ಕರೋನಾ ಸಾಂಕ್ರಾಮಿಕ ರೋಗದ ನಡುವೆ ದೇಶದ ಕೆಲವು ರಾಜ್ಯಗಳಲ್ಲಿ ಹಕ್ಕಿ ಜ್ವರದ ಭೀತಿ ಹೆಚ್ಚಾಗಿದೆ. ಕರ್ನಾಟಕದ ನೆರೆ ರಾಜ್ಯ ಕೇರಳದ ಆಲಪ್ಪುಳ ಮತ್ತು ಕೊಟ್ಟಾಯಂ ಜಿಲ್ಲೆಗಳು ಸೇರಿದಂತೆ ಇತರೆ ಭಾಗಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡು ಅಂದಾಜು ಒಂದು ಲಕ್ಷ ಪಕ್ಷಿಗಳು ಸಾವನ್ನಪ್ಪಿವೆ ಎಂದು ವರದಿಯೊಂದು ತಿಳಿಸಿದೆ.
ಇದರಿಂದ ಕೇರಳದಾದ್ಯಂತ ಹೈಅಲರ್ಟ್ ಘೋಷಣೆ ಮಾಡಲಾಗಿದೆ. ಹಿಮಾಚಲ ಪ್ರದೇಶದ ಪೋನ್ಗಾ ಡ್ಯಾಂ ಕೆರೆಯ ಆಸುಪಾಸಿನಲ್ಲಿ 1,800 ಕ್ಕೂ ಹೆಚ್ಚು ಪಕ್ಷಿಗಳು ಸತ್ತಿರುವುದು ಕಂಡುಬಂದಿದೆ. ರಾಜಸ್ಥಾನದಲ್ಲಿಯೂ ಇದರ ಬಿಸಿ ತಟ್ಟಿದ್ದು 250 ಕಾಗೆಗಳ ಮೃತದೇಹ ಪತ್ತೆಯಾಗಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕೇರಳ ಮತ್ತು ಕರ್ನಾಟಕದ ಗಡಿನಾಡ ಜಿಲ್ಲೆಗಳಲ್ಲಿ ಈ ಬಗ್ಗೆ ಹೆಚ್ಚು ನಿಗಾ ಇಡಲಾಗಿದೆ. ಕೇರಳದಲ್ಲಿ ಪಕ್ಷಿಜ್ವರ ವರದಿಯಾದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಗೆಗಳು ಸತ್ತಿರುವುದು ವರದಿಯಾಗಿರುವುದನ್ನು ರಾಜ್ಯಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಮೃತಪಟ್ಟ ಕಾಗೆಗಳನ್ನು ವೈಜ್ಞಾನಿಕ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ವೈದ್ಯಕೀಯ ಸಚಿವ ಸುಧಾಕರ್ ಮಾಧ್ಯಮದೊಂದಿಗೆ ಹೇಳಿದ್ದಾರೆ.
ಕೋಳಿ ಉದ್ಯಮಕ್ಕಿಲ್ಲ ತೊಂದರೆ
ದೇಶದಲ್ಲಿ ಹಕ್ಕಿ ಜ್ವರದ ಭೀತಿ ಎದುರಾದ ಬೆನ್ನಲ್ಲೆ ಕುಕ್ಕುಟೋದ್ಯಮಕ್ಕೆ (Poultry Farming) ಆತಂಕದಲ್ಲಿದೆ. ಕರೋನಾ ಕಾರಣದಿಂದಾಗಿ ಉದ್ಯಮ ಈಗಾಗಲೇ ಸಾಕಷ್ಟು ಕುಂಠಿತಗೊಂಡಿದೆ. ಆರ್ಥಿಕವಾಗಿ ಚೇತರಿಸಿಕೊಳ್ಳುವುದು ಕಷ್ಟವಾಗಿದೆ. ರಾಜ್ಯದಲ್ಲೀಗ ಎಲ್ಲಿಯೂ ಹಕ್ಕಿ ಜ್ವರ ಇರುವುದು ಧೃಡಪಟ್ಟಿಲ್ಲ. ಉದ್ಯಮವು ಎಂದಿನಂತೆ ನಡೆಯುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಹಾಗೂ ತಳಿ ಸಾಕಾಣಿಕೆದಾರರ ಸಂಘದ ಅಧ್ಯಕ್ಷರಾದ ಸುಶಾಂತ್ ರೈ ತಿಳಿಸಿದ್ದಾರೆ.
ಅಲ್ಲದೆ, ಚಿಕನ್ ಪ್ರಿಯರು ಕೂಡ ಹೆದರುವ ಅವಶ್ಯಕತೆಯಿಲ್ಲ. ಕೋಳಿ ಮಾಂಸವನ್ನು ಶೇಕಡಾ 70 ಡಿಗ್ರಿ ಸೆಲ್ಸಿಯಸ್ ನಷ್ಟು ಅಧಿಕ ತಾಪಮಾನದಲ್ಲಿ ಕುದಿಸಿ ಸೇವಿಸಬಹುದು ಯಾವುದೇ ತೊಂದರೆ ಇಲ್ಲ ಎಂದು ವಿಶ್ವಸಂಸ್ಥೆ ಕೂಡ ಹೇಳಿದೆ. ಮೊಟ್ಟೆ ಚಿಕನ್ ಸೇವಿಸುವುದರಲ್ಲಿ ಯಾವುದೇ ರೀತಿಯ ಅಪಾಯವಿಲ್ಲ, ಜನ ಭಯಪಡುವ ಅವಶ್ಯಕತೆಯಿಲ್ಲ ಎಂದು ತಜ್ಞರು ಹೇಳಿದ್ದಾರೆ.