“ನಿವೃತ್ತಿಯ ಬಳಿಕ ನೇಮಕಾತಿಗಳು ನ್ಯಾಯಾಂಗ ವ್ಯವಸ್ಥೆಯ ಸ್ವಾಯತ್ತತೆಗೇ ಕಪ್ಪು ಚುಕ್ಕೆ”
ಇದು ಸುಮಾರು ಒಂದೂವರೆ ವರ್ಷದ ಹಿಂದೆ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಯಾಗಿದ್ದ ರಂಜನ್ ಗೋಗಾಯಿ ಅವರು ಆಡಿದ್ದ ನ್ಯಾಯಾಂಗದ ಘನತೆಯ ಕುರಿತ ಕಾಳಜಿಯ ಮಾತು. ಈಗ ವರ್ಷದ ಬಳಿಕ ಅವರ ಇದೇ ಮಾತು ಅವರ ಮುಖಕ್ಕೇ ರಾಚುತ್ತಿದೆ! ಅಷ್ಟೇ ಅಲ್ಲ; ಸುಪ್ರೀಂಕೋರ್ಟ್ ನಿವೃತ್ತ ಸಿಜೆಐ ಆಗಿ ರಂಜನ್ ಅವರ ಘನತೆಯನ್ನಷ್ಟೇ ಅಲ್ಲ; ದೇಶದ ನ್ಯಾಯಾಂಗ ವ್ಯವಸ್ಥೆ ಮತ್ತು ಆಡಳಿತರೂಢ ಸರ್ಕಾರಗಳ ನಡುವಿನ ಅನಪೇಕ್ಷಿತ ಅಪವಿತ್ರ ಮೈತ್ರಿಯ ಕುರಿತ ಚರ್ಚೆ ಹುಟ್ಟುಹಾಕುವ ಮೂಲಕ ನ್ಯಾಯಾಂಗದ ಸ್ವಾಯತ್ತತೆಯನ್ನೇ ಅಣಕಿಸುವಂತೆ ಮಾಡಿದೆ!
ಕೇವಲ ನಾಲ್ಕು ತಿಂಗಳ ಹಿಂದೆ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಸ್ಥಾನದಿಂದ ನಿವೃತ್ತರಾಗಿರುವ ರಂಜನ್ ಗೋಗಾಯಿ ಅವರನ್ನು ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶನ ಮಾಡಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಸೋಮವಾರ ಆದೇಶ ಹೊರಡಿಸಿದ ಬೆನ್ನಲ್ಲೇ ಸ್ವತಃ ರಂಜನ್ ಗೋಗಾಯಿ ಅವರ ಸ್ವಪ್ರಸಂಶೆಯ ಮಾತುಗಳು ಈಗ ನಗೆಪಾಟಲಿನ ಸಂಗತಿಗಳಾಗಿ ಚಾಲ್ತಿಗೆ ಬಂದಿವೆ.
ಕಳೆದ ವರ್ಷ ಸ್ವತಃ ತಮ್ಮ ವಿರುದ್ಧವೇ ದಾಖಲಾಗಿದ್ದ ಲೈಂಗಿಕ ಕಿರುಕುಳ ಆರೋಪದಂತಹ ಗಂಭೀರ ಪ್ರಕರಣ ದಾಖಲಾದಾಗ ಕೂಡ, ‘ಒಬ್ಬ ನ್ಯಾಯಾಧೀಶರನಿಗೆ ಇರಬೇಕಾದ ದೊಡ್ಡ ಆಸ್ತಿ ಆತನ ಘನತೆ, ಗೌರವ’ ಎಂಬ ಆದರ್ಶದ ಮಾತುಗಳನ್ನು ಆಡಿದ್ದರು ಗೋಗಾಯಿ. ಜೊತೆಗೆ, ತಮ್ಮ ಅಂತಹ ಘನತೆಯ ಆಧಾರವಾಗಿರುವ ಪ್ರಮಾಣೀಕತೆಯ ಬಗ್ಗೆ ಮಾತನಾಡುತ್ತಾ, ತಮಗಿಂತ ತಮ್ಮ ಗುಮಾಸ್ತರೇ ಹೆಚ್ಚು ಶ್ರೀಮಂತರು ಎನ್ನುತ್ತಾ ತಮ್ಮ ಬ್ಯಾಂಕ್ ಖಾತೆಯ ವಿವರಗಳನ್ನೂ ನೀಡಿದ್ದರು.
