ಕಾಂಗ್ರೆಸ್ ಮತ್ತು ಯುಪಿಎ ಸರ್ಕಾರದ ಅವಧಿಯಲ್ಲಿ ಸಂದಿಗ್ಧ ಪರಿಸ್ಥಿತಿಗಳಲ್ಲಿ ಪ್ರಮುಖ ಇಲಾಖೆಗಳಾದ ಮಾಜಿ ಹಣಕಾಸು, ಗೃಹ ಸಚಿವರಾದ ಪಿ.ಚಿದಂಬರಂ ಅವರು ಯಶಸ್ವಿಯಾಗಿ ನಿಭಾಯಿಸಿದ್ದರು. ಅವರ ಪ್ರಕಾರ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾರತೀಯ ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳನ್ನು ಘಾಸಿಗೊಳಿಸಿದ್ದು, ಕ್ರೋನಿ ಕ್ಯಾಪಿಟಲಿಸಂ ಅನ್ನು ಉತ್ತೇಜಿಸುತ್ತಿದ್ದಾರೆ.
ಹಲವು ತಿಂಗಳ ಕಾಲ ಜೈಲಿನಲ್ಲಿದ್ದು ಬಂದ ನಂತರ ಚಿದಂಬರಂ ಅವರು ದಿ ಟೆಲಿಗ್ರಾಫ್ ಆಂಗ್ಲ ಪತ್ರಿಕೆಗೆ ಸಂದರ್ಶನ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಹಲವಾರು ಜನವಿರೋಧಿ ನೀತಿಗಳನ್ನು ಜಾರಿಗೆ ತರುವ ಮೂಲಕ ಜನಸಾಮಾನ್ಯರನ್ನು ದುರ್ಗತಿಗೆ ದೂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನು ಮುಂದೆ ದೇಶದಲ್ಲಿ ಮುಸ್ಲಿಂರನ್ನು ಎರಡನೇ ದರ್ಜೆಯ ಪ್ರಜೆಗಳಂತೆ ಕಾಣಲಾಗುತ್ತದೆ ಎಂಬುದಕ್ಕೆ ವಿವಾದಿತ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ಜಾರಿಯೇ ಸ್ಪಷ್ಟ ನಿದರ್ಶನಗಳಾಗಿವೆ ಎಂದಿರುವ ಚಿದಂಬರಂ ಅವರ ಮಾತುಗಳು ಇಲ್ಲಿವೆ.
ಮೋದಿ ಅವರು ವಿಶೇಷವಾಗಿ ಉತ್ತರ ಭಾರತದಲ್ಲಿ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಚುನಾವಣೆಯಲ್ಲಿ ತಮ್ಮ ಪಕ್ಷವನ್ನು ಗೆಲ್ಲಿಸಿದ್ದಾರೆ. ಆದರೆ, ಇದು ಎಲ್ಲಾ ಸಂದರ್ಭಗಳಲ್ಲಿಯೂ ಕೈಗೂಡುವುದಿಲ್ಲ. ಮಹಾರಾಷ್ಟ್ರದಲ್ಲಿ ಬಿಜೆಪಿ 150 ಸೀಟುಗಳನ್ನು ಗಳಿಸಲಿದೆ ಎಂಬ ಲೆಕ್ಕಾಚಾರ ಹಾಕಲಾಗಿತ್ತು. ಆದರೆ, ಬಂದದ್ದು 105 ಸೀಟು. ಜಾರ್ಖಂಡ್ ನಲ್ಲಿ ಏನಾಗುತ್ತದೆ ಎಂಬುದನ್ನು ನೋಡೋಣ. ಮೋದಿ ಮತ್ತು ಅವರ ಗೆಲುವಿಗೆ ಪ್ರತಿಪಕ್ಷಗಳಲ್ಲಿ ಒಗ್ಗಟ್ಟಿಲ್ಲದಿರುವುದೇ ವರದಾನವಾಯಿತು. ಮೋದಿಗೆ ಭಾವನಾತ್ಮಕ ವಿಚಾರವನ್ನು ರಾಷ್ಟ್ರೀಯ ವಿಚಾರವೆಂಬಂತೆ ಬಿಂಬಿಸುವುದು ಕರಗತವಾಗಿದೆ. ಆದರೆ, ನಾವು ಮುಂದೆ ಸಾಗಿದಂತೆಲ್ಲಾ ಮೋದಿ ಬೇಯಿಸುವ ಈ ಕಾಕ್ ಟೈಲ್ ತಂತ್ರ ಫಲಿಸುವುದಿಲ್ಲ.
