ಪ್ರಧಾನಿಯಾಗಿ ನರೇಂದ್ರ ಮೋದಿಯವರ ಎರಡನೇ ಅವಧಿಯ ಮೊದಲ ವರ್ಷ ಬಹುತೇಕ ಪೂರ್ಣಗೊಂಡಿದೆ. ನಿರಂತರ ಆರು ವರ್ಷದ ಆಡಳಿತದ ಸಂಭ್ರಮಾಚರಣೆಗೆ ಅಡ್ಡಿಯಾಗಿರುವ ಕರೋನಾ ಸೋಂಕಿನ ಆತಂಕದ ನಡುವೆಯೂ ಈ ಅವಧಿಯ ಮೊದಲ ವರ್ಷದ ಕುರಿತ ರಿಪೋರ್ಟ್ ಕಾರ್ಡ್ ಕುರಿತ ಚರ್ಚೆ ಆರಂಭವಾಗಿದೆ.
ಮೋದಿಯವರ ಮೊದಲ ಅವಧಿಗೆ ಹೋಲಿಸಿದರೆ, ಎರಡನೇ ಅವಧಿ ಆರಂಭವಾಗಿದ್ದೇ ಸಾಕಷ್ಟು ಸವಾಲು ಮತ್ತು ಸಂಕಷ್ಟಗಳ ಮೂಲಕವೇ. ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ, ಆರ್ಥಿಕ ಕುಸಿತ, ರೂಪಾಯಿ ಅಪಮೌಲ್ಯ, ಇಂಧನ ಬೆಲೆ ಏರಿಕೆ, ನಿಯಂತ್ರಣಕ್ಕೆ ಸಿಗದ ಹಣದುಬ್ಬರ, ಸಾಮಾಜಿಕ ಅಶಾಂತಿ ಮತ್ತು ಆತಂಕದ ವಾತಾವರಣದ ನಡುವೆ ಭಾರೀ ಜನಾದೇಶದ ಮೂಲಕ ಮೋದಿ ದೇಶದ ಅಧಿಕಾರದ ಚುಕ್ಕಾಣಿ ಹಿಡಿದಿದ್ದರು.
ಆದರೆ, ಮೊದಲ ಅವಧಿಯ ಆರಂಭ ಮತ್ತು ಆ ಬಳಿಕದ ಐದು ವರ್ಷಗಳ ಅಧಿಕಾರವಧಿಯಲ್ಲಿ ಬಹುತೇಕ ದೊಡ್ಡ ದೊಡ್ಡ ಕನಸುಗಳನ್ನು, ಘೋಷಣೆಗಳನ್ನು ಬಿತ್ತುವ ಮೂಲಕ ಮೋದಿಯವರು ದೇಶದ ಜನರನ್ನು ಸಮ್ಮೋಹನಗೊಳಿಸುವಲ್ಲಿ ಯಶಸ್ವಿಯಾಗಿದ್ದರು. ನೋಟು ರದ್ದತಿಯಂತಹ ತೀರಾ ದುರಂತಮಯ ಹೆಜ್ಜೆ, ಜಿಎಸ್ ಟಿ ಜಾರಿಯಂತಹ ಅವಸರದ ಕ್ರಮಗಳ ಹೊರತಾಗಿಯೂ ಹಲವು ಆಕರ್ಶಕ ಹೆಸರಿನ ಅಭಿಯಾನಗಳು, ಕಾರ್ಯಕ್ರಮಗಳ ಮೂಲಕ ಜನರಲ್ಲಿ ಭರವಸೆ ಬತ್ತಿಹೋಗದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಹಾಗಾಗಿಯೇ ನೋಟು ರದ್ದತಿಯಂತಹ ದಿವಾಳಿ ಯೋಜನೆಯ ಬಗೆಗಿನ ಜನಸಾಮಾನ್ಯರ ಆಕ್ರೋಶ, ಹತಾಶೆಯನ್ನೂ ಮೀರಿ ಚುಣಾವಣೆಯಲ್ಲಿ ಅಭೂತಪೂರ್ವ ಜನಾದೇಶ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ಆದರೆ, ಎರಡನೇ ಪರ್ವದ ಆರಂಭದಲ್ಲೇ ಆರ್ಥಿಕ ಸಂಕಷ್ಟದಿಂದ ದೇಶವನ್ನು ಪಾರುಮಾಡುವುದು ತಮ್ಮ ಕೈಮೀರಿದ ಸಂಗತಿ ಎಂಬುದು ಅರ್ಥವಾದಂತೆ ಮೋದಿಯವರು ದಿಢೀರನೇ ಹೊಸ ವರಸೆಯ ಆಡಳಿತ ಶುರುವಿಟ್ಟುಕೊಂಡರು. ಅಂತಹ ಹೊಸ ವರಸೆಯ ಭಾಗವಾಗಿಯೇ ಜಮ್ಮು-ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು