ವಿದೇಶ ಹಾಗೂ ಹೊರರಾಜ್ಯಗಳಿಂದ ಬಂದವರನ್ನ ಕ್ವಾರೆಂಟೈನ್ ಮಾಡಲು ರಾಜ್ಯದ ಹಲವೆಡೆ ಕ್ವಾರೆಂಟೈನ್ ಕೇಂದ್ರಗಳನ್ನ ತೆರೆಯಲಾಗಿದೆ. ವಿಮಾನ, ರೈಲು ಅಥವಾ ಬಸ್‌ಗಳಲ್ಲಿ ಬಂದವರನ್ನ ಮನೆಯತ್ತ ಹೆಜ್ಜೆ ಹಾಕಲು ಬಿಡದೇ ಅವರನ್ನ ಗಡಿಯಲ್ಲಿ ಇಲ್ಲವೇ ಜಿಲ್ಲಾ ಕೇಂದ್ರಗಳಲ್ಲಿ ಕ್ವಾರೆಂಟೈನ್ ಗೆ ಒಳಪಡಿಸಲಾಗಿದೆ. ಬಹುತೇಕ ಮಂದಿಯನ್ನ ಯಾವುದಾದರೂ ಶಾಲಾ/ಕಾಲೇಜು, ಪ್ರವಾಸಿ ಮಂದಿರ, ಹೊಟೇಲ್, ಕಲ್ಯಾಣ ಮಂಟಪಗಳಲ್ಲಿ ವ್ಯವಸ್ಥೆಯನ್ನ ಮಾಡಲಾಗಿದೆ. ಆದರೆ ಈ ರೀತಿ ವ್ಯವಸ್ಥೆಗೆ ಅವಕಾಶ ಮಾಡಿಕೊಟ್ಟ ಯಾವುದೇ ಕಟ್ಟಡಗಳಲ್ಲಿ ಸಾರ್ವಜನಿಕ ವ್ಯವಹಾರಗಳಾಗಲೀ, ಇಲ್ಲವೇ ಸಾರ್ವಜನಿಕರಿಗೆ ಅವಕಾಶಗಳಾಗಲೀ ನೀಡಲಾಗಿಲ್ಲ. ಆದರೆ ಈ ರೀತಿ ಅವಕಾಶ ಮಾಡಿಕೊಟ್ಟ ಖಾಸಗಿ ತಾಣಗಳಿಗೆ ಕ್ವಾರೆಂಟೈನ್ ನಂತರ ಗ್ರಾಹಕರ ಆಗಮನದ ಬಗ್ಗೆ ಒಂದಿಷ್ಟು ಆತಂಕವೂ ಇದೆ. ಯಾಕೆಂದರೆ ರಾಜ್ಯದಲ್ಲಿ ಅದೆಷ್ಟೋ ಪ್ರವಾಸಿ ಮಂದಿರ, ಕಲ್ಯಾಣ ಮಂಟಪಗಳು, ಹಾಸ್ಟೆಲ್ ಗಳನ್ನ ಕ್ವಾರೆಂಟೈನ್ ಗೆ ಬಿಟ್ಟು ಕೊಡಲಾಗಿದೆ. ಅಂತೆಯೇ ಉಡುಪಿ ಜಿಲ್ಲಾಡಳಿತ ಇಂತಹ ಅಚ್ಚುಕಟ್ಟಿನ ವ್ಯವಸ್ಥೆ ಮಾಡಿದೆ.
