ಹಿಂದುತ್ವದ ಪ್ರಯೋಗ ಶಾಲೆ ಎಂದೇ ಕರೆಸಿಕೊಳ್ಳುವ ಮಂಗಳೂರು ಕಳೆದ ವರ್ಷ ಇದೇ ಹೊತ್ತಿಗೆ ಹಲವು ಅನಪೇಕ್ಷಿತ ಘಟನೆಗಳಿಗೆ ಸಾಕ್ಷಿಯಾಗಿತ್ತು. ಕರ್ನಾಟಕದಲ್ಲಿ ಅತಿ ಹೆಚ್ಚು ವಿದ್ಯಾವಂತಿರುವ, ಅತ್ಯತ್ತಮ ಶಿಕ್ಷಣ ಸಂಸ್ಥೆಗಳಿರುವ ದ.ಕ ಜಿಲ್ಲೆ ಸದಾ ಕೋಮು ಸಾಮರಸ್ಯ ಕೆಡಿಸಿಕೊಂಡು ಸುದ್ದಿಯಾಗುತ್ತಲೇ ಇರುತ್ತದೆ. 2019ರ ಡಿಸೆಂಬರ್ 19ರಂದು ಈ ಜಿಲ್ಲೆ ಮತ್ತೊಮ್ಮೆ ಕೆಟ್ಟ ಕಾರಣಗಳಿಗಾಗಿ ಸುದ್ದಿಯಾಯಿತು.
ಡಿಸೆಂಬರ್19ರಂದು ನಗರದ ವಿವಿಧ ಭಾಗಗಳಲ್ಲಿ CAA ವಿರೋಧಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಅದಕ್ಕೆ ಪೊಲೀಸರ ಅನುಮತಿಯನ್ನೂ ಪಡೆದುಕೊಳ್ಳಲಾಗಿತ್ತು. ಆದರೆ ಏಕಾಏಕಿ ಅನುಮತಿ ರದ್ದು ಪಡಿಸಿದ ಪೊಲೀಸರು ಪ್ರತಿಭಟನೆಗೆ ಜನ ಸೇರುವಂತಿಲ್ಲ ಎಂದರು. ಆದರೆ ಈ ಬಗ್ಗೆ ಅರಿವಿಲ್ಲದ ಜನ ಮೊದಲೇ ನಿರ್ಧರಿಸಿದಂತೆ ಪ್ರತಿಭಟನೆಗೆ ಸೇರಿದರು. ಯಾವ ಸೂಚನೆಯನ್ನೂ ನೀಡದ ಪೊಲೀಸರು ಒಮ್ಮೆಲೆ ಲಾಠಿ ಛಾರ್ಜ್ ಆರಂಭಿಸಿದರು.
ಅದರ ಬೆನ್ನಲ್ಲೇ ಗೋಲೀಬಾರ್ ಶುರುವಾಯಿತು. ಮೀನು ಮಾರುಕಟ್ಟೆಯಲ್ಲಿ ಕೆಲಸ ಮಾಡುವ ಅಬ್ದುಲ್ ಜಲೀಲ್ ಮತ್ತು ನೌಶೀನ್ ಎಂಬ ಅಮಾಯಕರಿಬ್ಬರು ಪೊಲೀಸ್ ಗುಂಡಿಗೆ ಬಲಿಯಾದರು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಅಪರಾಧವಲ್ಲ. ಆದರೆ ಮಂಗಳೂರಿನ ಘಟನೆಯಲ್ಲಿ ಪೊಲೀಸ್ ಗುಂಡಿಗೆ ಬಲಿಯಾದವರ ಮನೆಯವರ ಪ್ರಕಾರ ಅವರಿಬ್ಬರೂ ಪ್ರತಿಭಟನೆಯಲ್ಲಿ ಭಾಗಿಯಾದವರೇ ಅಲ್ಲ. ಆದರೆ ತಮ್ಮ ಕೃತ್ಯವನ್ನು ಸಮರ್ಥಿಸಿಕೊಳ್ಳಲು ಪೊಲೀಸರು ಅನಿಯಂತ್ರಿತ ಗುಂಪನ್ನು ಚದುರಿಸಲು ಗೋಲಿಬಾರ್ ಮಾಡಬೇಕಾಯಿತು ಎಂದರು.
