ಜಾರ್ಜ್ ಫ್ಲಾಯ್ಡ್ ಎಂಬ 46 ವರ್ಷದ ಆಫ್ರಿಕನ್-ಅಮೆರಿಕ್ ವ್ಯಕ್ತಿಯನ್ನು ಪೊಲೀಸರು ಹಾಡಹಗಲೇ ನಡುಬೀದಿಯಲ್ಲಿ ಉಸಿರುಗಟ್ಟಿಸಿ ಹತ್ಯೆಗೈದ ಬಳಿಕ ಅಮೆರಿಕ ವರ್ಣಭೇದದ ಕುರೂಪ ಮತ್ತೊಮ್ಮೆ ಜಗತ್ತಿನ ಮುಂದೆ ಬೆತ್ತಲಾಗಿದೆ. ಬಿಳಿಯರ ದಬ್ಬಾಳಿಕೆ, ದರ್ಪದ ಬಲಪಂಥೀಯ ಮನೋಧರ್ಮ ಮತ್ತು ಆಡಳಿತದ ವಿರುದ್ಧ ಅಮೆರಿಕ ಬೀದಿಗಳಲ್ಲಿ ಆಕ್ರೋಶದ ಬೆಂಕಿ ಭುಗಿಲೆದ್ದಿದೆ.
ಸದ್ಯದ ಜಾಗತಿಕ ರಾಜಕಾರಣದಲ್ಲಿ ಭಾರತ ಕೂಡ ಅಮೆರಿಕದ ಮಾದರಿಯನ್ನೇ ಅನುಸರಿಸುತ್ತಿದೆ. ಅಮೆರಿಕದಂತೆಯೇ ಕಟ್ಟರ್ ಬಲಪಂಥೀಯ ಮನೋಧರ್ಮದ ಸರ್ಕಾರ ಮತ್ತು ಆಡಳಿತವಿದೆ. ಅಮೆರಿಕದ ಬಿಳಿಯರ ವರ್ಣಭೇದದ ವರಸೆಯಲ್ಲೇ ಇಲ್ಲೂ ಹಿಂದೂ ಮೇಲ್ಜಾತಿ ಮತ್ತು ಉತ್ತರಭಾರತೀಯ ಶ್ರೇಷ್ಠತೆಯ ತಾರತಮ್ಯ ಹಿಂದೆಂದಿಗಿಂತಲೂ ಹೆಚ್ಚು ಪ್ರಬಲವಾಗಿ ಕಾಣಿಸಿಕೊಂಡಿದೆ ಮತ್ತು ಅಂತಹ ತಾರತಮ್ಯ, ದಬ್ಬಾಳಿಕೆ, ದರ್ಪ, ಶೋಷಣೆಗಳಿಗೆ ಅಮೆರಿಕದಂತೆಯೇ ಇಲ್ಲಿಯ ಬಲಪಂಥೀಯ ಸರ್ಕಾರದ ಕುಮ್ಮಕ್ಕಿದೆ, ಇಲ್ಲವೇ ಕನಿಷ್ಟ ಮೌನ ಸಮ್ಮತಿಯೂ ಇದೆ.
ಕೇವಲ ಎರಡು ತಿಂಗಳ ಹಿಂದೆ ದೇಶವ್ಯಾಪಿ ನಡೆದ ಸಿಎಎ-ಎನ್ ಆರ್ ಸಿ ಪ್ರತಿಭಟನೆಗಳು, ದೇಶದ ಯುವಜನತೆ, ಮತ್ತು ಮಹಿಳೆಯರು ಇಡೀ ಹೋರಾಟದ ನೇತೃತ್ವ ವಹಿಸಿದ್ದು, ಮುಸ್ಲಿಮರು ಮತ್ತು ದಲಿತರ ವಿರುದ್ಧದ ಸರ್ಕಾರದ ತಾರತಮ್ಯದ ಕಾನೂನು ಮತ್ತು ಅಧಿಕಾರರೂಢರ ದ್ವೇಷ ಮತ್ತು ಅಸಹನೆಯ ಹೇಳೀಕೆಗಳ ವಿರುದ್ಧದ ಜನಾಕ್ರೋಶ, ಸದ್ಯ ಅಮೆರಿಕದಲ್ಲಿ ಆಫ್ರಿಕನ್-ಅಮೆರಿಕನ್ನರ ಪರ ನಡೆಯುತ್ತಿರುವ ಹೋರಾಟಕ್ಕೆ ಸಾಕಷ್ಟು ಸಮಾನ ಅಂಶಗಳನ್ನು ಹೊಂದಿದೆ. ಹಾಗೇ ಆ ಹೋರಾಟಗಳನ್ನು ಭಾರತ ಸರ್ಕಾರ ಮತ್ತು ಪೊಲೀಸರು ನಿರ್ವಹಿಸಿದ ರೀತಿ ಮತ್ತು ಈಗ ಅಮೆರಿಕದ ಸರ್ಕಾರ ಮತ್ತು ಅಲ್ಲಿನ ಪೊಲೀಸರು ನಿರ್ವಹಿಸುತ್ತಿರುವ ರೀತಿಗೆ ಕೂಡ ಸಾಕಷ್ಟು ಸಾಮ್ಯತೆ ಇದೆ.