ಚುನಾವಣೆಯಲ್ಲಿ ಹಣಬಲದ ವಿಚಾರವನ್ನು ಪ್ರಸ್ತಾಪಿಸಿರುವ ಚಿದಂಬರಂ, ಕಾರ್ಪೊರೇಟ್ ಭ್ರಷ್ಟಾಚಾರವನ್ನು ಕಾನೂನು ಬದ್ಧಗೊಳಿಸುವುದೇ ಎಲೆಕ್ಟೋರಲ್ ಬಾಂಡ್ ಆಗಿದೆ. ಇದರಿಂದ ದೇಣಿಗೆ ನೀಡಿದವರ ಹೆಸರು ಬಹಿರಂಗಗೊಳ್ಳುವುದಿಲ್ಲ. ಶೇ.95 ರಷ್ಟು ಕಾರ್ಪೊರೇಟ್ ಕಂಪನಿಗಳು ಬಿಜೆಪಿಗೆ ಹಣವನ್ನು ನೀಡಿವೆ. ಚುನಾವಣೆ ಆಯೋಗ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ನೊಂದಿಗೆ ಸಮಾಲೋಚನೆ ನಡೆಸದೇ ಈ ಎಲೆಕ್ಟೋರಲ್ ಬಾಂಡ್ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ ಎಂದಿದ್ದಾರೆ.
ಒಂದಲ್ಲಾ ಒಂದು ದಿನ ಈ ಯೋಜನೆ ಹೇಗೆ ರೂಪಿತವಾಯಿತು ಮತ್ತು ಹೇಗೆ ಜಾರಿಗೆ ಬಂದಿತು ಎಂಬ ಅಂಶ ತನಿಖೆಯಿಂದ ಹೊರಬೀಳಲಿದೆ.
ಕಾರ್ಪೊರೇಟ್ ಸಂಸ್ಥೆಗಳು ಬಿಜೆಪಿಗೆ ಹಣ ನೀಡಿವೆ ಎಂಬುದು ಬಹಿರಂಗ ಗುಟ್ಟಾಗಿದೆ. ಹೀಗಾಗಿ ನಾನು ಯಾವುದೇ ಸಂಸ್ಥೆಯ ಹೆಸರನ್ನು ಉಲ್ಲೇಖ ಮಾಡುವುದಿಲ್ಲ. ಈ ಹಣ ಪಡೆದಿರುವುದರಿಂದಲೇ ಮೋದಿ ಆಡಳಿತದ ಅವಧಿಯಲ್ಲಿ ಕೆಲವರಿಗೆ ಫೇವರ್ ಆಗುತ್ತಿದ್ದರೆ, ಮತ್ತೆ ಕೆಲವರು ಸಂಕಷ್ಟ ಎದುರಿಸುವಂತಾಗಿದೆ. ಕೆಲವು ಕಾರ್ಪೊರೇಟ್ ಕಂಪನಿಗಳು ಮಾರುಕಟ್ಟೆಯಲ್ಲಿನ ಸ್ಪರ್ಧೆಯನ್ನು ಬಯಸುವುದಿಲ್ಲ. ಈ ಸಂಸ್ಥೆಗಳು ಇಡೀ ಮಾರುಕಟ್ಟೆಯನ್ನು ತಾವೇ ಆಳಬೇಕು ಎಂಬ ಮನೋಭಾವವನ್ನು ಹೊಂದಿದ್ದಾರೆ. ಇದಕ್ಕೆ ಮೋದಿ ಆದ್ಯತೆ ನೀಡುತ್ತಿದ್ದಾರೆ.
ಇಂತಹ ಧೋರಣೆ ಇರುವ ಕಂಪನಿಗಳು ಮುಂದುವರಿಯುತ್ತವೆ. ಕಠಿಣ ಸ್ಪರ್ಧೆ ಇರುವಂತಹ ಕ್ಷೇತ್ರಗಳಲ್ಲಿ ಕುಸಿತ ಉಂಟಾಗುತ್ತದೆ. ನಿರ್ಮಾಣ ಕ್ಷೇತ್ರ, ಮೂಲಸೌಕರ್ಯ, ಸಾರಿಗೆ, ಇಂಧನ, ದೂರಸಂಪರ್ಕ, ಆಟೋಮೋಬೈಲ್ ಕ್ಷೇತ್ರಗಳ ಮೇಲೆ ಇದರ ಗಂಭೀರ ಪರಿಣಾಮ ಬೀರತೊಡಗಿದೆ.