ವಿಡಿಯೋ ಒಂದರಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಶಾಂತರಾಮ್ ಕುಂದರ್ ಅವರು ‘ಒಂದು ಜೀವವೂ ಹೋಗಿಲ್ಲ’ ಎಂದು ವಿಷಾದ ವ್ಯಕ್ತಪಡಿಸುವುದು ರೆಕಾರ್ಡ್ ಆಗಿ ರಾಜ್ಯಾದ್ಯಂತ ಮಂಗಳೂರು ಪೊಲೀಸರ ಕಾರ್ಯಸೂಚಿಯ ಬಗ್ಗೆ ಚರ್ಚೆಯಾಗಿತ್ತು. ಒಂದು ರೀತಿಯಲ್ಲಿ CAA ವಿರೋಧಿ ಪ್ರತಿಭಟನೆಯಲ್ಲಿ ದೇಶದಲ್ಲಿ ಮೊದಲ ಬಲಿಯಾದದ್ದೇ ಮಂಗಳೂರಿನಲ್ಲಿ.
ಏಕಾಏಕಿ ನಡೆದ ದಾಳಿಯಿಂದ ಜೀವ ಕಳೆದುಕೊಂಡ ಇಬ್ಬರ ಕುಟುಂಬಕ್ಕೆ ತಲಾ ಐದು ಲಕ್ಷದಂತೆ ಪರಿಹಾರ ಘೋಷಿಸಿದ ಸರಕಾರ ಅದರ ಬೆನ್ನಲ್ಲೇ ಸಂಘಪರಿವಾರದ ಒತ್ತಡಕ್ಕೆ ಮಣಿದು ಆ ಘೋಷಣೆಯನ್ನೇ ರದ್ದು ಪಡಿಸಿತು. ಚುನಾಯಿತ ಸರ್ಕಾರವೊಂದು ಯಾವುದೋ ಸಂಘವೊಂದರ ಒತ್ತಡಕ್ಕೆ ಮಣಿದು ಪರಿಹಾರವನ್ನೇ ರದ್ದುಗೊಳಿಸಿದ ಅಮಾನವೀಯತೆ ಪ್ರದರ್ಶಿಸಿತು. ಜನರನ್ನು ಪ್ರತಿನಿಧಿಸದ, ಜನರಿಂದ ಚುನಾಯಿತರಾಗದ ಸಂಘ ಸರ್ಕಾರದ ನಿರ್ಧಾರವನ್ನು ಈ ಮಟ್ಟದಲ್ಲಿ ಪ್ರಭಾವಿಸುತ್ತದೆ ಎನ್ನುವುದು ಪ್ರಜಾಪ್ರಭುತ್ವಕ್ಕೇ ಮಾರಕ.
ಅದೇ ದಿನ ಸಂಜೆ ದ.ಕ ಜಿಲ್ಲೆಯಾದ್ಯಂತ ಮತ್ತು ಉಡುಪಿ ಜಿಲ್ಲೆಯ ಹಲವೆಡೆ ಇಂಟರ್ನೆಟ್ ಸ್ಥಗಿತಗೊಳಿಸಲಾಯಿತು. ಈ ಮೂಲಜ ಇಡೀ ಜಿಲ್ಲೆಯೊಂದರ ಮಾಹಿತಿ ಪಡೆದುಕೊಳ್ಳುವ, ಹಂಚುವ ಹಕ್ಕೊಂದನ್ನು ಹೇಗೆ ಹತ್ತಿಕ್ಕಬಹುದು ಎಂಬುವುದಕ್ಕೂ ಮಂಗಳೂರು ಸಾಕ್ಷಿಯಾಯಿತು. ಪೊಲೀಸರ, ಆಡಳಿತದ ದೌರ್ಜನ್ಯವನ್ನು ಮುಚ್ಚಿಡಲೆಂದೇ ಜಿಲ್ಲೆಯ ಮೇಲೆ ಐದು ದಿನಗಳ ಮೇಲೆ ಕರ್ಫ್ಯೂ ಹೇರಿ ಇಂಟರ್ನೆಟ್ ಸ್ಥಗಿತಗೊಳಿಸಲಾಯಿತು ಎಂದು ಸ್ಥಳೀಯರು ಆರೋಪಿಸುತ್ತಾರೆ. ಕಾಶ್ಮೀರದಲ್ಲಿ ಇಂಟರ್ನೆಟ್ ಸ್ಥಗಿತಕೊಂಡದ್ದು ಗೊತ್ತಿದ್ದ, ಇಂದಿರಾಗಾಂಧಿ ಕಾಲದಲ್ಲಿ ಹೇರಲಾಗಿದ್ದ ತುರ್ತುಪರಿಸ್ಥಿತಿಯ ಬಗ್ಗೆ ಕೇಳಿ ಗೊತ್ತಿದ್ದ ಈ ತಲೆಮಾರು ಸ್ವತಃ ಇಂತಹ ಎಮರ್ಜೆನ್ಸಿಗೆ ಸಾಕ್ಷಿಯಾಯಿತು. ಮಂಗಳೂರಲ್ಲಿ ಇಂಟರ್ನೆಟ್ ಸ್ಥಗಿತವಾದ ಕೆಲ ದಿನಗಳಲ್ಲಿ ದೆಹಲಿ, ಉತ್ತರ ಪ್ರದೇಶ ಮತ್ತು ದೇಶದ ಇತರೆಡೆಯೂ ಸ್ಥಗಿತವಾಯಿತು. 2019ನೇ ವರ್ಷದಲ್ಲಿ ಇಡೀ ಭಾರತದಲ್ಲಿ ಸುಮಾರು 106 ಬಾರಿ ಇಂಟರ್ನೆಟ್ ಸ್ಥಗಿತವಾಗಿದೆ. ಇದು ಪ್ರಧಾನಿ ನರೇಂದ್ರ ಮೋದಿಯವರು ಸ್ವತಃ ಮುನ್ನಲೆಗೆ ತಂದ ‘ಡಿಜಿಟಲ್ ಇಂಡಿಯಾ’ದ ಕಲ್ಪನೆಯನ್ನೇ ವಿಡಂಬಿಸುತ್ತದೆ.
Also Read: ಮಂಗಳೂರು ಗೋಲಿಬಾರ್: ನ್ಯಾಯಾಂಗ ತನಿಖಾ ವರದಿ ಸರ್ಕಾರಕ್ಕೆ ಸಲ್ಲಿಕೆ
ಭಾರತದಂತಹ ಅತ್ಯಂತ ಪ್ರಗತಿಪರ ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡಿರುವ ದೇಶದಲ್ಲಿ ಈ ರೀತಿ ಪ್ರಜೆಗಳ ಹಕ್ಕನ್ನು ಮೊಟಕುಗೊಳಿಸುವುದು, ಸರ್ಕಾರಿ ಸಂಸ್ಥೆಗಳನ್ನೇ ಬಳಸಿಕೊಂಡು ತಮ್ಮ ಸಿದ್ಧಾಂತಗಳನ್ನು ಒಪ್ಪದವರನ್ನು ಹಿಂಸಿಸುವುದು, ಬಲ ಪ್ರಯೋಗ ನಡೆಸುವುದು ಪ್ರಜಾಪ್ರಭುತ್ವಕ್ಕೆ ಮಾರಕ. ಆನ್ಲೈನ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ, ಸಂವಹನ ಮಾಡುವ, ಸಂಘಟಿತರಾಗುವ ಮೂಲಭೂತ ಹಕ್ಕನ್ನು ಕಸಿದುಕೊಳ್ಳುವ ಅಧಿಕಾರವೇ ಸರ್ಕಾರಕ್ಕಿರಬಾರದು.