ಹಾಗಾಗಿಯೇ ಜಗತ್ತಿನ ಯಾವುದೇ ದೇಶಗಳಿಗಿಂತ ಅಮೆರಿಕದ ಸದ್ಯದ ಪರಿಸ್ಥಿತಿಗೆ ಭಾರತದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಅಲ್ಲಿನ ಹೋರಾಟದ, ಜಾರ್ಜ್ ಫ್ಲಾಯ್ಡ್ ಸಾವಿನ ಚಿತ್ರ- ವೀಡಿಯೋಗಳು ತೀವ್ರ ವೈರಲ್ ಆಗುತ್ತಿವೆ. ದಬ್ಬಾಳಿಕೆಯ ಮತ್ತು ದಮನಕಾರಿ ಸರ್ವಾಧಿಕಾರಿ ವರಸೆಯ ಬಲಪಂಥೀಯ ಸರ್ಕಾರವೊಂದು ದೇಶದ ಜನರ ನಡುವೆಯೇ ಕಂದಕ ಸೃಷ್ಟಿಸಿ, ಜನರ ನಡುವೆಯೇ ಮತೀಯ, ಜನಾಂಗೀಯ ದ್ವೇಷ ಬಿತ್ತಿ ತನ್ನದೇ ಪ್ರಜೆಗಳ ವಿರುದ್ಧ ಪರೋಕ್ಷ ಯುದ್ಧ ಸಾರಿರುವ ಪರಿಸ್ಥಿತಿ ಉಭಯ ರಾಷ್ಟ್ರಗಳಲ್ಲಿ ಸಾಮಾನ್ಯ ಸಂಗತಿ. ಹಾಗಾಗಿಯೇ ಅಮೆರಿಕದ ಸದ್ಯದ ಸಂಘರ್ಷಕ್ಕೆ ಭಾರತ ಈ ಪ್ರಮಾಣದಲ್ಲಿ ಸ್ಪಂದಿಸುತ್ತಿದೆ ಎಂಬ ವಾದಗಳೂ ಇವೆ.
ಅಮೆರಿಕದ ಈಗಿನ ‘ಬ್ಲಾಕ್ ಲೈವ್ಸ್ ಮ್ಯಾಟರ್’ ಜನಾಂದೋಲನಕ್ಕೂ, ಎರಡು ತಿಂಗಳ ಹಿಂದೆ ಭಾರತದಲ್ಲಿ ನಡೆದ ಸಿಎಎ-ಎನ್ಆರ್ಸಿ ವಿರೋಧಿ ಜನಾಂದೋಲನಕ್ಕೂ ಇರುವ ಸಾಮ್ಯತೆ ಮತ್ತು ಆ ಎರಡೂ ಜನಾಕ್ರೋಶಕ್ಕೆ ಕಾರಣವಾದ ಉಭಯ ದೇಶಗಳ ಕಟ್ಟರ್ ಬಲಪಂಥೀಯ ಆಡಳಿತಗಳು ಆ ಜನಹೋರಾಟಗಳನ್ನು ಬಗ್ಗುಬಡಿಯಲು ನಡೆಸಿದ ತಂತ್ರಗಾರಿಕೆಗಳಿಗೂ ಇರುವ ಇಂತಹ ಕೆಲವು ಸಾಮ್ಯತೆಗಳನ್ನು ಫೋಟೋ ಸಹಿತ ಪಟ್ಟಿ ಮಾಡಿರುವ ‘ದ ಕ್ವಿಂಟ್’ ವೆಬ್ ಪೋರ್ಟಲ್, ಹಲವು ಆಘಾತಕಾರಿ ಸಮಾನ ಅಂಶಗಳತ್ತ ಗಮನ ಸೆಳೆದಿದೆ.
