“ಕೋಮ್ರಾಜ್ಗೆ ಕೇವಲ ಮೂವತ್ತಾರು ವರ್ಷ ಕಣ್ರೀ, ಸಾಯೋ ವಯಸ್ಸಾ ಅದು, ಮಂಗನ ಕಾಯಿಲೆ ಅಲ್ಲ ಅದು ಅನ್ನನಾಳ ಸಂಬಂಧಿ ರೋಗ ಅಂತಾರಲ್ರೀ ಅರೋಗ್ಯ ಅಧಿಕಾರಿಗಳು,” ಅಂತ ಸಿಟ್ಟಾಗಿದ್ದ ಸ್ವಯಂಸೇವಕ ಅರಳಗೋಡಿನ ಶಿವರಾಜ್ ವ್ಯವಸ್ಥೆ ವಿರುದ್ಧ ಹರಿಹಾಯ್ದರು. ಶನಿವಾರ ಮೃತರಾದ ಕೋಮರಾಜ್ ಜೈನ್ ಬಡವ, ಚಿಕಿತ್ಸೆಗೆ ಹಣವಿಲ್ಲದೇ ತೀರಿಕೊಂಡ. ಎಳೆ ಮಗು, ಪತ್ನಿ ಹಾಗೂ ಮೂರು ವರ್ಷದ ಮಗಳು ಕಟ್ಟೆಮೇಲೆ ಕೂತು ಅಳುತ್ತಿದ್ದರು. ತಂದೆ-ತಾಯಿ ಹಾಗೂ ಅಣ್ಣನಿಗೆ ದಿಕ್ಕು ತೋಚದಂತಾಗಿತ್ತು. ರೊಚ್ಚಿಗೆದ್ದ ಹಳ್ಳಿಯವರು ಮೃತ ಶವವನ್ನ ಇಟ್ಟುಕೊಂಡು ಭಾನುವಾರ ಪ್ರತಿಭಟನೆ ನಡೆಸಿದರು. ಅಲ್ಲಿಗೆ ಕಾಂಗ್ರೆಸ್ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ಸೇರಿ ಹಲವರು ಆಗಮಿಸಿದರು. ಶಾಸಕ ಹರತಾಳು ಹಾಲಪ್ಪ ಕೂಡ ಮಧ್ಯಾಹ್ನದ ನಂತರ ಆಗಮಿಸಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸರಗೊಂಡರು. ವಿಧಾನಸಭೆಯಲ್ಲಿ ಇದರ ಬಗ್ಗೆ ದನಿ ಎತ್ತುವ ಭರವಸೆ ನೀಡಿದರು. ಅದರಂತೆ ಇಂದು ಆರೋಗ್ಯ ಸಚಿವರು ಹಾಗೂ ಸರ್ಕಾರಕ್ಕೆ ಜಾಡಿಸಿದ್ದಾರೆ ಅಷ್ಟೇ.
ತಮ್ಮದೇ ಸರ್ಕಾರವಿದ್ದರೂ ಮಲೆನಾಡಿನ ಶಾಸಕರಾದ ಹರತಾಳು ಹಾಲಪ್ಪ ಹಾಗೂ ಆರಗ ಜ್ಞಾನೇಂದ್ರ ಸಿಟ್ಟಾಗಲು ಕಾರಣಗಳಿವೆ. ಈ ವರ್ಷ ಮಂಗನ ಕಾಯಿಲೆಗೆ ಮೂವರ ಬಲಿಯಾಗಿದ್ದಾರೆ ಆದರೆ ಆರೋಗ್ಯ ಇಲಾಖೆ ಪ್ರಕಾರ ಇದುವರೆಗೆ ಓರ್ವ ಮಂಡವಳ್ಳಿ ಗ್ರಾಮದ ಚೌಡಯ್ಯ ಮಾತ್ರ ಸಾವನ್ನಪ್ಪಿದ್ದಾನಂತೆ. ಯಾರೇ ಮೃತರಾದರೂ ಮಂಗನ ಕಾಯಿಲೆಯಿಂದಲೇ ಎಂದು ಹೇಳಲಾಗುತ್ತೆ ಎಂಬುದು ಆರೋಗ್ಯಾಧಿಕಾರಿಗಳ ತಕರಾರು. ಆದರೆ ಮಂಗನಕಾಯಿಲೆಯ ಇತಿಹಾಸ ನೋಡಿದರೆ ಸರ್ಕಾರಗಳ ನಿರ್ಲಕ್ಷ್ಯವೇ ಎದ್ದು ಕಾಣುತ್ತೆ. ಇಷ್ಟೊಂದು ಪ್ರಮಾಣದ ಸಾವುನೋವುಗಳಾದರೂ ಕೂಡಾ ಒಂದೇ ಒಂದು ಪರಿಣಾಮಕಾರಿ ಸಂಶೋಧನೆ ನಡೆದಿಲ್ಲ. ಸಮಗ್ರ ವರದಿಯನ್ನೂ ನೀಡಿಲ್ಲ. ಈಗಂತೂ ಕರೋನಾ ಆರ್ಭಟದಲ್ಲಿ ಮಂಗನ ಕಾಯಿಲೆಯನ್ನ ಆರೋಗ್ಯ ಇಲಾಖೆ ಸಂಪೂರ್ಣವಾಗಿ ಕಡೆಗಣಿಸಿದೆ.