ಮಾತ್ರವಲ್ಲದೇ ಈ ರೀತಿ ಅಚ್ಚುಕಟ್ಟಿನ ವ್ಯವಸ್ಥೆ ಮಾಡಲ್ಪಟ್ಟ ಕ್ವಾರೆಂಟೈನ್ ಕೇಂದ್ರದ ಪ್ರಚಾರ ನಡೆಸದಂತೆ ಸ್ವತಃ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಮೇ 11 ರಂದು ಮನವಿ ಮಾಡಿಕೊಂಡಿದ್ದಾರೆ. ವಿಶೇಷವಾಗಿ ಮಾಧ್ಯಮದ ವರದಿಗಾರರಿಗೆ ಯಾವುದೇ ಕ್ವಾರೆಂಟೈನ್ ಕೇಂದ್ರದ ಸುದ್ದಿಯಾಗಲೀ, ಫೋಟೋ ಸಹಿತ ವರದಿಯಾಗಲೀ ಮಾಡದಂತೆ ಜಿಲ್ಲಾಧಿಕಾರಿಯವರು ಕೇಳಿಕೊಂಡಿದ್ದರು. ಅಂತೆಯೇ ಉಡುಪಿ ಜಿಲ್ಲೆಯ ಪತ್ರಕರ್ತರು ಅದಕ್ಕೆ ತಕ್ಕಂತೆ ನಡೆದುಕೊಂಡಿದ್ದಾರೆ. ಅನಗತ್ಯವಾಗಿ ಕ್ವಾರೆಂಟೈನ್ ಕೇಂದ್ರದ ಬಳಿಗೆ ತೆರಳದೇ, ಫೋಟೋ ಕ್ಲಿಕ್ಕಿಸದೇ ಅಂತರ ಕಾಯ್ದುಕೊಂಡಿದ್ದಾರೆ. ಇದರಿಂದಾಗಿ ಹೆಚ್ಚಿನ ಸಂಖ್ಯೆಯ ಸಾರ್ವಜನಿಕರಿಗೂ ತಮ್ಮ ಜಿಲ್ಲೆಯ ಕ್ವಾರೆಂಟೈನ್ ಕೇಂದ್ರ ಯಾವುದು? ಅದರಲ್ಲಿ ಎಷ್ಟು ಜನರನ್ನ ಕ್ವಾರೆಂಟೈನ್ ಮಾಡಲಾಗಿದೆ? ಅನ್ನೋದರ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗುತ್ತಿರಲಿಲ್ಲ.

ಈ ರೀತಿ ಜಿಲ್ಲಾಡಳಿತ ಕ್ರಮ ಕೈಗೊಳ್ಳೋದಕ್ಕೂ ಒಂದು ಕಾರಣವಿತ್ತು. ಕಾರಣ, ಈ ರೀತಿ ಕ್ವಾರೆಂಟೈನ್ ಮಾಡಲು ನೀಡಿದ ಕೇಂದ್ರಗಳು ಬಹುತೇಕ ಖಾಸಗಿ ಹೊಟೇಲ್, ಶಾಲಾ/ ಕಾಲೇಜು, ಪ್ರವಾಸಿ ಮಂದಿರ ಹಾಗೂ ಕಲ್ಯಾಣ ಮಟಂಪಗಳಾಗಿದ್ದವು. ಆದ್ದರಿಂದ ಅವುಗಳ ಹೆಸರನ್ನ ನಮೂದಿಸಿದ್ದಲ್ಲಿ, ಅದು ಪತ್ರಿಕೆ ಓದುವ ಅಥವಾ ಸುದ್ದಿ ವೀಕ್ಷಿಸುವವರ ಮೇಲೆ ಪ್ರಭಾವ ಬೀರಿ ಕ್ವಾರೆಂಟೈನ್ ಬಳಿಕ ಅಂತಹ ಕಟ್ಟಡಗಳಿಗೆ ತೆರಳದೇ ಹೋದರೆ ಅಂತಹ ಕೇಂದ್ರಗಳು ವ್ಯಾಪಾರ ನಷ್ಟ ಅನುಭವಿಸಬೇಕಾಗಬಹುದು ಅನ್ನೋ ಒಂದೊಳ್ಳೆ ವಿಚಾರಕ್ಕಾಗಿಯೇ. ಆದರೆ ಅಚ್ಚರಿ ಅಂದ್ರೆ ಈ ರೀತಿ ಕ್ವಾರೆಂಟೈನ್ ಮಾಡಲ್ಪಟ್ಟ ಕೇಂದ್ರಗಳಿಗೆ ಉಡುಪಿ ಜಿಲ್ಲೆಯ ಜನಪ್ರತಿನಿಧಿಗಳು ಬಿಂದಾಸ್ ಆಗಿ ಭೇಟಿ ನೀಡುತ್ತಿದ್ದಾರೆ. ಮಾತ್ರವಲ್ಲದೇ ತಾವು ಹೋಗಿದ್ದು, ಅವರನ್ನ ಮಾತಾಡಿಸಿದ್ದು ಎಲ್ಲವೂ ಗೊತ್ತಾಗಬೇಕು ತಾನೆ? ಅದಕ್ಕಾಗಿ ತಮ್ಮ ಆಪ್ತ ಸಹಾಯಕರ ಬಳಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾರೆ. ಕ್ಲಿಕ್ಕಿಸಿಕೊಂಡವರೇ ಮಾಧ್ಯಮ ವರದಿಗಾರರ ಗ್ರೂಪ್ ಗಳಿಗೆ ರಾಶಿ ರಾಶಿ ಫೋಟೋಗಳು ಅಪ್‌ಲೋಡ್ ಮಾಡಿ ವಿಳಾಸ ಸಮೇತ ತಮ್ಮ ಭೇಟಿಯ ವಿವರ ನೀಡುತ್ತಾರೆ. ಹಾಗಿದ್ದರೆ ಮಾಧ್ಯಮದ ಪ್ರತಿನಿಧಿಗಳು ವರದಿ ಮಾಡುವುದಕ್ಕೆ ಇರುವ ನಿರ್ಬಂಧ, ಈ ಜನಪ್ರತಿನಿಧಿಗಳಿಗೇಕಿಲ್ಲ ಅನ್ನೋದು ಬಹುಮುಖ್ಯವಾಗಿ ಕಾಡುವ ಪ್ರಶ್ನೆ.