ಅಮೆರಿಕದಲ್ಲಿ ಆಫ್ರಿಕಲ್-ಅಮೆರಿಕ ಎಂಬ ಕಾರಣಕ್ಕೆ ಜಾರ್ಜ್ ಫ್ಲಾಯ್ಡ್ ನನ್ನು ನಡುರಸ್ತೆಯಲ್ಲಿ ಬೀಳಿಸಿ ಆತನ ಕುತ್ತಿಗೆಯ ಮೇಲೆ ಮಂಡಿಯೂರಿ ನಿರಂತರ ಏಳು ನಿಮಿಷ ಕಾಲ ಉಸಿರುಗಟ್ಟಿಸಿ ಹಾಡಹಗಲೇ ಆತನ ಜೀವ ತೆಗೆದದ್ದು ಒಬ್ಬ ಬಿಳಿ ಪೊಲೀಸ್ ಅಧಿಕಾರಿ. ಅದೇ ರೀತಿ ಸಿಎಎ-ಎನ್ ಆರ್ಸಿ ಹೋರಾಟವನ್ನು ಹತ್ತಿಕ್ಕುವ ಸಂಚಿನ ಭಾಗವಾಗಿ ನಡೆದ ದೆಹಲಿ ಗಲಭೆಯ ವೇಳೆ ಫೈಜಾನ್ ನನ್ನು ಕೂಡ ಆತ ಮುಸ್ಲಿಂ ಎಂಬ ಒಂದೇ ಕಾರಣಕ್ಕೆ ದೆಹಲಿ ಪೊಲೀಸರು ನಡುಬೀದಿಯಲ್ಲಿ ಹಾಡಹಗಲೇ ಲಾಠಿಯಲ್ಲಿ ಹೊಡೆದು ಕೊಂದರು. ಲಾಠಿ ಏಟಿನಿಂದ ಆತ ಪ್ರಾಣ ಬಿಡುತ್ತಿರುವಾಗ ಕೂಡ ಪೊಲೀಸರು ರಾಷ್ಟ್ರಗೀತೆ ಹಾಡುವಂತೆ ಆತನಿಗೆ ಬೂಟುಗಾಲಿನಲ್ಲಿ ಒದ್ದು ಹಿಂಸಿಸಿದರು.
Also Read: ವಿಶ್ವದ ಎದುರು ತಲೆ ತಗ್ಗಿಸುವಂತಿದೆ ʻದೊಡ್ಡಣ್ಣʼನ ನಡತೆ…!
ಅಮೆರಿಕದಲ್ಲಿ ಈ ಹಿಂದೆ ಅಹಮದ್ ಆರ್ಬರಿ ಎಂಬ ಯುವಕನ ಮೇಲೆ ಆತನ ಜನಾಂಗೀಯ ಹಿನ್ನೆಲೆಯ ಕಾರಣಕ್ಕೆ ಮಾರಕಾಸ್ತ್ರಧಾರಿ ಗುಂಪೊಂದು ದಾಳಿ ಮಾಡಿ ಹತ್ಯೆ ಮಾಡಿತ್ತು. ಜೊತೆಗೆ ದಾಳಿಯ ವೀಡಿಯೋ ಚಿತ್ರಣ ಮಾಡಿ ವೈರಲ್ ಮಾಡಲಾಗಿತ್ತು. ಆದರೆ, ಈವರೆಗೆ ಆ ಜನಾಂಗೀಯ ಹಲ್ಲೆಗೆ ಸಂಬಂಧಿಸಿದಂತೆ ಯಾರೊಬ್ಬನ್ನೂ ಬಂಧಿಸಲಾಗಿಲ್ಲ. ಭಾರತದಲ್ಲಿ ಕೂಡ ಸಿಎಎ-ಎನ್ ಆರ್ಸಿ ಪ್ರತಿಭಟನೆಯ ವೇಳೆ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಯಲದ ಕ್ಯಾಂಪಸ್ಸಿಗೆ ನುಗ್ಗಿದ ಶಸ್ತ್ರಶಧಾರಿ ಮುಸುಕುಧಾರಿಗಳು ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರ ಮೇಲೆ ಮನಸೋಇಚ್ಚೆ ಹಲ್ಲೆ ನಡೆಸಿ ಭಾರತ್ ಮಾತಾಕಿ ಜೈ ಘೋಷಣೆ ಕೂಗಿದ್ದರು. ಹಲ್ಲೆಕೋರರು ಎಬಿವಿಪಿ ಮತ್ತು ಬಿಜೆಪಿಯ ಮಂದಿಯೇ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದ್ದರೂ ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ!
