ಕರೋನಾ ಸಾಂಕ್ರಮಿಕವು ಹರಡದಂತೆ ತಡೆಗಟ್ಟಲು ಸರ್ಕಾರವು ಕೋಟ್ಯಾಂತರ ರೂಪಾಯಿಗಳನ್ನು ನಿತ್ಯ ವ್ಯಯಿಸುತ್ತಿದೆ. ಸಾಕಷ್ಟು ಜನ ಜಾಗೃತಿ ಕಾರ್ಯಕ್ರಮಗಳು, ಮಾಧ್ಯಮಗಳ ಮುಖಾಂತರವೂ ಜನರಿಗೆ ಕರೋನಾದಿಂದ ರಕ್ಷಿಸಿಕೊಳ್ಳುವುದರ ಬಗ್ಗೆ ಸಲಹೆಗಳನ್ನೂ ನೀಡುತ್ತಿದೆ. ಅಲ್ಲದೆ ಇದನ್ನು ಪಾಲಿಸದವರ ಮೇಲೆ ದಂಡವನ್ನೂ ವಿಧಿಸುತ್ತಿದೆ. ಆದರೆ ಜನರು ಮಾತ್ರ ತಮ್ಮ ಪ್ರಾಣ ಉಳಿಸಿಕೊಳ್ಳಲು ಮಾಸ್ಕ್ ಧರಿಸದೇ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ದಂಡ ಕಟ್ಟಿ ಆದಾಯ ಮಾಡಿಕೊಡುತಿದ್ದಾರೆ.
ಸರ್ಕಾರದ ಮಾರ್ಗ ಸೂಚಿಯನ್ನು ಪಾಲಿಸದೇ ಮೈಸೂರಿನ ಜನರು ಬರೋಬ್ಬರಿ 60 ಲಕ್ಷ ರೂ. ದಂಡವನ್ನು ಪಾವತಿಸಿದ್ದಾರೆ. ವಿಶೇಷ ಎಂದರೆ ಕರೋನಾ ಸೋಂಕು ಎರಡನೇ ಅಲೆ ಹರಡುವ ಆತಂಕ ಇರುವುದರಿಂದ ಪೊಲೀಸರ ತಪಾಸಣೆ ತೀವ್ರಗೊಳಿಸಿದ್ದರು. ಇದರಿಂದಾಗಿ ಕಳೆದ 15 ದಿನದಲ್ಲಿಯೇ 10 ಸಾವಿರಕ್ಕೂ ಹೆಚ್ಚು ಜನರು 19 ಲಕ್ಷ ರೂ. ದಂಡವನ್ನು ಪಾವತಿಸಿದ್ದಾರೆ. 20 ರೂ. ಮಾಸ್ಕ್ ಧರಿಸದೇ 200 ರೂ. ದಂಡ ಪಾವತಿಸಲು ಸಿದ್ದವಾಗಿದೆ ಜನರ ಮನಸ್ಥಿತಿ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಮೈಸೂರು ನಗರ ಪೊಲೀಸ್ ಆಯುಕ್ತ ಚಂದ್ರ ಗುಪ್ತ ಅವರ ನಿರ್ದೇಶನದ ಮೇರೆಗೆ ಪ್ರತಿ ದಿನವೂ ಪೊಲೀಸರು ಒಂದಿಲ್ಲೊಂದು ರೀತಿಯಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ನಗರದ ಕೆ.ಆರ್.ವೃತ್ತ, ಹಾರ್ಡಿಂಜ್ ವೃತ್ತ, ಆಯುರ್ವೇದ ವೃತ್ತ, ರಾಮಸ್ವಾಮಿ ವೃತ್ತ, ಗನ್ಹೌಸ್, ಚಿಕ್ಕಗಡಿಯಾರ ವೃತ್ತ ಸೇರಿದಂತೆ ವಿವಿಧೆಡೆ ಸಾರ್ವಜನಿಕರು, ಪ್ರಯಾಣಿಕರು, ವಾಹನ ಚಾಲಕರಿಗೆ ಕೊರೊನಾದಿಂದ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಮಾಹಿತಿಯುಳ್ಳ ಕರಪತ್ರಗಳನ್ನು ವಿತರಿಸಲಾಗುತ್ತಿದೆ. ಜತೆಗೆ ಕೋವಿಡ್-19 ಜಾಗೃತಿ ನಾಮಫಲಕಗಳನ್ನೂ ಅಳವಡಿಸಲಾಗುತ್ತಿದೆ. ವ್ಯಾಪಾರ ಸಂಘಟನೆಗಳೊಂದಿಗೆ ಸಭೆ ನಡೆಸಿ ನಿಯಮ ಪಾಲಿಸುವಂತೆ ಮನವಿ ಮಾಡುವುದು ಹಾಗೂ ನಿಯಮ ಉಲ್ಲಂಘಿಸಿದಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡುವ ಎಚ್ಚರಿಕೆಯನ್ನೂ ನೀಡುತ್ತಿದ್ದಾರೆ.
