ಅಕ್ಟೋಬರ್ 28ರಿಂದ ಮೂರು ಹಂತಗಳಲ್ಲಿ ನಡೆಯಲಿರುವ ಬಿಹಾರ ವಿಧಾನಸಭೆ ಚುನಾವಣೆಗೆ, ಎಲ್ಲಾ ಪಕ್ಷಗಳು ಭರದ ತಯಾರಿಯಲ್ಲಿ ತೊಡಗಿವೆ. ಕೋವಿಡ್ ಸಂಕಷ್ಟ ತಲೆದೋರದಿದ್ದಿದ್ದರೆ, ಈ ಸಂದರ್ಭದಲ್ಲಿ ಅಬ್ಬರದ ಚುನಾವಣಾ ರ್ಯಾಲಿಗಳಿಗೆ ಬಿಹಾರ ಸಾಕ್ಷಿಯಾಗಿರುತ್ತಿತ್ತು. ಆದರೆ, ಈ ಬಾರಿಯ ಚುನಾವಣಾ ಪ್ರಚಾರ ಕಳೆಗುಂದಿದಂತೆ ಕಂಡರೂ, ಪಕ್ಷದೊಳಗಿನ ಚಟುವಟಿಕೆಗಳು ಕಳೆಗುಂದಿಲ್ಲ. ಮೈತ್ರಿ ಪಕ್ಷಗಳ ಸೀಟು ಒಪ್ಪಂದ ಕಿತ್ತಾಟ, ಪಕ್ಷದೊಳಗೆ ಟಿಕೆಟ್ ಕಿತ್ತಾಟ ಜೋರಾಗಿಯೇ ನಡೆಯುತ್ತಿದೆ.
ನಿರ್ದಿಷ್ಟ ಕ್ಷೇತ್ರಗಳಿಗೆ ಕಾಂಗ್ರೆಸ್ ಬೇಡಿಕೆ:
ಸದ್ಯದ ಮಟ್ಟಿಗೆ ಬಿಹಾರದಲ್ಲಿ ವಿರೋಧ ಪಕ್ಷಗಳು ಬಲ ಕಳೆದುಕೊಂಡಂತೆ ಕಂಡರೂ, ಬಹುಕಾಲದ ಮಿತ್ರರಾದ ಆರ್ಜೆಡಿ ಹಾಗೂ ಕಾಂಗ್ರೆಸ್ ಎನ್ಡಿಎಗೆ ಪ್ರಬಲ ವಿರೋಧ ಒಡ್ಡುವ ಲಕ್ಷಣಗಳಿವೆ. ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ, ಕಾಂಗ್ರೆಸ್ ನಾಯಕರು ನಿರ್ದಿಷ್ಟ ಕ್ಷೇತ್ರಗಳು ತನಗೇ ಬೇಕು ಎಂದು ಪಟ್ಟು ಹಿಡಿದು ಅದರ ಪಟ್ಟಿಯನ್ನು ಆರ್ಜೆಡಿ ಕಚೇರಿಗೆ ತಲುಪಿಸಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕಾಂಗ್ರೆಸ್ ಸುಮಾರು 75 ಕ್ಷೇತ್ರಗಳನ್ನು ತನಗೆ ಬಿಟ್ಟುಕೊಡುವಂತೆ ಪಟ್ಟುಹಿಡಿದಿದೆ. ಇಲ್ಲಿ ಕಾಂಗ್ರೆಸ್ ಬೇಡಿಕೆಯಿಟ್ಟಿರುವ ಕ್ಷೇತ್ರಗಳ ಸಂಖ್ಯೆ ಸಮಸ್ಯೆಯಲ್ಲ, ಆದರೆ ಪ್ರಮುಖ ಕ್ಷೇತ್ರಗಳನ್ನೇ ಕೇಳಿರುವುದು ಸಮಸ್ಯೆ ಎಂದು ಆರ್ಜೆಡಿಯ ಮೂಲಗಳು ಮಾಧ್ಯಮಗಳಿಗೆ ತಿಳಿಸಿವೆ.
ಈ ಬಾರಿಯ ಚುನಾವಣೆಯಲ್ಲಿ ಆರ್ಜೆಡಿ ಮುಖಂಡ ತೇಜಸ್ವೀ ಯಾದವ್ ಅನ್ನು ಮುಖ್ಯಮಂತ್ರಿ ಅಭ್ಯರ್ಥಿ ಮಾಡಲು ಕಾಂಗ್ರೆಸ್ ಸಿದ್ದವಿದೆ. ಆದರೆ, ಅದಕ್ಕೆ ತನ್ನ ಶರತ್ತನ್ನು ವಿಧಿಸಿ ರಾಜಕೀಯ ತಂತ್ರಗಾರಿಗೆ ಹೂಡಿದೆ. ಒಂದು ವೇಳೆ ನಿಗದಿತ ಸಮಯದೊಳಗಾಗಿ ಸೀಟು ಹಂಚಿಕೆ ಪ್ರಕ್ರಿಯೆಗೆ ಸಮ್ಮತಿ ಸೂಚಿಸದಿದ್ದರೆ, ಮೈತ್ರಿಯನ್ನು ಕಡಿದುಕೊಳ್ಳುವ ಎಚ್ಚರಿಕೆ ನೀಡಿದೆ.