ಹಾಗೇ ಮತ್ತೊಂದು ಅಂತಹದ್ದೇ ಸಾಮ್ಯತೆಯ ಘಟನೆ ಎಂದರೆ; ಪತ್ರಕರ್ತರ ಮೇಲಿನ ದಾಳಿಯದ್ದು. ಅಮೆರಿಕದಲ್ಲಿ ಸಿಎನ್ ಎನ್ ಸುದ್ದಿವಾಹಿನಿಯ ಆಫ್ರಿಕನ್-ಅಮೆರಿಕನ್ ಪತ್ರಕರ್ತ ಒಮರ್ ಜಿಮಿನೇಜ್ ತಮ್ಮ ಗುರುತು ಹೇಳಿಕೊಂಡರೂ, ಕ್ಯಾಮರಾಗಳ ಮುಂದೆಯೇ ಪೊಲೀಸರು ಅವರನ್ನು ಕಪ್ಪು ಮೈಬಣ್ಣದ ಜನಾಂಗೀಯ ಹಿನ್ನೆಲೆಯ ಒಂದೇ ಕಾರಣಕ್ಕೆ ಬಂಧಿಸಿದರು. ಭಾರತದಲ್ಲಿ ಕೂಡ ಸಿಎಎ-ಎನ್ ಆರ್ಸಿ ವಿರೋಧಿ ಹೋರಾಟದ ವೇಳೆ ವರದಿಗಾರಿಕೆ ಮಾಡುತ್ತಿದ್ದ ದ ಹಿಂದೂ ಪತ್ರಿಕೆಯ ಒಮರ್ ರಶೀದ್ ಎಂಬ ಪತ್ರಕರ್ತನನ್ನು ಆತ ಮುಸ್ಲಿಂ ಎಂಬ ಏಕೈಕ ಕಾರಣಕ್ಕೆ ಪೊಲೀಸರು ಬಂಧಿಸಿ ಹಲವು ಗಂಟೆಗಳ ಕಾಲ ಬಂಧನದಲ್ಲಿಟ್ಟಿದ್ದರು. ಮತ್ತು ‘ಕಾಶ್ಮೀರ ಸಂಪರ್ಕ’ದ ಕುರಿತು ಪ್ರಶ್ನಿಸಿದ್ದರು.