ತೀರ್ಮಾನ, ಕೋಮು ಆಧಾರಿತ ಪೌರತ್ವ ಕಾಯ್ದೆ ಜಾರಿ ಮತ್ತು ಧರ್ಮದ ಆಧಾರದ ಮೇಲೆ ಪೌರತ್ವ ನೋಂದಣಿ ಆರಂಭ, ತ್ರಿವಳಿ ತಲಾಖ್ ಕುರಿತ ಕಾನೂನು ಜಾರಿ, ಅಯೋಧ್ಯಾ ರಾಮಮಂದಿರ ನಿರ್ಮಾಣ ಟ್ರಸ್ಟ್ ರಚನೆಯಂತಹ ಭಾರತೀಯ ಜನತಾ ಪಕ್ಷದ ಕಟ್ಟಾ ಹಿಂದೂರಾಷ್ಟ್ರ ನಿರ್ಮಾಣದ ಅಜೆಂಡಾವನ್ನು ನಿಜ ಮಾಡುವ ಸಾಲು ಸಾಲು ಕ್ರಮಗಳನ್ನು ಕೈಗೊಳ್ಳಲಾಯಿತು.
ಆ ಮೂಲಕ, ಸ್ವತಃ ತಮ್ಮ ಮತ್ತು ತಮ್ಮ ಸಚಿವ ಸಂಪುಟದ ವೈಫಲ್ಯ ಮತ್ತು ಅಜ್ಞಾನವನ್ನು ಬೆತ್ತಲು ಮಾಡುತ್ತಿದ್ದ ಹಾಗೂ ಆರ್ಥಿಕತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಯಾವ ಕ್ರಮಗಳನ್ನೂ ಕೈಗೊಳ್ಳದ ತಮ್ಮ ಆರ್ಥಿಕ ನೀತಿ ಶೂನ್ಯ ಆಡಳಿತದ ಹೀನಾಯ ಸ್ಥಿತಿಯನ್ನು ತೇಪೆ ಹಾಕಲು ಹಿಂದುತ್ವದ ಅಜೆಂಡಾ ಜಾರಿಗೆ ತಂದರು. ಆದಾಗ್ಯೂ ಆರ್ಥಿಕ ಸಂಕಷ್ಟದ ಕಂದಕ ಹಿಗ್ಗುತ್ತಲೇ ಹೋಯಿತು. ದಿನಬಳಕೆ ವಸ್ತುಗಳ ಬೆಲೆ ಗಗನಮುಖಿಯಾಯ್ತು. ಇಂಧನ ಬೆಲೆ ಮುಗಿಲುಮುಟ್ಟಿತು. ಬ್ಯಾಂಕುಗಳು ದಿವಾಳಿ ಎದ್ದವು. ತೆರಿಗೆ ಸಂಗ್ರಹ ತೀವ್ರ ಕೊರತೆ ಕಂಡಿತು. ನಿರುದ್ಯೋಗ, ಉದ್ಯೋಗ ನಷ್ಟ, ಕೃಷಿ ಬಿಕ್ಕಟ್ಟುಗಳೂ ಮತ್ತಷ್ಟು ಉಲ್ಬಣಗೊಂಡವು. ಸರ್ಕಾರಿ ಸ್ವಾಮ್ಯದ ಬೃಹತ್ ಉದ್ದಿಮೆಗಳಷ್ಟೇ ಅಲ್ಲದೆ, ಇತ್ತೀಚಿನವರೆಗೆ ಲಾಭದಲ್ಲೇ ನಡೆಯುತ್ತಿದ್ದ ದೇಶದ ಮುಂಚೂಣಿ ಖಾಸಗೀ ವಲಯದ ಕಂಪನಿಗಳು ಕೂಡ ಲೇಆಫ್ ಘೋಷಣೆ ಮಾಡಿದವು. ದೇಶದ ಜಿಡಿಪಿ ದರ ನಿರಂತರ ಕುಸಿತದ ಬಳಿಕ ಶೇ.4.7ಕ್ಕೆ ಬಂದು ನಿಂತಿತ್ತು. ಸ್ವತಃ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿಯವರೇ ದೇಶದ ಆರ್ಥಿಕತೆ ಸಂಪೂರ್ಣ ನೆಲಕಚ್ಚಿದೆ. ಈ ಹಂತದಲ್ಲಿ ಅದನ್ನು ಮೇಲೆತ್ತಲು ಸರ್ಕಾರ ಮತ್ತು ಮೋದಿಯವರು ಬಹಳ ವಿವೇಕದಿಂದ ಕೆಲಸ ಮಾಡಬೇಕು. ಆದರೆ, ಅವರ ಬಳಿ ಅದು ಇದೆ ಎಂದು ನನಗನಿಸುತ್ತಿಲ್ಲ ಎಂದು ಹೇಳುವ ಮೂಲಕ ಸರ್ಕಾರ ಆರ್ಥಿಕತೆಯನ್ನು ಬಚಾವು ಮಾಡುವ ವಿಷಯದಲ್ಲಿ ಯಾವುದೇ ಯೋಜನೆಗಳನ್ನು ಹೊಂದಿಲ್ಲ ಮತ್ತು ಅಂತಹ ಯೋಜನೆ ರೂಪಿಸುವ ಶಕ್ತಿ ಕೂಡ ಅದಕ್ಕಿಲ್ಲ ಎಂದಿದ್ದರು.