ಮಂಗನಕಾಯಿಲೆಯನ್ನ ಕ್ಯಾಸನೂರು ಫಾರೆಸ್ಟ್ ಡಿಸೀಜ್ (KFD) ಎಂದು ಕರೆಯುತ್ತಾರೆ. ಇದರ ಮೂಲ ಸಾಗರ ಸೊರಬದ ನಡುವಿನ ಹಳ್ಳಿ ಕ್ಯಾಸನೂರು. ಈಗ ಈ ಕಾಯಿಲೆಯ ರೌದ್ರಾವತಾರ ಅರಳಗೋಡಿನ ಜನರನ್ನ ಮರಣಶ್ಯದಲ್ಲಿ ಮಲಗಿಸಿದೆ. ಸಾಗರದ ಅರಳಗೋಡು ಗ್ರಾಮಪಂಚಾಯಿತಿ ಮಂಗನ ಕಾಯಿಲೆಯ ಆಡಂಬೋಲ. 2018-19ರಲ್ಲಿ ಸಾಗರದ ಅರಳಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಮಂಗನಕಾಯಿಲೆಗೆ 23 ಜನರು ಮೃತರಾದರು. ಆರೋಗ್ಯ ಇಲಾಖೆಯ ಅಧಿಕೃತವಾಗಿ 21 ಜನರನ್ನ ಕೆಎಫ್ಡಿ ಸೋಂಕಿತರು ಎಂದು ಒಪ್ಪಿಕೊಂಡಿತು. ಆಗಷ್ಟೇ ಚುನಾವಣೆ ಮುಗಿದಿತ್ತು ಸಮ್ಮಿಶ್ರ ಸರ್ಕಾರ ರಚನೆ ಆಯ್ತು. ಬಿಜೆಪಿಯಿಂದ ಸಾಗರದಲ್ಲಿ ಆರಿಸಿ ಬಂದ ಹರತಾಳು ಹಾಲಪ್ಪಗೆ ಇದು ಬಿಸಿತುಪ್ಪವಾಗಿ ಪರಿಣಮಿಸಿತು. 2019ರ ಆದಿಯಲ್ಲಿಯೂ ಸಹ ವಿಧಾನಸಭೆ ಕಲಾಪದಲ್ಲಿ ಹರತಾಳು ಹಾಲಪ್ಪ ಗುಡುಗಿದ್ದರು. ಅಂದಿನ ಸಮ್ಮಿಶ್ರ ಸರ್ಕಾರ ಆಂಬ್ಯುಲೆನ್ಸ್ ಒದಗಿಸಿತ್ತು ಹಾಗೆಯೇ ಮಣಿಪಾಲ್ನ ಕೆಎಂಸಿ ಆಸ್ಪತ್ರೆಯಲ್ಲಿನ ರೋಗಿಯ ವೆಚ್ಚವನ್ನ ಭರಿಸುವುದಾಗಿ ಹೇಳಿತ್ತು. ಆದರೆ, ಇದುವರೆಗೆ ಬದುಕುಳಿದು ಬಂದವರೇ ಕಡಿಮೆ ಹಾಗೂ ಚಿಕಿತ್ಸೆಗೆ ದಾಖಲಾದ 23 ಜನರಲ್ಲಿ ಆರು ಜನರಿಗೆ ಮಾತ್ರ ಪರಿಹಾರ ಸಿಕ್ಕಿದೆ.