ಇದೀಗ, ರಾಫೇಲ್ ಬಹುಕೋಟಿ ಯುದ್ಧ ವಿಮಾನ ಖರೀದಿ ಹಗರಣ, ಅಯೋಧ್ಯಾ ರಾಮಮಂದಿರ ಜಾಗದ ವಿವಾದ, ಜುಮ್ಮುಕಾಶ್ಮೀರದಲ್ಲಿ ನಾಗರಿಕ ಹಕ್ಕು ದಮನ ಪ್ರಶ್ನಿಸಿದ ಅರ್ಜಿಗಳ ತಿರಸ್ಕಾರ, ಅಸ್ಸಾಂ ಎನ್ ಆರ್ ಸಿ ಪ್ರಕರಣ ಹಾಗೂ ಸಿಬಿಐ ನಿರ್ದೇಶಕರ ನೇಮಕ ಪ್ರಕರಣಗಳೂ ಸೇರಿದಂತೆ ಗೋಗಾಯಿ ಅವರನ್ನೊಳಗೊಂಡಿದ್ದ ನ್ಯಾಯಪೀಠಗಳು ನೀಡಿದ ತೀರ್ಪುಗಳು ಕೂಡ ಜನರ ಕಣ್ಣಲ್ಲಿ ಕಳಂಕಕ್ಕೀಡಾಗಿವೆ. ಒಂದು ಅಧಿಕಾರರೂಢ ಸರ್ಕಾರ ಮತ್ತು ಅದರ ಚುಕ್ಕಾಣಿ ಹಿಡಿದ ವ್ಯಕ್ತಿಗಳು ಹಾಗೂ ಆ ಪಕ್ಷಕ್ಕೆ ಅನುಕೂಲಕರವಾದ ನಿರಂತರ ತೀರ್ಪುಗಳ ಬಳಿಕ, ಅಂತಹ ತೀರ್ಪುಗಳನ್ನು ಕೊಟ್ಟ ನ್ಯಾಯಾಧೀಶರಿಗೆ ಅದೇ ಪಕ್ಷ, ಅದೇ ವ್ಯಕ್ತಿಗಳು ಮತ್ತು ಅದೇ ಸರ್ಕಾರ ರಾಜ್ಯಸಭೆಯ ಸದಸ್ಯತ್ವದಂತಹ ಲಾಭದಾಯಕ ಸ್ಥಾನಮಾನಗಳನ್ನು, ಹುದ್ದೆಗಳನ್ನು ನೀಡಿದಾಗ ಅಂತಹ ತೀರ್ಪುಗಳ ಬಗ್ಗೆ ಅನುಮಾನಗಳು ಏಳುವುದು ಸಹಜ. ಈಗಲೂ ಅದೇ ಆಗಿದೆ.
ಆದರೆ, ಅಪಾಯ ಇರುವುದು ಇಲ್ಲಿ; ಕೇವಲ ಒಬ್ಬ ನ್ಯಾಯಾಧೀಶ, ಒಂದು ರಾಜಕೀಯ ಪಕ್ಷದ ನಡವಳಿಕೆ, ಘನತೆ-ಗೌರವದ ಬಗ್ಗೆ ಮಾತ್ರವಲ್ಲ; ಬದಲಾಗಿ ಸುಪ್ರೀಂಕೋರ್ಟ್ ಸೇರಿದಂತೆ ಇಡೀ ಭಾರತೀಯ ನ್ಯಾಯಾಂಗ ವ್ಯವಸ್ಥೆಯ ವಿಶ್ವಾಸಾರ್ಹತೆ ಮತ್ತು ಘನತೆಗೆ ಪೆಟ್ಟು ಬಿದ್ದಿದೆ. ಆ ಕಾರಣಕ್ಕಾಗಿಯೇ ಕೇವಲ ವಿರೋಧ ಪಕ್ಷಗಳು ಮಾತ್ರವಲ್ಲದೆ; ಹಲವು ಮಂದಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳೂ ಸೇರಿದಂತೆ ನ್ಯಾಯಾಂಗ ವಲಯದ ಪ್ರಮುಖರು ಕೂಡ ಈ ನೇಮಕದ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.