ಆ ಹಿನ್ನೆಲೆಯಲ್ಲಿ ಕೇಂದ್ರ ಬಜೆಟ್ ಕೂಡ ಇತ್ತೀಚಿನ ದಶಕಗಳಲ್ಲೇ ಅತ್ಯಂತ ನೀರಸ ಮತ್ತು ದುರ್ಬಲ ಬಜೆಟ್ ಎಂಬ ಟೀಕೆಗೆ ಗುರಿಯಾಗಿತ್ತು. ದೇಶದ ಆರ್ಥಿಕತೆಯನ್ನು ಬುಡಮೇಲು ಮಾಡುವಂತಹ ಪ್ರಬಲ ಆರ್ಥಿಕ ಹಿನ್ನಡೆ ಮತ್ತು ಸರ್ಕಾರದ ಆದಾಯ ಕೊರತೆಯ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಎದುರಿಸುವ ಸಮರ್ಥ ನೀತಿನಿರೂಪಣೆಗಳಾಗಲೀ, ಆರ್ಥಿಕ ತಜ್ಞರಾಗಲೀ ಸರ್ಕಾರದ ಬಳಿ ಇಲ್ಲ ಎಂಬುದು ಹಲವು ಸಂದರ್ಭಗಳಲ್ಲಿ ಬಯಲಾಗಿತ್ತು. ಇನ್ನೇನು ದೇಶದಾದ್ಯಂತ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡು ಬೀದಿಗೆ ಬೀಳಲಿದ್ದಾರೆ. ಎನ್ ಪಿಎ(ವಸೂಲಾಗದ ಸಾಲ) ಭಾರದಲ್ಲಿ ಸಾಲು ಸಾಲು ಬ್ಯಾಂಕುಗಳು ದಿವಾಳಿ ಎದ್ದು ಬಾಗಿಲು ಹಾಕಲಿವೆ. ತಯಾರಿಕಾ ವಲಯ ಮತ್ತು ಸೇವಾ ವಲಯಗಳು ಕೂಡ ಮೇಲೇಳದಂತಹ ದುಃಸ್ಥಿತಿಗೆ ತಲುಪಲಿವೆ ಎಂಬ ಹಂತದಲ್ಲಿ ಮೋದಿಯವರ ಅದೃಷ್ಟ ಎಂಬಂತೆ ಕರೋನಾ ಒಕ್ಕರಿಸಿಕೊಂಡಿತು!
