ಕರೋನಾ ಸೋಂಕು ನಿವಾರಣೆಗಾಗಿ ಕಳೆದ ಮಾರ್ಚ್ 24 ರಿಂದಲೂ ದೇಶವನ್ನು ಲಾಕ್‌ಡೌನ್ ಮಾಡಿ ಕೇಂದ್ರ ಸರ್ಕಾರ ಆದೇಶ ಮಾಡಿದೆ. ಹೀಗಾಗಿ ಲಕ್ಷಾಂತರ ಕಾರ್ಮಿಕರು ಪರ ಸ್ಥಳಗಳಲ್ಲಿ ಸಿಲುಕಿಕೊಂಡು ಸ್ವಂತ ಸ್ಥಾನಗಳಿಗೆ ತೆರಳಲಾಗದೆ ಪರದಾಡುತ್ತಿದ್ದಾರೆ. ದಾನಿಗಳು ಕೊಟ್ಟರೆ ಉಂಟು ಇಲ್ಲದಿದ್ದರೆ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಎನ್ನುಂತಾಗಿದೆ ಬದುಕು. ಬಡವರ ಮಕ್ಕಳ ಅನ್ನ ಕಿತ್ತ ಕರೋನಾ ವೈರಸ್ ತನ್ನ ಅಟ್ಟಹಾಸ ಮುಂದುವರಿಸಿದೆ. ಈಗಾಗಲೇ ಮೇ 3 ರ ತನಕ ಲಾಕ್‌ಡೌನ್ ಘೋಷಣೆ ಮಾಡಿರುವ ಭಾರತ ಸರ್ಕಾರ, ಲಾಕ್‌ಡೌನ್ ಮುಂದುವರಿಸಬೇಕೇ? ಬೇಡವೇ? ಎನ್ನುವ ಬಗ್ಗೆ ಇನ್ನೂ ಕೂಡ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಒಂದು ವೇಳೆ ಕರೋನಾ ಹೆಮ್ಮಾರಿ ನಿಯಂತ್ರಣಕ್ಕೆ ಸಿಗದಿದ್ದರೆ ಮತ್ತೊಂದಿಷ್ಟು ದಿನಗಳ ಕಾಲ ದೇಶವನ್ನು ಲಾಕ್‌ಡೌನ್ ಮಾಡುವ ಅನಿವಾರ್ಯತೆ ಎದುರಾದರೂ ಅಚ್ಚರಿಯಿಲ್ಲ.
ಬೆಂಗಳೂರಿನ 8ನೇ ಮೈಲಿ ಬಳಿ ಅನ್ನ ಆಹಾರ ಸಿಗದೆ ವೃದ್ಧ ಭಿಕ್ಷುಕಿ ಒಬ್ಬರು ಸಾವನ್ನಪ್ಪಿದ ಘಟನೆ ಕೆಲವು ದಿನಗಳ ಹಿಂದೆ ವರದಿಯಾಗಿತ್ತು. ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದ ವೃದ್ದ ಮಹಿಳೆ, ಲಾಕ್‌ಡೌನ್‌ನಿಂದ ಭಿಕ್ಷೆ ಸಿಗದೆ ಸಾವನ್ನಪ್ಪಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿತ್ತು. ಕಟ್ಟಡದ 2ನೇ ಮಹಡಿಯಲ್ಲಿ ಮಲಗಿದ್ದ ವೃದ್ದೆಗೆ ಯಾರೂ ಕೂಡ ಆಹಾರ ಕೊಡಲು ಸಾಧ್ಯವಾಗಿರಲಿಲ್ಲ. ಹಾಗಾಗಿ ವೃದ್ಧ ಮಹಿಳೆ ಮಲಗಿದ್ದಲ್ಲಿಯೇ ಪ್ರಾಣ ಬಿಟ್ಟಿದ್ದರು. ವೃದ್ಧ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದೇ ರೀತಿ ಹಲವಾರು ಕಡೆಗಳಲ್ಲಿ ವೃದ್ಧರು, ಅಶಕ್ತರು, ಭಿಕ್ಷೆ ಬೇಡಿಯೇ ಜೀವನ ನಡೆಸುತ್ತಿದ್ದ ಸಾವಿರಾರು ಮಂದಿ ಸಂಕಷ್ಟಕ್ಕೆ ಸಿಲುಕಿದ್ದು, ಅಂತಿಮವಾಗಿ ಊಟೋಪಚಾರ ಸಿಗದೆ ನಿತ್ರಾಣರಾಗಿ ಸಾವಿಗೆ ಬಲಿಯಾಗುವ ಎಲ್ಲಾ ಸಾಧ್ಯತೆಗಳೂ ಇವೆ ಎನ್ನಲಾಗುತ್ತಾ ಇದೆ. ಸಾಕಷ್ಟು NGOಗಳು ಬಡವರಿಗೆ ಆಹಾರ ಒದಗಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಆಹಾರ ಸೇವಿಸಿ ಯಾವುದಾದರು ಕಟ್ಟಡದ ಮೇಲೆ ಮಲಗಿದ್ದರೆ ಆಹಾರವೂ ಸಿಗದೆ ನಿಶಕ್ತರಾಗಿ, ಆಹಾರ ಪಡೆದುಕೊಳ್ಳಲೂ ಸಾಧ್ಯವಾಗದಿದ್ದರೆ ಅಂಥಹವರ ಪರಸ್ಥಿತಿ ಚಿಂತಾಜನಕವಾಗುವ ಸಂದರ್ಭ ಎದುರಾಗಿದೆ.