ನಿವೃತ್ತಿ ಬಳಿಕ ನ್ಯಾಯಾಧೀಶರಿಗೆ ಸರ್ಕಾರದ ಆಯಕಟ್ಟಿನ ಸ್ಥಾನಗಳಾದ ರಾಜ್ಯಸಭಾ ಸದಸ್ಯತ್ವ, ರಾಜ್ಯಪಾಲರ ಹುದ್ದೆ, ಮಾನವ ಹಕ್ಕು ಆಯೋಗದಂತಹ ಸ್ಥಾನಮಾನಗಳನ್ನು ನೀಡುವುದು ಒಂದು ರೀತಿಯಲ್ಲಿ ಕುದುರೆಯ ಮುಂದೆ ಹುಲ್ಲು ಕಟ್ಟಿ ಓಡಿಸಿದಂತೆ. ಹುಲ್ಲಿನ ಆಸೆಗೆ ಕುದುರೆ ತನ್ನ ಮುಂದಿನ ದಾರಿಯ ತಗ್ಗುದಿಣ್ಣೆ, ಗುಂಡಿಗೊಟರು ನೋಡದೆ ಸುಮ್ಮನೆ ನುಗ್ಗುತ್ತದೆ. ಹಾಗಾಗಿ ನ್ಯಾಯಾಧೀಶರು ಕೂಡ ಸರ್ಕಾರದ ನಿರೀಕ್ಷೆಯಂತೆ ಕೆಲಸ ಮಾಡಿದರೆ ತಮ್ಮ ನಿರೀಕ್ಷೆಯ ಸ್ಥಾನಮಾನ- ಹುದ್ದೆಗಳಿಗೆ ದೊರೆಯುವುದು ಖಚಿತ ಎಂಬ ಆಮಿಷದಿಂದ ನ್ಯಾಯದ ದಾರಿಯಲ್ಲಿ ಸತ್ಯ ಮತ್ತು ಸುಳ್ಳಿನ ತಗ್ಗುದಿಣ್ಣೆಗಳನ್ನು ಕಡೆಗಣಿಸಿ ಶೀಘ್ರ ತೀರ್ಪು ಬರೆದು ತಮ್ಮ ಕೆಲಸ ಪೂರೈಸುತ್ತಾರೆ. ಜೊತೆಗೆ ಭವಿಷ್ಯದಲ್ಲಿ ನಿವೃತ್ತರಾಗುವ ನಿರ್ಣಾಯಕ ಸ್ಥಾನದಲ್ಲಿರುವ ನ್ಯಾಯಾಧೀಶರಿಗೂ, ನೀವು ನಮ್ಮನ್ನು ನೋಡಿಕೊಂಡರೆ, ನಾಳೆ ನಾವೂ ನಿಮ್ಮನ್ನು ನೋಡಿಕೊಳ್ಳುವೆವು ಎಂಬ ಸ್ಪಷ್ಟ ಸಂದೇಶವನ್ನು ಕೂಡ ಇಂತಹ ನೇಮಕಾತಿಗಳು ರವಾನಿಸುತ್ತವೆ. ಹಾಗಾಗಿ ಅಂತಿಮವಾಗಿ ನ್ಯಾಯಾಂಗದ ನ್ಯಾಯಪಕ್ಷಪಾತಿ ಧೋರಣೆಗೆ ಬದಲಾಗಿ ಅಧಿಕಾರಸ್ಥರ ಪಕ್ಷಪಾತಿಯಾಗಿ ಬದಲಾಗಲಿದೆ ಎಂಬ ಆತಂಕ ವ್ಯಕ್ತವಾಗುತ್ತಿದೆ.
