ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾದವರು ಸಿಎಂ ಬಿಎಸ್ ಯಡಿಯೂರಪ್ಪ. ಬಲಪಂಥೀಯ ನಿಲುವು ಹೊಂದಿರುವ ಬಿಜೆಪಿ ಪಕ್ಷದಲ್ಲಿದ್ದರೂ ಹಸಿರು ಶಾಲು ಹೊದ್ದುಕೊಂಡೇ ಪಕ್ಷ ಸಂಘಟಿಸಿದ ಯಡಿಯೂರಪ್ಪ ಅವರೀಗ ನಾಲ್ಕನೇ ಬಾರಿಗೆ ಮುಖ್ಯಮಂತ್ರಿ ಆಗಿದ್ದಾರೆ. ಮೂರು ದಶಕಗಳ ಕಾಲ ವಿರೋಧ ಪಕ್ಷದ ಸ್ಥಾನದಲ್ಲೇ ಇದ್ದು ಬಿಜೆಪಿಯನ್ನು ಕಟ್ಟಿ ಬೆಳೆಸಿದ ಮಹಾನ್ ನಾಯಕ ಯಡಿಯೂರಪ್ಪ ಅವರು ಸಿಎಂ ಪದವಿ ಕಳೆದುಕೊಳ್ಳುವ ಕಾಲ ಸನ್ನಿಹಿತವಾಗುತ್ತಿದೆ ಎನ್ನುತ್ತಿವೆ ಮೂಲಗಳು.
ಬಲ್ಲ ಮೂಲಗಳ ಪ್ರಕಾರ ಒಂದು ವೇಳೆ ಈಗಲೇ ನಾಯಕತ್ವ ಬದಲಾವಣೆಗೆ ಹೈಕಮಾಂಡ್ ಹಸಿರು ನಿಶಾನೆ ತೋರಿದ್ದೆಯಾದರೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರಾಜ್ಯದ ಸಿಎಂ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಡಿಸಿಎಂ ಲಕ್ಷ್ಮಣ ಸವದಿ, ಡಿ.ವಿ ಸದಾನಂದಗೌಡ, ಉಮೇಶ್ ಕತ್ತಿ, ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಷಿ ಸೇರಿದಂತೆ ಇನ್ನು ಹಲವು ಬಿಜೆಪಿ ಹಿರಿಯ ನಾಯಕರು ಸಿಎಂ ಆಗುವ ರೇಸ್‌ನಲ್ಲಿದ್ದರೂ ಹೈಕಮಾಂಡ್ ಒಲವು ಮಾತ್ರ ಕಟೀಲ್ ಪರ ಇದೆ ಎಂದೇ ಹೇಳಲಾಗುತ್ತಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಬಿಜೆಪಿ ಹೈಕಮಾಂಡ್ ಜೆ.ಪಿ. ನಡ್ಡಾ ಅಥವಾ ಬಿ.ಎಲ್. ಸಂತೋಷ್ ಅವರ ಒಲವು ಕಟೀಲ್ ಪರವಿದ್ದರೂ ಯಡಿಯೂರಪ್ಪರನ್ನು ಕೆಳಗಿಳಿಸಿದ ಬಳಿಕ ಯಾರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎನ್ನುವ ಅಂತಿಮ ನಿರ್ಧಾರ ತೆಗೆದುಕೊಳ್ಳುವರು ಮಾತ್ರ ಅಮಿತ್ ಶಾ. ಒಂದು ವೇಳೆ ತಮ್ಮನ್ನು ಸಿಎಂ ಸ್ಥಾನದಿಂದ ಕೆಳಗಿಸುವುದಾದರೇ ತಾವು ಹೇಳಿದವರನ್ನೇ ಮುಖ್ಯಮಂತ್ರಿ ಮಾಡಬೇಕೆಂಬುದು ಯಡಿಯೂರಪ್ಪರ ಒತ್ತಾಯ. ಇದಕ್ಕೆ ಒಪ್ಪಿರುವ ಅಮಿತ್ ಶಾ ಬಿಎಸ್‌ವೈ ಪುತ್ರ ವಿಜಯೇಂದ್ರ ಅಥವಾ ಒಕ್ಕಲಿಗರ ನಾಯಕ ಆರ್ ಅಶೋಕ್ ಅವರಿಗೆ ಯಡಿಯೂರಪ್ಪ ಸೂಚನೆ ಮೇರೆಗೆ ಅಮಿತ್ ಶಾ ಸಿಎಂ ಸ್ಥಾನ ನೀಡಬಹುದು ಎನ್ನಲಾಗುತ್ತಿದೆ.
