ಕರೋನಾ ಸೋಂಕಿನ ಪ್ರಕರಣ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಮತ್ತೆ ಲಾಕ್ಡೌನ್ ಹೇರುತ್ತೆ ಎನ್ನುವ ಊಹಾಪೋಹಗಳು ರಾಜ್ಯದ ಜನತೆಯ ನಡುವೆ ಹರಿದಾಡುತ್ತಿತ್ತು. ಇಂದು ಆ ಎಲ್ಲಾ ಗೊಂದಲಗಳಿಗೆ ರಾಜ್ಯ ಕಂದಾಯ ಸಚಿವ ಆರ್ ಅಶೋಕ್ ತೆರೆ ಎಳೆದಿದ್ದಾರೆ.
ಬೆಂಗಳೂರು ಶಾಸಕರ ಹಾಗೂ ಸಂಸದರ ಜೊತೆಗೆ ಸಭೆ ನಡೆಸಿದ ಬಳಿಕ ಮಾಧ್ಯಮಗೋಷ್ಟಿ ನಡೆಸಿದ ಆರ್ ಅಶೋಕ್ ಸರ್ಕಾರ ಯಾವುದೇ ಕಾರಣಕ್ಕೂ ಲಾಕ್ಡೌನ್ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಅಗತ್ಯ ಬಿದ್ದರೆ ಸೀಲ್ಡೌನ್ ಮಾಡಲಾಗುತ್ತದೆ ಆದರೆ ಲಾಕ್ಡೌನ್ ಮಾಡುವುದಿಲ್ಲ, ಈ ಕುರಿತು ಸರ್ಕಾರ ಸ್ಪಷ್ಟ ನಿಲುವು ತಳೆದಿದೆ ಎಂದು ಹೇಳಿದ್ದಾರೆ.
ಆಸ್ಪತ್ರೆಗಳಲ್ಲಿ ಹಾಸಿಗೆ ಕೊರತೆ ಕಂಡು ಬರುತ್ತಿರುವ ಹಿನ್ನಲೆಯಲ್ಲಿ ರೋಗ ಲಕ್ಷಣ ಇಲ್ಲದ ಸೋಂಕಿತರನ್ನು ಆಸ್ಪತ್ರೆಯಿಂದ ತೆರವುಗೊಳಿಸಿ ಹೋಟೆಲ್ ರೂಮುಗಳಲ್ಲಿ ತಂಗಿಸಲಾಗುವುದು, ರೋಗ ಲಕ್ಷಣ ಇರುವ ಹಾಗೂ ಚಿಕಿತ್ಸೆ ಅಗತ್ಯ ಇರುವ ಸೋಂಕಿತರನ್ನು ಮಾತ್ರ ಆಸ್ಪತ್ರೆಯಲ್ಲಿ ಇರಿಸಲಾಗುವುದು ಎಂದು ಹೇಳಿದ್ದಾರೆ.
ಕೋವಿಡ್ ಚಿಕಿತ್ಸೆಗಳಿಗಾಗಿ ಮುಂದಿನ ಒಂದು ವಾರದಲ್ಲಿ 7,300 ಹೊಸ ಹಾಸಿಗೆಗಳನ್ನು ನಿರ್ಮಿಸಲಾಗುವುದು, ಕೋವಿಡ್ ಸೆಂಟರ್ಗಳ ಕುರಿತು ನೀಲ ನಕ್ಷೆ ತಯಾರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಸಾಕಷ್ಟು ಬಡ ಜನರಿಗೆ ಲಾಕ್ಡೌನ್ನಿಂದ ಸಮಸ್ಯೆ ಎದುರಾಗುತ್ತದೆ. ಅಲ್ಲದೆ ಕರೋನಾ ಸೋಂಕು ಯಾವಾಗ ಅಂತ್ಯಗೊಳ್ಳುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ. ಹಾಗಾಗಿ ಕೋವಿಡ್ ಜೊತೆಗೆ ಅಭಿವೃದ್ಧಿ ಕಾರ್ಯ ಸಾಗಬೇಕು ಎಂಬುದು ಸರ್ಕಾರದ ಉದ್ದೇಶ ಎಂದಿರುವ ಸಚಿವರು, ಕರೋನಾದ ಜೊತೆಗೆ ಬದುಕಲು ಕಲಿಯಿರಿ ಎಂಬ ಪ್ರಧಾನಿ ಮಾತನ್ನೇ ಪುನರುಚ್ಛಿಸಿದ್ದಾರೆ.