ಹಾಗಾಗಿ ರಾಜಕೀಯವಾಗಿ ನೋಡಿದರೆ, ಕರೋನಾ ಮೋದಿಯವರ ಪಾಲಿಗೆ ಒಂದು ರೀತಿಯಲ್ಲಿ ಸಂಕಷ್ಟದ ಹೊತ್ತಲ್ಲಿ ವರವಾಗಿ ಬಂದಂತಾಗಿದೆ. ಇನ್ನೇನು ಎಲ್ಲವೂ ತಮ್ಮ ಕೈಮೀರಿ ಹೋಗುತ್ತಿದೆ. ದೇಶದ ಜನರು ತಮ್ಮ ಮೇಲಿಟ್ಟು ಬೆಟ್ಟದಷ್ಟು ನಿರೀಕ್ಷೆಗಳು ಕರಗಿ ಹೋಗುತ್ತಿವೆ. ಎಲ್ಲವೂ ಮುಗಿಯಿತು. ಜನರನ್ನು ಸಂಕಷ್ಟದಿಂದ ಪಾರುಮಾಡಲಾಗದೆ ತಲೆತಗ್ಗಿಸಿ ನಿಲ್ಲುವ ಸ್ಥಿತಿ ಬಂದೇ ಬಿಟ್ಟಿತು ಎನ್ನುವ ಹೊತ್ತಿಗೆ, ಹೊಸ ಆರ್ಥಿಕ ವರ್ಷ ಆರಂಭದ ಹೊತ್ತಿಗೆ, ಹಳೆಯ ವರ್ಷದ ಲೆಕ್ಕಾಚಾರಗಳು ಮುಗಿಸುವ ಹೊತ್ತಿಗೆ ಸರಿಯಾಗಿ ಕರೋನಾ ಎಂಬ ಮಹಾಮಾರಿ ದೇಶಕ್ಕೆ ದೇಶವನ್ನೇ ಲಾಕ್ ಡೌನ್ ಗೆ ಸಿಲುಕಿಸಿತು. ಆ ಮೂಲಕ ಅದಾಗಲೇ ನೆಲಕಚ್ಚಿದ್ದ ಅರ್ಥವ್ಯವಸ್ಥೆಯನ್ನು ಮಲಗಿಸಿತು. ಆದರೆ, ನೆಲಕಚ್ಚುವ ಹಂತಕ್ಕೆ ಆರ್ಥಿಕತೆಯನ್ನು ತಂದ ಮತ್ತು ಅದನ್ನು ಮೇಲೆತ್ತುವ ಹೊಣೆಗಾರಿಕೆಯನ್ನು ನಿಭಾಯಿಸದೇ ಹೋದ ಅಪಕೀರ್ತಿಯಿಂದ ಮೋದಿಯವರನ್ನು ಪಾರು ಮಾಡಿತು. ಕರೋನಾ ಆ ಹೊಣೆಗಾರಿಕೆಯನ್ನು ವಿನಾ ಕಾರಣ ಮೋದಿಯವರ ಹೆಗಲಿನಿಂದ ತನ್ನ ಹೆಗಲಿಗೆ ದಾಟಿಸಿಕೊಂಡುಬಿಟ್ಟಿತು!
ಈಗ, ಮೋದಿಯವರಿಗೆ ತಮ್ಮ ‘ಚೌಕಿದಾರ್’ ಅಥವಾ ಜನರಕ್ಷಕ, ದೇಶರಕ್ಷಕ ವರ್ಚಸ್ಸನ್ನು ಮತ್ತೊಮ್ಮೆ ಪರೀಕ್ಷೆಗೊಡ್ಡುವ, ಜನರ ಮನಸ್ಸಿನಲ್ಲಿ ತಮ್ಮ ಮೇಲಿನ ಆ ಭರವಸೆ ಎಷ್ಟರಮಟ್ಟಿಗೆ ಇನ್ನೂ ಉಳಿದಿದೆ ಎಂಬುದನ್ನು ನೋಡುವ ಮತ್ತೊಂದು ಅವಕಾಶ ಕೂಡ ಕರೋನಾ ಲಾಕ್ ಡೌನ್ ಮೂಲಕ ಸಿಕ್ಕಿದೆ. ಘಂಟೆ- ಜಾಗಟೆ ಬಾರಿಸುವುದು, ದೀಪ-ಮೊಂಬತ್ತಿ ಹಚ್ಚುವುದು ಮುಂತಾದ ಟಾಸ್ಕುಗಳ ಮೂಲಕ ಮೋದಿ ಅದನ್ನೂ ಪರೀಕ್ಷೆ ಮಾಡಿ, ದೇಶ ಇನ್ನೂ ತಮ್ಮ ‘ಅವತಾರಪುರುಷ’ ವರ್ಚಸ್ಸಿನ ಗುಂಗಿನಲ್ಲೇ ಇದೆ ಎಂಬುದನ್ನು ಮತ್ತೊಮ್ಮೆ ಖಚಿತಪಡಿಸಿಕೊಂಡಿದ್ದಾರೆ. ಹಾಗೆ ತಮ್ಮ ವರ್ಚಸ್ಸು ಇನ್ನೂ ಚಾಲ್ತಿ ಕಳೆದುಕೊಂಡಿಲ್ಲ ಎಂಬುದನ್ನು ಅರಿಯುವ ಅವಕಾಶವನ್ನೂ ಕರೋನಾ ತಂದುಕೊಟ್ಟಿದೆ!