ಅಮಿತ್ ಶಾ ಅಚ್ಚರಿಯ ಅಭ್ಯರ್ಥಿ ನೀಡುವುದರಲ್ಲಿ ನಿಷ್ಣಾತರು. ಹಾಗಾಗಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರೆಂಬುದು ಸರ್ಪ್ರೈಸ್ ಆಗಬಹುದು. ಇಲ್ಲದೇ ಹೋದಲ್ಲಿ ಬಿಎಸ್‌ವೈ ಮಾತು ನಿರ್ಲಕ್ಷಿಸಿ ನಳಿನ್ ಕುಮಾರ್ ಕಟೀಲ್ ಅವರನ್ನೇ ಸಿಎಂ ಮಾಡಬಹುದು.
ಸಿಎಂ ಬದಲಾವಣೆಯ ಭಯ ಯಡಿಯೂರಪ್ಪ ಅವರನ್ನೂ ಬಲವಾಗಿ ಕಾಡುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬರಲು ತಮ್ಮನ್ನು ನಂಬಿ ಮಂತ್ರಿ ಸ್ಥಾನ ಬಿಟ್ಟು ಬಂದ ಆರ್. ಶಂಕರ್, ಎಂಟಿಬಿ ನಾಗರಾಜ್‌ಗೂ ಮಂತ್ರಿ ಸ್ಥಾನ ಕೊಡಬೇಕಿದೆ. ಅದೇ ರೀತಿ ಬಹಳ ಸಲ ಭರವಸೆ ಕೊಟ್ಟಿರುವ ಕಾರಣಕ್ಕೆ ಉಮೇಶ್ ಕತ್ತಿಯನ್ನೂ ಸಂಪುಟಕ್ಕೆ ಸೇರಿಸಿಕೊಳ್ಳಬೇಕಿದೆ. ಹಾಗಾಗಿ ಯಾರಿಗೆ ಕೊಡಬೇಕು, ಯಾರನ್ನು ಬಿಡಬೇಕು ಎಂಬ ಗೊಂದಲ ಯಡಿಯೂರಪ್ಪ ಅವರಿಗೆ. ಹೀಗೆ ಗೊಂದಲದ ಸುಳಿಯಲ್ಲಿ ಸಿಲುಕಿರುವ ಯಡಿಯೂರಪ್ಪ ಎಷ್ಟು ನಾಜೂಕಾಗಿ ಸಂಪುಟ ಸರ್ಜರಿ ಮಾಡುತ್ತಾರೆ ಎನ್ನುವುದರ ಮೇಲೆ ಅವರು ಇನ್ನು ಎಷ್ಟು ದಿನ ಮುಖ್ಯಮಂತ್ರಿ ಕುರ್ಚಿಯಲ್ಲಿ ಮುಂದುವರೆಯುತ್ತಾರೆ ಎಂಬುದು ನಿರ್ಧಾರವಾಗಲಿದೆ.
ನಾಯಕತ್ವ ಬದಲಾವಣೆಗಾಗಿ ಈಗಾಗಲೇ ಹೈಕಮಾಂಡಿಗೆ ಯಡಿಯೂರಪ್ಪ ವಿರುದ್ದ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಅದು ಬಹುತೇಕ ಗೊತ್ತಿರುವ ವಿಷಯ, ‘ಯಡಿಯೂರಪ್ಪ ಅವರಿಗೆ ವಯಸ್ಸಾಯಿತು, ಅವರ ಪುತ್ರ ವಿಜಯೇಂದ್ರ ಹಸ್ತಕ್ಷೇಪ ಅತಿಯಾಯಿತು’ ಎಂದು ಚಾರ್ಜ್ ಶೀಟ್‌ನಲ್ಲಿ ದೂರಲಾಗಿದೆ. ಹಾಗಾಗಿ ಯಾವುದೇ ಸಂದರ್ಭದಲ್ಲೂ ಬೇಕಾದರೂ ಹೈಕಮಾಂಡ್ ಸಿಎಂ ಬದಲಾವಣೆ ಮಾಡಬಹುದು.
ಯಡಿಯೂರಪ್ಪನವರ ಉತ್ತರಾಧಿಕಾರಿ ಯಾರಾಗುತ್ತಾರೆ? ಅದು ಯಾವಾಗ ಘಟಿಸುತ್ತದೆ ಎಂಬ ಮಾಹಿತಿ ಸದ್ಯಕ್ಕಿಲ್ಲವಾದರೂ ಕಟೀಲ್ ಮುಖ್ಯಮಂತ್ರಿ ಕುರ್ಚಿಯ ಕನಸು ಕಾಣುತ್ತಿರುವುದು ಮಾತ್ರ ಸತ್ಯ.