ಬೆಂಗಳೂರು ಸೇರಿದಂತೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಭಿಕ್ಷೆ ಬೇಡುತ್ತಾ, ಲೈಂಗಿಕ ಅಲ್ಪ ಸಂಖ್ಯಾತರಾಗಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಮಂಗಳಮುಖಿಯರು ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ದಾನಿಗಳು ನೀಡುವ ಊಟಕ್ಕಾಗಿ ಎದುರು ನೋಡುವಂತಾಗಿದೆ. ಬಡ ಕಟ್ಟಡ ಕಾರ್ಮಿಕರು, ಕೂಲಿ ಕಾರ್ಮಿಕರು ಯಾರಾದರೂ ಅನ್ನ ನೀಡಲು ಬರಬಹುದು ಎನ್ನುವ ಆಸೆಗಣ್ಣಿನಿಂದ ಕಾಯುವ ಪರಿಸ್ಥಿತಿ ಎದುರಾಗಿದೆ. ಕಟ್ಟಡ ಕಾರ್ಮಿಕರು ಒಂದೊತ್ತು ಊಟವಿಲ್ಲದೆ ಬದುಕುತ್ತಿದ್ದಾರೆ. ಆದರೆ ಅವರ ಜೊತೆಗಿರುವ ಸಣ್ಣ ಪುಟ್ಟ ಮಕ್ಕಳು ಹಸಿವಿನಿಂದ ಬಳಲುತ್ತಿವೆ. ಮೊದಲೇ ಪೌಷ್ಠಿಕಾಂಶ ಇಲ್ಲದ ಆಹಾರ ಸೇವಿಸುವ ಈ ಮಕ್ಕಳ ಈಗಿನ ಪರಿಸ್ಥಿತಿಯಂತೂ ಚಿಂತಾಜನಕವಾಗಿದೆ.

ಕಾರ್ಮಿಕ ಗರ್ಭಿಣಿಯರು ಪೌಷ್ಠಿಕಾಂಶ ಆಹಾರ ತಿನ್ನಬೇಕು ಎಂದು ಸರ್ಕಾರವೇ ಒದಗಿಸುತ್ತದೆ. ಆದರೆ ಲಾಕ್‌ಡೌನ್‌ನಿಂದಾಗಿ ಸಾಮಾನ್ಯರು ಆಹಾರ ಪಡೆಯುವುದೇ ಹರಸಾಹಸವಾಗಿದೆ. ದುಡಿದು ತಿನ್ನುವ ಮನಸ್ಸಿದ್ದರೂ ಕೆಲಸವಿಲ್ಲದೆ ಕೂಳು ಪಡೆಯಲು ಸಾಧ್ಯವಾಗುತ್ತಿಲ್ಲ, ಹೆರಿಗೆ ಸಮಯದಲ್ಲಿ ತಾಯಿಗೆ ಸಂಕಷ್ಟ ಉಂಟಾಗುವ ಸಾಧ್ಯತೆಯಿದೆ. ಅಥವಾ ಗರ್ಭದಲ್ಲಿರುವ ಮಗು ಹುಟ್ಟಿದ ಬಳಿಕ ಸಾಕಷ್ಟು ಸಮಸ್ಯೆಗೆ ಸಿಲುಕು ಸಾಧ್ಯತೆ ಹೆಚ್ಚಾಗಿದೆ. ಬಡ ಕೂಲಿ ಕಾರ್ಮಿಕರು ಸೇರಿ ಅನ್ನಕ್ಕಾಗಿ ಪರದಾಡುವ ಜನರಿಗೆ ಧವಸ ಧಾನ್ಯ ವಿತರಣೆಗೆ ಅಧಿಕಾರಿಗಳು ಬಿಪಿಎಲ್ ಕಾರ್ಡ್ ಕೇಳುತ್ತಿದ್ದಾರೆ ಎನ್ನುವ ಮಾತುಗಳು ಕೂಡಾ ಹಲವೆಡೆ ಕೇಳಿಬಂದಿವೆ.