ಇಂತಹ ರೇಸ್ ನಿಂದ ಸ್ವತಃ ಸಚಿವರಾಗಿರುವ ಕೋಟ ಶ್ರೀನಿವಾಸ್ ಪೂಜಾರಿ ಅವರೂ ಹಿಂದೆ ಬಿದ್ದಿಲ್ಲ. ತಾವು ತೆರಳಿದ ಕ್ವಾರೆಂಟೈನ್ ಕೇಂದ್ರಗಳ ಫೋಟೋ, ವೀಡಿಯೋ ಸಮೇತ ಫೋಸ್ ನೀಡುವ ಇವರು ಆ ಕ್ವಾರೆಂಟೈನ್ ಕೇಂದ್ರ ಯಾವುದು? ಅಲ್ಲಿ ಎಷ್ಟು ಜನ ಇದ್ದಾರೆ? ಅವರು ಯಾರು? ಅದೆಲ್ಲವನ್ನೂ ಬಹಿರಂಗಪಡಿಸುತ್ತಾರೆ. ಅಂತೆಯೇ ಕಾರ್ಕಳ ಶಾಸಕ ಸುನಿಲ್ ಕುಮಾರ್, ಉಡುಪಿ ಶಾಸಕ ರಘುಪತಿ ಭಟ್ ಇವರು ಕೂಡಾ ತಮ್ಮ ತಮ್ಮ ವಾಟ್ಸಾಪ್ ಗ್ರೂಪ್‌ಗಳಲ್ಲಿ ತಮ್ಮ ಕ್ವಾರೆಂಟೈನ್ ಕೇಂದ್ರದ ಭೇಟಿಯ ಕಥೆಯನ್ನ ಬಹಿರಂಗಪಡಿಸುತ್ತಿದ್ದಾರೆ. ಇವರೇನೋ ಕ್ವಾರೆಂಟೈನ್ ವಿಚಾರದಲ್ಲೂ ರಾಜಕಾರಣ ಮಾಡಬಹುದು, ಆದರೆ ಕ್ವಾರೆಂಟೈನ್ ನಲ್ಲಿರುವ ಮಂದಿಗಳಿಗೆ ಖಾಸಗಿತನ ಅನ್ನೋದು ಇರುತ್ತೆ ಅನ್ನೋ ಜ್ಞಾನ ಈ ರಾಜಕಾರಣಿಗಳಿಗೆ ಇರಬೇಕಲ್ವೇ? ತನಗೊಂದು ಕಾನೂನು, ಊರಿಗೊಂದು ಕಾನೂನು ಎಂದು ಉಡುಪಿಯ ಜನಪ್ರತಿನಿಧಿಗಳು ಭಾವಿಸಿಕೊಂಡಂತಿದೆ. ಮಾಧ್ಯಮಗಳಿಗೆ ಕ್ವಾರೆಂಟೈನ್ ಕೇಂದ್ರ ನಿರ್ಬಂಧ ವಿಧಿಸಿದ್ದ ಉಡುಪಿ ಜಿಲ್ಲಾಧಿಕಾರಿಯವರು ಇಂತಹ ಪ್ರಚಾರಪ್ರಿಯ ರಾಜಕಾರಣಿಗಳಿಗೂ ಕೇಂದ್ರದತ್ತ ಸುಳಿದಾಡದಂತೆ, ಒಂದು ವೇಳೆ ಹೋಗಿದ್ದರೂ ಯೋಗಕ್ಷೇಮ ವಿಚಾರಿಸಿ ಯಾವುದೇ ಫೊಟೋ, ವೀಡಿಯೋ ತೆಗೆಯದಂತೆ ನಿಯಮ ಪಾಲಿಸಲು ಸೂಚಿಸಬೇಕಿದೆ.