ಕಳೆದ 6 ತಿಂಗಳಿನಿಂದ ನ.16ರ ವರೆಗೆ ಕೋವಿಡ್ 19 ನಿಯಮಾವಳಿ ಉಲ್ಲಂಘನೆಯ ಒಟ್ಟು 17,961 ಪ್ರಕರಣಗಳು ವರದಿ ಆಗಿದ್ದು ಒಟ್ಟು 41 ಲಕ್ಷ ರೂ. ದಂಡ ಶುಲ್ಕ ಸಂಗ್ರಹಿಸಲಾಗಿದೆ. ಆದರೆ, ನವೆಂಬರ್ 16 ರಿಂದ ಡಿಸೆಂಬರ್ 1ರ ವರೆಗೆ ಹೆಚ್ಚುವರಿ ಪ್ರಕರಣಗಳೂ ಸೇರಿ ಒಟ್ಟು ಪ್ರಕರಣಗಳ ಸಂಖ್ಯೆ 28,074 ಕ್ಕೆ ಏರಿಕೆಯಾಗಿದ್ದು, 59,91,650 ರೂ. ದಂಡ ಸಂಗ್ರಹಿಸಲಾಗಿದೆ. ಅಲ್ಲದೆ, ಕೋವಿಡ್ ವಾರ್ಗಸೂಚಿ ಉಲ್ಲಂಘಿಸಿದವರ ವಿರುದ್ಧವೂ ಕ್ರಿಮಿನಲ್ ಪ್ರಕರಣ ದಾಖಲಿಸಿ ಜನರನ್ನು ಸ್ವಯಂ ಜಾಗೃತರನ್ನಾಗಿ ಮಾಡಲಾಗುತ್ತಿದೆ. ಕೆ ಆರ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರ ವಿರುದ್ದ ನಿಯಮ ಉಲ್ಲಂಘನೆಯ ಕಾರಣಕ್ಕೆ ಕ್ರಿಮಿನಲ್ ಮೊಕದ್ದಮೆಯನ್ನೂ ದಾಖಲಿಸಲಾಗಿದೆ.
ಸಾರ್ವಜನಿಕ ಅಂತರ ಕಾಯ್ದುಕೊಳ್ಳದೇ ಅಂಗಡಿ ಮುಂಗಟ್ಟುಗಳ ಎದುರು ಗುಂಪು ಸೇರಿ ವ್ಯಾಪಾರ ಮಾಡುತ್ತಿದ್ದ ಆಟೋ ಮೊಬೈಲ್ ಅಂಗಡಿ ಮತ್ತು ಟೀ ಅಂಗಡಿ ಅವರ ವಿರುದ್ಧ ಡಿಎಂಎ ಆಕ್ಟ್ 511 ಹಾಗೂ ಐಪಿಸಿ 269ರ ಅನ್ವಯ ಪ್ರಕರಣ ದಾಖಲಿದ್ದು, ಈ ಮೂಲಕ ಕೋವಿಡ್ ನಿಯಮ ಉಲ್ಲಂಘಿಸುವವರಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಲಾಕ್ಡೌನ್ ಅವಧಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಸಂಬಂಧ ವಾಹನ ಸವಾರರ ವಿರುದ್ಧ ಪ್ರಕರಣ ದಾಖಲಿಸಲು ವಿನಾಯಿತಿ ನೀಡಿದ್ದ ಪೊಲೀಸರು, ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಸಂಚಾರ ತಪಾಸಣೆ ತೀವ್ರಗೊಳಿಸಿದ್ದಾರೆ.
ಕರೊನಾ ನಿಯಂತ್ರಿಸಲು ಪೊಲೀಸರು ನಿತ್ಯ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಪ್ರತಿಯೊಬ್ಬ ನಾಗರಿಕರೂ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿ ಪೊಲೀಸರಿಗೆ ಸಹಕಾರ ನೀಡಿ ಜೀವ ಕಾಪಾಡಿಕೊಳ್ಳಬೇಕು. ಸಾರ್ವಜನಿಕ ಅಂತರ ಪಾಲನೆ ಮಾಡುವುದು, ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಹಾಗೂ ಹ್ಯಾಂಡ್ ಸ್ಯಾನಿಟೈಸರ್ಗಳನ್ನು ಬಳಸಬೇಕು ಎಂದು ಡಿಸಿಪಿ ಗೀತಾ ಹೇಳುತ್ತಾರೆ.
ನಗರದ ವಿವಿಧ ಪೋಲೀಸ್ ಠಾಣೆಗಳಲ್ಲಿ ಸಂಗ್ರಹಿಸಿದ ದಂಡದ ಮೊತ್ತ ಈ ಕೆಳಗಿನಂತಿದೆ.
ಪೊಲೀಸ್ ಠಾಣೆಗಳು – ಪ್ರಕರಣಗಳು – ದಂಡ ಶುಲ್ಕ
ಎನ್.ಆರ್ ಠಾಣೆ – 569- 96,050
ಮಂಡಿ- 982- 2,57,600
ವಿವಿ ಪುರಂ- 1151- 2,82,700
ಜಯಲಕ್ಷ್ಮೀಪುರಂ- 6881- 1,2,450
ಮೇಟಗಳ್ಳಿ- 995- 1, 96, 750
ವಿಜುಂನಗರ- 1152- 2,17,850
ಹೆಬ್ಬಾಳ್- 773- 1,44,000
ದೇವರಾಜ- 1829- 4,59,650
ಲಷ್ಕರ್- 1753- 4,44,050
ನಜರಬಾದ್- 1090-2,65,500
ಉದಯಗಿರಿ- 1233- 3,02,400
ಆಲನಹಳ್ಳಿ- 1562- 3,22,500
ಕೃಷ್ಣರಾಜ- 1915- 2,54,000
ಲಕ್ಷ್ಮೀಪುರಂ- 746-1,91,950
ಅಶೋಕಪುರಂ- 677-1,83,600
ವಿದ್ಯಾರಣ್ಯಪುರಂ- 1096- 1,92,700
ಎಸ್ಎಸ್ ಪುರಂ- 641- 1,15,950
ಕುವೆಂಪುನಗರ- 1086- 1,87,400
ದೇವರಾಜ ಸಂಚಾರ- 1432- 3,67,550
ಕೃಷ್ಣರಾಜ ಸಂಚಾರ- 1667- 3,20,100
ನರಸಿಂಹರಾಜ ಸಂಚಾರ- 940- 1,62,000
ಸಿದ್ಧಾರ್ಥನಗರ ಸಂಚಾರ- 2518- 6,32,100
ವಿವಿ ಪುರಂ ಸಂಚಾರ- 1579- 2,22,800
ಒಟ್ಟು- 28, 074- 59,91,650
ಈ ನಡುವೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿರುವುದು ನಿಜಕ್ಕೂ ಸಮಾಧಾನಕರ ಸಂಗತಿ ಆಗಿದೆ. ಮೊದಲೆಲ್ಲ ನಿತ್ಯವೂ 100-200 ಸೋಂಕು ಪ್ರಕರಣಗಳು ವರದಿ ಆಗುತಿದ್ದು ಈಗ ನಿತ್ಯದ ಸೋಂಕು ಪ್ರಕರಣಗಳ ಸಂಖ್ಯೆ ನೂರಕ್ಕಿಂತ ಕೆಳಗೆ ಇಳಿದಿದೆ. ಗುರುವಾರ 53 ಹೊಸ ಕರೊನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ನಗರದಲ್ಲಿ ಈವರೆಗೆ ಪತ್ತೆಯಾಗಿರುವ ಕರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 50,848 ಕ್ಕ ಏರಿಕೆ ಆಗಿದೆ.
ಗುರುವಾರ 89 ಕರೊನಾ ವೈರಸ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದರೆ ಈತನಕ ಗುಣಮುಖರಾಗಿ ಡಿಸ್ಚಾರ್ಜ್ ಆದವರ ಸಂಖ್ಯೆ 49,567 ಆಗಿದೆ. ಈಗ ಸಕ್ರಿಯ ಪ್ರಕರಣಗಳ ಸಂಖ್ಯೆ 280 ಕ್ಕೆ ಇಳಿಕೆ ಆಗಿದೆ. ಗುರುವಾರ ಓರ್ವ ಸೋಂಕಿತ ಮೃತ ಪಟ್ಟಿದ್ದು ಈತನಕ ಮೈಸೂರು ಜಿಲ್ಲೆಯಲ್ಲಿ ಕರೋನಾ ಸೋಂಕಿಗೆ ಬಲಿಯಾದವರ ಸಂಖ್ಯೆ 1001. ಕರೋನಾ ಸೋಂಕಿಗೆ ಲಸಿಕೆ ಬಿಡುಗಡೆ ಆಗುವ ಸಮಯದಲ್ಲಾದರೂ ಸೋಂಕು ಪ್ರಕರಣಗಳ ಸಂಖ್ಯೆ ಕಡಿಮೆ ಆಗುತ್ತಿರುವುದು ಸಮಾಧಾನಕರ ಸಂಗತಿ.