ನೂರಾರು ಕಾರ್ಮಿಕ ಕುಟುಂಬಗಳು ಕಟ್ಟಡ ನಿರ್ಮಾಣ ಕೆಲಸದಲ್ಲಿ ನಿರತವಾಗಿದ್ದವು. ಗುತ್ತಿಗೆದಾರನನ್ನೇ ನಂಬಿಕೊಂಡಿದ್ದ ಈ ಕುಟುಂಬಗಳು ಅನಾಥವಾಗಿದೆ. ಗುತ್ತಿಗೆದಾರನೇ ಸಂಪರ್ಕಕ್ಕೆ ಸಿಗುತ್ತಿಲ್ಲ. ಇನ್ನೂ ಬಿಲ್ಡರ್‌ಗಳನ್ನು ಸಂಪರ್ಕ ಮಾಡಲು ಸಾಧ್ಯವಾಗದೆ ಅಸಹಾಯಕ ಸ್ಥಿತಿಯಲ್ಲಿದ್ದಾರೆ. ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್ ಒಳಗೆ ಇರುವ ಸಾವಿರಾರು ಕುಟುಂಬಗಳು ಶೆಡ್‌ಗಳಲ್ಲಿ ವಾಸ ಮಾಡುತ್ತಿವೆ. ಅನ್ನಕ್ಕಾಗಿ ಪರಿತಪಿಸುತ್ತಿವೆ. ಇವರಿಗೆ ಊಟ ಒದಗಿಸುವ ಕೆಲಸ ಆಗಬೇಕು.
ಸರ್ಕಾರದಿಂದ ಯೋಜನೆಗಳು ಘೋಷಣೆ ಆಗುತ್ತವೆ. ಆದರೆ ಆ ಯೋಜನೆಗಳನ್ನು ಜನರಿಗೆ ತಲುಪಿಸಬೇಕಾದ ಕರ್ತವ್ಯ ಕ್ಷೇತ್ರದ ಶಾಸಕ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಜವಾಬ್ದಾರಿಯಾಗಿದೆ. ಸರ್ಕಾರ ಒಂದು ಕ್ಷೇತ್ರಕ್ಕೆ 25 ಲಕ್ಷ ಹಣವನ್ನು ಬಿಡುಗಡೆ ಮಾಡಲು ನಿರ್ಧಾರ ಮಾಡಿದೆ. ದಿನಕ್ಕೆ ಒಂದು ಲಕ್ಷದಂತೆ ವೆಚ್ಚ ಮಾಡಿದರೂ ಇಡೀ ಕ್ಷೇತ್ರದಲ್ಲಿ ಅನ್ನವಿಲ್ಲದೆ ಇರುವ ಜನರ ಜವಾಬ್ದಾರಿ ತೆಗೆದುಕೊಳ್ಳಬಹುದು. ಆದರೆ 25 ಲಕ್ಷದಲ್ಲಿ ತಮಗಾಗಿ ಎಷ್ಟು ಉಳಿಸಬಹುದು ಎನ್ನುವ ಮನಸ್ಥಿತಿ ರಾಜಕೀಯ ನಾಯಕರಿಗೆ ಇಲ್ಲದಿದ್ದರೆ ಜನರು ಹಸಿವಿನಿಂದ ಸಾಯುವುದು ತಪ್ಪಲಿದೆ. ಒಂದು ವೇಳೆ ಇಲ್ಲೂ ರಾಜಕಾರಣಿಗಳು ತಮ್ಮ ಹಳೇ ಚಾಳಿ ಮುಂದುವರೆಸಿದ್ದೇ ಆದರೆ ಕೋವಿಡ್ – 19ನಿಂದ ಜನರ ಸಾಯುವುದಕ್ಕಿಂತ ಹಸಿವಿನಿಂದ ಸಾವನ್ನಪ್ಪುವ ದಿನಗಳು ಎದುರಾಗುವ ಸಾಧ್ಯತೆ ಹೆಚ್ಚಿದೆ.