ದೇಶದ ಜನಸಾಮಾನ್ಯರು ಮಾತ್ರವಲ್ಲ; ಪ್ರತಿಪಕ್ಷಗಳು ಕೂಡ ಆರ್ಥಿಕ ಸಂಕಷ್ಟ ಮತ್ತು ವೈಫಲ್ಯಗಳನ್ನು ಮೋದಿಯವರ ತಲೆಗೆ ಕಟ್ಟಲಾಗದು, ಅವರ ಸರ್ಕಾರದ ತಪ್ಪು ನೀತಿಗಳು ಅಥವಾ ನೀತಿರಹಿತ ಶೂನ್ಯ ಆರ್ಥಿಕ ಕ್ರಮಗಳ ಫಲ ಇದು ಎನ್ನುವಂತಿಲ್ಲ !
ಕರೋನಾ ಲಾಕ್ ಡೌನ್ ನಂತಹ ಭೀಕರ ಸಂಕಷ್ಟದ ಹೊತ್ತಲ್ಲಿ ಕೂಡ ದೇಶದ ಬಡವರು, ಕೂಲಿಕಾರ್ಮಿಕರು, ಕೃಷಿಕರ ಸಂಕಷ್ಟಕ್ಕೆ ನೆರವಾಗಲು, ಅವರನ್ನು ಸಾವು ಮತ್ತು ದಿವಾಳಿಯ ದವಡೆಯಿಂದ ಪಾರು ಮಾಡಲು ದೊಡ್ಡ ಪ್ಯಾಕೇಜ್ ಘೋಷಿಸಲು ಕೂಡ ಕೇಂದ್ರ ಸರ್ಕಾರ ಸಿದ್ಧವಿಲ್ಲ. ರಾಜ್ಯ ಸರ್ಕಾರಗಳು ಹಣಕಾಸಿನ ಸ್ಥಿತಿ ನಿಭಾಯಿಸಲು ಹೆಚ್ಚುವರಿ ಅನುದಾನ ಕೋರಿ ಮನವಿ ಮಾಡುತ್ತಿದ್ದರೂ ಪ್ರಧಾನಿ ಮೋದಿ ಮತ್ತು ಅವರ ಸರ್ಕಾರ ಅವರ ಕೋರಿಕೆಗಳಿಗೆ ಕಿವುಡಾಗಿದೆ. ಲಾಕ್ ಡೌನ್ ಆರಂಭದಲ್ಲಿ 1.7 ಲಕ್ಷ ಕೋಟಿ ಪ್ಯಾಕೇಜ್ ಎಂದು ಅರ್ಥ ಸಚಿವರು ಘೋಷಿಸಿದರೂ, ಅದು ಅವರ ಬಜೆಟ್ ಘೋಷಣೆಯ ರೀಪ್ಯಾಕೇಜ್ ಎಂಬುದು ಬಯಲಾಗಲು ಹೆಚ್ಚು ಸಮಯ ಹಿಡಿಯಲಿಲ್ಲ.
ಒಟ್ಟಾರೆ, ಬಹುತೇಕ ಕೋಮು ಅಜೆಂಡಾದ ಕಾಯ್ದೆಕಾನೂನುಗಳ ಮೂಲಕ ತಮ್ಮ ರಾಜಕೀಯ ಮತಬ್ಯಾಂಕ್ ಮನತಣಿಸುವ ಪ್ರಯತ್ನಗಳಲ್ಲೇ ನಿರತವಾಗಿದ್ದ ಮೋದಿಯವರ, ಎರಡನೇ ಅವಧಿಯ ಮೊದಲ ವರ್ಷದ ದೊಡ್ಡ ವೈಫಲ್ಯವನ್ನು ಕರೋನಾ ಎಂಬ ಮಹಾಮಾರಿ ಮುಚ್ಚಿಹಾಕಿದೆ ಎಂಬುದು ಗಮನಾರ್ಹ. ಹಾಗಾಗಿ ಮೊದಲ ವರ್ಷದ ಎಲ್ಲಾ ವೈಫಲ್ಯಗಳ ಹೊರತಾಗಿಯೂ ಮೋದಿ ಈಗಲೂ ದೇಶದ ಬಹುಸಂಖ್ಯಾತರ ಪಾಲಿಗೆ ಆಪತ್ಕಾಲದ ರಕ್ಷಕನಾಗೇ ಉಳಿದಿದ್ದಾರೆ ಮತ್ತು ಆ ಕಾರಣದಿಂದಾಗಿ ಮೋದಿ ತಮ್ಮ ರಾಜಕೀಯ ವಿರೋಧಿಗಳ ವಿರುದ್ಧ ಈಗಲೂ ಮೇಲುಗೈ ಸಾಧಿಸಿದ್ದಾರೆ! ಆದರೆ, ಅದರ ಹೆಗ್ಗಳಿಕೆ ಮಾತ್ರ ಕರೋನಾಗೆ !!