ಮತ್ತೊಂದು ಇಂತಹದ್ದೇ ಬೆಳವಣಿಗೆ ಎಂದರೆ; ಅಮೆರಿಕದ ಒಂದು ಘಟನೆಯಲ್ಲಿ ಆಫ್ರಿಕನ್-ಅಮೆರಿಕನ್ ವ್ಯಕ್ತಿಯೊಬ್ಬರು ಮನೆಯ ಸಮೀಪ ಹಕ್ಕಿಗಳ ಅಧ್ಯಯನ ನಡೆಸುತ್ತಿದ್ದರೆ, ಬಿಳಿಯ ಮಹಿಳೆಯೊಬ್ಬರು ಪೊಲೀಸರಿಗೆ ಕರೆ ಮಾಡಿ ಕಪ್ಪು ವ್ಯಕ್ತಿ ಮನೆ ಬಳಿ ಇದ್ದಾನೆ ಎಂದು ಮಾಹಿತಿ ನೀಡಿದ್ದರು. ಆಕೆ ಹಾಗೆ ದೂರು ನೀಡಲು ಆತನ ಮೈಬಣ್ಣವೊಂದೇ ಕಾರಣವಾಗಿತ್ತು. ಅದೇ ರೀತಿಯ ಘಟನೆಯಲ್ಲಿ ಭಾರತದಲ್ಲಿ ಕೂಡ ಧರ್ಮದ ಕಾರಣಕ್ಕೆ ವ್ಯಕ್ತಿಗಳನ್ನು ಅನುಮಾನದಿಂದ, ಆತಂಕದಿಂದ ನೋಡುವ ವರಸೆ ಇತ್ತೀಚಿನ ಕೋವಿಡ್-19 ಸಂದರ್ಭದಲ್ಲಿ ಸಾರ್ವಜನಿಕ ವಿದ್ಯಮಾನವಾಗಿತ್ತು. ಕರೋನಾ ಸೋಂಕು ಹರಡುತ್ತಾರೆ ಎಂದು ಇಡೀ ಮುಸ್ಲಿಂ ಸಮುದಾಯದ ವಿರುದ್ಧ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗಿತ್ತು ಮತ್ತು ಅದರ ಪರಿಣಾಮವಾಗಿ ದೇಶಾದ್ಯಂತ ಮುಸ್ಲಿಮರು ಹಣ್ಣು ತರಕಾರಿ ಅಂಗಡಿಗಳ ವಿರುದ್ಧ ಅನಧಿಕೃತ ಬಹಿಷ್ಕಾರ ಚಾಲ್ತಿಯಲ್ಲಿತ್ತು!
ಬ್ಲಾಕ್ ಲೈವ್ಸ್ ಮ್ಯಾಟರ್ ಜನಾಂದೋಲ ಜೋರಾಗುತ್ತಿದ್ದಂತೆ ಅಮೆರಿಕದ ಸಂಪ್ರದಾಯವಾದಿ ಕಟ್ಟರ್ ಬಿಳಿಯರ ನಡುವೆ ‘ವೆನ್ ದಿ ಲೂಟಿಂಗ್ ಸ್ಟಾರ್ಟ್ಸ್, ದಿ ಶೂಟಿಂಗ್ ಸ್ಟಾರ್ಟ್ಸ್(ಲೂಟಿ ಶುರುವಾಗುತ್ತಲೇ ಬಂದೂಕಿನ ದಾಳಿಯೂ ಶುರುವಾಗುತ್ತೆ!)’ ಎಂಬ ಘೋಷಣೆ ವೈರಲ್ ಆಯಿತು. ಭಾರತದಲ್ಲಿ ಕೂಡ ಸಿಎಎ-ಎನ್ ಆರ್ ಸಿ ಹೋರಾಟ ಕಾವೇರುತ್ತಿದ್ದಂತೆ ಬಿಜೆಪಿಯ ಸಚಿವರೇ “ದೇಶದ್ರೋಹಿಗಳಿಗೆ ಗುಂಡಿಕ್ಕಿ” ಎಂದು ಘೋಷಣೆ ಕೂಗಿದರು ಮತ್ತು ಅದು ಕಟ್ಟರ್ ಹಿಂದುತ್ವವಾದಿ ಬಿಜೆಪಿ ಅಭಿಮಾನಿಗಳ ನಡುವೆ ವೈರಲ್ ಆಯಿತು ಕೂಡ!