ಹಾಗಾಗಿಯೇ ಸ್ವರಾಜ್ ಇಂಡಿಯಾದ ನಾಯಕ ಯೋಗೇಂದ್ರ ಯಾದವ್ ಅವರು, “ತಮ್ಮ ಮಾಲೀಕರಿಂದ ರಂಜನ್ ಗೋಗಾಯಿ ಅವರಿಗೆ ಯಾಕೆ ರಾಜ್ಯಸಭಾ ಸದಸ್ಯತ್ವದ ಭಕ್ಷೀಸು ಸಂದಾಯವಾಗಿದೆ ಎಂಬುದನ್ನು ತಿಳಿಯಬೇಕಾದರೆ ಇದನ್ನು ಗಮನಿಸಿ.. ತೀರಾ ನಾಚಿಕೆಗೇಡು” ಎಂದು ‘ದ ಕ್ಯಾರವಾನ್’ ಪತ್ರಿಕೆಯಲ್ಲಿ ಗೋಗಾಯಿ ಸರ್ಕಾರದ ಪರ ನೀಡಿದ್ದ ತೀರ್ಪುಗಳ ಪಟ್ಟಿಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ.
ಸ್ವತಃ ಸುಪ್ರೀಂಕೋರ್ಟ್ ವಕೀಲರಾಗಿರುವ ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ಕೂಡ, ಖಾರವಾಗಿ ಪ್ರತಿಕ್ರಿಯಿಸಿದ್ದು, “ನ್ಯಾ. ಎಚ್ ಆರ್ ಖನ್ನಾ ಅವರನ್ನು; ಅವರ ವ್ಯಕ್ತಿತ್ವದ ಬದ್ಧತೆ, ಸರ್ಕಾರದ ವಿರುದ್ಧದ ಗಟ್ಟಿ ನಿಲುವು, ನ್ಯಾಯವನ್ನು ಎತ್ತಿಹಿಡಿದ ದೃಢತೆಗಾಗಿ ನೆನಪಿಸಿಕೊಳ್ಳುತ್ತೇವೆ. ಹಾಗೇ ರಂಜನ್ ಗೋಗಾಯಿ ಅವರನ್ನು; ಸರ್ಕಾರದಿಂದ ಬಚಾವಾದದ್ದಕ್ಕಾಗಿ, ಆ ಕೃತಜ್ಞತೆಗಾಗಿ ಸರ್ಕಾರದ ಸೇವೆಗೆ ನಿಂತದ್ದಕ್ಕಾಗಿ, ತನ್ನ ವೈಯಕ್ತಿಕ ಮತ್ತು ಒಟ್ಟಾರೆ ನ್ಯಾಯಾಂಗದ ಘನತೆಯ ವಿಷಯದಲ್ಲಿ ರಾಜಿ ಮಾಡಿಕೊಂಡದ್ದಕ್ಕಾಗಿ ನಾವು ರಾಜ್ಯಸಭಾ ಸದಸ್ಯತ್ವವನ್ನು ಬುಟ್ಟಿಗೆ ಹಾಕಿಕೊಂಡರು ಎಂದು ಸ್ಮರಿಸುತ್ತೇವೆ” ಎಂದು ಟ್ವೀಟ್ ಮಾಡಿದ್ದಾರೆ.
“ತಮಗೆ ನೀಡಿರುವ ರಾಜ್ಯಸಭಾ ಸ್ಥಾನದ ಕೊಡುಗೆಗೆ ನಯವಾಗಿ ‘ಬೇಡ’ ಎನ್ನುವ ಮಟ್ಟಿಗಿನ ಸಾಮಾನ್ಯ ಜ್ಞಾನ ಮಾಜಿ ಸಿಜೆಐ ರಂಜನ್ ಗೋಗಾಯಿ ಅವರಿಗಿದೆ ಎಂದುಕೊಂಡಿರುವೆ. ಹಾಗೆ ಮಾಡದೇ ಹೋದರೆ, ಅವರು ನ್ಯಾಯಾಂಗ ವ್ಯವಸ್ಥೆಗೆ ತೊಡೆದುಹಾಕಲಾಗದ ಪ್ರಮಾಣದ ಕಳಂಕ ಮೆತ್ತಲಿದ್ದಾರೆ” ಎಂದು ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ಯಶವಂತ್ ಸಿನ್ಹಾ ಪ್ರತಿಕ್ರಿಯಿಸಿದ್ದಾರೆ.
