ಈಗ ಎಲ್ಲೆಡೆ ಆನ್ಲೈನ್ ಪಾಠದ ಅಬ್ಬರ. ಹಲವರಿಗೆ ಇದು ಖುಷಿ ಹಾಗೂ ಸಮಾಧಾನಕರ ಸಂಗತಿಯಾದರೆ, ದಿನಗೂಲಿ ಕೆಲಸ ಮಾಡುತ್ತ ಬದುಕಿನ ಬಂಡಿಯನ್ನು ಎಳೆಯುತ್ತಿರುವ ಕೆಲವು ಜನರಿಗೆ ಮಾತ್ರ ಇದು ಬಿಸಿ ತುಪ್ಪದಂತಾಗಿದೆ.
ನರಗುಂದದ ಹತ್ತಿರ ರೆಡ್ಡೇರ್ ನಾಗನೂರ ಎಂಬ ಗ್ರಾಮದ ಮಹಿಳೆ, ತಮ್ಮ ಮಕ್ಕಳ ಪಾಠಕ್ಕಾಗಿ ಮಾಂಗಲ್ಯವನ್ನು ಅಡವಿಟ್ಟಿದ್ದಾರೆ. ಶಾಲೆಯ ಶಿಕ್ಷಕರು ಮನೆಯಲ್ಲಿ ಟಿವಿ ಇದ್ದರೆ ಚಂದನ ವಾಹಿನಿಯಲ್ಲಿ ಬರುವ ಕಾರ್ಯಕ್ರಮದಿಂದ ಮಕ್ಕಳು ಪಾಠ ಕಲಿಯಬಹುದು ಎಂದು ತಿಳಿಸಿದಾಗ, ಇವರಿಗೆ ದಿಕ್ಕೆ ತೋಚದಂತಾಯಿತು. ಮನೆಯಲ್ಲಿದ್ದ ಹಳೆಯ ಟಿವಿ ಕೂಡ ಸುಟ್ಟು ಹೋಗಿತ್ತು. ಈ ವಿಷಯವನ್ನು ಗಂಡನಿಗೆ ತಿಳಿಸಿದಾಗ ಸದ್ಯಕ್ಕೆ ಹಣ ಹೊಂದಿಸುವ ಕಷ್ಟ ಎಂದರು.
ಲಾಕ್ ಡೌನ್ ಸಡಿಲಿಕೆಯ ನಂತರ ಆನ್ಲೈನ್ ನಲ್ಲೇ ಪಾಠಗಳು ಆರಂಭವಾಗಿದ್ದರಿಂದ, ಚಂದನ ಟಿವಿಯಲ್ಲಿ ಧಾರವಾಹಿಯಂತೆ ಪಾಠಗಳು ಬರುತ್ತವೆ. ಅವು ಮಕ್ಕಳಿಗೆ ಓದಲು ಇನ್ನೂ ಸಹಕಾರಿ ಎಂದು ಅಕ್ಕಪಕ್ಕದವರೂ ಇವರಿಗೆ ತಿಳಿಸಿದರು. ಸಾಲ ಕೇಳಬೇಕು ಎಂದರೆ ಎಲ್ಲರೂ ಕರೋನಾ ದಿಂದ ಕಷ್ಟ ಪಡುತ್ತಿದ್ದಾರೆ. ಹಣ ಕೊಡಲು ಯಾರೂ ಸಿದ್ಧವಿರಲಿಲ್ಲ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಹಾಗಾದರೆ ಮುಂದೆ ಏನು? ಮಕ್ಕಳ ಶಿಕ್ಷಣ ಹೇಗೆ? ಹೀಗೆ ಆದರೆ ಇವರೂ ಮುಂದೆ ನಮ್ಮಂತೆ ಕಷ್ಟ ಪಡಬೇಕು ಎಂದು ಬೇರೆ ದಾರಿ ತೋಚದೆ ಕಸ್ತೂರಿ ಎಂಬ ಚಲವಾದಿ ಮಹಿಳೆ ಟಿವಿ ಕೊಂಡುಕೊಳ್ಳಲು ಮಾಂಗಲ್ಯವನ್ನು ಅಡವಿಟ್ಟರು. ಮಾಂಗಲ್ಯ ಅಡವಿಟ್ಟಿದ್ದಕ್ಕೆ 20 ಸಾವಿರ ರೂಪಾಯಿ ಸಿಕ್ಕಿತು, 14 ಸಾವಿರ ರೂಪಾಯಿಯ 32 ಇಂಚಿನ ಟಿವಿ ಖರೀದಿಸಿದರು.
ಕಸ್ತೂರಿಯವರ ಈ ಕಾರ್ಯಕ್ಕೆ ಗ್ರಾಮದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಜೊತೆಗೆ ಮಾಂಗಲ್ಯ ಅಡವಿಡುವಂತಹ ಪರಿಸ್ಥಿತಿಗೆ ಬೇಸರ ವ್ಯಕ್ತಪಡಿಸಿದರು.
ಇದರ ಬಗ್ಗೆ ಕೇಳಿದಾಗ ಕಸ್ತೂರಿ ಅವರು, “ಏನ ಮಾಡಬೇಕ್ರಿ ನನಗೂ ಬ್ಯಾರೆ ದಾರಿ ಕಾಣಲಿಲ್ಲ. ನನ್ನ ಕಡೆಗೆ 12 ಗ್ರಾಂ ತೂಕದ ಬಂಗಾರದ ತಾಳಿ ಇತ್ತು. ನನಗೆ ನಾಲ್ಕು ಮಕ್ಕಳಿದ್ದಾರೆ. ಹಿರಿಯ ಮಗಳಿಗೆ ಮದುವೆಯಾಗಿದೆ. ಸಾಲ ಮಾಡಿಕೊಂಡಿದ್ದೇನೆ. ಈಗ 7 ನೇಯ ಹಾಗೂ 8 ನೇಯ ಕ್ಲಾಸಿನಲ್ಲಿ ಇಬ್ಬರು ಮಕ್ಕಳು ಓದುತ್ತಿದ್ದಾರೆ. ಅವರಾದರೂ ಚೆನ್ನಾಗಿ ಓದಿ ದೊಡ್ಡ ಹುದ್ದೆಗೆ ಏರಲಿ ಎಂಬುದು ನನ್ನ ಆಸೆ. ಅದಕ್ಕೆ ತಾಳಿ ಅಡವಿಟ್ಟಿದ್ದೇನೆ”. ಎಂದರು.
ಮನೆಗೆ ಹೊಸ ಟಿವಿ ಬಂದ ಕಾರಣ ಮಕ್ಕಳಿಬ್ಬರೂ ಆನ್ಲೈನ್ ಪಾಠ ಕೇಳುವ ಖುಷಿಯಲ್ಲಿದ್ದಾರೆ. “ನಮ್ಮ ತಂದೆ ತಾಯಿ ನಮಗಾಗಿ ತಾಳಿಯನ್ನು ಅಡವಿಟ್ಟು ಟಿವಿ ತಂದಿದ್ದಾರೆ. ನಾವೂ ಕಷ್ಟ ಪಟ್ಟು ಕಲಿಯುತ್ತೇವೆ. ದಿನವೂ ಆಸಕ್ತಿಯಿಂದ ಪಾಠ ಕೇಳುತ್ತಿದ್ದೇವೆ” ಎಂದಿದ್ದಾರೆ