ಇನ್ನೇನು ಮುಂದಿನ ವಾರದಿಂದ ಇಸ್ಲಾಮಿಕ್ ಕ್ಯಾಲೆಂಡರ್‌ನ ರಂಝಾನ್ ತಿಂಗಳ ಉಪವಾಸ ವೃತಕ್ಕೆ ಜಗತ್ತಿನಾದ್ಯಂತ ಮುಸ್ಲಿಮರು ಲಾಕ್‌ಡೌನ್ ಹಾಗೂ ಕರೋನಾ ಭೀತಿ ನಡುವೆಯೇ ಸಿದ್ಧರಾಗುತ್ತಿದ್ದಾರೆ. ಈ ಮಧ್ಯೆ ಮೇ 3ರ ವರೆಗೆ ದೇಶಾದ್ಯಂತ ಲಾಕ್‌ಡೌನ್ ಇರೋದರಿಂದ ಆ ದಿನಗಳವರೆಗೆ ಒಂದಿಷ್ಟು ಷರತ್ತುಗಳನ್ನ ಭಾರತ ಸರಕಾರದ ಆದೇಶದ ಅನ್ವಯ ರಾಜ್ಯ ಅಲ್ಪಸಂಖ್ಯಾತ ಕಲ್ಯಾಣ, ವಕ್ಫ್ ಹಾಗೂ ಹಜ್ಜ್ ಇಲಾಖೆ ರಾಜ್ಯ ಎಲ್ಲಾ ಮಸೀದಿಗಳಿಗೂ ನೊಟೀಸ್ ರವಾನಿಸಿದ್ದು, ಆದೇಶ ಪಾಲಿಸುವಂತೆ ಸೂಚಿಸಿದೆ.
1. ದಿನದ ಐದು ಹೊತ್ತಿನ ನಮಾಝ್ ಸಹಿತ ಶುಕ್ರವಾರದ ಜುಮಾ ಹಾಗೂ ತರಾವೀಹ್ (ರಂಝಾನ್ ತಿಂಗಳ ರಾತ್ರಿ ವೇಳೆ ನಡೆಯುವ ವಿಶೇಷ ಸಾಮೂಹಿಕ ಪ್ರಾರ್ಥನೆ) ನಮಾಝ್ ನಡೆಸುವಂತಿಲ್ಲ.
2. ಮಸೀದಿಯಲ್ಲಿರುವ ಇಮಾಮ್ ಆಗಲೀ, ಸಿಬ್ಬಂದಿಗಳಾಗಲೀ ಶುಕ್ರವಾರದ ಜುಮಾ ಹಾಗೂ ತರಾವೀಹ್ ನಮಾಝ್‌ಗೆ ಕರೆಯುವಂತಿಲ್ಲ
3. ದಿನದ ಐದು ಹೊತ್ತು ಕರೆ ನೀಡುವ ಅಝಾನ್ ಕರೆಯನ್ನು ಕಡಿಮೆ ಡೆಸಿಬಲ್ ಬಳಸಿ ಕರೆ ನೀಡುವುದು. ಅಲ್ಲದೇ ಇಮಾಮ್ ಅಥವಾ ಸಿಬ್ಬಂದಿ ಶಹರಿ (ಮುಂಜಾವ ಉಪವಾಸ ವೃತ ಕೈಗೊಳ್ಳುವ ಸಮಯ) ಕೊನೆಯ ಸಮಯ ಹಾಗೂ ಇಫ್ತಾರ್ (ಸೂರ್ಯಾಸ್ತದ ಸಮಯ ವೃತ ಕೈಬಿಡುವ ಸಮಯ) ಆರಂಭದ ಸಮಯದಲ್ಲಿ ಯಾವುದೇ ನಮಾಝ್, ವಿಶೇಷ ಉಪನ್ಯಾಸ, ವಿಶೇಷ ಪ್ರಾರ್ಥನೆ ಇರುವುದಿಲ್ಲ ಎಂದು ಘೋಷಿಸಬೇಕು
4. ಇನ್ನು ಮಸೀದಿಗಳಲ್ಲಿ ಯಾವುದೇ ಕಾರಣಕ್ಕೂ ಸಾರ್ವಜನಿಕರಿಗೆ ಶಹರಿ ಅಥವಾ ಇಫ್ತಾರ್‌ಗಳನ್ನಾಗಲೀ ಸಂಘಟಿಸುವಂತಿಲ್ಲ.