ಆದರೆ, ಹಿರಿಯ ನಾಯಕರ ಮತ್ತು ನ್ಯಾಯಾಂಗ ವಲಯದ ಈ ಆತಂಕ ಮತ್ತು ಕಾಳಜಿಯ ಮಾತುಗಳಿಗೆ ತನ್ನದೇ ದಾಟಿಯಲ್ಲಿ ಪ್ರತಿಕ್ರಿಯಿಸಿರುವ ಬಿಜೆಪಿ, “ಕಾಂಗ್ರೆಸ್ ಪಕ್ಷ ಕೂಡ ಈ ಹಿಂದೆ ಮಾಜಿ ಸಿಜೆಐ ನ್ಯಾ. ರಂಗನಾಥ್ ಮಿಶ್ರಾ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿತ್ತು. ಆಗ ಇಲ್ಲದ ನ್ಯಾಯಾಂಗದ ಸ್ವಾಯತ್ತತೆಯ ಕಾಳಜಿ ಪ್ರತಿಪಕ್ಷಗಳಿಗೆ ಈಗ ಮಾತ್ರ ಯಾಕೆ ನೆನಪಾಗಿದೆ” ಎಂದು ಹೇಳಿದೆ. ಪಕ್ಷದ ವಕ್ತಾರ ವಿವೇಕ್ ರೆಡ್ಡಿ ಮಾಧ್ಯಮ ಚರ್ಚೆಯಲ್ಲಿ ಪ್ರಮುಖವಾಗಿ ಈ ಪ್ರತಿಕ್ರಿಯೆ ನೀಡಿದ್ದು, “ರಾಜ್ಯಸಭಾ ಸ್ಥಾನಕ್ಕೆ ಸಮರ್ಥ ವ್ಯಕ್ತಿಗಳ ಹುಡುಕಾಟ ಮಾಡುವಾಗ ನ್ಯಾಯಾಂಗದಲ್ಲಿ ಹಲವು ವರ್ಷಗಳ ದಕ್ಷ ಕಾರ್ಯನಿರ್ವಹಣೆ ಮಾಡಿರುವ ಗೋಗಾಯಿ ಅವರ ಹೆಸರು ಸಹಜವಾಗೇ ಪ್ರಸ್ತಾಪವಾಗಿತ್ತು. ಅವರ ದಕ್ಷತೆ ಮತ್ತು ಜನಪರ ಕಾಳಜಿಯ ಹಿನ್ನೆಲೆಯಲ್ಲಿ ಅವರನ್ನು ಮೇಲ್ಮನೆಗೆ ನೇಮಕ ಮಾಡಲಾಗಿದೆ. ಅದರಲ್ಲೇನು ತಪ್ಪಿದೆ” ಎಂದು ಪ್ರಶ್ನಿಸಿದ್ದಾರೆ.
ಆದರೆ, ನ್ಯಾ, ಮಿಶ್ರಾ ಪ್ರಕರಣಕ್ಕೂ, ಗೋಗಾಯಿ ಪ್ರಕರಣಕ್ಕೂ ವ್ಯತ್ಯಾಸವಿದೆ. ಮಿಶ್ರಾ ಅವರು ಸಿಜೆಐ ಆಗಿ ನಿವೃತ್ತರಾಗಿದ್ದು, 1991ರಲ್ಲಿ. ಆದರೆ, ಕಾಂಗ್ರೆಸ್ ಅವರಿಗೆ ರಾಜ್ಯಸಭಾ ಚುನಾವಣೆಗೆ ಟಿಕೆಟ್ ನೀಡಿದ್ದು 1998ರ ಹೊತ್ತಿಗೆ. ಅಂದರೆ, ಅವರ ವಿಷಯದಲ್ಲಿ ಸುಮಾರು 7 ವರ್ಷಗಳ ಅವಧಿಯ ಸುದೀರ್ಘ ಅಂತರವಿತ್ತು. ಅದೂ ಅಲ್ಲದೆ ಅವರಿಗೆ ಚುನಾವಣೆಗೆ ನಿಲ್ಲಲು ಟಿಕೆಟ್ ನೀಡಲಾಗಿತ್ತೇ ವಿನಃ ನಾಮನಿರ್ದೇಶನ ಮಾಡಿರಲಿಲ್ಲ. ಮತ್ತು ಹಾಗೆ ಟಿಕೆಟ್ ನೀಡಿದಾಗ ಕಾಂಗ್ರೆಸ್ ಅಧಿಕಾರದಲ್ಲಿಯೂ ಇರಲಿಲ್ಲ ಎಂಬುದನ್ನು ಗಮನಿಸಬೇಕು ಎಂದು ಹಿರಿಯ ವಕೀಲ ಸಂಜಯ್ ಹೆಗ್ಡೆ ಪ್ರತಿಕ್ರಿಯಿಸಿದ್ದಾರೆ.