ಸೆಕ್ಷನ್ 144ರ ಅಡಿ ದೇಶದ ಭದ್ರತೆಗೆ ಅಪಾಯವಾದಾಗ ಸರ್ಕಾರ ವಾಕ್ ಸ್ವಾತಂತ್ರ್ಯ ಮತ್ತು ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯದ ಮೇಲೆ ಸರ್ಕಾರಕ್ಕೆ ಸಕಾರಣ ನಿರ್ಬಂಧಗಳನ್ನು ಹೇರಲು ಅವಕಾಶವಿದೆ. ಆದರೆ ಸೆಕ್ಷನ್ 144ರ ಅಡಿ ಪ್ರಾಪ್ತವಾದ ಅಧಿಕಾರವನ್ನು ಸರ್ಕಾರ, ಅಧಿಕಾರಿಗಳು, ಪ್ರಜೆಗಳ ಜನತಾಂತ್ರಿಕ ಹಕ್ಕುಗಳ ನ್ಯಾಯಬದ್ಧ ಮಂಡನೆ ಅಥವಾ ಪ್ರತಿಭಟನಾ ಸ್ವಾತಂತ್ರ್ವದ ವಿರುದ್ಧ ಬಳಸುವುದು ಅಧಿಕಾರದ ದುರ್ಬಳಕೆಯಾಗುತ್ತದೆ. 2019ರಲ್ಲಿ ಕೇರಳ ಹೈಕೋರ್ಟ್ ಫಹೀಮಾ ಶಿರೀನ್ ಮೊಕದ್ದಮೆಯಲ್ಲಿ ಒಂದು ಮಹತ್ವದ ತೀರ್ಪು ಕೊಟ್ಟಿತ್ತು. ಇಂಟರ್ನೆಟ್ ಬಳಕೆ ಸ್ವಾತಂತ್ರ್ಯವನ್ನೂ ಮೂಲಭೂತ ಹಕ್ಕೆಂದೇ ಪರಿಗಣಿಸಬೇಕು ಎಂಬುದೇ ಆ ತೀರ್ಪು. ಬ್ರಾಡ್ಬ್ಯಾಂಡ್ ಸಂಪರ್ಕ ಪಡೆಯುವುದು ಶಿಕ್ಷಣ, ಆರೋಗ್ಯಗಳಂಥ ಮೂಲ ಅಗತ್ಯವೆಂದೇ 2012ರ ರಾಷ್ಟ್ರೀಯ ಟೆಲಿಕಾಂ ನೀತಿಯೂ ಹೇಳುತ್ತದೆ.
Also Read: ಮಂಗಳೂರು ಗೋಲಿಬಾರ್, ದೆಹಲಿ ಕೋಮು ಗಲಭೆ ಪ್ರಭುತ್ವ ಪ್ರೇರಿತವೇ? ಅನುಮಾನಕ್ಕೀಡಾದ ಚಾರ್ಜ್ ಶೀಟ್
ಯಾವುದೇ ಅನ್ಯಾಯ, ಅವ್ಯವಸ್ಥೆಯ ವಿರುದ್ಧ ಜನಾಭಿಪ್ರಾಯ ರೂಪುಗೊಳಿಸುವ, ಮಾಹಿತಿಯ ವಿಫುಲ ಹರಿವಿಗೆ ಅವಕಾಶ ನೀಡುವ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಉತ್ತೇಜನ ನೀಡುವ ಇಂಟರ್ನೆಟ್ ಈಗ ಅತ್ಯಂತ ಪ್ರಭಾವಶಾಲಿ ಮಾಧ್ಯಮವಾಗಿದೆ. ಆದರೆ ಪ್ರತಿರೋಧವನ್ನು ಹತ್ತಿಕ್ಕುವುದನ್ನೇ ಚಾಳಿಯಾಗಿಸಿಕೊಂಡಿರುವ ಕೇಂದ್ರ ಸರ್ಕಾರಕ್ಕೆ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸುವುದು ಅತ್ಯಂತ ಸುಲಭ ಮಾರ್ಗವಾಗಿ ಕಾಣಿಸುವುದರಲ್ಲಿ ಅಚ್ಚರಿಯೇನಿಲ್ಲ.
ಆದರೆ ಭಾರತ ಸರ್ಕಾರ ಇಂಟರ್ನೆಟ್ ಸ್ಥಗಿತಗೊಳಿಸುವ ಕ್ರಮವನ್ನು ಪದೇಪದೇ ಅನುಸರಿಸುತ್ತಿದ್ದು, ಜಗತ್ತಿನ ಇಂಟರ್ನೆಟ್ ಶಟ್ಡೌನ್ ರಾಜಧಾನಿ ಎಂದು ಜಾಗತಿಕ ಟೀಕೆಗೆ ಗುರಿಯಾಗಿದೆ. ಹಲವು ಜಾಗತಿಕ ಪತ್ರಿಕೆಗಳು ಇಂಟರ್ನೆಟ್ ಸ್ಥಗಿತಗೊಳಿಸುವ ಸರ್ಕಾರದ ಕ್ರಮವನ್ನು ಟೀಕಿಸುತ್ತಿದ್ದು ಸರ್ವಾಧಿಕಾರಿ ಹಾದಿಯನ್ನು ತುಳಿಯುತ್ತಿರುವ ಬಗ್ಗೆ ಆತಂಕವನ್ನು ವ್ಯಕ್ತಪಡಿಸಿವೆ.