5. ಮಸೀದಿ ವಠಾರದಲ್ಲಿ ಪಾನೀಯ ಇಲ್ಲವೇ ಇಫ್ತಾರ್ ಸಂಬಂಧಿಸಿ ಯಾವುದೇ ವ್ಯವಸ್ಥೆ ಮಾಡುವಂತಿಲ್ಲ
6. ಮಸೀದಿ ಅಥವಾ ದರ್ಗಾ ವಠಾರಗಳಲ್ಲಿ ರಂಝಾನ್ ನಿಮಿತ್ತ ಯಾವುದೇ ಅಂಗಡಿಗಳನ್ನು ತೆರೆಯುವಂತಿಲ್ಲ.

ವಕ್ಫ್ ಇಲಾಖೆ ಈ 6 ಸೂಚನೆಗಳನ್ನು ಪಾಲಿಸುವಂತೆ ರಾಜ್ಯದ ಎಲ್ಲಾ ಮಸೀದಿಗಳ ಮುಖಂಡರಿಗೆ ತಿಳಿಸಿದೆ. ಯಾವುದೇ ರೀತಿಯಲ್ಲಿ ಕಾನೂನು ಉಲ್ಲಂಘಿಸುವ ಪ್ರಯತ್ನ ಮಾಡಿದ್ದಲ್ಲಿ ಗಂಭೀರವಾಗಿ ಪರಿಗಣಿಸುವ ಎಚ್ಚರಿಕೆಯನ್ನೂ ವಕ್ಫ್ ಇಲಾಖೆ ನೀಡಿದೆ. ಸದ್ಯ ಹೊರಡಿಸಿರುವ ಆದೇಶ ಮೇ 3ರ ವರೆಗೆ ಜಾರಿಯಲ್ಲಿದ್ದು, ಮುಂದಿನ ನಿರ್ಧಾರ ಆ ನಂತರವೇ ಗೊತ್ತಾಗಲಿದೆ.
ಇದೇ ತಿಂಗಳ 24 ಅಥವಾ 25 ರಿಂದ ರಂಝಾನ್ ತಿಂಗಳು ಆರಂಭವಾಗಲಿದ್ದು, ಜಗತ್ತಿನಾದ್ಯಂತ ಕೋಟ್ಯಾಂತರ ಮುಸ್ಲಿಮರು ಉಪವಾಸ ವೃತ ಕೈಗೊಳ್ಳಲಿದ್ದಾರೆ. ಇಸ್ಲಾಮಿನ 5 ಮೂಲ ನಂಬಿಕೆಗಳಲ್ಲಿ ರಂಝಾನ್ ತಿಂಗಳ ಉಪವಾಸ ವೃತಾಚರಣೆಯು ಕಡ್ಡಾಯ ನಂಬಿಕೆಯಾಗಿದೆ. ಈ ಬಾರಿ ಲಾಕ್‌ಡೌನ್, ಕರೋನಾ ಭೀತಿಯ ನಡುವೆಯೇ ಉಪವಾಸ ಆಚರಿಸಲು ಮುಸ್ಲಿಮರು ಮುಂದಾಗಿದ್ದು, ಮನೆಯಲ್ಲಿಯೇ ಇದ್ದು ಸುರಕ್ಷಿತರಾಗಿ ಉಪವಾಸ ವೃತಾಚರಣೆ, ಶಹರಿ, ಇಫ್ತಾರ್‌ಗಳನ್ನ ಕುಟುಂಬಿಕರ ಜೊತೆ ಆಚರಿಸಬೇಕಿದೆ. ಒಂದು ತಿಂಗಳ ಉಪವಾಸ ವೃತಾಚರಣೆ ಈದುಲ್ ಫಿತ್ರ್ ಹಬ್ಬದೊಂದಿಗೆ ಸಂಪನ್ನಗೊಳ್ಳುತ್ತದೆ.