ಶಾಸಕ ಹರಾತಾಳು ಹಾಲಪ್ಪ ವಿಧಾನಸಭೆಯಲ್ಲಿ ತಮ್ಮದೇ ಸರ್ಕಾರದ ವಿರುದ್ಧ ಆಕ್ರೋಶಭರಿತವಾಗಿ ಮಾತನಾಡಿದ್ದು ಯಾವ ತರಹ ವಿಶ್ಲೇಷಣೆ ಮಾಡಬೇಕೋ ಗೊತ್ತಿಲ್ಲ. ಆದರೆ ಒಂದು ವರ್ಷ ಸರ್ಕಾರ ಹಾಗೂ ಶಾಸಕರು ನಿದ್ರೆಗೆ ಜಾರಿದ್ದು ಏಕೆ? ಎಂಬ ಪ್ರಶ್ನೆ ಮೂಡುತ್ತೆ. ಶಿವಮೊಗ್ಗದವರೇ ಮುಖ್ಯಮಂತ್ರಿಗಳಾಗಿದ್ದರೂ ಮಂಗನ ಕಾಯಿಲೆಯನ್ನ ಮಲೆನಾಡಿಗೆ ಪಿಡುಗು ಎಂದು ಘೋಷಣೆ ಮಾಡಿ ಸಮಗ್ರ ವರದಿ ತರಿಸಿಕೊಂಡು ಕೇಂದ್ರ ಸರ್ಕಾರಕ್ಕೂ ಮನದಟ್ಟು ಮಾಡಬಹುದಿತ್ತು. ಆದರೆ ಈ ಸರ್ಕಾರದ ಅವಧಿಯಲ್ಲಿ ಅರಳಗೋಡಿಗೆ ನೀಡಿದ ಆಂಬ್ಯುಲೆನ್ಸ್ಗಳನ್ನೂ ಹಿಂಪಡೆಯಲಾಯ್ತು. ಮಣಿಪಾಲ್ ಆಸ್ಪತ್ರೆಯ ಚಿಕಿತ್ಸಾವೆಚ್ಚವನ್ನೂ ನಿಲ್ಲಿಸಿದರು. ಮೊನ್ನೆ ಮೃತನಾದ ಕೋಮರಾಜ್ ಜೈನ್ಗೆ ಆದ ಖರ್ಚು ಒಂದೂವರೆ ಲಕ್ಷ..! ಆತನಿಗೆ ಪರಿಹಾರವಿರಲಿ ಚಿಕಿತ್ಸಾ ವೆಚ್ಚವನ್ನ ಯಾರು ಭರಿಸುತ್ತಾರೆ?
ಶಾಸಕರ ಆರ್ಭಟದ ನಡುವೆ ಸೋಮವಾರ ಸಂಜೆಯ ಹೊತ್ತಿಗೆ ಅಪರ ಮುಖ್ಯ ಕಾರ್ಯದರ್ಶಿಗಳಿಂದ ಜಿಲ್ಲಾ ಆರೋಗ್ಯ ಇಲಾಖೆಗೆ ಪತ್ರ ತಲುಪಿದೆ. ಅದರಲ್ಲಿ ಹಿಂದಿನ ವರ್ಷದ ಚಿಕಿತ್ಸಾವೆಚ್ಚದ ಬಿಲ್ಗಳ ಮರುಪಾವತಿ, ಆಂಬ್ಯುಲೆನ್ಸ್ಗಳ ನಿಯೋಜನೆ ಹಾಗೂ ಮಣಿಪಾಲ್ ಆಸ್ಪತ್ರೆಗೆ ರೆಫರ್ ಮಾಡಲು ಸೂಚಿಸಲಾಗಿದೆ. ಈ ಮೂಲಕ ಮಂಗನ ಕಾಯಿಲೆ ಚಿಕಿತ್ಸೆಗೆ ಶಿವಮೊಗ್ಗ ಜಿಲ್ಲಾಸ್ಪತ್ರೆ ಯೋಗ್ಯವಾಗಿಲ್ಲ ಎಂದು ಒಪ್ಪಿಕೊಂಡಂತಾಗಿದೆ. ಅಂದರೆ ಹರತಾಳು ಹಾಲಪ್ಪ ಹೇಳುವ ರೀತಿ ಜಿಲ್ಲಾಸ್ಪತ್ರೆ ಮೆಗ್ಗಾನ್ ಸಾವಿನ ಮನೆಯೇ ಸರಿ! ಕಣ್ಣು ಮುಚ್ಚಿ ಕೂತ ಸರ್ಕಾರ ಹಾಗೂ ಶಾಸಕ ಹರತಾಳು ಹಾಲಪ್ಪ ಕೂಡ ಈ ಘಟನೆಗೆ ಪಾಲುದಾರರು ಎಂದರೆ ತಪ್ಪಾಗಲಾರದು.