ನರೇಂದ್ರ ಮೋದಿಯವರು ವ್ಯಾಪಾರಸ್ಥರ ಪರವಾಗಿದ್ದಾರೆಯೇ ಹೊರತು ಮಾರುಕಟ್ಟೆ ಪರವಾಗಿಲ್ಲ. ಆದರೆ, ಸರ್ಕಾರ ಎಲ್ಲಾ ವ್ಯವಹಾರಗಳನ್ನೂ ಒಂದೇ ರೀತಿ ನೋಡುತ್ತಿಲ್ಲ. ಆರ್ಥಿಕತೆಯು ಎಲ್ಲಾ ಅಂಶಗಳನ್ನು ಬದಿಗೆ ಸರಿಸಬಹುದು. ಆದರೆ, ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯ ರಾಜ್ಯಗಳಿಗೆ ಆಗಿರುವ ಆಳವಾದ ಗಾಯ ಅಥವಾ ಘಾಸಿಯನ್ನು ಅಲ್ಲಿನ ಜನರು ಮರೆಯಲಾರರು. ಈಶಾನ್ಯ ರಾಜ್ಯಗಳಲ್ಲಿ ಕಾನೂನೂ ಸುವ್ಯವಸ್ಥೆ ಮತ್ತು ರೈತರ ಮೇಲಿನ ದಾಳಿಯನ್ನು ಮರೆಯಲು ಹೇಗೆ ಸಾಧ್ಯ? ಏಕೆಂದರೆ ಈ ಗಾಯ ತುಂಬಾ ಆಳವಾಗಿದ್ದು, ಉಲ್ಬಣಗೊಳ್ಳುತ್ತಿದೆ.
ಎಲೆಕ್ಟ್ರಾನಿಕ್ ಮತಯಂತ್ರಗಳ ದುರ್ಬಳಕೆ ಆಗುತ್ತಿದೆಯೇ ಇಲ್ಲವೇ ಎಂಬುದನ್ನು ಅವಲೋಕಿಸಲು ನಾನು ಆ ಬಗ್ಗೆ ಪರಿಣತಿಯನ್ನು ಹೊಂದಿಲ್ಲ. ಆದರೆ, ಸಾಕಷ್ಟು ಜನರು ಇವಿಎಂಗಳನ್ನು ದುರ್ಬಳಕೆ ಮಾಡಬಹುದು ಮತ್ತು ಮಾಡಲಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಬಹುತೇಕ ರಾಜಕೀಯ ಪಕ್ಷಗಳು ಬ್ಯಾಲೆಟ್ ಪೇಪರ್ ಗೆ ಆಗ್ರಹಪಡಿಸುತ್ತಿವೆ ಮತ್ತು ಇಡೀ ವಿಶ್ವವೇ ಬ್ಯಾಲೆಟ್ ಪೇಪರ್ ಗೆ ಮರಳುತ್ತಿದೆ. ಇಂತಹ ಸಂದರ್ಭದಲ್ಲಿ ಇಲ್ಲಿ ಬ್ಯಾಲೆಟ್ ಪೇಪರ್ ಅನ್ನು ಮತ್ತೆ ಜಾರಿಗೆ ತರಲು ಏಕೆ ಸಾಧ್ಯವಿಲ್ಲ?
ನಮ್ಮ ದೇಶದ ಚುನಾವಣೆ ಆಯೋಗ ಬಂಧಿಯಾಗಿದೆ. ವಿರುದ್ಧವಾಗಿ ಮಾತನಾಡಿದರೆ ಬೆದರಿಕೆ ಹಾಕಲಾಗುತ್ತಿದೆ ಮತ್ತು ಕೇಸುಗಳನ್ನು ಹಾಕುವ ಭೀತಿಯನ್ನು ಹುಟ್ಟಿಸಲಾಗುತ್ತಿದೆ. ಭವಿಷ್ಯದಲ್ಲಿ ನಾವು ಸ್ವತಂತ್ರ ಚುನಾವಣಾ ಆಯುಕ್ತರನ್ನು ಹೊಂದಲಿದ್ದೇವೆ ಎಂಬ ವಿಶ್ವಾಸದಲ್ಲಿ ಇರೋಣ.
ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳಲ್ಲಿ ಬಿಜೆಪಿ ಇತರೆ ಪಕ್ಷಗಳ ಶಾಸಕರಿಗೆ ಭಾರೀ ಪ್ರಮಾಣದ ಆಮಿಷಗಳನ್ನೊಡ್ಡಿ ತನ್ನತ್ತ ಸೆಳೆದುಕೊಳ್ಳುತ್ತಿದೆ. ಈ ಮೂಲಕ ಪಕ್ಷಾಂತರಕ್ಕೆ ಕುಮ್ಮಕ್ಕು ನೀಡುತ್ತಿದೆ. ಈ ರೀತಿ ಮಾಡುವುದರೊಂದಿಗೆ ಬಿಜೆಪಿ ಸಂವಿಧಾನದ 10 ನೇ ವಿಧಿಯ ನಿಯಮಗಳನ್ನು ಗಾಳಿಗೆ ತೂರುತ್ತಿದೆ. ದೇಶದೆಲ್ಲೆಡೆ ರಾಜಕಾರಣಿಗಳು, ವಾಣಿಜ್ಯೋದ್ಯಮಿಗಳು, ಮಾಧ್ಯಮ ಸೇರಿದಂತೆ ಮತ್ತಿತರೆ ಕ್ಷೇತ್ರಗಳಲ್ಲಿ ಭೀತಿ ಆವರಿಸಿದೆ. ಈ ಭೀತಿಯ ವಾತಾವರಣವನ್ನು ಸೃಷ್ಟಿಸಿ ಸರ್ವಾಧಿಕಾರವನ್ನು ನಡೆಸಲಾಗುತ್ತಿದೆ.
ದೇಶದಲ್ಲಿ ಕೆಲವು ಪ್ರಕರಣಗಳನ್ನು ಗಂಭೀರವಾಗಿ ಅವಲೋಕಿಸುತ್ತಿಲ್ಲ. ಬೋಫೋರ್ಸ್ ವಿಚಾರದಲ್ಲಿ ನಡೆದ ಅವಲೋಕನಗಳು ಅಥವಾ ಪರಿಶೀಲನೆ ರಾಫೆಲ್ ಪ್ರಕರಣದಲ್ಲಿ ಆಗಿಲ್ಲ. ಹೀಗಾಗಿ ನರೇಂದ್ರ ಮೋದಿ ಅದೃಷ್ಠಶಾಲಿ. ಹೀಗಾಗಿ ಭವಿಷ್ಯದಲ್ಲಿ ಇಂತಹ ಪ್ರಕರಣಗಳನ್ನು ಮತ್ತೆ ಪರಿಶೀಲಿಸಲಾಗುವುದಿಲ್ಲ ಎಂದು ಯಾರೂ ಕೂಡ ಭಾವಿಸಬಾರದು.
ಯುಪಿಎ ಅವಧಿಯಲ್ಲಿ ಕೆಲವು ತಪ್ಪುಗಳು ನಡೆದಿದ್ದವು. ಅವುಗಳನ್ನು ಪ್ರತಿಪಕ್ಷ ಬಳಸಿಕೊಂಡಿತು. ಇಂತಹ ತಪ್ಪುಗಳನ್ನು ಸುಪ್ರೀಂಕೋರ್ಟ್ ಗಮನಿಸಿದೆ. ಈ ಕಾರಣಕ್ಕೆ ಸುಪ್ರೀಂಕೋರ್ಟ್ ಯಾವುದೇ ಒಂದು ಪಕ್ಷದ ಭಾಗವಾಗಿ ಅಥವಾ ಪಕ್ಷದ ಪರವಾಗಿ ನಿಂತಿದೆ ಎಂದು ಹೇಳುವುದಿಲ್ಲ.
ಈ ಹಿಂದಿನ ಯುಪಿಎ ಅವಧಿಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂದು ಹೇಳಿಕೊಂಡೇ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಆದರೆ, ಈ ಬಿಜೆಪಿ ಅವಧಿಯಲ್ಲಿ ಹಿಂದೆಂದೂ ಕಂಡರಿಯದಂತಹ ಭ್ರಷ್ಟಾಚಾರ ನಡೆದಿದೆ. ಭವಿಷ್ಯದಲ್ಲಿ ಹಲವಾರು ಭ್ರಷ್ಟಾಚಾರ ಹಗರಣಗಳು ಹೊರಬರಲಿವೆ. ಇದರಲ್ಲಿ ಪ್ರಮುಖವಾಗಿ ಬಿಪಿಸಿಎಲ್ ಅನ್ನು ಖಾಸಗೀರಕರಣ ಮಾಡುತ್ತಿರುವುದರೊಂದರಿಂದಲೇ ಸಾವಿರಾರು ಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಪ್ರತಿಪಕ್ಷಗಳು ಒಗ್ಗಟ್ಟಿನಿಂದ ಈ ಭ್ರಷ್ಟಾಚಾರಗಳ ವಿರುದ್ಧ ಹೋರಾಟಕ್ಕೆ ಇಳಿಯಬೇಕು.