತು. ಇದೀಗ ಉತ್ತರ ಪ್ರದೇಶದ ಮಹಿಳೆ ಮೆಂಟಲ್ ಆರೋಗ್ಯ ಸರಿಯಾಗಿರಲಿಲ್ಲ ಎನ್ನುವ ವದಂತಿಯನ್ನು ಈಗಾಗಲೇ ಹರಿಯ ಬಿಡಲಾಗಿದೆ. ಸರ್ಕಾರದ ವಿರುದ್ಧ ಎದುರಾಗಬಹುದಾದ ಆರೋಪವನ್ನು ಬದಲಿಸುವ ಎಲ್ಲಾ ತಂತ್ರಗಾರಿಕೆಗಳು ನಡೆದಿವೆ ಎನ್ನಲಾಗ್ತಿದೆ. ಇನ್ನೂ 19 ದಿನಗಳ ಕಾಲ ಲಾಕ್‌ಡೌನ್ ಮುಂದುವರಿಯುತ್ತಿದ್ದು ಇನ್ನೂ ಏನೇನು ಸಂಕಷ್ಟಗಳು ಎದುರಾಗುತ್ತವೋ..? ಅದೆಷ್ಟು ಬಡವರು ಪ್ರಾಣ ಬಿಡುತ್ತಾರೋ ಎನ್ನುವ ಆತಂಕ ಮನೆ ಮಾಡಿದೆ.