ಹೀಗೆ, ಪಟ್ಟಿ ಮಾಡುತ್ತಾ ಹೋದರೆ, ಇನ್ನಷ್ಟು ಇಂತಹ ಸಾಮ್ಯತೆಗಳು ಸಿಗಲಿವೆ. ಅಮೆರಿಕ ಮತ್ತು ಭಾರತದ ನಡುವೆ ಆರ್ಥಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಭಿನ್ನತೆಗಳೇನೇ ಇರಬಹುದು. ಆದರೆ, ಮನುಷ್ಯನ ಬಣ್ಣ, ಧರ್ಮ, ಭಾಷೆ, ಆಹಾರ- ಅಭಿರುಚಿ, ನಂಬಿಕೆ- ಸಿದ್ಧಾಂತದ ಮೇಲೆ ದ್ವೇಷ ಕಾರುವ, ಕತ್ತಿ ಮಸೆಯುವ ವಿಷಯದಲ್ಲಿ ಮಾತ್ರ ಎರಡೂ ದೇಶಗಳ ಮೂಲಭೂತವಾದಿಗಳು ಒಂದೇ ರೀತಿಯಲ್ಲಿ ವರ್ತಿಸುತ್ತಾರೆ ಎಂಬುದಕ್ಕೆ ಈ ಮೇಲಿನ ಘಟನೆಗಳೇ ಉದಾಹರಣೆ. ಹಾಗೆ ಧರ್ಮ, ಜನಾಂಗ, ಜಾತಿಯ ಮೇಲೆ ಜನರನ್ನು ಎತ್ತಿಕಟ್ಟಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ರಾಜಕಾರಣ ಮತ್ತು ಬಂಡವಾಳಶಾಹಿ ವ್ಯವಸ್ಥೆಯ ಹುನ್ನಾರಗಳು ಕೂಡ ಉಭಯ ರಾಷ್ಟ್ರಗಳಲ್ಲಿ ಪರಸ್ಪರ ಸಹಮತದ ಮೇಲೇ ಕೆಲಸ ಮಾಡುತ್ತಿವೆಯೇನೋ ಎಂಬಷ್ಟರಮಟ್ಟಿಗೆ ಸಾಮ್ಯತೆ ಇದೆ.
ಆದರೆ, ಈ ನಡುವೆ ಗುರುತಿಸಲೇಬೇಕಾದ ಹಲವು ವ್ಯತ್ಯಾಸಗಳೂ ಇವೆ. ಅವು ಅಮೆರಿಕದ ನಾಚಿಕೆಗೇಡಿನ ಹೇಯ ವರ್ಣಭೇದ ನೀತಿಯ, ಆಫ್ರಿಕನ್-ಅಮೆರಿಕನ್ನರ ವಿರುದ್ಧದ ಮೂಲನಿವಾಸಿ ಬಿಳಿಯರ ಅಟ್ಟಹಾಸ ಮತ್ತು ಅಲ್ಲಿನ ಟ್ರಂಪ್ ಆಡಳಿತದ ಪರೋಕ್ಷ ಕುಮ್ಮಕ್ಕಿನ ಹೊರತಾಗಿಯೂ ಅಲ್ಲಿನ ಬಹುಸಂಖ್ಯಾತ ಬಿಳಿಯವರು ಮತ್ತು ಇತರೆ ಸಮುದಾಯಗಳು ದೊಡ್ಡ ಪ್ರಮಾಣದಲ್ಲಿ ಈ ತಾರತಮ್ಯದ ವಿರುದ್ಧ, ಅಮಾನುಷ ನೀತಿಯ ವಿರುದ್ಧ ದೊಡ್ಡ ಮಟ್ಟದಲ್ಲಿ ದನಿ ಎತ್ತಿದ್ದಾರೆ. ವ್ಯವಸ್ಥೆಯ ವಿರುದ್ಧದ ಬದಲಾವಣೆಯ, ಸುಧಾರಣೆಯ ದನಿಗೆ ದೊಡ್ಡ ಬಲ ತುಂಬಿದ್ದಾರೆ. ಆ ವಿಷಯದಲ್ಲಿ ಯಾವುದೇ ಮೇಲು- ಕೀಳು, ವರ್ಗ- ವರ್ಣದ ತರತಮವೆಣಿಸದೆ ಬಹುತೇಕ ಯುವ ಸಮುದಾಯ ಸರ್ಕಾರದ ಮತ್ತು ಮೂಲಭೂತವಾದಿ ಬಿಳಿಯರ ವಿರುದ್ಧ ಬೀದಿಗಿಳಿದಿದ್ದಾರೆ.