ಸರ್ಕಾರಿ ಕೆಲಸದ ಆಶ್ವಾಸನೆ:
ಒಂದು ವೇಳೆ ಆರ್ಜೆಡಿ ಅಧಿಕಾರಕ್ಕೆ ಬಂದಲ್ಲಿ ಮೊದಲ ಕ್ಯಾಬಿನೆಟ್ ಸಭೆಯಲ್ಲಿಯೇ ಹತ್ತು ಲಕ್ಷ ಸರ್ಕಾರಿ ಕೆಲಸಗಳ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಲಾಗುವುದು ಎಂದು, ತೇಜಸ್ವಿ ಯಾದವ್ ಹೇಳಿದ್ದಾರೆ.
“ಜನರು 15 ವರ್ಷಗಳ ಸುಳ್ಳಿನ (ನಿತೀಶ್ ಕುಮಾರ್) ಆಡಳಿತವನ್ನು ನೋಡಿದ್ದಾರೆ. ಆರ್ಜೆಡಿ ಅಧಿಕಾರಕ್ಕೆ ಬಂದರೆ ಮೊದಲ ಸಹಿ ಸರ್ಕಾರಿ ಉದ್ಯೋಗವನ್ನು ನೀಡುವ ಕಡತಕ್ಕೆ ಹಾಕಲಾಗುವುದು,” ಎಂದು ತೇಜಸ್ವಿ ಮತದಾರರನ್ನು ಸೆಳೆಯಲು ಪ್ರಯತ್ನಿಸಿದ್ದಾರೆ.
ತೇಜಸ್ವಿ ನಡೆಗೆ ನಿತೀಶ್ ಪ್ರತಿತಂತ್ರ:
ಸರ್ಕಾರಿ ಉದ್ಯೋಗಗಳ ಭರವಸೆ ನೀಡಿ ಮತ ಪಡೆಯಲು ಯತ್ನಿಸುವ ತೇಜಸ್ವಿ ತಂತ್ರಕ್ಕೆ ನಿತೀಶ್ ಕುಮಾರ್ ಪ್ರತಿತಂತ್ರ ಹೆಣೆದಿದ್ದು, ಸರ್ಕಾರದ ಮಹತ್ವದ ʼಸಾತ್ ನಿಶ್ಚಯ್ʼ ಯೋಜನೆಯ ಎರಡನೇ ಭಾಗವನ್ನು ರಾಜ್ಯದಲ್ಲಿ ವಿಸ್ತರಿಸುವುದಾಗಿ ಹೇಳಿದ್ದಾರೆ.
ರಾಜ್ಯದಲ್ಲಿ ಪ್ರಮುಖ ಏಳು ಸಮಸ್ಯೆಗಳನ್ನು ಗುರುತಿಸಿ ಅವುಗಳಿಗೆ ಪರಿಹಾರ ಕಂಡುಹುಡುಕುವ ಯೋಜನೆ ಬಿಹಾರದಲ್ಲಿ ತಕ್ಕ ಮಟ್ಟಿಗೆ ಶ್ರಯಸ್ಸು ಕಂಡಿತ್ತು. ಈ ಯೋಜನೆ ನಿತೀಶ್ ಸರ್ಕಾರಕ್ಕೆ ಒಳ್ಳೆಯ ಹೆಸರನ್ನು ತಂದು ಕೊಟ್ಟಿತ್ತು. ಈಗ ಇದೇ ಯೋಜನೆಯ ಎರಡನೇ ಭಾಗವನ್ನು ಜಾರಿಗೆ ತರಲು ಮತ್ತೆ ಅಧಿಕಾರ ನೀಡಿ ಎಂದು ನಿತೀಶ್ ಕುಮಾರ್ ಮತದಾರರಲ್ಲಿ ಮನವಿ ಮಾಡಿದ್ದಾರೆ.
ಬಿಹಾರದಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರಗತಿಯಲ್ಲಿ ಸಾಗುತ್ತಿದ್ದು, ಎನ್ಡಿಎ ಮೈತ್ರಿಕೂಟ ಹಾಗೂ ಆರ್ಜೆಡಿ ಮತ್ತು ಕಾಂಗ್ರೆಸ್ ಮೈತ್ರಿಕೂಟ ತಮ್ಮ ತಮ್ಮ ಪಕ್ಷದ ಕಾರ್ಯಕರ್ತರನ್ನು ಚುನಾವಣಾ ಸಮರಕ್ಕೆ ತಯಾರು ಮಾಡುವ ಧಾವಂತದಲ್ಲಿದ್ದಾರೆ. ಇನ್ನು ಕೇವಲ ಒಂದಿ ತಿಂಗಳಷ್ಟೇ ಸಮಯ ಉಳಿದಿರುವುದರಿಂದ ಹೆಚ್ಚಿನ ಮಟ್ಟದ ತಯಾರಿಗೂ ಅವಕಾಶ ಸಿಗುವುದು ಕಡಿಮೆ. ಅದರಲ್ಲೂ ಕೋವಿಡ್ ಸಂಕಷ್ಟದಿಂದ ಅಬ್ಬರದ ಪ್ರಚಾರಕ್ಕೆ ಬ್ರೇಕ್ ಬಿದ್ದಿರುವುದು ಮತದಾರರ ಬಳಿ ತಲುಪಲು ನಾಯಕರಿಗೆ ಕಷ್ಟವಾಗುತ್ತಿದೆ.