ಕೋವಿಡ್-19 ಪೀಡಿತ ರಾಷ್ಟ್ರ ಹಾಗೂ ವಿವಿಧ ರಾಜ್ಯಗಳಿಂದ ಒಟ್ಟು 7355 ಮಂದಿ ಉಡುಪಿ ಜಿಲ್ಲೆಗೆ ಹತ್ತು ದಿನಗಳ ಹಿಂದಷ್ಟೇ ಬಂದಿದ್ದಾರೆ. ದುಬಾಯಿಯಿಂದ ಮಂಗಳೂರಿಗೆ ಆಗಮಿಸಿದ ವಿಮಾನದಲ್ಲಿ ಉಡುಪಿ ಜಿಲ್ಲೆಯ 49 ಮಂದಿ ಪ್ರಯಾಣಿಕರೂ ಸೇರಿದ್ದರು. ಅದುವರೆಗೂ ಗ್ರೀನ್ ಝೋನ್ ಹಾಗೂ ದೇಶದಲ್ಲೇ ಮೊದಲ ಬಾರಿಗೆ ಗ್ರೀನ್ ಝೋನ್ ಎಂಟ್ರಿ ಪಡೆದಿದ್ದ ಜಿಲ್ಲೆಯೂ ಆಗಿದ್ದ ಉಡುಪಿ ಆ ನಂತರದ ದಿನಗಳಲ್ಲಿ ಮತ್ತೆ ಕರೋನಾ ಹಾಟ್ ಸ್ಪಾಟ್ ಆದವು. ಮೇ 21 ರಂದು ಒಂದೇ ದಿನ 25 ಪ್ರಕರಣಗಳು ಹೊಸದಾಗಿ ಪತ್ತೆಯಾದವು. ಆದರೆ ಈ ಎಲ್ಲಾ ಸೋಂಕಿತರು ಮಹಾರಾಷ್ಟ್ರದಿಂದ ಬಂದು ಕ್ವಾರೆಂಟೈನ್ ಗೆ ಒಳಪಟ್ಟವರಾಗಿದ್ದರು. ಇದುವರೆಗೂ ಉಡುಪಿ ಜಿಲ್ಲೆಯಲ್ಲಿ 50 ಮಂದಿ ಕರೋನಾ ಸೋಂಕಿತರು ಪತ್ತೆಯಾದರೆ, ಅದರಲ್ಲಿ ಒಂದು ಸಾವು ಪ್ರಕರಣ ವರದಿಯಾಗಿದೆ.
ಒಟ್ಟಿನಲ್ಲಿ ಕರೋನಾ ಕ್ವಾರೆಂಟೈನ್ ಕೇಂದ್ರದ ಸುದ್ದಿ ಮಾಡುವುದು ನಿಜಕ್ಕೂ ಸಮಂಜಸವೆನಿಸದು. ಯಾಕೆಂದರೆ, ಕೆಲವು ಹೊಟೇಲ್, ಕಲ್ಯಾಣ ಮಂಟಪಗಳು ಕ್ವಾರೆಂಟೈನ್ ಗಾಗಿ ತಮ್ಮ ಕಟ್ಟಡ ನೀಡುವ ಮೂಲಕ ಔದಾರ್ಯ ಮೆರೆದಿದ್ದಾರೆ. ಆದರೆ ಶಾಸಕರು, ಸಚಿವರು ಸೇರಿ ಅದನ್ನ ತಮ್ಮ ಪ್ರಚಾರಕ್ಕಾಗಿ ಊರಿಡೀ ಡಂಗುರ ಸಾರುವ ಕೆಲಸ ಮಾಡುತ್ತಿರುವುದು ನಿಜಕ್ಕೂ ಅಚ್ಚರಿಯೇ ಸರಿ.