ಈ ಹಿಂದೆ ನ್ಯಾ. ಪಿ ಸದಾಶಿವನ್ ಅವರನ್ನು ಕೂಡ ಮೋದಿ ಅವರ ಸರ್ಕಾರ, ಸಿಜೆಐ ಹುದ್ದೆಯಿಂದ ನಿವೃತ್ತರಾದ ಕೆಲವೇ ತಿಂಗಳಲ್ಲಿ ಕೇರಳದ ರಾಜ್ಯಪಾಲರಾಗಿ ನೇಮಕ ಮಾಡಿದಾಗಲೂ ಇಂತಹ ಆತಂಕ ಮತ್ತು ಕಾಳಜಿಯ ಮಾತುಗಳು ವ್ಯಕ್ತವಾಗಿದ್ದವು. 2014ರಲ್ಲಿ ಸಿಜೆಐ ಆಗಿ ನಿವೃತ್ತರಾಗಿದ್ದ ಸದಾಶಿವನ್ ಅವರನ್ನು ಅದೇ ವರ್ಷ ಕೇರಳದ ರಾಜ್ಯಪಾಲರನ್ನಾಗಿ ನೇಮಕ ಮಾಡಿ ಬಿಜೆಪಿ ಸರ್ಕಾರ ಆದೇಶ ಹೊರಡಿಸಿತ್ತು. 2014ರಿಂದ 2019ರವರೆಗೆ ಅವರು ಕೇರಳದ ರಾಜ್ಯಪಾಲರಾಗಿ ಕೆಲಸ ಮಾಡಿದ್ದರು.
ಇದೀಗ ರಂಜನ್ ಗೋಗಾಯಿ ವಿಷಯದಲ್ಲಿಯೂ ಅಂತಹದ್ದೇ ನೇಮಕಾತಿ ನಡೆದಿದ್ದು, ಮುಖ್ಯವಾಗಿ ರಾಜ್ಯಸಭೆಯ ಸದಸ್ಯರನ್ನಾಗಿ ಅವರನ್ನು ನೇರವಾಗಿ ನಾಮನಿರ್ದೇಶನ ಮಾಡಿರುವುದು ಆಳುವ ಸರ್ಕಾರ ಮತ್ತು ನ್ಯಾಯಾಂಗದ ನಡುವೆ ಇರಬೇಕಾದ ಅಂತರದ ವಿಷಯದಲ್ಲಿ ಸಂಪೂರ್ಣವಾಗಿ ರಾಜಿಮಾಡಿಕೊಂಡಂತಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆ ಹಿನ್ನೆಲೆಯಲ್ಲಿಯೇ ಕಳೆದ 24 ಗಂಟೆಯಲ್ಲಿ ಈ ವಿಷಯ ರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ ಮತ್ತು ಮೋದಿ ಅವರ ಸರ್ಕಾರ ನ್ಯಾಯಾಂಗ ವ್ಯವಸ್ಥೆಯನ್ನೇ ಭ್ರಷ್ಟಗೊಳಿಸಲು ನಡೆಸುತ್ತಿರುವ ಪ್ರಯತ್ನ ಇದು ಎಂಬ ಆತಂಕ ವ್ಯಕ್ತವಾಗಿದೆ.