ಆದರೆ, ಭಾರತದಲ್ಲಿ ಮುಸ್ಲಿಮರು ಮತ್ತು ದಲಿತರನ್ನು ಗುರಿಯಾಗಿಟ್ಟುಕೊಂಡು ಹಿಂದೂ ಮೂಲಭೂತವಾದಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರ ಜಾರಿಗೆ ತರಲು ಹೊರಟಿರುವ ಸಿಎಎ-ಎನ್ ಆರ್ ಸಿ ಕಾಯ್ದೆಯ ವಿಷಯದಲ್ಲಿ ಬಹುಸಂಖ್ಯಾತ ಹಿಂದೂಗಳಲ್ಲಿ ಉದಾರವಾದಿಗಳು ಮತ್ತು ಹಿಂದೂ ಧರ್ಮದೊಳಗೇ ಜಾತಿ ಮತ್ತು ಬಣ್ಣದ ಕಾರಣಕ್ಕೆ ಶೋಷಿತರಾಗಿರುವ, ನಿತ್ಯ ತಾರತಮ್ಯ ಎದುರಿಸುತ್ತಿರುವ ಜನ ದನಿ ಎತ್ತಲಿಲ್ಲ ಏಕೆ? ಎಂಬ ಪ್ರಶ್ನೆ ಇದೆ. ಇಲ್ಲಿನ ಜಾತಿ ವ್ಯವಸ್ಥೆಯ ಹೀನಾಯ ಶೋಷಣೆ ಮತ್ತು ತಾರತಮ್ಯಗಳನ್ನು ಮೀರಿಯೂ ಬಿಜೆಪಿ ಮತ್ತು ಸಂಘಪರಿವಾರಗಳ ಹಿಂದುತ್ವದ ಅಜೆಂಡಾ ಶೋಷಿತರನ್ನೂ ಧರ್ಮದ ಅಮಲಿನ ಮೇಲೆ ಅನ್ಯ ಧರ್ಮಿಯರ ವಿರುದ್ಧ ನಿಲ್ಲುವಂತೆ ಮಾಡಿದೆಯೇ? ಜೊತೆಗೆ ಪ್ರಾದೇಶಿಕ ಭಿನ್ನತೆಗಳು(ಈಶಾನ್ಯರಾಜ್ಯಗಳು ಎನ್ ಆರ್ ಸಿ ನೋಡುವ ಕ್ರಮ), ಸಾಮಾಜಿಕ ಸ್ಥಾನಮಾನಗಳು(ಹಿಂದೂಗಳಲ್ಲೇ ಮೇಲ್ಜಾತಿಯವರು) ಕೂಡ ಪ್ರಭುತ್ವ ಪ್ರಾಯೋಜಿತ ದಬ್ಬಾಳಿಕೆ, ತಾರತಮ್ಯದ ವಿರುದ್ಧದ ಧರ್ಮಾತೀತ, ಜಾತ್ಯಾತೀತ ಪ್ರಬಲ ಜನಾಂದೋಲನಕ್ಕೆ ಅಡ್ಡಿಯಾಗಿವೆ? ಎಂಬ ಪ್ರಶ್ನೆಯೂ ಇದೆ.
ಆ ಹಿನ್ನೆಲೆಯಲ್ಲಿ; ಅಮೆರಿಕದ ಈ ಜನಾಂಗೀಯ ತಾರತಮ್ಯ, ವರ್ಣಭೇದ ನೀತಿಗಳ ವಿರುದ್ಧ ಹೋರಾಟದಿಂದ ಒಟ್ಟಾರೆ ಭಾರತದ ಉದಾರ- ಪ್ರಜಾಪ್ರಭುತ್ವವಾದಿ ಸಮುದಾಯ ಕಲಿಯಬೇಕಾದ ಪಾಠಗಳೇನು? ನಿರ್ದಿಷ್ಟವಾಗಿ ಭಾರತದ ಎನ್ ಆರ್ ಸಿ- ಸಿಎಎ ಆಂದೋಲನ ಕಲಿಯಬೇಕಾದುದು ಏನು? ಎಂಬ ಹಿನ್ನೆಲೆಯಲ್ಲಿ ಅಮೆರಿಕದ ‘ಬ್ಲಾಕ್ ಲೈವ್ಸ್ ಮ್ಯಾಟರ್’ ಗಮನಿಸಲೇಬೇಕಾದ ಬಹಳ ಮಹತ್ವದ ಜನಾಂದೋಲನ!